ಜೀವ ಭಯದಲ್ಲಿ ಹಳಿದಾಟುವ ಕಸರತ್ತು!

7
ವಿಶ್ವಾಸಪುರ ತಾಂಡಾ ಇಬ್ಭಾಗಿಸಿರುವ ರೈಲು ಮಾರ್ಗಗಳು: ನಿತ್ಯ 13 ಎಕ್ಸ್‌ಪ್ರೆಸ್‌ ರೈಲು ಸಂಚಾರ

ಜೀವ ಭಯದಲ್ಲಿ ಹಳಿದಾಟುವ ಕಸರತ್ತು!

Published:
Updated:
ಯಾದಗಿರಿ ಸಮೀಪದ ವಿಶ್ವಾಸಪುರ ತಾಂಡಾವನ್ನು ಇಬ್ಭಾಗಿಸಿರುವ ರೈಲು ಮಾರ್ಗಗಳು

ಯಾದಗಿರಿ: ಬ್ರಿಟಿಷರ ಕಾಲದಲ್ಲಿ ಒಟ್ಟು ನಾಲ್ಕು ರೈಲು ಮಾರ್ಗಗಳು ವಿಶ್ವಾಸಪುರ ತಾಂಡಾವನ್ನು ಇಬ್ಭಾಗಿಸಿವೆ. ಆ ಸಂದರ್ಭದಲ್ಲಿ ಜನರಿಗೆ ರೈಲು ಬಂತಲ್ಲ ಎಂದು ಖುಷಿಯಾಗಿತ್ತು. ಆದರೆ, ಆ ಖುಷಿ ಬಹಳ ವರ್ಷಗಳ ಕಾಲ ಉಳಿಯಲಿಲ್ಲ.

ಆಗಾಗ ರೈಲು ಹಳಿಗಳನ್ನು ದಾಟುವ ಸಂದರ್ಭದಲ್ಲಿ ಜನರು ರೈಲಿಗೆ ಸಿಲುಕಿದ್ದಾರೆ. ಜಾನುವಾರುಗಳ ಸಾವಿಗೆ ಲೆಕ್ಕ ಇಲ್ಲ ಎನ್ನುತ್ತಾರೆ ಊರವರು. ಈಗಲೂ ಅದೇ ಪರಿಸ್ಥಿತಿ ಇದ್ದು, ಇಡೀ ಊರಿನ ಜನರು ರೈಲ್ವೆ ಇಲಾಖೆಗೆ ಹಿಡಿಶಾಪ ಹಾಕುತ್ತಾರೆ. ಈಗದು ಅವರ ನಿತ್ಯದ ಗೋಳಾಗಿದೆ.

ಯಾದಗಿರಿ ತಾಲ್ಲೂಕಿನ ವಿಶ್ವಾಪುರ ತಾಂಡಾ ಮೂರು ಸಾವಿರ ಜನಸಂಖ್ಯೆ ಇರುವ ಪುಟ್ಟ ಗ್ರಾಮ. ರೈಲು ಮಾರ್ಗದ ಎಡಬಲಕ್ಕೆ ಮನೆಗಳಿವೆ. ಹಾಗಾಗಿ, ಜನರು ಒಂದಲ್ಲ ಒಂದು ಕಾರಣಕ್ಕೆ ರೈಲು ಹಳಿಗಳನ್ನು ದಾಟುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಆಗ ಜನರು ಜೀವ ಕೈಯಲ್ಲಿ ಹಿಡಿದುಕೊಂಡೇ ಹಳಿ ದಾಟುತ್ತಾರೆ.

ರೈಲು ಮಾರ್ಗಗಳ ಇನ್ನೊಂದು ಕಡೆ ಪ್ರಾಥಮಿಕ ಶಾಲೆಯೂ ಇದೆ. ನಿತ್ಯ ಶಾಲೆಗೆ ಮಕ್ಕಳು ರೈಲು ಮಾರ್ಗಗಳನ್ನು ದಾಟಿಯೇ ಹೋಗಬೇಕಾಗುತ್ತದೆ. ಇದರಿಂದ ಪಾಲಕರು ನಿತ್ಯ ಸಂಕಟಕ್ಕೆ ಒಳಗಾಗುತ್ತಾರೆ. ಪ್ರತಿದಿನ ರೈಲುಮಾರ್ಗಗಳನ್ನು ದಾಟುವ ಸಂದರ್ಭದಲ್ಲಿ ಮಕ್ಕಳು ಆತಂಕ ಎದುರಿಸುತ್ತಾರೆ. ಮೇಲ್ಸೇತುವೆ ನಿರ್ಮಿಸಿಕೊಡುವ ಮೂಲಕ ಈ ಆತಂಕ, ಸಂಕಟಗಳನ್ನು ದೂರ ಮಾಡುವಂತೆ ಇಲ್ಲಿನ ಜನರು ರೈಲ್ವೆ ಇಲಾಖೆಗೆ ಪರಿಪರಿಯಾಗಿ ಮನವಿ ಸಲ್ಲಿಸಿದ್ದಾರೆ.

ಹಲವು ಹೋರಾಟಗಳ ನಂತರ ರೈಲ್ವೆ ಇಲಾಖೆ ಗ್ರಾಮದ ಹೊರವಲಯದಲ್ಲಿ ಕೆಳಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿದೆ. ಇದರಿಂದ ಗ್ರಾಮದ ಜನರಿಗೆ ಪ್ರಯೋಜನವಿಲ್ಲ. 20 ಮೀಟರ್‌ ದೂರ ಇರುವ ಸಂಬಂಧಿಕರ ಮನೆಗೆ ಹೋಗಲು 300 ಮೀಟರ್ ದೂರ ಕ್ರಮಿಸಬೇಕಾ? ಎಂದು ಗ್ರಾಮದ ಮನೋಹರ್, ಲಕ್ಷ್ಮಣ ರಾಥೋಡ, ಗೋಪಾಲ ಪವಾರ, ತಾರಿಬಾಯಿ ಪ್ರಶ್ನಿಸುತ್ತಾರೆ.

‘ಆಂಧ್ರಪ್ರದೇಶದ ಗುಂತಕಲ್‌ ಜಂಕ್ಷನ್‌ನಿಂದ ಉತ್ತರಕ್ಕೆ ನಿತ್ಯ 13 ಎಕ್ಸ್‌ಪ್ರೆಸ್‌, 8ಕ್ಕೂ ಹೆಚ್ಚು ಗೂಡ್ಸ್‌, 4 ಕಲ್ಲಿದ್ದಲು ರೈಲುಗಳು ವಿಶ್ವಾಸಪುರ ತಾಂಡಾ  ಮೂಲಕ  ಸಂಚರಿಸುತ್ತವೆ. ರಾತ್ರಿ ವೇಳೆ ಹೆಚ್ಚು ಅವಘಡಗಳು ಸಂಭವಿಸಿವೆ. ಮಕ್ಕಳು ಹಾಗೂ ವೃದ್ಧರು ರೈಲಿಗೆ ಹೆಚ್ಚು ಸಿಲುಕಿದ್ದಾರೆ. ಹಸು, ಎಮ್ಮೆ, ಎತ್ತುಗಳಿಗೆ ಲೆಕ್ಕವಿಲ್ಲ’ ಎನ್ನುತ್ತಾರೆ ಮನೋಹರ್‌ ರಾಥೋಡ.

ಜಾನುವಾರುಗಳನ್ನು ಕಳೆದುಕೊಂಡ ಅನೇಕ ರೈತ ಕುಟುಂಬಗಳು ನಷ್ಟ ಅನುಭವಿಸಿವೆ. ಹಸು, ಎತ್ತು, ಎಮ್ಮೆಗಳನ್ನು ಕಳೆದುಕೊಂಡವರು ಪುನಃ ಜಾನುವಾರುಗಳು ಖರೀದಿಸಲು ಆರ್ಥಿಕ ಚೈತನ್ಯವಿಲ್ಲದೇ ಕೃಷಿ ಮತ್ತು ಪಶುಪಾಲನೆಯನ್ನೇ ಕೈಬಿಟ್ಟಿದ್ದಾರೆ. ರಾಮು ಚವಾಣ ಅವರ ಎರಡು ಜೋಡಿ ಎತ್ತುಗಳು ಈಚೆಗೆ ರೈಲಿಗೆ ಸಿಲುಕಿ ಸಾವನ್ನಪ್ಪಿದವು. ₹1.40 ಲಕ್ಷ ಮೌಲ್ಯದ ಎತ್ತುಗಳನ್ನು ಖರೀದಿಸಲು ಸಾಧ್ಯವಾಗದೇ ಕೃಷಿಬಿಟ್ಟು ಕೂಲಿ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿ ಗ್ರಾಮಸ್ಥರು ರೈಲು ಅಪಘಾತಗಳಿಂದ ಗ್ರಾಮಸ್ಥರಿಗೆ ಆಗುತ್ತಿರುವ ಕಷ್ಟನಷ್ಟಗಳನ್ನು ವಿವರಿಸುತ್ತಾರೆ. ರೈಲುಮಾರ್ಗಗಳ ಎರಡೂ ಬದಿಗೆ ಗ್ರಿಲ್‌ ಅಳವಡಿಕೆ ಹಾಗೂ ಗ್ರಾಮದಲ್ಲಿ ಮೇಲ್ಸೇತುವೆಯಿಂದ ಮಾತ್ರ ಈ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂದೂ ಹೇಳುತ್ತಾರೆ.

ಅವೈಜ್ಞಾನಿಕ ಸಿಗ್ನಲ್ ಕಂಬ ಅಳವಡಿಕೆ

ವಿಶ್ವಾಸಪುರ ತಾಂಡಾದಲ್ಲಿ ಹಾದು ಹೋಗಿರುವ ರೈಲು ಮಾರ್ಗಗಳ ಮಧ್ಯೆ ರೈಲ್ವೆ ಇಲಾಖೆ ಅವೈಜ್ಞಾನಿಕ ರೀತಿಯಲ್ಲಿ ಸಿಗ್ನಲ್‌ ಕಂಬ ಅಳವಡಿಸಿದೆ. ರಾತ್ರಿ ಸಂದರ್ಭದಲ್ಲಿ ಪ್ರಯಾಣಿಕರು ಹೊರ ನೋಡಲು ಹವಣಿಸಿದರೆ ಕಂಬ ತಗುಲಿ ಸಾವು ಸಂಭವಿಸುತ್ತಿವೆ. ಈಗಾಗಲೇ ಉತ್ತರ ಭಾರತದ ನಾಲ್ವರು ಪ್ರಯಾಣಿಕರು ಈ ಅವೈಜ್ಞಾನಿಕ ಸಿಗ್ನಲ್‌ ಕಂಬಕ್ಕೆ ಬಲಿಯಾಗಿದ್ದಾರೆ ಎಂದು ತಾಂಡಾದ ಯುವಕ ಗೋಪಾಲ ರಾಥೋಡ ಹೇಳುತ್ತಾರೆ.

ರೈಲಿಗೆ ಸಿಲುಕಿ ಗ್ರಾಮದಲ್ಲಿ ಅನೇಕರು ಅಂಗವಿಕಲರಾಗಿದ್ದಾರೆ. ಅವರಿಗೆ ರೈಲ್ವೆ ಇಲಾಖೆಯಿಂದ ಪರಿಹಾರ ಸಿಕ್ಕಿಲ್ಲ. ನಮ್ಮ ಹೋರಾಟಕ್ಕೂ ಫಲ ಸಿಕ್ಕಿಲ್ಲ
ಗೋಪಾಲ ಪವಾರ, ವಿಶ್ವಾಸಪುರ ತಾಂಡಾ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !