ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿ | ನನೆಗುದಿಗೆ ಬಿದ್ದ ರಂಗಮಂದಿರ ಕಟ್ಟಡ

Published 26 ಮೇ 2024, 4:35 IST
Last Updated 26 ಮೇ 2024, 4:35 IST
ಅಕ್ಷರ ಗಾತ್ರ

ಸಿಂದಗಿ: ತಾಲ್ಲೂಕು ರಂಗಭೂಮಿ ಕಲಾವಿದರ ನೆಲೆವೀಡು. ಆದರೆ ಇಲ್ಲೊಂದು ರಂಗಮಂದಿರ ಇಲ್ಲದೇ ಇರುವುದು ಕೂಡ ಅಷ್ಟೇ ಸತ್ಯ.

ಸಿಂದಗಿ ತಾಲ್ಲೂಕು ಹಂದಿಗನೂರ ಗ್ರಾಮದ ರಂಗಭೂಮಿ ಮೇರು ನಟ, ಕಲಾಸಾಮ್ರಾಟ, ನಟ ಭಯಂಕರ ಎಂದೇ ಬಿರುದಾಂಕಿತರಾಗಿದ್ದ ಹಂದಿಗನೂರ ಸಿದ್ರಾಮಪ್ಪನವರ ಹೆಸರಿನಲ್ಲಿ ಅವರು ಜನ್ಮ ತಳೆದ ನೆಲದಲ್ಲಿ ಸ್ಮಾರಕ ರಂಗಮಂದಿರ ನಿರ್ಮಾಣವಾಗಬೇಕೆಂಬುದು ಸಿಂದಗಿಯವರೇ ಆದ ಗದಗ-ಡಂಬಳ-ಯಡೆಯೂರು ತೋಂಟದಾರ್ಯ ಸಂಸ್ಥಾನಮಠದ ಲಿಂಗೈಕ್ಯ ತೋಂಟದ ಸಿದ್ಧಲಿಂಗ ಸ್ವಾಮೀಜಿ ಹಾಗೂ ಸಂಶೋಧಕ ಎಂ.ಎಂ.ಕಲಬುರ್ಗಿ ಯವರ ಆಶಯವಾಗಿತ್ತು. ಈ ಕುರಿತು ಅವರಿಬ್ಬರೂ ಸಾಕಷ್ಟು ಪ್ರಯತ್ನ ಕೂಡ ಮಾಡಿದ್ದರು.

2012ರಲ್ಲಿ ರಂಗಮಂದಿರ ನಿರ್ಮಾಣಕ್ಕೆ ಪುರಸಭೆ ಆಡಳಿತ ಮಂಡಳಿ ಸದಸ್ಯರು ಸಾಮಾನ್ಯ ಸಭೆಯಲ್ಲಿ ಠರಾವು ಮಾಡುವ ಮೂಲಕ ಪುರಸಭೆ ವ್ಯಾಪ್ತಿಯ ನಿವೇಶನ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಿದ್ದರು. ವಿಜಯಪುರ ಮುಖ್ಯ ರಸ್ತೆಯ ಆರ್.ಡಿ .ಪಾಟೀಲ ಕಾಲೇಜು ಎದುರಿನ ಬೂದಿಹಾಳ ಬಡಾವಣೆಯ ಸಾರ್ವಜನಿಕ ನಿವೇಶನವನ್ನು ಮಂಜೂರು ಮಾಡಲಾಗಿತ್ತು.
ಅಂದಿನ ಬಿಜೆಪಿ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರ ಶಿಫಾರಸ್ಸಿನ ಮೇರೆಗೆ ಜಿಲ್ಲಾಡಳಿತ ₹ 10 ಲಕ್ಷ ಬಿಡುಗಡೆಗೊಳಿಸಿ ರಂಗಮಂದಿರ ಕಟ್ಟಡ ಕಾರ್ಯಾರಂಭಕ್ಕೆ ನಿರ್ಮಿತಿ ಕೇಂದ್ರಕ್ಕೆ ವಹಿಸಿಕೊಡಲಾಗಿತ್ತು. ಅವರು 20-30 ತಗ್ಗುಗಳನ್ನು ತೋಡಿ ಕೊಳವೆಬಾವಿ ಕೊರೆಯಿಸಿ ಅಷ್ಟಕ್ಕೆ ಕೈ ಬಿಟ್ಟರು. ವರ್ಷಗಳ ನಂತರ ಅದೇ ಸಚಿವರು ಸಿಂದಗಿಗೆ ಬಂದಾಗ ಈ ಕುರಿತು ನಿರ್ಮಿತಿ ಕೇಂದ್ರದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಾಗ ಮತ್ತೆ ಸುತ್ತಲೂ ಕಾಂಪೌಂಡ್‌ ನಿರ್ಮಾಣ ಕೈಗೆತ್ತಿಕೊಂಡು ಮತ್ತೆ ಅರ್ಧಕ್ಕೆ ನಿಲ್ಲಿಸಿದರು.

ಇದೇ ಸಂದರ್ಭದಲ್ಲಿ ಶಾಸಕರಾಗಿದ್ದ ರಮೇಶ ಭೂಸನೂರ ಅವರು ರಂಗಮಂದಿರ ನಿರ್ಮಾಣದ ಭರವಸೆ ನೀಡಿದಂತೆ ಅವರು ತಮ್ಮ ಮೂರನೆಯ ಅವಧಿಯಲ್ಲಿ ಕಾರ್ಯ ಕೈಗೆತ್ತಿಕೊಂಡು ಮೊದಲ ಹಂತದಲ್ಲಿ ₹ 60 ಲಕ್ಷ, 2ನೇ ಹಂತದಲ್ಲಿ ₹ 65 ಲಕ್ಷ ಮಂಜೂರು ಮಾಡಿಸಿದ್ದರು. ಪುರಸಭೆ ನಗರೋತ್ಥಾನ ಯೋಜನೆಯ ಅಡಿ ಈಜುಗೊಳ ನಿರ್ಮಾಣಕ್ಕಾಗಿಟ್ಟ ₹ 75 ಲಕ್ಷ ಬದಲಿಸಿ ಮೂರನೆಯ ಹಂತದ ಅನುದಾನವನ್ನಾಗಿ ಸೇರ್ಪಡೆ ಮಾಡಿದರು. ಹೀಗೆ ರಂಗಮಂದಿರ ನಿರ್ಮಾಣಕ್ಕಾಗಿ ಒಟ್ಟು ₹ 2 ಕೋಟಿ ಕಾಯ್ದಿರಿಸಿ ಮೊದಲ ಹಂತದ ಅನುದಾನದಲ್ಲಿ ₹ 55 ಲಕ್ಷ ಬಿಡುಗಡೆಗೊಳಿಸಿ ಟೆಂಡರ್ ಕರೆದು ಕಾಮಗಾರಿಗೆ ಭೂಮಿಪೂಜೆ ಕೂಡ ಮಾಡಿದ್ದರು.

ನಂತರ ಚುನಾವಣೆ ಬಂದು ಹೊಸ ಶಾಸಕರು ಆಯ್ಕೆಗೊಂಡು ವರ್ಷಗಳೇ ಗತಿಸಿದರೂ ಸ್ಮಾರಕ ರಂಗಮಂದಿರ ಕಾಮಗಾರಿ ಆರಂಭಗೊಳ್ಳದೇ ನನೆಗುದಿಗೆ ಬಿದ್ದಿದೆ.

ಕಲಾ ಸಾಮ್ರಾಟ ಹಂದಿಗನೂರ ಸಿದ್ರಾಮಪ್ಪ
ಕಲಾ ಸಾಮ್ರಾಟ ಹಂದಿಗನೂರ ಸಿದ್ರಾಮಪ್ಪ

‘ಅಭಿವೃದ್ಧಿ ಕಾರ್ಯದಲ್ಲಿ ರಾಜಕೀಯ ಸಲ್ಲದು’

ರಂಗಮಂದಿರ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆಯಾಗಿ ಕಾಮಗಾರಿಗೆ ಟೆಂಡರ್ ಆಗಿ ಗುತ್ತಿಗೆದಾರರಿಗೆ ವರ್ಕ್‌ ಆರ್ಡರ್ ಕೊಡಲಾಗಿತ್ತು. ಅಂದಿನ ಶಾಸಕರಿಂದ ಭೂಮಿಪೂಜೆ ಕೂಡ ನೆರವೇರಿತ್ತು. ಆದರೂ ವರ್ಷಗಳೇ ಕಳೆದರೂ ಕಾಮಗಾರಿ ಪ್ರಾರಂಭಗೊಳ್ಳದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಭಿವೃದ್ಧಿ ಕಾರ್ಯದಲ್ಲಿ ರಾಜಕೀಯ ಸಲ್ಲದು. ಶಾಸಕರು ಕಾಮಗಾರಿಗೆ ಚಾಲನೆ ಕೊಡಬೇಕು. -ಎಂ.ಎಂ. ಪಡಶೆಟ್ಟಿ ಜಾನಪದ ವಿದ್ವಾಂಸರು ಸಿಂದಗಿ ರಂಗಮಂದಿರ ನಿರ್ಮಾಣ ಅತ್ಯಗತ್ಯ ಸಿಂದಗಿಯಲ್ಲಿ ರಂಗಭೂಮಿ ಕಲಾ ತಂಡಗಳಿವೆ. ರಂಗಮಂದಿರ ಇಲ್ಲದ ಕಾರಣ ನಾಟಕಗಳ ಪ್ರದರ್ಶನ ಕಣ್ಮರೆಯಾಗುತ್ತಲಿದೆ. ಹೀಗಾಗಿ ರಂಗಮಂದಿರ ನಿರ್ಮಾಣ ಆಗಬೇಕಾದುದು ಅತ್ಯಗತ್ಯವಾಗಿದೆ. ಬಿ.ಆರ್. ಚಿಕ್ಕಯ್ಯನಮಠ ಹಂದಿಗನೂರ ಸಿದ್ರಾಮಪ್ಪ ಕಲಾ ನಾಟ್ಯ ಸಂಘದ ಸದಸ್ಯ ಸಿಂದಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT