ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಡಗೇರಾ: ಬಸ್‌ ಸೌಲಭ್ಯವನ್ನೇ ಕಾಣದ ಸುಗೂರ

ಮೂಲ ಸೌಕರ್ಯ ಸಮಸ್ಯೆ ಎದುರಿಸುತ್ತಿರುವ ಕುಗ್ರಾಮ
ವಾಟ್ಕರ್ ನಾಮದೇವ
Published 6 ಜೂನ್ 2024, 5:32 IST
Last Updated 6 ಜೂನ್ 2024, 5:32 IST
ಅಕ್ಷರ ಗಾತ್ರ

ವಡಗೇರಾ: ದೇಶಕ್ಕೆ ಸ್ವಾತಂತ್ರ್ಯ ಬಂದು ಏಳೂ ದಶಕಗಳೇ ಕಳೆಯುತ್ತಾ ಬಂದರೂ ತಾಲ್ಲೂಕಿನ ಗೋನಾಲ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಸುಗೂರ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆಯೇ ಇಲ್ಲ. ಅಲ್ಲದೇ ಈವರೆಗೂ ಈ ಗ್ರಾಮಕ್ಕೆ ಕೆಂಪು ಬಸ್ಸಿನ ದರ್ಶನವೇ ಆಗಿಲ್ಲ. 

ಗೋನಾಲ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಈ ಗ್ರಾಮದಲ್ಲಿ ಸುಮಾರು 700 ಜನಸಂಖ್ಯೆಯಿದೆ.  ಈ ಗ್ರಾಮದಲ್ಲಿ ಒಬ್ಬರು ಗ್ರಾಮ ಪಂಚಾಯಿತಿಯ ಸದಸ್ಯರೂ ಇದ್ದಾರೆ.  ಸಾರಿಗೆ ಸೌಕರ್ಯ ಇಲ್ಲದ ಕಾರಣ ಗ್ರಾಮಸ್ಥರು ತಾಲ್ಲೂಕು ಅಥವಾ ಜಿಲ್ಲಾ ಕೇಂದ್ರಕ್ಕೆ ಬರಬೇಕಾದರೆ ಸುಮಾರು 2 ರಿಂದ 3 ಕಿ.ಮೀ. ದೂರದ ಶಿವಪುರ, ಅಗ್ನಿಹಾಳ ಇಲ್ಲವೇ ಕೊಂಗಂಡಿ ಗ್ರಾಮಕ್ಕೆ ಕಾಲ್ನಡಿಗೆಯಲ್ಲಿ  ಹೋಗಬೇಕಾದ ಪರಿಸ್ಥಿತಿಯಿದೆ.

ರೋಗಿಗಳು ಇಲ್ಲವೇ ಗರ್ಭಿಣಿಯರನ್ನು ಆಸ್ಪತ್ರೆಗೆ ಹೋಗಬೇಕಾದರೆ ಗ್ರಾಮಸ್ಥರದು ನರಕಯಾತನೆ. ತುರ್ತು ಸಂದರ್ಭದಲ್ಲಿ ಗ್ರಾಮದ ಜನರು ಟಂಟಂ, ಆಟೊಗಳ ಮೇಲೆ ಅವಲಂಬಿತರಾಗಿದ್ದಾರೆ

ಬಸ್ ವ್ಯವಸ್ಥೆ ಇಲ್ಲದ ಕಾರಣ ಸುಗೂರ ಗ್ರಾಮದ ವಿದ್ಯಾರ್ಥಿಗಳು 6ನೇ ತರಗತಿ ಕಲಿಕೆಗೆ 3 ಕಿ.ಮೀ ಅಂತರದಲ್ಲಿ ಇರುವ ಶಿವಪುರ ಸರ್ಕಾರಿ ಶಾಲೆಗೆ ಕಾಲ್ನಡಿಗೆಯಲ್ಲೇ ತೆರಳುತ್ತಾರೆ ಎಂದು ಪಾಲಕರು ಹೇಳುತ್ತಾರೆ.

ಶಿಥಿಲಗೊಂಡ ಶಾಲಾ ಕಟ್ಟಡ:  ಗ್ರಾಮದಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ಶಾಲೆ ಇದೆ. ಒಬ್ಬ ಕಾಯಂ ಶಿಕ್ಷಕರು, ಇನ್ನೊಬ್ಬರು ಅತಿಥಿ ಶಿಕ್ಷಕರು ಇದ್ದಾರೆ. ಆದರೆ ಶಾಲೆಯು ಸಂಪೂರ್ಣವಾಗಿ ಶಿಥಿಲಗೊಂಡಿದೆ. ಶಾಲೆಯ ಗೋಡೆಗಳು ಹಾಗೂ ಮೇಲ್ಚಾವಣಿ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಕಬ್ಬಿಣದ ಸಲಾಕೆಗಳು ಹೊರ ಬಂದಿವೆ. ಮೇಲ್ಛಾವಣಿ ಯಾವ ಸಮಯದಲ್ಲಿ ಬೇಕಾದರೂ ಬೀಳುವ ಸ್ಥಿತಿಯಲ್ಲಿದೆ. ಅದಕ್ಕಾಗಿ ಶಿಕ್ಷಕರು ಮಳೆ ಬಂದರೆ ಶಾಲಾ ಆವರಣದಲ್ಲಿ ಪಾಠಗಳನ್ನು ಮಾಡುತ್ತಾರೆ.

ಬೋರ್‌ವೆಲ್ ಇಲ್ಲ: ಈ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಒಂದು ವೇಳೆ ವಿದ್ಯುತ್ ಕೈಕೊಟ್ಟರೆ ಕುಡಿಯುವ ನೀರಿನ ಸಮಸ್ಯೆಯಾಗುತ್ತದೆ. ಅದಕ್ಕಾಗಿ ಗ್ರಾಮದಲ್ಲಿ ಬೋರ್‌ವೆಲ್‌ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತದೆ ಎಂಬುದು ಗ್ರಾಮಸ್ಥರ ಒತ್ತಾಸೆಯಾಗಿದೆ.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ವಿವಿಧ ಬೇಡಿಕೆ ಹಾಗೂ ಮೂಲ ಸೌಕರ್ಯಕ್ಕಾಗಿ ಆಗ್ರಹಿಸಿ ಸುಗೂರ ಹಾಗೂ ಕೊಂಗಂಡಿ ಗ್ರಾಮಸ್ಥರು ಚುನಾವಣೆಯ ಬಹಿಷ್ಕಾರದ ಎಚ್ಚರಿಕೆ ನೀಡಿದ್ದರು. ಈ ವೇಳೆ ಶಾಸಕರು ಹಾಗೂ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಮತದಾನ ಮಾಡಲು ಒಪ್ಪಿದ್ದರು.ಆದರೆ ಇಲ್ಲಿಯವರೆಗೂ ಯಾವುದೇ ಭರವಸೆಯೂ ಈಡೇರಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಸಕರು ಹಾಗೂ ಅಧಿಕಾರಿಗಳು ಸುಗೂರ ಗ್ರಾಮಕ್ಕೆ ಸಾರಿಗೆ ಹಾಗೂ ಮೂಲ ಸೌಕರ್ಯ  ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಶಾಲಾ ಕಟ್ಟಡದ ಮೇಲ್ಚಾವಣಿ ಶಿಥಿಲಗೊಂಡಿರುವುದು
ಶಾಲಾ ಕಟ್ಟಡದ ಮೇಲ್ಚಾವಣಿ ಶಿಥಿಲಗೊಂಡಿರುವುದು

ನಮ್ಮೂರಾಗ ನಾ ಹುಟ್ಟಿದಾಗ್ ನಿಂದ ಕೆಂಪ್ ಬಸ್ ಕಂಡಿಲ್ಲ. ಅಧಿಕಾರಿಗಳು ನಮ್ಮೂರಿಗೆ ಬಸ್ ಬಿಟ್ಟರೆ ಎಲ್ಲರಿಗ್ ಬಹಳ ಚಲೋ ಆಗ್ತಾದ.

-ಚಂದಪ್ಪ ನಾಯಕೋಡಿ ಸುಗೂರ ಗ್ರಾಮಸ್ಥ

ಶಾಲೆ ಬೀಳುವ ಹಂತದಲ್ಲಿದ್ದರೂ ಯಾರೂ ಗಮನಹರಿಸುತ್ತಿಲ್ಲ. ಶಾಸಕರು ಊರಿಗೆ ಬಂದಾಗ ಶಾಲೆ ದುರಸ್ತಿ ಮಾಡುವ ಭರವಸೆ ನೀಡಿ ಹೋಗಿದ್ದಾರೆ.

-ಬಸವರಾಜ ದೊಡ್ಡೆನವರ ಸುಗೂರ ಗ್ರಾಮಸ್ಥ

ಈಗಾಗಲೇ ಜಿಲ್ಲಾ ಪಂಚಾಯಿತಿಯಿಂದ ಬೋರ್‌ವೆಲ್‌ಗಾಗಿ ಸ್ಥಳವನ್ನು ಗುರುತಿಸಲಾಗಿದೆ. ಕೆಲ ದಿನಗಳಲ್ಲಿ ಸೂಗುರ ಗ್ರಾಮಕ್ಕೆ ಬೋರ್‌ವೆಲ್ ವ್ಯವಸ್ಥೆ ಮಾಡಲಾಗುವುದು.

-ಮಲ್ಲಿಕಾರ್ಜುನ ಸಂಗ್ವಾರ್ ತಾ.ಪಂ. ಇಒ ವಡಗೇರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT