ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಡಗೇರಾ | ಎಸ್‌ಎಸ್‌ಎಲ್‌ಸಿ ಪರೀಕ್ಷೆ-2: ಪರಿಹಾರ ಬೋಧನೆಗೂ ಸಿಗದ ಸ್ಪಂದನೆ

ವಾಟ್ಕರ್ ನಾಮದೇವ
Published 16 ಮೇ 2024, 6:05 IST
Last Updated 16 ಮೇ 2024, 6:05 IST
ಅಕ್ಷರ ಗಾತ್ರ

ವಡಗೇರಾ: ಸಾಕಷ್ಟು ಪ್ರಚಾರವಿಲ್ಲದೆ ಹಾಗೂ ಅನುತ್ತೀರ್ಣವಾದ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ಕ್ಕಾಗಿ ಪರಿಹಾರ ಬೋಧನೆಯ ತರಗತಿಗಳನ್ನು ಶಿಕ್ಷಣ ಇಲಾಖೆಯು ಆರಂಭಿಸಿರುವುದರಿಂದ ಬಹಳಷ್ಟು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿಲ್ಲ. ಇದರಿಂದಾಗಿ ಪರಿಹಾರ ಬೋಧನೆಗೂ ಸ್ಪಂದನೆ ಸಿಕ್ಕಿಲ್ಲ.

ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಇಲಾಖೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆ -2ಕ್ಕಾಗಿ ಬೆಳಿಗ್ಗೆ 8ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಪರಿಹಾರ ಬೋಧನೆಯ ತರಗತಿಗಳನ್ನು ನಡೆಸಲು ಆದೇಶಿಸಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಜೂನ್ 7ರಂದು ಆರಂಭವಾಗಲಿದ್ದು ಅಲ್ಲಿಯವರಗೆ ಪರಿಹಾರ ಬೋಧನೆಯ ತರಗತಿಗಳು ಭಾನುವಾರ ಸಹ ನಡೆಸಬೇಕು ಎಂದು ಶಿಕ್ಷಣ ಇಲಾಖೆ ಆದೇಶ ಮಾಡಿದೆ. ಆದರೆ, ಈ ಆದೇಶ ಬಹಳಷ್ಟು ಶಿಕ್ಷಕರಿಗೆ ಬಿಸಿ ತುಪ್ಪವಾಗಿದೆ.

ಈ ವರ್ಷ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರೌಢಶಾಲೆಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಹಳಷ್ಟು ಕಡಿಮೆ ಬಂದಿದೆ. ಶಿಕ್ಷಕರ ಕೊರತೆ ಹಾಗೂ ವಿದ್ಯಾರ್ಥಿಗಳ ಗೈರು ಇದಕ್ಕೆ ಮುಖ್ಯ ಕಾರಣ.

ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರೌಢಶಾಲೆಗಳು ಕ್ರಮವಾಗಿ ಹಾಲಗೇರಾದಲ್ಲಿ 43 ವಿದ್ಯಾರ್ಥಿಗಳು ಫೇಲ್ ಆಗಿದ್ದು, ಈ ಪೈಕಿ 10 ವಿದ್ಯಾರ್ಥಿಗಳು ಮಾತ್ರ ಪರಿಹಾರ ಬೋಧನೆ ತರಗತಿಗೆ ಹಾಜರಾಗಿದ್ದಾರೆ. ಬೆಂಡೆಬೆಂಬಳಿ 60 ಫೇಲಾಗಿದ್ದು, 12 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಅದರಂತೆ ಕುರಕುಂದಾ ಫೇಲಾದ 40ರಲ್ಲಿ 18 ಹಾಜರು, ಗುಂಡಗುರ್ತಿ 24ರಲ್ಲಿ 12 ಹಾಜರು, ವಡಗೇರಾ 36ರಲ್ಲಿ 6 ಹಾಜರು, ಬಿಳ್ಹಾರ 53ರಲ್ಲಿ 11 ಹಾಜರು, ತಡಿಬಿಡಿ 38ರಲ್ಲಿ 4 ಹಾಜರು, ಶಿವಪುರ 18ರಲ್ಲಿ 5 ಹಾಜರು, ಕೊಂಕಲ್ 70ರಲ್ಲಿ 24 ಹಾಜರು, ಹಯ್ಯಾಳ(ಬಿ) 31ರಲ್ಲಿ 7 ಹಾಜರು, ನಾಯ್ಕಲ್ 38ರಲ್ಲಿ 4 ಹಾಜರು, ಟಿ.ವಡಗೇರಾ 16ರಲ್ಲಿ 6 ಹಾಜರಾಗಿದ್ದಾರೆ. ತುಮಕೂರ ಫೇಲಾದ 22 ವಿದ್ಯಾರ್ಥಿಗಳಲ್ಲಿ ಒಬ್ಬರೂ ಹಾಜರಾಗಿಲ್ಲ. ಐಕೂರ ಶಾಲೆಯ ಕಡಿಮೆ ಅಂದರೆ 9 ವಿದ್ಯಾರ್ಥಿಗಳು ಇದ್ದ ಕಾರಣ ಹಯ್ಯಾಳ(ಬಿ) ಪ್ರೌಢಶಾಲೆಗೆ ಅವರನ್ನು ಟ್ಯಾಗ್ ಮಾಡಲಾಗಿದೆ.

ಶಿಕ್ಷಣ ಇಲಾಖೆಯು ಪರಿಹಾರ ಬೋಧನೆ ಮಾಡಲು ವಿಷಯವಾರು ಶಿಕ್ಷಕರನ್ನು ಎರವಲು ಸೇವೆಗೆ ನೇಮಕ ಮಾಡದೆ ಆಯಾ ಶಾಲೆಗಳಲ್ಲಿ ಈ ಹಿಂದೆ ಅತಿಥಿ ಶಿಕ್ಷಕರೆಂದು ಸೇವೆ ಸಲ್ಲಿಸಿರುವವರನ್ನು ಬಳಸಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಆದೇಶ ಮಾಡಿದ್ದಾರೆ. ಆದರೆ, ಕೆಲ ಅತಿಥಿ ಶಿಕ್ಷಕರು ಗ್ರಾಮದಲ್ಲಿ ಇದ್ದರೆ ಇನ್ನೂ ಕೆಲವರು ಬೇರೆ ಊರಿಗೆ ಹೋಗಿದ್ದಾರೆ. ಶಾಲಾ ಮುಖ್ಯಗುರುಗಳು ಅತಿಥಿ ಶಿಕ್ಷಕರ ಮೊಬೈಲ್‌ಗಳಿಗೆ ಕರೆ ಮಾಡಿ ಶಾಲೆಗೆ ಬನ್ನಿ ಎಂದು ವಿನಂತಿಸಿಕೊಳ್ಳುತಿದ್ದಾರೆ. ಅತಿಥಿ ಶಿಕ್ಷಕರೆಂದು ಕಾರ್ಯ ನಿರ್ವಹಿಸುವ ವೇಳೆ ಅತಿಥಿ ಶಿಕ್ಷಕರಿಗೆ ಯಾವುದೇ ರೀತಿಯ ಗೌರವ ಸಂಭಾವನೆಯನ್ನು ಕೊಡುವುದಿಲ್ಲ.

ಮನೆ ಮನೆಗೆ ಶಿಕ್ಷಕರು: ಬುಧವಾರ ಆರಂಭವಾದ ಪರಿಹಾರ ಬೋಧನೆ ತರಗತಿಗಳಿಗೆ ಸಾಕಷ್ಟು ವಿದ್ಯಾರ್ಥಿಗಳು ಗೌರಾದ ಕಾರಣ ಶಾಲಾ ಶಿಕ್ಷಕರು ಹಾಗೂ ಮುಖ್ಯಗುರುಗಳು ವಿದ್ಯಾರ್ಥಿಗಳ ಮನೆಗಳಿಗೆ ಹೋದಾಗ ಕೆಲ ಮನೆಗೆ ಬೀಗ ಜಡಿದಿರುವುದು ಕಂಡುಬಂದಿದೆ. ಅವರ ತಂದೆ ಅಥವಾ ಪಾಲಕರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ನನ್ನ ಮಗ ದುಡಿಯುಲು ಬೆಂಗಳೂರಿಗೆ ಹೋಗಿದ್ದಾನೆ ಎಂಬ ಉತ್ತರ ಬರುತ್ತಿದೆ ಎಂದು ಶಿಕ್ಷಕರು ಹೇಳುತ್ತಾರೆ.

ಶಿಕ್ಷರ ಸಭೆಯಲ್ಲಿ ವಿದ್ಯಾರ್ಥಿಗಳನ್ನು ಗೆಳೆಯರಂತೆ ಕಾಣಬೇಕು. ಹಾಗೆಯೇ ವಿದ್ಯಾರ್ಥಿಗಳ ಎರಡು ಗುಂಪುಗಳನ್ನು ಮಾಡಿ ಬೋಧನೆಯನ್ನು ಮಾಡಬೇಕು ಎಂದು ಸೂಚಿಸಲಾಗಿದೆ. ಮೆಲ್ವೀಚಾರಣೆಗೆ ಬಿಆರ್‌ಸಿಗಳನ್ನು ನೇಮಕ ಮಾಡಲಾಗಿದೆ
ಜಹೀರಾಬೇಗಂ ಬಿಇಒ ಶಹಾಪುರ
ವಿದ್ಯಾರ್ಥಿಗಳಿಗೆ ಯಾವುದೇ ಪೂರ್ವ ಮಾಹಿತಿ ಇಲ್ಲದೆ ಇರುವುದರಿಂದ ಅವರೆಲ್ಲ ದೂರದ ಬೆಂಗಳೂರು ಮುಂಬೈಗಳಿಗೆ ದುಡಿಯಲು ಹೋಗಿದ್ದಾರೆ. ಮೊದಲೇ ಹೇಳಿದ್ದರೆ ಹಳ್ಳಿಗಳಲ್ಲೇ ಇದ್ದು ಶಾಲೆಗೆ ಹಾಜರಾಗುತ್ತಿದ್ದರು.
ಶಿವುಕುಮಾರ ಕೊಂಕಲ್ ಪಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT