ನವಜಾತ ಶಿಶು ವೈದ್ಯರ ಸಮ್ಮೇಳನ ಇಂದಿನಿಂದ

7
ವಿಜಯಪುರದಲ್ಲಿ ಕಾರ್ನಿಯೋಕಾನ್‌–2019

ನವಜಾತ ಶಿಶು ವೈದ್ಯರ ಸಮ್ಮೇಳನ ಇಂದಿನಿಂದ

Published:
Updated:

ವಿಜಯಪುರ: ನವಜಾತ ಶಿಶು ವೈದ್ಯರ ರಾಜ್ಯ ಮಟ್ಟದ ಸಮ್ಮೇಳನ ಕಾರ್ನಿಯೋಕಾನ್‌–2019 ನಗರದಲ್ಲಿ ಇದೇ 4ರಿಂದ 6ರವರೆಗೆ ಮೂರು ದಿನ ನಡೆಯಲಿದೆ ಎಂದು ರಾಜ್ಯ ನವಜಾತ ಶಿಶು ವೈದ್ಯರ ಸಂಘಟನೆಯ ಅಧ್ಯಕ್ಷ ಲಕ್ಮಣ ಎಚ್‌.ಬಿದರಿ ತಿಳಿಸಿದರು.

ಈ ಹಿಂದೆ 2004ರಲ್ಲಿ ವಿಜಯಪುರದಲ್ಲಿ ಈ ಸಮ್ಮೇಳನ ನಡೆದಿತ್ತು. ಬರೋಬ್ಬರಿ 15 ವರ್ಷಗಳ ಬಳಿಕ ಮತ್ತೊಮ್ಮೆ ರಾಜ್ಯ ಮಟ್ಟದ ಸಮ್ಮೇಳನ ಇಲ್ಲಿ ನಡೆಯಲಿದ್ದು, 500ಕ್ಕೂ ಹೆಚ್ಚು ತಜ್ಞ ವೈದ್ಯರು ಭಾಗಿಯಾಗಲಿದ್ದಾರೆ ಎಂದು ಗುರುವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಜನ್ಮ ಅಸ್ಫಿಕ್ಜಿಯಾ ತಡೆಗಟ್ಟುವಿಕೆ, ಹೈಪೊಗ್ಲೈಸೆಮಿಯಾ, ಸಕಾಲಿಕ ವಿಟಾಮಿನ್‌ ಕೆ ಇಂಜೆಕ್ಷನ್‌ ಮೂಲಕ ಮೆದುಳಿನ ರಕ್ತಸ್ರಾವ ತಡೆಗಟ್ಟುವಿಕೆ, ಸ್ತನಪಾನ ಉತ್ತೇಜನ, ಮಾನವ ಎದೆಹಾಲು ಘಟಕ ಸ್ಥಾಪನೆ ಸಂಬಂಧಿಸಿದಂತೆ ಸಮ್ಮೇಳನದಲ್ಲಿ ತಜ್ಞ ವೈದ್ಯರ ನಡುವೆ ಚರ್ಚೆ ನಡೆಯಲಿದೆ’ ಎಂದು ತಿಳಿಸಿದರು.

‘ನವಜಾತ ಶಿಶುಗಳ ಆರೈಕೆಯನ್ನು ಜವಾಬ್ದಾರಿಯುತವಾಗಿ ನಡೆಸಬೇಕಿದೆ. ಪ್ರಸೂತಿ ತಜ್ಞರಿಂದಲೇ ಮೊದಲ ಹೆರಿಗೆ ಮಾಡಿಸಬೇಕಿದೆ. ನವಜಾತ ಶಿಶುವಿನ ಮರಣ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದಲೇ ತಜ್ಞ ವೈದ್ಯರ ಸಮ್ಮೇಳನ ಆಯೋಜಿಸಲಾಗುತ್ತಿದೆ’ ಎಂದು ಎಲ್‌.ಎಚ್‌.ಬಿದರಿ ಹೇಳಿದರು.

‘ಪೆರಿನಾಟಲಾಜಿ ಟಾಸ್ಕ್‌ ಫೋರ್ಸ್‌ ರಚಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳದ್ದು. ಈ ಹಿಂದೆ ಸಹ ಆಗಿನ ಆರೋಗ್ಯ ಸಚಿವ, ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದೆವು. ಮನ್ನಣೆ ಸಿಕ್ಕಿರಲಿಲ್ಲ. ಇದೀಗ ಮತ್ತೊಂದು ಪ್ರಸ್ತಾವನೆ ಸಿದ್ಧಗೊಳಿಸಿದ್ದು, ಬಸವನಬಾಗೇವಾಡಿ, ಸಿಂದಗಿ ತಾಲ್ಲೂಕನ್ನು ಪೈಲಟ್‌ ಪ್ರಾಜೆಕ್ಟ್‌ ಆಗಿ ನಾವು ಆಯ್ಕೆ ಮಾಡಿಕೊಂಡಿದ್ದೇವೆ.

ಆರೋಗ್ಯ ಸಚಿವ ಶಿವಾನಂದ ಪಾಟೀಲ ಇದಕ್ಕೆ ಸಮ್ಮತಿಸಿದರೆ, ಅನುಷ್ಠಾನಕ್ಕೆ ಬರಲಿದೆ. ನವಜಾತ ಶಿಶುವಿನ ಮರಣ ತಪ್ಪಿಸುವಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿದೆ. ವರ್ಷದೊಳಗೆ ಫಲಿತಾಂಶ ತಿಳಿಯಲಿದೆ’ ಎಂದು ಬಿದರಿ ನೂತನ ಯೋಜನೆ ಬಗ್ಗೆ ಮಾಹಿತಿ ನೀಡಿದರು.

ಎನ್‌ಎನ್‌ಎಫ್‌ ಕರ್ನಾಟಕ ಶಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಪ್ರವೀಣ ವೆಂಕಟಗಿರಿ, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಸಿದ್ದು ಚರ್ಕಿ, ಬೆಂಗಳೂರಿನ ವೈದೇಹಿ ಮೆಡಿಕಲ್‌ ಕಾಲೇಜಿನ ಪ್ರೊಫೆಸರ್‌, ನವಜಾತ ಶಿಶು ತಜ್ಞ ಡಾ.ದಿನಕರ ಪೃಥ್ವಿರಾಜ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !