ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈದಾಪುರ: ರೋಗ ಭೀತಿಯಲ್ಲಿ ಕಾಲೊನಿ ನಿವಾಸಿಗಳು

ಮೂಲಭೂತ ಸೌಕರ್ಯಗಳಿಂದ ವಂಚಿತವಾದ ತಾಯಿ ಕಾಲೊನಿ
Published 13 ಸೆಪ್ಟೆಂಬರ್ 2023, 5:33 IST
Last Updated 13 ಸೆಪ್ಟೆಂಬರ್ 2023, 5:33 IST
ಅಕ್ಷರ ಗಾತ್ರ

ಸೈದಾಪುರ: ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಪಟ್ಟಣದ ತಾಯಿ ಕಾಲೊನಿಯ ಖಾಲಿ ನಿವೇಶನ ಮತ್ತು ರಸ್ತೆಗಳ ಮೇಲೆ ಚರಂಡಿಯ ಕೊಳಚೆ ನೀರು ಸಂಗ್ರಹವಾಗಿ ಜನರು ಸದಾ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ.

ಪಟ್ಟಣದ ಗ್ರಾಮ ಪಂಚಾಯಿತಿ ವಾರ್ಡ್‌ ನಂ-1ರ ವ್ಯಾಪ್ತಿಯಲ್ಲಿ ಬರುವ ತಾಯಿ ಕಾಲೊನಿಯಲ್ಲಿ 1500 ಹೆಚ್ಚು ಜನರು ವಾಸವಾಗಿದ್ದಾರೆ. ಸ್ವಲ್ಪ ಮಳೆಯಾದರೂ ಕಾಲೊನಿಯು ಕೆರೆಯಂತಾಗುತ್ತದೆ. ಚರಂಡಿಯಲ್ಲಿನ ಕಸ ಕಡ್ಡಿ, ಮಣ್ಣು ರಸ್ತೆ ಮೇಲೆ ಹರಿದು ಬಂದು ಮಲೀನತೆಯಿಂದ ನಿತ್ಯ ಹಿಂಸೆ ಅನುಭವಿಸುವಂತಾಗುತ್ತದೆ. ನಿವಾಸಿಗಳು ತಮ್ಮ ಮನೆಗಳಿಗೆ ಹೋಗಲು, ಹೊರಗಡೆ ಬರಲು ಸಾಧ್ಯವಾಗದ ಸ್ಥಿತಿ ಸೃಷ್ಟಿ ಮಾಡುತ್ತದೆ.

ಕಾಲೊನಿ ನಿರ್ಮಾಣವಾದಾಗಿನಿಂದಲೂ ಇಲ್ಲಿನ ನಿವಾಸಿಗಳಿಗೆ ಚರಂಡಿ ಸಮಸ್ಯೆ ಕಾಡುತ್ತಿದೆ. ಚರಂಡಿಯ ಕೊಳಚೆ, ಮನೆ ಬಳಕೆ ನೀರು ಮತ್ತು ಮಳೆ ನೀರು ಸರಾಗವಾಗಿ ಹರಿಯಲು ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದೇ ಖಾಲಿ ನಿವೇಶನ ಮತ್ತು ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹಗೊಳ್ಳುತ್ತಿವೆ. ಹಂದಿ, ನಾಯಿ ಸೇರಿದಂತೆ ಇತರೆ ಪ್ರಾಣಿ, ದನಕರುಗಳು ಈ ಕೆಸರು ಗದ್ದೆಯಲ್ಲಿ ಓಡಾಡುತ್ತಿದ್ದು, ಕೆಟ್ಟ ವಾಸನೆಯಿಂದ ಉಸಿರಾಡಲು ತೊಂದರೆ ಅನುಭವಿಸುವಂತಾಗಿದೆ ಎಂದು ಎನ್ನುತ್ತಾರೆ ಗ್ರಾಮದ ನಿವಾಸಿ ಶಿವುಕುಮಾರ ಉಜ್ಜೇಲಿ.

ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಅವರ ನಿರ್ಲಕ್ಷ್ಯದಿಂದ ಇಲ್ಲಿ ವಾಸಿಸುವ ಸಾರ್ವಜನಿಕರು ವಿವಿಧ ಸಮಸ್ಯೆಗಳ ಸುಳಿಯಲ್ಲಿಯೇ ಸಿಲುಕಿಕೊಂಡು ಮುಕ್ತಿ ಸಿಗದೆ ನರಳುವಂತಾಗಿದೆ ಎನ್ನುತ್ತಾರೆ ರಾಯಪ್ಪ ಪೂಜಾರಿ ಕೊಲ್ಲೂರು.

ಮೂಲಸೌಕರ್ಯಗಳಿಂದ ವಂಚಿತ: ಕಾಲೊನಿಯಲ್ಲಿ ಬ್ಯಾಂಕ್, ಅಂಗನವಾಡಿ ಕೇಂದ್ರ ಸೇರಿದಂತೆ ಉದ್ಯಮಿಗಳು, ಸರ್ಕಾರಿ ನೌಕರರು, ವೈದ್ಯರು, ಶಿಕ್ಷಕರು ವಾಸಿಸುವ ಕಾಲೊನಿಯಲ್ಲಿ ಸಾರ್ವಜನಿಕರಿಗೆ ಬೇಕಾದ ಅಗತ್ಯ ಮೂಲಭೂತ ಸೌಕರ್ಯಗಳಿಲ್ಲ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಬೀದಿ ದೀಪ, ಉತ್ತಮ ರಸ್ತೆ, ಚರಂಡಿ ವ್ಯವಸ್ಥೆಯಿಂದ ವಂಚಿತವಾಗಿದೆ ಎಂದು ನಿವಾಸಿಗಳ ಅಳಲು.

ಹೆಚ್ಚಾದ ಸೊಳ್ಳೆಗಳ ಹಾವಳಿ: ಕಳೆದ ಕೆಲ ದಿನಗಳಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಸೊಳ್ಳೆಗಳ ನಿಯಂತ್ರಣಕ್ಕೆ ಗ್ರಾಮ ಪಂಚಾಯಿತಿಯಿಂದ ಔಷಧಿ ಕೂಡ ಸಿಂಪಡಣೆ ಮಾಡುತ್ತಿಲ್ಲ. ಇದರಿಂದ ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಗಿಯಂತಹ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ ಎನ್ನುತ್ತಾರೆ ಯುವ ಮುಖಂಡ ವೆಂಕಣ್ಣಗೌಡ ಕ್ಯಾತನಾಳ.

ಶಾಶ್ವತ ಪರಿಹಾರಕ್ಕೆ ಆಗ್ರಹ: ಕಾಲೊನಿಯ ವಿವಿಧೆಡೆ ಚರಂಡಿ ನೀರು ಸಂಗ್ರಹವಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸಂಬಂಧಿಸಿದವರು  ಬೇಗ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಜನಪ್ರತಿನಿಧಿಗಳು ಶಾಶ್ವತ ಪರಿಹಾರ ಒದಗಿಸಬೇಕು ಎನ್ನುತ್ತಾರೆ ಸಿದ್ದು ಪೂಜಾರಿ.

ಸೈದಾಪುರ ಪಟ್ಟಣದ ತಾಯಿ ಕಾಲೊನಿಯ ಖಾಲಿ ನಿವೇಶನದಲ್ಲಿ ಸಂಗ್ರಹಗೊಂಡಿರುವ ಕೊಳಚೆ ನೀರು
ಸೈದಾಪುರ ಪಟ್ಟಣದ ತಾಯಿ ಕಾಲೊನಿಯ ಖಾಲಿ ನಿವೇಶನದಲ್ಲಿ ಸಂಗ್ರಹಗೊಂಡಿರುವ ಕೊಳಚೆ ನೀರು
ಸೈದಾಪುರ ಪಟ್ಟಣದ ತಾಯಿ ಕಾಲೊನಿಯ ಚರಂಡಿಯ ಅವ್ಯವಸ್ಥೆಯಿಂದ ಹಂದಿಗಳ ಹಾವಳಿ ಹೆಚ್ಚಾಗಿದೆ
ಸೈದಾಪುರ ಪಟ್ಟಣದ ತಾಯಿ ಕಾಲೊನಿಯ ಚರಂಡಿಯ ಅವ್ಯವಸ್ಥೆಯಿಂದ ಹಂದಿಗಳ ಹಾವಳಿ ಹೆಚ್ಚಾಗಿದೆ
ಸೈದಾಪುರ ಪಟ್ಟಣದ ತಾಯಿ ಕಾಲೊನಿಯ ರಸ್ತೆ ಮೇಲೆ ನೀರು ನಿಂತಿದೆ
ಸೈದಾಪುರ ಪಟ್ಟಣದ ತಾಯಿ ಕಾಲೊನಿಯ ರಸ್ತೆ ಮೇಲೆ ನೀರು ನಿಂತಿದೆ

ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಬೇಕಾದ ಸ್ಥಳೀಯ ಸಂಸ್ಥೆ ಇದ್ದು ಇಲ್ಲದಂತಾಗಿದೆ. ಕಾರ್ಯ ನಿರ್ವಹಿಸದ ಅಧಿಕಾರಿಯ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು.

-ರಾಜುಗೌಡ ಕಾಡ್ಲೂರು ಸ್ಥಳಿಯ ನಿವಾಸಿ

ಮನೆ ಪಕ್ಕದಲ್ಲಿ ಹಸಿರು ಬಣ್ಣದ ಕೊಳಚೆ ನೀರು ಸಂಗ್ರಹಗೊಂಡ ಪರಿಣಾಮ ದುರ್ವಾಸನೆ ವಿಷ ಜಂತುಗಳ ಭಯ ಸೊಳ್ಳೆಗಳ ಕಾಟದಿಂದ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

-ಶಿವುಕುಮಾರ ಮುನಗಾಲ ಸ್ಥಳೀಯ ನಿವಾಸಿ

ಕಾಲೊನಿಯ ಸಮಸ್ಯೆಗಳ ಬಗ್ಗೆ ಪಿಡಿಒ ಅಧ್ಯಕ್ಷೆ ಮತ್ತು ಸರ್ವ ಸದಸ್ಯರ ಜೊತೆ ಚರ್ಚಿಸಿ ಸ್ವಚ್ಛತೆ ದೀಪಗಳ ನಿರ್ವಹಣೆ ಸೇರಿದಂತೆ ಇತರೆ ಸಮಸ್ಯಗಳಿಗೆ ಬೇಗ ಕ್ರಮಕೈಗೊಳ್ಳುತ್ತೇವೆ.

-ಶರಣಪ್ಪ ಬೈರಂಕೊಂಡಿ ಗ್ರಾಮ ಪಂಚಾಯಿತಿ ಸದಸ್ಯ

ಸಾರ್ವಜನಿಕರ ಸಂಪರ್ಕಕ್ಕೆ ಸಿಗದ ಪಿಡಿಒ

ಜನಸಾಮಾನ್ಯರ ಕಷ್ಟಗಳಿಗೆ ಸೂಕ್ತ ಪರಿಹಾರ ನೀಡುವ ಸ್ಥಳೀಯ ಸಂಸ್ಥೆಯ ಅಧಿಕಾರಿ ಸಾರ್ವಜನಿಕರ ಸಂಪರ್ಕಕ್ಕೆ ಸಿಗುತ್ತಿಲ್ಲ. ಕರೆ ಮಾಡಿದರೆ ಸ್ವೀಕರಿಸಲ್ಲ ಎನ್ನುತ್ತಾರೆ ಸಾರ್ವಜನಿಕರು. ವಾರಕ್ಕೊಮ್ಮೆ ಪಂಚಾಯಿತಿಗೆ ಆಗಮಿಸುವ ಪಿಡಿಒ ಕೇವಲ ಒಂದೆರೆಡು ತಾಸು ಕಾರ್ಯಾಲಯದಲ್ಲಿ ಹಾಜರಿರುತ್ತಾರೆ. ನಂತರ ಉಳಿದ ಸಮಯ ಖಾಸಗಿ ವ್ಯಕ್ತಿಗಳ ಜೊತೆಗೆ ಗುಪ್ತವಾದ ಜಾಗದಲ್ಲಿ ಕುಳಿತು ಕಾಲಹರಣ ಮಾಡಿಕೊಂಡು ಮರಳಿ ಮನೆ ಸೇರುತ್ತಾರೆ. ಇದರಿಂದ ಪಟ್ಟಣ ಸೇರಿದಂತೆ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿನ ಸಮಸ್ಯೆಗಳ ಬಗ್ಗೆ ಕೇಳಿದರೆ ನನಗೆ ಗೊತ್ತಿಲ್ಲ ಎಂಬ ಹಾರಿಕೆ ಉತ್ತರ ನೀಡುತ್ತಾರೆ ಎನ್ನುವ ಆರೋಪ ಕೇಳಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT