ಮಂಗಳವಾರ, ನವೆಂಬರ್ 12, 2019
28 °C
ಶಾಸಕ ಡಿ.ಕೆ.ಶಿವಕುಮಾರ್‌ ಬಂಧನಕ್ಕೆ ಖಂಡನೆ * 10 ಸಂಘಟನೆಗಳಿಂದ ಪ್ರತಿಭಟನೆ ರ‍್ಯಾಲಿ * ಕೆಲ ರಸ್ತೆಗಳಲ್ಲಿ ಸಂಚಾರ ವ್ಯತ್ಯಯ ಸಂಭವ

ಡಿಕೆಶಿ ಪರ ಒಕ್ಕಲಿಗರ ಶಕ್ತಿ ಪ್ರದರ್ಶನ ಇಂದು

Published:
Updated:

ಬೆಂಗಳೂರು: ‘ಶಾಸಕ ಡಿ.ಕೆ.ಶಿವಕುಮಾರ್‌ ಬಂಧನ ಖಂಡಿಸಿ ವಿಶ್ವ ಒಕ್ಕಲಿಗರ ಒಕ್ಕೂಟದಡಿ ವಿವಿಧ ಸಂಘಟನೆಗಳು ಬುಧವಾರ ಏರ್ಪಡಿಸಿರುವ ಪ್ರತಿಭಟನಾ ಮೆರವಣಿಗೆ ವೇಳೆ ಅಹಿತಕರ ಘಟನೆ ಸಂಭವಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ. ಕಿಡಿಗೇಡಿ ಕೃತ್ಯ ನಡೆದರೆ ಆಯೋಜಕರಾದ 10 ಸಂಘಟನೆಗಳ ಪ್ರಮುಖರೇ ಹೊಣೆ’ ಎಂದು ಪೊಲೀಸ್‌ ಕಮಿಷನರ್‌ ಭಾಸ್ಕರ್‌ ರಾವ್‌ ಮಂಗಳವಾರ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಅವರು, ‘ನಿಗದಿಪಡಿಸಿದ ಮಾರ್ಗದಲ್ಲೇ ಮೆರವಣಿಗೆ ನಡೆಯಬೇಕು ಎಂಬುದು ಸೇರಿದಂತೆ 15 ಷರತ್ತುಗಳನ್ನು ವಿಧಿಸಿ ಅನುಮತಿ ನೀಡಲಾಗಿದೆ. ಮುನ್ನೆಚ್ಚರಿಕೆಯಾಗಿ ಸಂಘಟಕರಿಂದ ಹಣ ಪಡೆದುಕೊಂಡು ಛಾಪಾ ಕಾಗದದಲ್ಲಿ ಸಹಿ ಹಾಕಿಸಿಕೊಳ್ಳಲಾಗಿದೆ’ ಎಂದರು.

‘ನ್ಯಾಷನಲ್‌ ಕಾಲೇಜು ಮೈದಾನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಮೆರವಣಿಗೆ ನಡೆಯಲಿದೆ. ಸುಮಾರು 30 ಸಾವಿರದಿಂದ 35 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಂಘಟಕರೇ ತಿಳಿಸಿದ್ದಾರೆ. ಶಾಂತಿಯುತ ಮೆರವಣಿಗೆ ನಡೆಸುವ ಕುರಿತಂತೆ ಸಂಘಟಕರ ಜೊತೆ ಚರ್ಚೆ ನಡೆಸಲಾಗಿದೆ’ ಎಂದರು.

‘ಬೆಳಿಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಜ್ಜನ್‌ ರಾವ್‌ ವೃತ್ತ, ಮಿನರ್ವ ಸರ್ಕಲ್‌, ಹಡ್ಸನ್‌ ವೃತ್ತದಲ್ಲಿ ಸಂಚಾರ ವ್ಯತ್ಯಯ ಉಂಟಾಗಬಹುದು. ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ ಎಂದರು.

‘12 ಜಿಲ್ಲೆಗಳಿಂದ ಜನರು ಬರುವ ನಿರೀಕ್ಷೆ ಇದೆ ಎಂದೂ ತಿಳಿಸಿದ್ದಾರೆ. ಕನಕಪುರ, ರಾಮನಗರ, ಕುಣಿಗಲ್‌, ಮಾಗಡಿ ಮತ್ತು ಬೆಂಗಳೂರು ಉತ್ತರ, ಕೋಲಾರ ಭಾಗದಿಂದ ಹೆಚ್ಚಿನ ಜನರು ಬರುವ ಸಾಧ್ಯತೆಗಳಿದೆ. ಈ ಭಾಗಗಳ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಆಗದಂತೆ ಕ್ರಮ ತೆಗೆದುಕೊಳ್ಳಲು ಆಯಾ ಭಾಗದ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದೂ ವಿವರಿಸಿದರು.

ಇದನ್ನೂ ಓದಿ... ‘ಕನಕಪುರದ ಬಂಡೆ’ ಡಿ.ಕೆ.ಶಿವಕುಮಾರ್‌ಗೆ ಈಗ ಸಂಕಷ್ಟದ ಕಾಲ!

ಅಹಿತಕರ ಘಟನೆ ಸಂಭವಿಸಿದರೆ ಹೊಣೆಗಾರರು
ಕರ್ನಾಟಕ ರಕ್ಷಣಾ ವೇದಿಕೆಯ ಟಿ.ನಾರಾಯಣ ಗೌಡ, ಬಸವರಾಜ ಪದ್ಕೋಟಿ, ಭಾರತೀ ಶಂಕರ್‌, ರಾಧಾವೆಂಕಟೇಶ್‌, ಕುಮಾರ್‌, ಜಗದೀಶ್‌ ಗೌಡ, ಕೃಷ್ಣಮೂರ್ತಿ, ವಿಶ್ವ ಒಕ್ಕಲಿಗರ ಮಹಾ ವೇದಿಕೆಯ ರವಿಶಂಕರ್‌, ನಾಡಪ್ರಭು ಒಕ್ಕಲಿಗ ಕೇಂದ್ರದ ನಾಗರಾಜ, ರಾಜ್ಯ ಒಕ್ಕಲಿಗ ಕೆಂಪೇಗೌಡ ಯುವಚೇತನ ವೇದಿಕೆಯ ಅನಿಲ್‌ ಗೌಡ.

ಬಿಗಿ ಭದ್ರತೆ, ಸಿಸಿಟಿವಿ ಕ್ಯಾಮೆರಾ ಕಣ್ಗಾವಲು
ರಾಜ್ಯ ಪೊಲೀಸ್‌ ಪಡೆಯ 50 ತುಕಡಿ, ಕೇಂದ್ರ ಸಶಸ್ತ್ರ ಮೀಸಲು ಪಡೆಯ 40 ತುಕಡಿ, ನಾಲ್ಕು ಕ್ಷಿಪ್ರ ಕಾರ್ಯಪಡೆ, 11 ಡಿಸಿಪಿಗಳು, 42 ಎಸಿಪಿಗಳು, 106 ಪೊಲೀಸ್‌ ಇನ್‌ಸ್ಪೆಕ್ಟರ್‌ಗಳು, 273 ಪಿಎಸ್‌ಐಗಳು, 374 ಎಎಸ್‌ಐಗಳು, ಎಚ್‌.ಸಿ ಮತ್ತು ಕಾನ್‌ಸ್ಟೆಬಲ್‌ಗಳು ಸೇರಿ‌ 2,280 ಹಾಗೂ ಗೃಹರಕ್ಷಕ ದಳ 550 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.‌ ಮಹಿಳಾ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಇರಲಿದ್ದಾರೆ. ಅಲ್ಲಲ್ಲಿ ಆಂಬುಲೆನ್ಸ್‌ಗಳ ವ್ಯವಸ್ಥೆ ಮಾಡಲಾಗುವುದು. 550ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಇರಲಿದೆ ಎಂದು ಪೊಲೀಸ್‌ ಕಮಿಷನರ್‌ ತಿಳಿಸಿದರು.

ಪ್ರತಿಭಟನಾ ಮೆರವಣಿಗೆಯ ಮಾರ್ಗ
ನ್ಯಾಷನಲ್ ಕಾಲೇಜು ಮೈದಾನ, ಪಿ.ಎಂ.ಕೆ. ರಸ್ತೆ, ವಾಣಿವಿಲಾಸ ರಸ್ತೆ, ನ್ಯಾಷನಲ್ ಕಾಲೇಜು ಜಂಕ್ಷನ್, ಸಜ್ಜನ್ ರಾವ್ ಸರ್ಕಲ್, ಮಿನರ್ವ ಸರ್ಕಲ್, ಜೆ.ಸಿ.ರಸ್ತೆ, ಪುರಭವನ, ಪೊಲೀಸ್ ಠಾಣೆ ಜಂಕ್ಷನ್, ಕೆ.ಜಿ. ರಸ್ತೆ, ಮೈಸೂರು ಬ್ಯಾಂಕ್ ಸರ್ಕಲ್, ಅರಮನೆ ರೋಡ್, ಪ್ಯಾಲೇಸ್ ಜಂಕ್ಷನ್, ವ್ಶೆ.ರಾಮಚಂದ್ರ ರಸ್ತೆ, ಕನಕದಾಸ ವೃತ್ತ‌, ಕಾಳಿದಾಸ ರಸ್ತೆ ಮೂಲಕ ಸ್ವಾತಂತ್ರ್ಯ ಉದ್ಯಾನ.

ಇದನ್ನೂ ಓದಿ... ಹವಾಲಾ ಎಂದರೆ ಏನು? ಹೇಗೆ ನಡೆಯುತ್ತೆ ವ್ಯವಹಾರ?

ರಾಜಭವನ ಚಲೋ ಇಂದು 
ಬೆಂಗಳೂರು: ‘ಕಾಂಗ್ರೆಸ್‌ ಶಾಸಕ ಡಿ.ಕೆ.ಶಿವಕುಮಾರ್‌ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿ ಕಿರುಕುಳ ನೀಡುವಂತೆ ಮಾಡಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ನಡೆಯನ್ನು ವಿರೋಧಿಸಿ ಸೆಪ್ಟೆಂಬರ್‌ 11ರಂದು ಬೆಳಿಗ್ಗೆ 10 ಗಂಟೆಗೆ ‘ರಾಜಭವನ ಚಲೋ’ ನಡೆಸಲಾಗುವುದು’ ಎಂದು ಕೆಪಿಸಿಸಿ ಕಾರ್ಯದರ್ಶಿ ಕೇಶವ ರಾಜಣ್ಣ ತಿಳಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘ಕೇಂದ್ರದ ಕೈಗೊಂಬೆಯಾಗಿ ಜಾರಿ ನಿರ್ದೇಶನಾಲಯ ಕಾರ್ಯನಿರ್ವಹಿಸುತ್ತಿದೆ. ಇಂತಹ ದ್ವೇಷ ರಾಜಕಾರಣ ಮಾಡುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಒಕ್ಕಲಿಗ ಸಂಘ ಸಂಸ್ಥೆಗಳ ಒಕ್ಕೂಟ, ಡಿ.ಕೆ.ಶಿವಕುಮಾರ್‌ ಅಭಿಮಾನಿಗಳ ಸಂಘ, ಎನ್‌ಎಸ್‌ಯುಐ ಹಾಗೂ ಕೆಪಿಸಿಸಿ ಒಟ್ಟಾಗಿ ರ‍್ಯಾಲಿ ನಡೆಸುತ್ತಿವೆ’ ಎಂದು ತಿಳಿಸಿದರು.

‘ಪ್ರತಿಭಟನೆಯಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ, ಮಠಾಧೀಶರು, ಶಾಸಕರು, ಸಮುದಾಯದ ಗಣ್ಯರು ಭಾಗಿಯಾಗಲಿದ್ದಾರೆ. ಮುಂದಿನ ಹಂತಗಳಲ್ಲಿ ನಮ್ಮ ಹೋರಾಟ ತೀವ್ರಗೊಳ್ಳಲಿದೆ’ ಎಂದು ಎಚ್ಚರಿಸಿದರು.

ಷರತ್ತುಬದ್ಧ ಅನುಮತಿ
* ಅನುಮತಿ ನೀಡಿದ ವೇಳೆ ಮತ್ತು ಮಾರ್ಗಕ್ಕೆ ಬದ್ಧರಾಗಿರಬೇಕು
* ಸಾರ್ವಜನಿಕರ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟು ಮಾಡಬಾರದು
* ಪ್ರಚೋದನಾಕಾರಿ ಹೇಳಿಕೆ ನೀಡಬಾರದು
 *ಧ್ವನಿವರ್ಧಕಗಳು ನಿಗದಿಪಡಿಸಿ ಶಬ್ದ ಮಟ್ಟ ಮೀರಬಾರದು
 *ಅಹಿತಕರ ಘಟನೆ ಸಂಭವಿಸಿದರೆ ಅರ್ಜಿದಾರರೇ ಹೊಣೆ
* ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಬಾರದು
* ಅನುಮತಿ ನೀಡಿದ ಸ್ಥಳದಲ್ಲಿ ಕಾರ್ಯಕ್ರಮ ನಡೆಯಬೇಕು
* ರಸ್ತೆಗಿಳಿದು ರಸ್ತೆ ಬಂದ್, ವಾಹನಗಳ ಸಂಚಾರಕ್ಕೆ ಅಡಚಣೆ ಮಾಡಬಾರದು
* ಪಟಾಕಿ ಹಚ್ಚುವುದು, ವಸ್ತುಗಳನ್ನು ಸುಟ್ಟುಹಾಕಬಾರದು
* ಪೊಲೀಸರ ಸೂಚನೆ ಪಾಲಿಸಬೇಕು
* ಸಾರ್ವಜನಿಕರ ಆಸ್ತಿಪಾಸ್ತಿ, ಜೀವಹಾನಿ ಮಾಡಬಾರದು
* ಯಾವುದೇ ಆಯುಧಗಳನ್ನು ತರಬಾರದು
* ಬಲವಂತವಾಗಿ ಅಂಗಡಿ ಮುಂಗಟ್ಟು ಬಂದ್‌ ಮಾಡಬಾರದು.

ವಾಹನ ಸಂಚಾರ: ಪರ್ಯಾಯ ಮಾರ್ಗ‌

* ಮೆಜೆಸ್ಟಿಕ್‌ನಿಂದ ಮಾರ್ಕೆಟ್ ಕಡೆಗೆ ಹೋಗಲು ಎನ್.ಆರ್. ಜಂಕ್ಷನ್, ದೇವಾಂಗ ಜಂಕ್ಷನ್, ಸುಬ್ಬಯ್ಯ ವೃತ್ತ, ಪೂರ್ಣಿಮಾ ಜಂಕ್ಷನ್, ಊರ್ವಶಿ, ಲಾಲ್‍ಭಾಗ್‌ ಮುಖ್ಯದ್ವಾರ, ಲಾಲ್‍ಭಾಗ್ ಪಶ್ಚಿಮದ್ವಾರ, ಜೆ.ಸಿ. ರಸ್ತೆ, ಪುರಭವನದ ಮುಖಾಂತರ ಹೋಗಬೇಕು

* ರಿಚ್‍ಮಂಡ್ ವೃತ್ತದಿಂದ ಬರುವವರು ಹಡ್ಸನ್ ವೃತ್ತ, ದೇವಾಂಗ ಜಂಕ್ಷನ್, ಸುಬ್ಬಯ್ಯ ವೃತ್ತ, ಲಾಲ್‍ಬಾಗ್ ಪಶ್ಚಿಮದ್ವಾರ, ಜೆ.ಸಿ. ರಸ್ತೆ, ಪುರಭವನದ ಮುಖಾಂತರ ಮುಂದೆ ಸಾಗಬಹುದು.

* ರಿಚ್‍ಮಂಡ್ ವೃತ್ತದ ಕಡೆಯಿಂದ ಮೆಜೆಸ್ಟಿಕ್ ಹೋಗಲು ಹಡ್ಸನ್ ವೃತ್ತ, ಪಿ.ಎಸ್. ಜಂಕ್ಷನ್, ಪೊಲೀಸ್ ಕಾರ್ನರ್, ಕಬ್ಬನ್ ಉದ್ಯಾನ ಒಳಭಾಗ, ಫಿಶ್ ಕ್ಯಾಂಟೀನ್, ಕೆ.ಆರ್. ವೃತ್ತ, ಹಳೇ ಅಂಚೆ ಕಚೇರಿ ರಸ್ತೆ ಮೂಲಕ ಹೋಗಬಹುದು.

* ಕ್ವೀನ್ಸ್ ರಸ್ತೆ ಕಡೆಯಿಂದ ಬರುವ ವಾಹನಗಳು ಸಿ.ಟಿ.ಓ. ವೃತ್ತ, ಪೊಲೀಸ್ ತಿಮ್ಮಯ್ಯ ವೃತ್ತ, ಅಂಬೇಡ್ಕರ್ ಬೀದಿ, ಕೆ.ಆರ್. ವೃತ್ತ, ಹಳೇ ಅಂಚೆ ಕಚೇರಿ ರಸ್ತೆ ಮೂಲಕ ಸಾಗಬಹುದು.

* ಮೆಜೆಸ್ಟಿಕ್‌ನಿಂದ ಶಾಂತಿನಗರ, ಸಿಟಿ ಮಾರ್ಕೆಟ್, ಹೊಸೂರು ರಸ್ತೆ ಕಡೆಗೆ ಹೋಗುವ ವಾಹನಗಳು ಸಂಗೊಳ್ಳಿ ರಾಯಣ್ಣ ವೃತ್ತ, ಶೇಷಾದ್ರಿ ರಸ್ತೆ, ಮೇಲು ಸೇತುವೆ ಮತ್ತು ಕೆಳಸೇತುವೆ, ಹಳೇ ಜೆ.ಡಿ.ಎಸ್ ಕಚೇರಿ, ರೇಸ್ ಕೋರ್ಸ್ ರಸ್ತೆ, ಚಾಲುಕ್ಯ ವೃತ್ತ, ಸಿ.ಐ.ಡಿ., ಮಹಾರಾಣಿ ಮೇಲು ಸೇತುವೆ, ಕೆ.ಆರ್.ವೃತ್ತದ ಮೂಲಕ ಮುಂದೆ ಸಾಗಬಹುದು.

* ಮೆಜೆಸ್ಟಿಕ್‌ನಿಂದ ಎಚ್ಎಎಲ್, ಕೆ.ಆರ್.ಪುರಂ ಕಡೆಗೆ ಹೋಗಲು ಸಂಗೊಳ್ಳಿ ರಾಯಣ್ಣ ವೃತ್ತ, ಶೇಷಾದ್ರಿ ರಸ್ತೆ, ಮೇಲು ಸೇತುವೆ ಮತ್ತು ಕೆಳಸೇತುವೆ, ರೇಸ್ ಕೋರ್ಸ್ ರಸ್ತೆ, ಚಾಲುಕ್ಯ ವೃತ್ತ, ರಾಜಭವನ ಜಂಕ್ಷನ್, ಅಲಿ ಆಸ್ಕರ್ ರಸ್ತೆ, ಕಾಫಿ ಬೋರ್ಡ್, ಇನ್‍ಫೆಂಟ್ರಿ ರಸ್ತೆ ಮೂಲಕ ಮುಂದೆ ಸಾಗಬಹುದು.

* ಹಲವು ರಸ್ತೆಗಳಲ್ಲಿ ಸಂಚಾರಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. 

ಪ್ರತಿಕ್ರಿಯಿಸಿ (+)