ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣದಲ್ಲಿ ಚುನಾವಣೆ; ಕರ್ನಾಟಕದಲ್ಲಿ ಕಟ್ಟೆಚ್ಚರ

Published 6 ನವೆಂಬರ್ 2023, 6:45 IST
Last Updated 6 ನವೆಂಬರ್ 2023, 6:45 IST
ಅಕ್ಷರ ಗಾತ್ರ

ಸೈದಾಪುರ: ತೆಲಂಗಾಣ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಚೆಕ್‍ಪೋಸ್ಟ್ ನಿರ್ಮಿಸಿ ವಿವಿಧ ಇಲಾಖೆಗಳಿಂದ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಸಮೀಪದ ಕಡೇಚೂರು, ಕುಂಟಿಮರಿ, ಮಾಗನೂರು, ಉಟ್ಕೂರು ಗಡಿ ಭಾಗದಲ್ಲಿ ಚೆಕ್‍ಪೋಸ್ಟ್‌ಗಳನ್ನು ನಿರ್ಮಿಸಿ ವಾಹನಗಳ ತಪಾಸಣೆ ಮಾಡಲಾಗುತ್ತಿದೆ.

ತೆಲಂಗಾಣದಲ್ಲಿ ನವೆಂಬರ್‌ 30ರಂದು ನಡೆಯುವ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಕಾಪಾಡಲು ಚೆಕ್‍ಪೋಸ್ಟ್‌ಗಳಲ್ಲಿ ದಿನದ 24 ಗಂಟೆಗಳ ಕಾಲ ಗ್ರಾಮ ಪಂಚಾಯಿತಿ, ಪೊಲೀಸ್, ಕಂದಾಯ, ಅಬಕಾರಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಸ್ಥಳದಲ್ಲಿ ಬೀಡು ಬಿಟ್ಟು ತ್ರೀವ ನಿಗಾವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಆದರೆ ಕೇವಲ ಪೊಲೀಸ್ ಇಲಾಖೆ ಮಾತ್ರ ದಿನದ 24 ಗಂಟೆ ಕರ್ತವ್ಯ ನಿರ್ವಹಿಸುತ್ತಿದೆ. ಕೆಲ ಚೆಕ್‍ಪೋಸ್ಟ್‌ಗಳಲ್ಲಿ ಉಳಿದ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದೆ ಯಾವಾಗಲೋ ಒಮ್ಮೆ ಬಂದು ದಾಖಲೆಯಲ್ಲಿ ಸಹಿ ಮಾಡಿ ಹೋಗುತ್ತಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ತೆಲಂಗಾಣ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಸಾಗಣೆ ಕಡಿವಾಣಕ್ಕೆ ಸೈದಾಪುರ ವ್ಯಾಪ್ತಿಯಲ್ಲಿ ಬರುವ ಗಡಿ ಭಾಗದಲ್ಲಿ 4 ಚೆಕ್‍ಪೋಸ್ಟ್‌ಗಳನ್ನು ನಿರ್ಮಿಸಿ ತಪಾಸಣೆ ನಡೆಸಲಾಗುತ್ತಿದೆ. ಇಲ್ಲಿಯವರೆಗೆ ಯಾವುದೇ ಅಕ್ರಮ ವರ್ಗಾವಣೆ ಚಟುವಟಿಕೆ ನಡೆದಿಲ್ಲ.
ವಿನಾಯಕ ನಾಯ್ಕ್, ಪಿಐ ಸೈದಾಪುರ

ಕಳೆದ ಸುಮಾರು 20 ದಿನಗಳಿಂದ ಕರ್ನಾಟಕದಿಂದ ತೆಲಂಗಾಣಕ್ಕೆ ಪ್ರಯಾಣಿಸುವ ದ್ವಿಚಕ್ರ, ತ್ರಿಚಕ್ರ, ಕಾರು ಸರಕು-ಸಾಗಣೆ ಸೇರಿದಂತೆ ಪ್ರತಿಯೊಂದು ವಾಹನಗಳನ್ನು ಮತ್ತು ಅನುಮನಾಸ್ಪದ ವ್ಯಕ್ತಿಗಳನ್ನು ತೀವ್ರ ತಪಾಸಣೆಗೆ ಒಳಪಡಿಸಿ ವಿಚಾರಿಸುತ್ತಿದ್ದಾರೆ.

ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಆದೇಶದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ನಿತ್ಯ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಹಾಗೇನಾದರೂ ಚೆಕ್‍ಪೋಸ್ಟ್‌ನಲ್ಲಿ ಕರ್ತವ್ಯ ಲೋಪ ಕಂಡುಬಂದಲ್ಲಿ ಅಂತವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
ಸುರೇಶ ಅಂಕಲಗಿ, ತಹಶೀಲ್ದಾರ್, ಯಾದಗಿರಿ

ಚೆಕ್‍ಪೋಸ್ಟ್‌ಗಳಲ್ಲಿ ಸಿಬ್ಬಂದಿಗಿಲ್ಲ ಸೂಕ್ತ ವ್ಯವಸ್ಥೆ: ಕರ್ನಾಟಕ ಗಡಿ ಭಾಗದ ಮಾಗನೂರು, ಉಟ್ಕೂರುನಲ್ಲಿ ನಿರ್ಮಿಸಿದ ಚೆಕ್‍ಪೋಸ್ಟ್‌ಗಳಲ್ಲಿ ಹಗಲು-ರಾತ್ರಿ ಕರ್ತವ್ಯ ನಿರತ ಸಿಬ್ಬಂದಿ ತಂಗಲು ಕಂಟೇನರ್‌ಗಳಿಲ್ಲ. ಊಟ, ಶುದ್ಧ ಕುಡಿಯುವ ನೀರು, ಕುಳಿತುಕೊಳ್ಳಲು ಆಸನಗಳಿಲ್ಲ. ಕಡೇಚೂರು ಕಂಟೇನರ್‌ನಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ರಾತ್ರಿ ಸಮಯದಲ್ಲಿ ತೊಂದರೆ ಅನುಭವಿಸುವಂತಾಗಿದೆ ಎಂಬುದು ಸಿಬ್ಬಂದಿ ಅಳಲು.

ಕರ್ತವ್ಯ ನಿರತ ಅಧಿಕಾರಿ ಮತ್ತು ಸಿಬ್ಬಂದಿಗೆ ಸಂಬಂಧಿಸಿದ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಕೂಡಲೇ ಬೇಕಾದ ಅಗತ್ಯ ಮೂಲ ಸೌಕರ್ಯಗಳ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು ಎಂಬುದು ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT