ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ‘ಹೆಣ್ಣು ಜಗದ ಕಣ್ಣು’ ಕಿರುನಾಟಕ ಪ್ರದರ್ಶನ

ಭ್ರೂಣಹತ್ಯೆ ತಡೆಯುವ ನಿಟ್ಟಿನಲ್ಲಿ ಶಿಕ್ಷಕಿಯರಿಂದ ಹೊಸ ಪ್ರಯೋಗ
Published 13 ಮಾರ್ಚ್ 2024, 5:09 IST
Last Updated 13 ಮಾರ್ಚ್ 2024, 5:09 IST
ಅಕ್ಷರ ಗಾತ್ರ

ಯಾದಗಿರಿ: ಭ್ರೂಣಹತ್ಯೆ ತಡೆಯುವ ಅರಿವು ಕುರಿತು ಶಿಕ್ಷಕಿಯರಿಂದ ‘ಹೆಣ್ಣು ಜಗದ ಕಣ್ಣು’ ಎಂಬ ಕಿರುನಾಟಕ ಪ್ರದರ್ಶನವು ನೋಡುಗರ ಕಣ್ಣಂಚಲ್ಲಿ ನೀರು ತರಿಸಿ, ಭಾವುಕರಾಗುವಂತೆ ಮಾಡಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ ಜಾಗೃತಿ ಅಂಗವಾಗಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಸೋಮವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ನಾಟಕ ಪ್ರದರ್ಶಿಸಲಾಯಿತು.

ಗುರುಮಠಕಲ್‌ ತಾಲ್ಲೂಕಿನ ಎಲ್ಹೇರಿಯ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ಮಂಜುಳಾ ಕೆ., ರಚಿಸಿ ನಿರ್ದೇಶಿಸಿದ ನಾಟಕ ಪ್ರದರ್ಶನದಲ್ಲಿ ಭ್ರೂಣದಲ್ಲಿರುವ ಮಗುವಿನ ಪಾತ್ರವನ್ನು ಸಹ ಅವರೇ ಮನಮುಟ್ಟುವಂತೆ ಪ್ರದರ್ಶಿಸಿದರು.

ಅಮ್ಮ ಈ ಸುಂದರವಾದ ಭೂಮಿಯನ್ನು ನಾನು ನೋಡುತ್ತೇನೆ. ನಾನು ಯಾವಾಗ ಹೊರ ಬರುತ್ತೇನೆ, ಯಾವಾಗ ನಿನ್ನ ಮಡಿಲಲ್ಲಿ ಮಲಗ್ತೀನಿ, ಯಾವಾಗ ನಿನ್ನ ಕೈತ್ತುತ್ತು ತಿನ್ನುತ್ತೀನಿ ಎಂಬ ಮಾತುಗಳು ಹೃದಯ ಮುಟ್ಟಿದವು.

‘ನಾನು ಎಲ್ಲರ ಹಾಗೇ ಬದುಕಬೇಕಮ್ಮ, ಜಗತ್ತನ್ನು ನಾನು ನೋಡಬೇಕು, ಓದಬೇಕು, ಸಾಧನೆ ಮಾಡಬೇಕು, ನನಗೂ ಬದುಕಲು ಅವಕಾಶ ಕೊಡಿ, ನಾನು ನಿಮಗೆ ದ್ರೋಹ ಮಾಡಿದ್ದಾದರೇನು? ನನಗೆ ಬದುಕುವ ಹಕ್ಕು ಇಲ್ವೇ? ಅಯ್ಯೋ ದೇವ್ರೇ ನೀನಾದರೂ ನನ್ನ ಜೀವ ಉಳಿಸು’ ಎಂದು ಬೇಡಿಕೊಳ್ಳುತ್ತಿರುವ ದೃಶ್ಯ ಕಣ್ಣಲ್ಲಿ ನೀರು ತರಿಸಿತು.

ಶಹಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶಿಬಾ ಜಿಲಿಯನ್, ಯಾದಗಿರಿ ಡಯಟ್ ಕಾಲೇಜಿನ ಉಪನ್ಯಾಸಕಿ ಇಂದಿರಾ ಬಡಿಗೇರಾ, ಅಲ್ಲಿಪುರ ಪ್ರೌಢಶಾಲೆಯ ಮುಖ್ಯಶಿಕ್ಷಕಿ ವಿದ್ಯಾ ಸಜ್ಜನ್, ಬಳಿಚಕ್ರ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಅನ್ನಪೂರ್ಣ, ಕಂದಕೂರ ಪ್ರೌಢಶಾಲೆಯ ಸಹಶಿಕ್ಷಕಿ ಮಧುಮತಿ, ಬಂದಳ್ಳಿ ಪ್ರೌಢಶಾಲೆಯ ಸಹಶಿಕ್ಷಕಿ ಸುರೇಖಾ, ಯಾದಗಿರಿ ಸ್ಟೇಷನ್ ಬಜಾರ್ ಪ್ರೌಢಶಾಲೆಯ ಸಹಶಿಕ್ಷಕಿ ಗೀತಾ, ನ್ಯೂ ಕನ್ನಡ ಪ್ರೌಢಶಾಲೆಯ ಮಲ್ಲಮ್ಮ, ಅಂಗನವಾಡಿ ಕಾರ್ಯಕರ್ತೆ ಗೀತಾ, ಪದವಿ ಕಾಲೇಜಿನ ವಿದ್ಯಾರ್ಥಿನಿ ವೈಷ್ಣವಿ ಇವರು ನಾಟಕ ಪ್ರದರ್ಶನದಲ್ಲಿ ವಿವಿಧ ಪಾತ್ರಗಳನ್ನು ನಿಭಾಯಿಸಿ ಗಮನ ಸೆಳೆದು, ಹೆಣ್ಣು ಭ್ರೂಣ ಹತ್ಯೆ ತಡೆಯಲು ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ, ಜಿಲ್ಲಾ ಪಂಚಾಯಿತಿ ಸಿಇಒ ಗರಿಮಾ ಪಂವಾರ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಸಂಗೀತಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ, ತಾಲ್ಲೂಕು ಮಟ್ಟದ ಅಧಿಕಾರಿ, ಸಿಬ್ಬಂದಿ ವರ್ಗದವರು ಸಾರ್ವಜನಿಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT