ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಗುತ್ತಿಗೆ ನೌಕರರಿಗೆ ಎರಡು ತಿಂಗಳ ವೇತನ ಜಮಾ

Published 7 ಡಿಸೆಂಬರ್ 2023, 2:54 IST
Last Updated 7 ಡಿಸೆಂಬರ್ 2023, 2:54 IST
ಅಕ್ಷರ ಗಾತ್ರ

ಯಾದಗಿರಿ: ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಹೊರಗುತ್ತಿಗೆ ಸಿಬ್ಬಂದಿಗೆ ಕಳೆದ ಐದು ತಿಂಗಳಿಂದ ವೇತನ ಆಗದಿರುವ ಬಗ್ಗೆ ‘ಹೊರಗುತ್ತಿಗೆ: 5 ತಿಂಗಳಿಂದ ವೇತನ ಇಲ್ಲ’ ಶೀರ್ಷಿಕೆಯಡಿ ನವೆಂಬರ್‌ 30ರಂದು ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಏಜೆನ್ಸಿಗಳು ಎರಡು ತಿಂಗಳ ವೇತನವನ್ನು ನೌಕರರಿಗೆ ಜಮಾ ಮಾಡಿದೆ.

ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ, ಆರೋಗ್ಯ ಮತ್ತು ಕ್ಷೇಮ ಕೇಂದ್ರ, ಅಂಬ್ಯುಲೆನ್ಸ್‌ ನೌಕರರು ವೇತನವಿಲ್ಲದೇ ಸಾಲ ಸೋಲ ಮಾಡಿ ಮಕ್ಕಳ ಶಾಲಾ–ಕಾಲೇಜು, ಬಾಡಿಗೆ ಕಟ್ಟಲು ಪರದಾಡುತ್ತಿದ್ದರು. ಸಮಸ್ಯೆ ಕುರಿತು ವರದಿ ಮಾಡಿದ ನಂತರ ಎಚ್ಚೆತ್ತುಕೊಂಡ ದೀಕ್ಷಾ ಏಜೆನ್ಸಿ ವೇತನ ನೌಕರರಿಗೆ ಜಮಾ ಮಾಡಿದ್ದು, ನೌಕರರಿಗೆ ತಾತ್ಕಾಲಿಕ ಸಮಾಧಾನ ಮೂಡಿಸಿದೆ. ಆದರೆ, ಕೆಲವರಿಗೆ ಬಾಕಿ ಉಳಿಸಿಕೊಂಡಿರುವುದು ಅನುಮಾನ ಮೂಡಿಸಿದೆ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ದೀಕ್ಷಾ ಏಜೆನ್ಸಿಯ ವೆಂಕಟೇಶ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ಕಳೆದ ಐದು ತಿಂಗಳಿಂದ ಆರೋಗ್ಯ ಇಲಾಖೆಯಲ್ಲಿ ಟೆಂಡರ್‌ ಸಮಸ್ಯೆಯಾಗಿ ವೇತನ ಜಮಾ ಆಗಿಲ್ಲ. ಈಗ ಎರಡು ತಿಂಗಳ ವೇತನ ಜಮಾ ಮಾಡಿದ್ದು, ಇನ್ನೊಂದು ವಾರದಲ್ಲಿ ಉಳಿದ ಮೂರು ತಿಂಗಳ ವೇತನ ಜಮಾ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

ವೇತನ ಹೆಚ್ಚಿಸಿ:

‘ಹಲವಾರು ವರ್ಷಗಳಿಂದ ಆರೋಗ್ಯ ಇಲಾಖೆಯ ಹೊರಗುತ್ತಿಗೆಯಲ್ಲಿ ಸ್ಟಾಫ್‌ ನರ್ಸ್‌, ಪ್ರಯೋಗಾಲಯ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಡಿ ಗ್ರೂಪ್‌ ನೌಕರರಿಗೆ ನಮಗೂ ಒಂದೇ ರೀತಿಯ ವೇತನ ನೀಡಲಾಗುತ್ತಿದೆ. ಈ ಇದನ್ನು ಸರಿ ಮಾಡಬೇಕು. ಆಯಾ ಹುದ್ದೆಗಳಿಗೆ ತಕ್ಕಂತೆ ವೇತನ ಹೆಚ್ಚಿಸಿ ಆಯಾ ತಿಂಗಳೇ ವೇತನ ನೀಡಬೇಕು. ಪಿಎಫ್‌ ಸೇರಿದಂತೆ ನೌಕರರಿಗೆ ಎಲ್ಲ ಸೌಲಭ್ಯ ಕಲ್ಪಿಸಬೇಕು‘ ಎಂದು ಹೊರಗುತ್ತಿಗೆ ಸಿಬ್ಬಂದಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT