ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಂಭಾವಿ | ವಿದ್ಯುತ್ ಅವಘಡ: ಕಾರ್ಮಿಕನಿಗೆ ಗಂಭೀರ ಗಾಯ

Published 2 ಜೂನ್ 2024, 16:04 IST
Last Updated 2 ಜೂನ್ 2024, 16:04 IST
ಅಕ್ಷರ ಗಾತ್ರ

ಕೆಂಭಾವಿ: ವಿದ್ಯುತ್ ತಂತಿ ದುರಸ್ತಿಗೊಳಿಸುವಾಗ ದಿಢೀರ್ ವಿದ್ಯುತ್ ಪ್ರವಹಿಸಿ ಕಾರ್ಮಿಕ ಗಂಭೀರ ಗಾಯಗೊಂಡ ಘಟನೆ ಪಟ್ಟಣದಲ್ಲಿ ಭಾನುವಾರ ನಡೆದಿದೆ. ದೇವಿಕೇರಿ ಗ್ರಾಮದ ರಾಯಪ್ಪ (30) ಎಂಬ ಕಾರ್ಮಿಕನೆ ತೀವ್ರವಾಗಿ ಗಾಯಗೊಂಡವರು.

ಕಳೆದ ವಾರದ ಭಾರಿ ಮಳೆ ಗಾಳಿಗೆ ಪಟ್ಟಣದೆಲ್ಲೆಡೆ ಹಲವು ವಿದ್ಯುತ್ ಕಂಬಗಳು ಧರೆಗುರುಳಿದ್ದ ಪರಿಣಾಮ ಒಂದು ವಾರದಿಂದ ವಿದ್ಯುತ್ ಕಣ್ಣಾಮುಚ್ಚಾಲೆ ಶುರುವಾಗಿದೆ. ನೆಲಕ್ಕುರುಳಿದ ವಿದ್ಯುತ್ ಕಂಬಗಳನ್ನು ಬದಲಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲು ಜೆಸ್ಕಾಂ ಹರಸಾಹಸ ಪಡುತ್ತಿದೆ. ಭಾನುವಾರ ಕಂಬ ದುರಸ್ತಿಗೊಳಿಸುವಾಗ ಖಾಸಗಿ ವಿದ್ಯುತ್ ಗುತ್ತಿಗೆದಾರರ ಬಳಿ ಕಾರ್ಮಿಕನಾಗಿದ್ದ ರಾಯಪ್ಪ ಎಂದಿನಂತೆ ಹೈಟೆನ್ಷನ್‌ ವೈಯರ್‌ ಕಂಬ ಏರಿ ವಿದ್ಯುತ್ ತಂತಿ ಎಳೆಯುತ್ತಿದ್ದಾಗ ಏಕಾಏಕಿ ವಿದ್ಯುತ್ ಬಂದ ಹಿನ್ನೆಲೆಯಲ್ಲಿ ಕಾರ್ಮಿಕ ಕಂಬದ ಮೇಲೆ ನೇತಾಡಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದ. ಇದನ್ನು ಕಂಡ ಸ್ಥಳೀಯರು ಜೆಸ್ಕಾಂಗೆ ಮಾಹಿತಿ ನೀಡಿ ವಿದ್ಯುತ್ ಕಡಿತಗೊಳಿಸಿದ ನಂತರ ಕಾರ್ಮಿಕನನ್ನು ಕೆಳಗಿಳಿಸಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆಗೆ ದಾಖಲಿಸಿದರು.

ವಿದ್ಯುತ್ ಅವಘಢದಿಂದ ಕಾರ್ಮಿಕ ರಾಯಪ್ಪನ ಒಂದು ಕಾಲು ಸಂಪೂರ್ಣ ಸುಟ್ಟು ಹೋಗಿದ್ದು ಇನ್ನೊಂದು ಕಾಲು ಮುರಿತಕ್ಕೊಳಗಾಗಿ ಚಿಂತಾಜನಕ ಸ್ಥಿತಿ ಇದೆ ಎನ್ನಲಾಗಿದೆ. ಹೆಚ್ಚಿನ ಚಿಕೆತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಕೆಂಭಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಜೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗುತ್ತಿಗೆದಾರರ ವಿರುದ್ಧ ಆಕ್ರೋಶ: ‘ದುರಸ್ತಿ ಕಾರ್ಯ ಕೈಗೆತ್ತಿಕೊಂಡಿರುವ ಗುತ್ತಿಗೆದಾರರು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸದೆ ಕಾರ್ಮಿಕರನ್ನು ಮನಬಂದಂತೆ ದುಡಿಸಿಕೊಳ್ಳುತ್ತಿರುವುದೇ ಅವಘಢಗಳಿಗೆ ಕಾರಣವಾಗಿದೆ’ ಎಂದು ಕುಟುಂಬಸ್ಥರು ಆರೋಪಿಸಿದರು. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ ರಾಯಪ್ಪನ ಕುಟುಂಬ ಸದಸ್ಯರು ಬಡ ಕೂಲಿ ಕಾರ್ಮಿಕನ ಇಂತಹ ಸ್ಥಿತಿಗೆ ಸಂಬಂಧಿಸಿದ ಗುತ್ತಿಗೆದಾರರೇ ನೇರ ಹೊಣೆಗಾರರಾಗಿದ್ದು, ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಗಾಯಗೊಂಡ ರಾಯಪ್ಪನಿಗೆ ಸೂಕ್ತ ಚಿಕಿತ್ಸೆ ನೀಡಲು ಜೆಸ್ಕಾಂ ಹಾಗೂ ಗುತ್ತಿಗೆದಾರರು ಆರ್ಥಿಕವಾಗಿ ನೆರವಾಗಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT