ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ: ಅನಧಿಕೃತ ಕೊಚಿಂಗ್ ಕೇಂದ್ರಗಳ ವಿರುದ್ಧ ಧರಣಿ

Published 24 ಮೇ 2024, 13:51 IST
Last Updated 24 ಮೇ 2024, 13:51 IST
ಅಕ್ಷರ ಗಾತ್ರ

ಶಹಾಪುರ: ನಗರದಲ್ಲಿ ಪರವಾನಗಿ ಇಲ್ಲದೆ ಅನಧಿಕೃತವಾಗಿ ಕೊಚಿಂಗ್ ಕೇಂದ್ರಗಳನ್ನು ಸ್ಥಾಪಿಸಿ ಅಕ್ರಮ ಎಸಗುತ್ತಿರುವ ಕೇಂದ್ರಗಳ ಮೇಲೆ ವಂಚನೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ದಲಿತ ಸಂಘರ್ಷ ಸಮಿತಿ(ಪ್ರೊ.ಬಿ.ಕೃಷ್ಣಪ್ಪ ಬಣ) ಮುಖಂಡರು ಬಿಇಒ ಕಚೇರಿಯ ಮುಂದೆ ಧರಣಿ ನಡೆಸಿದರು.

‘ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಪ್ರವೇಶ ಮಾಡಿಸಿ ನಗರದಲ್ಲಿ ನವೋದಯ, ಮೊರಾರ್ಜಿ, ಸೈನಿಕ ಹೀಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ತರಬೇತಿ ನೀಡುತ್ತೇವೆ ಎಂದು ಪಾಲಕರಿಗೆ ವಂಚಿಸಿ ಹಣ ವಸೂಲಿ ಮಾಡುತ್ತಿದ್ದಾರೆ. ಅಲ್ಲದೆ ವಸತಿನಿಲಯದಲ್ಲಿ ಮಕ್ಕಳಿಗೆ ಯಾವುದೇ ಸುರಕ್ಷತೆ ಇಲ್ಲ. ತಮ್ಮ ರಾಜಕೀಯ ಪ್ರಭಾವ ಬಳಸಿಕೊಂಡು ಹಲವಾರು ವರ್ಷದಿಂದ ಐದಕ್ಕೂ ಹೆಚ್ಚು ತರಬೇತಿ ಕೇಂದ್ರಗಳು ನಡೆಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವಂತೆ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ’ ಎಂದು ಸಮಿತಿಯ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಹೊನ್ನಪ್ಪ ಗಂಗನಾಳ ಆರೋಪಿಸಿದರು.

‘ಇದರಿಂದ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಮತ್ತು ಹಾಜರಾತಿ ವ್ಯತ್ಯಾಸದಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಶಾಲಾ ದಾಖಲಾತಿಯಂತೆ ಮಧ್ಯಾಹ್ನದ ಬಿಸಿಯೂಟ, ಪುಸ್ತಕ ವಿತರಣೆ, ಸಮವಸ್ತ್ರ ಹೀಗೆ ಎಲ್ಲವು ವೆಚ್ಚವಾಗಿ ಸರ್ಕಾರದ ಹಣ ಪೋಲಾಗುತ್ತಲಿದೆ. ಆದರೆ ಸರ್ಕಾರಿ ಶಾಲೆಯ ಮಕ್ಕಳು ಇಲ್ಲಿನ ಕೋಚಿಂಗ್ ಕೇಂದ್ರದಲ್ಲಿದ್ದಾರೆ ಇದರ ಬಗ್ಗೆ ತನಿಖೆ ನಡೆಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಶಿಕ್ಷಕರ ಕೊರತೆ ನೆಪದಲ್ಲಿ ಅನ್ಯ ಶಾಲೆಗೆ ನಿಯೋಜನೆ ಮೇಲೆ ತೆರಳಿದ ಶಿಕ್ಷಕರನ್ನು ಮತ್ತೆ ಮೂಲ ಸ್ಥಾನಕ್ಕೆ ಕರೆ ತೆರಬೇಕು ಎಂದು ಅವರು ಮನವಿ ಮಾಡಿದರು.

ಧರಣಿಯಲ್ಲಿ ವಿಭಾಗೀಯ ಸಂಚಾಲಕ ಸುಭಾಸ ತಳವಾರ, ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಗುತ್ತೆದಾರ, ಶಾಂತಪ್ಪ ಗುಡಿಮನಿ, ಮಾಳಪ್ಪ ಸಲಾದಪುರ, ದೇವಮ್ಮ ಕುರಕುಂದಿ, ಗಿರಿಜಾ ತಳವಾರ, ಸುಜಾತ ಜೇವರ್ಗಿ, ತಿಪ್ಪಮ್ಮ, ಮಲ್ಲಪ್ಪರೆಡ್ಡಿ, ಶ್ರೀಕಾಂತ, ಅನಸೂಯಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT