ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವಾಸ, ಭಕ್ತಿ ಒಂದೇ ನಾಣ್ಯದ ಎರಡು ಮುಖಗಳು

ವಡವಡಗಿ ನಂದಿಮಠದ ಶಿವಸಿದ್ಧ ಸ್ವಾಮೀಜಿ ಅಭಿಮತ
Published 6 ಜನವರಿ 2024, 15:57 IST
Last Updated 6 ಜನವರಿ 2024, 15:57 IST
ಅಕ್ಷರ ಗಾತ್ರ

ಸುರಪುರ:  ‘ಭಕ್ತಿ ಎಂಬುದು ಭರವಸೆ ಮತ್ತು ಅರಿವು. ದೇವರಲ್ಲಿ ಭಕ್ತಿ–ವಿಶ್ವಾಸ ಇರಬೇಕು. ವಿಶ್ವಾಸ ಮತ್ತು ಭಕ್ತಿ ಒಂದೇ ನಾಣ್ಯದ ಎರಡು ಮುಖಗಳು’ ಎಂದು ವಡವಡಗಿ ನಂದಿಮಠದ ಶಿವಸಿದ್ಧ ಸ್ವಾಮೀಜಿ ಹೇಳಿದರು.

ಸಮೀಪದ ನಾಗಲಾಪುರದ ವೀರಾಂಜನೇಯ ಕಾರ್ತಿಕೋತ್ಸವ ನಿಮಿತ್ತ ವೀರಾಂಜನೇಯ ಕ್ಷೇತ್ರಾಭಿವೃದ್ಧಿ ಟ್ರಸ್ಟ್, ಶತಕೋಟಿ ಯುವ ಸ್ಫೂರ್ತಿ ಬಳಗದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಹಿಂದಿನವರ ಭಕ್ತಿಯಲ್ಲಿ ಸ್ವಾರ್ಥ ಇರುತ್ತಿರಲಿಲ್ಲ. ಆದರೆ, ಇಂದಿನ ನಮ್ಮ ಭಕ್ತಿ ಸ್ವಾರ್ಥದಿಂದ ಕೂಡಿದೆ. ಕಲಿಯುಗದ ಇಂದಿನ ದಿನಮಾನದಲ್ಲಿ ಎಲ್ಲ ವ್ಯವಸ್ಥೆಗಳ ಲಭ್ಯತೆಯಿಂದ ಭಕ್ತಿ ಕಡಿಮೆಯಾಗುತ್ತಿದೆ. ಇದು ಸರಿಯಾದ ಬೆಳವಣಿಗೆ ಅಲ್ಲ’ ಎಂದು ವಿಷಾದಿಸಿದರು.

‘ಭಕ್ತಿ ಅನ್ನುವುದು ತೋರಿಸಲಾಗದು. ಅವರ ಭಕ್ತಿ ಅವರ ಮನಸ್ಸಿಗೆ ಗೊತ್ತಿರುತ್ತದೆ. ಶರಣರು, ಸತ್ಪರುಷರು, ಮಹಾತ್ಮರು ಭಕ್ತಿ ಮೆರೆದಿದ್ದಾರೆ. ಸಮಾಜ ಸೇವೆ ಮಾಡಿ ಶಾಶ್ವತವಾಗಿ ಜನಮಾನಸದಲ್ಲಿ ಉಳಿದಿದ್ದಾರೆ. ಭಕ್ತಿ ಮನುಷ್ಯನಿಗೆ ಸದಾ ರಕ್ಷಣೆ ಕೊಡುತ್ತದೆ. ದೇವರ ಮತ್ತು ಧರ್ಮದ ಮೇಲೆ ನಂಬಿಕೆ ಇರಬೇಕು’ ಎಂದು ಎಂದು ಹೇಳಿದರು.

ಸಾಹಿತಿ ನಬಿಲಾಲ್ ಮಕಾನದಾರ ಮಾತನಾಡಿ, ‘ಮಠ ಮಾನ್ಯಗಳು ಭಕ್ತಿಪಥದಲ್ಲಿ ಜ್ಞಾನ ದಾಸೋಹದ ಜತೆ ಜತೆಯಲ್ಲಿ ಅನ್ನದಾಸೋಹ ಮಾಡುತ್ತಿವೆ. ಭಕ್ತಿಪಥಕ್ಕೆ ಐತಿಹಾಸಿಕ, ಸಾಮಾಜಿಕ ಹಿನ್ನೆಲೆಯಿದೆ. ಭಕ್ತಿಪಥದಲ್ಲಿ ಸಂತರು, ಶರಣರು, ಸೂಫಿಗಳು ಬರುತ್ತಾರೆ. ಭಕ್ತಿಪಥಕ್ಕೆ ಯಾವುದೇ ಧರ್ಮದ ಲೇಪ ಇಲ್ಲ. ಮೂಲ ಭಗವಂತನನ್ನು ಸೇರುವುದು, ಪ್ರೀತಿಸುವುದು, ಆರಾಧಿಸುವುದು’ ಎಂದರು.

ಟ್ರಸ್ಟ್ ಅಧ್ಯಕ್ಷ ಸಂಜೀವ ದರಬಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಕಾರ್ತಿಕೋತ್ಸವದಲ್ಲಿ ಅನ್ನದಾಸೋಹ ಜತೆ ಜ್ಞಾನದಾಸೋಹ ನೀಡಲಾಗುತ್ತಿದೆ. ಕಳೆದ 9 ವರ್ಷಗಳಿಂದ ಪ್ರತಿ ಅಮಾವಾಸ್ಯೆ ದಿನ ಭಕ್ತರ ಸಹಕಾರದೊಂದಿಗೆ ಅನ್ನದಾಸೋಹ ನಡೆಯುತ್ತದೆ. ಮುಂದಿನ ದಿನಗಳಲ್ಲಿ ಟ್ರಸ್ಟ್ ವತಿಯಿಂದ ಯೋಗ, ಕರಾಟೆ ಶಾಲೆ, ಕೆಎಎಸ್, ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

ರವಿಕುಮಾರ ಗೋರ್ಕಾಲ ಮಾತನಾಡಿದರು.

ಮಲ್ಲಯ್ಯ ಮುತ್ಯಾ ನಾಗಲಾಪುರ ಅಧ್ಯಕ್ಷತೆ ವಹಿಸಿದ್ದರು. ಮಹಾಂತೇಶ ಮುತ್ಯಾ ಹಾಗೂ ಸಿದ್ದು ಗುಡ್ಡಕಾಯಿ ಭಾಗವಹಿಸಿದ್ದರು.

ಬಳಿಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು.

ಮಹಾಂತೇಶ ಶಹಾಪುರ ಸ್ವಾಗತಿಸಿದರು. ಮಹಾದೇವಪ್ಪ ಗುತ್ತೇದಾರ ನಿರೂಪಿಸಿದರು. ಮುದ್ದಪ್ಪ ಅಪ್ಪಾಗೋಳ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT