ಭಾನುವಾರ, ಮಾರ್ಚ್ 26, 2023
24 °C
ಅಪ್ಪು ಅಭಿಮಾನಿಗಳಿಂದ ರಕ್ತದಾನ, ನೇತ್ರದಾನ, ದೇಹದಾನ ಶಿಬಿರ

‘ಪುನೀತ್‌ ಸಾಮಾಜಿಕ ಸೇವೆ ಶ್ಲಾಘನೀಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ ಅವರ ಅಭಿಮಾನ ಬಳಗದಿಂದ ರಕ್ತದಾನ, ನೇತ್ರದಾನ, ದೇಹದಾನ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಅಭಿಪ್ರಾಯಿಸಿದರು.

ನಗರದ ಗಂಜ್‌ ಪ್ರದೇಶದ ರಾಜೇಂದ್ರಸ್ವಾಮಿ ಮಠದ ಆವರಣದಲ್ಲಿ ಅಪ್ಪು ಅಭಿಮಾನಿಗಳಿಂದ ಶನಿವಾರ ಹಮ್ಮಿಕೊಂಡಿದ್ದ  ಸ್ವಯಂ ಪ್ರೇರಿತ ರಕ್ತದಾನ, ನೇತ್ರದಾನ, ದೇಹದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. 

ಪುನೀತ್‌ ರಾಜ್‌ಕುಮಾರ ನಿಧನದ ನಂತರ ಅವರು ಮಾಡುತ್ತಿದ್ದ ಸಾಮಾಜಿಕ ಕಾರ್ಯಗಳು ತಿಳಿದುಬಂದಿವೆ. ಅನಾಥಶ್ರಮ, ಸಾವಿರಾರು ಮಕ್ಕಳಿಗೆ ವಿದ್ಯಾಭ್ಯಾಸ ಸೇರಿದಂತೆ ವರ್ಷಕ್ಕೆ ₹6 ಕೋಟಿ ಖರ್ಚು ಮಾಡಿ ವಿವಿಧ ಸಾಮಾಜಿಕ ಕಾರ್ಯ ಮಾಡುತ್ತಿದ್ದರು. ಅಂಥವರನ್ನು ಕಳೆದುಕೊಂಡಿದ್ದು, ರಾಜ್ಯಕ್ಕೆ ತುಂಬಾ ನಷ್ಟವಾಗಿದೆ ಎಂದು ಸ್ಮರಿಸಿದರು.

ಅಪ್ಪು ಹೆಸರಿನಲ್ಲಿ ಅಭಿಮಾನಿಗಳು ಉತ್ತಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಶ್ಲಾಘನೀಯ. ಇದು ಇತರರಿಗೆ ಮಾದರಿಯಾಗಲಿ ಎಂದು ಆಶಿಸಿದರು.

ಮಾಜಿ ಶಾಸಕರಾದ ವೀರಬಸವಂತರಡ್ಡಿ ಮುದ್ನಾಳ, ಚನ್ನಾರೆಡ್ಡಿ ಪಾಟೀಲ ತುನ್ನೂರು ಮಾತನಾಡಿ, ಪ್ರತಿಯೊಬ್ಬರು ರಕ್ತದಾನ ಮಾಡಬೇಕು. ಮರಣ ನಂತರವೂ ತಮ್ಮ ದೇಹದ ಅಂಗಾಂಗಳನ್ನು ದಾನ ಮಾಡಬಹುದು. ನೇತ್ರದಾನ ಮಾಡುವುದರಿಂದ ನಾಲ್ವರು ಅಂಥರಿಗೆ ಬೆಳಕು ನೀಡಬಹುದು. ಇದರ ಜೊತೆಗೆ ದೇಹದಾನ ಮಾಡುವ ಮೂಲಕವೂ ಸಾಮಾಜಿಕ ಸೇವೆಯನ್ನು ಮಾಡಬಹುದು. ಅಪ್ಪು ಸಣ್ಣ ವಯಸ್ಸಿನಲ್ಲಿಯೇ ಮಹತ್ಕಾರ್ಯಗಳನ್ನು ಮಾಡಿದ್ದಾರೆ. ಇವರ ಸೇವೆ ಎಲ್ಲರಿಗೂ ಮಾದರಿಯಾಗಿದೆ ಎಂದರು.

ಸರ್ಕಾರಿ ಪದವಿ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಶುಭಾಶ್ಚಂದ್ರ ಕೌಲಗಿ ಮಾತನಾಡಿ, ಅಪ್ಪು ಸಾಮಾಜಿಕ ಕಳಕಳಿ ಹೊಂದಿರುವ ವ್ಯಕ್ತಿಯಾಗಿದ್ದರು. ಯುವ ಪಡೆ ಏನೂ ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಇಂದಿನ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದರು.

ಇದೇ ವೇಳೆ 80 ಜನ ರಕ್ತದಾನ ಮಾಡಿದರೆ, 60 ಜನ ನೇತ್ರದಾನಕ್ಕೆ ಸಹಿ ಹಾಕಿದರು. ಶಿಕ್ಷಕ ಹನುಮಯ್ಯ ನಿದಜಿಂತಿ, ವಿಜಯಲಕ್ಷ್ಮಿಹನುಮಯ್ಯ, ಮಲ್ಲಿಕಾರ್ಜುನ ಕಲಾಲ್‌, ಅಶ್ವಿನಿ ಮಲ್ಲಿಕಾರ್ಜುನ ದಂಪತಿ ದೇಹದಾನ ಮಾಡಿದರು.
ಡಾ.ಸುರಗಿಮಠ ರಕ್ತ ಕೇಂದ್ರದ ಸಿಬ್ಬಂದಿ ರಕ್ತ ಸಂಗ್ರಹಿಸಿದರು.

ಇದಕ್ಕೂ ಮುಂಚೆ ಪುನೀತ್‌ ರಾಜ್‌ಕುಮಾರ ಹೆಸರಿನಲ್ಲಿ ಸಸಿ ನೆಡಲಾಯಿತು. 

ಈ ವೇಳೆ ಯೂಡಾ ಅಧ್ಯಕ್ಷ ಬಸವರಾಜ ಚಂಡ್ರಕಿ, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಮಾರುತಿ ಕಲಾಲ್‌, ನಗರಸಭೆ ಸದಸ್ಯರಾದ ಅಂಬಯ್ಯ ಶಾಬಾದಿ, ಚನ್ನಕೇಶವಗೌಡ ಬಾಣತಿಹಾಳ, ಜಿಲ್ಲಾ ಆರ್ಯ ಈಡಿಗ ಸಮಾಜದ ಪ್ರಧಾನ ಕಾರ್ಯದರ್ಶಿ ಮಾರುತಿ ಕಲಾಲ್‌, ಬಿಜೆಪಿ ಯುವ ಘಟಕದ ಅಧ್ಯಕ್ಷ ಮೌನೇಶ ಬೆಳಗೇರಾ, ಡಾ.ಸುರಗಿಮಠ, ಅಪ್ಪು ಅಭಿಮಾನ ಬಳಗದವರು ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.