ಜಾತಿ ಹೇಳಿಕೊಳ್ಳಲು ಹಿಂಜರಿಕೆ ಬೇಡ: ಸಿದ್ದರಾಮಯ್ಯ

7
ಜಾತಿ ಹೆಸರಿನಲ್ಲಿ ಸಂಘಟನೆ ತಪ್ಪಲ್ಲ

ಜಾತಿ ಹೇಳಿಕೊಳ್ಳಲು ಹಿಂಜರಿಕೆ ಬೇಡ: ಸಿದ್ದರಾಮಯ್ಯ

Published:
Updated:
Prajavani

ಬೆಂಗಳೂರು: ‘ಜಾತಿ ಹೇಳಿಕೊಳ್ಳಲು ಯಾರೂ ಹಿಂಜರಿಯಬಾರದು’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಕುರುಬರ ಸಂಸ್ಕತಿ ದರ್ಶನ ಮಾಲಿಕೆ ಅಂಗವಾಗಿ ಶನಿವಾರ ಇಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ 13 ಗ್ರಂಥಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜಾತಿಯಿಂದಲೇ ಶೋಷಣೆ ಆಗಿರುವಾಗ ಅದನ್ನೇ ಮೂಲವಾಗಿಟ್ಟುಕೊಂಡು ಬದಲಾವಣೆ ಆಗಬೇಕು’ ಎಂದು ಪ್ರತಿಪಾದಿಸಿದರು.

‘ಜಾತಿಯನ್ನು ನೀವೇನೂ ಮಾಡಿದ್ದಲ್ಲ. ಸ್ವಾರ್ಥಿಗಳು ಮಾಡಿದ್ದಾರೆ. ಯಾರು ಜಾತಿ ಲಾಭ ಪಡೆದು, ಸಾಮಾಜಿಕವಾಗಿ ಆರ್ಥಿಕವಾಗಿ ಮೇಲೆ ಬಂದಿದ್ದಾರೊ ಮತ್ತು ಈಗಲೂ ಜಾತಿ ಮಾಡುತ್ತಿದ್ದಾರೋ ಅವರು ಜಾತಿವಾದಿಗಳು. ಆದರೆ, ಯಾರು ಜಾತಿಯಿಂದ ಅನ್ಯಾಯಕ್ಕೆ ಒಳಗಾಗಿ, ಶೋಷಿತರಾಗಿ ಅವಕಾಶ ವಂಚಿತರಾಗಿದ್ದರೋ ಅಂತಹವರು ಜಾತಿ ಹೆಸರಿನಲ್ಲಿ ಸಂಘಟನೆ ಮಾಡಿಕೊಂಡು ಮೇಲೆ ಬರಲು ಪ್ರಯತ್ನಿಸಿದರೆ ಖಂಡಿತಾ ಅದು ಜಾತಿವಾದ ಅಲ್ಲ. ಇದನ್ನು ಸದಾ ಗಮನದಲ್ಲಿ ಇಟ್ಟುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ಕಾಗಿನೆಲೆಯಲ್ಲಿ ಕನಕ ಗುರುಪೀಠ ಮತ್ತು ರಾಜ್ಯದೆಲ್ಲೆಡೆ ಕನಕ ಜಯಂತಿ ಆಚರಣೆಗೆ ಒತ್ತು ನೀಡಿದ ನಂತರ ಕುರುಬರು ಸಾಕಷ್ಟು ಸಂಘಟಿತರಾಗಿದ್ದಾರೆ. ಬಹಳಷ್ಟು ಕಡೆ ಇನ್ನೂ ಅವರೆಲ್ಲಾ ತಮ್ಮ ಜಾತಿಯನ್ನು ಬಹಿರಂಗವಾಗಿ ಹೇಳಿಕೊಳ್ಳಲು ಹಿಂದುಮುಂದು ನೋಡುತ್ತಾರೆ. ಇನ್ನು ಮುಂದಾದರೂ ಮೈಚಳಿ ಬಿಟ್ಟು ಜಾತಿ ಹೇಳಿಕೊಳ್ಳಬೇಕು’ ಎಂದರು.

‘ಜಾತಿ ವ್ಯವಸ್ಥೆ ಪ್ರಶ್ನಿಸಿ ಸಂಘರ್ಷ ನಡೆಯದ ಕಾರಣ ಇನ್ನೂ ಅಸಮಾನತೆ ಇದೆ’ ಎಂದ ಅವರು, ‘ಜನಾಂಗದ ಇತಿಹಾಸ ಅರಿತವನು ಮಾತ್ರ ದೇಶದ ಭವಿಷ್ಯ ರೂಪಿಸಲು ಸಾಧ್ಯ’ ಎಂದರು.

ಕುರುಬ ಸಮುದಾಯದ ಸಾಂಸ್ಕೃತಿಕ ಇತಿಹಾಸವನ್ನು ಹದಿನೈದು ಸಂಪುಟಗಳಲ್ಲಿ ಹೊರತರುವ ಯೋಜನೆಯನ್ನು ‘ಕುರುಬರ ಸಾಂಸ್ಕೃತಿಕ ಪರಿಷತ್ತು’ ಹೊಂದಿದ್ದು, ಇದರ ಅಂಗವಾಗಿ ಮೊದಲ ಹಂತದಲ್ಲಿ ಹದಿಮೂರು ಗ್ರಂಥಗಳು ಲೋಕಾರ್ಪಣೆಗೊಂಡಿವೆ.

ವಿಧಾನ ಪರಿಷತ್‌ ಸದಸ್ಯ ಎಚ್.ಎಂ.ರೇವಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಸತಿ ಸಚಿವ ಎಂ.ಟಿ.ಬಿ.ನಾಗರಾಜ, ಸಾಹಿತಿ ಹಂ.ಪ.ನಾಗರಾಜಯ್ಯ, ಶಾಸಕರಾದ ಭೈರತಿ ಬಸವರಾಜು, ಹಂಪಿ ವಿ.ವಿ.ವಿಶ್ರಾಂತ ಕುಲಪತಿ ಎಚ್‌.ಜೆ.ಲಕ್ಕಪ್ಪಗೌಡ, ಕನ್ನಡ ವಿ.ವಿ.ಕುಲಪತಿ ಮಲ್ಲಿಕಾ ಘಂಟಿ, ಕುರುಬರ ಸಾಂಸ್ಕೃತಿಕ ಪರಿಷತ್ತಿನ ಯೋಜನಾ ನಿರ್ದೇಶಕ ಕಾ.ತ.ಚಿಕ್ಕಣ್ಣ, ಪ್ರಧಾನ ಕಾರ್ಯದರ್ಶಿ ಬಿ.ಕೆ.ರವಿ, ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ.ರಾಮಚಂದ್ರಪ್ಪ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬರಬೇಕಿದ್ದ ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ವಿಶ್ವನಾಥ್‌ ಹಾಗೂ ಮಾಜಿ ಸಚಿವ ಹಾಗೂ ಶಾಸಕ ಆರ್.ಶಂಕರ್‌ ಅವರ ಬಂದಿರಲಿಲ್ಲ.

ಮುಂದಿನ ಪ್ರಧಾನಿ ಸಿದ್ದರಾಮಯ್ಯ!

ಸಿದ್ದರಾಮಯ್ಯ ಅವರು ಭಾಷಣ ಮಾಡಲು ಎದ್ದು ನಿಂತಾಗ, ಕಿಕ್ಕಿರಿದು ತುಂಬಿದ್ದ ರವೀಂದ್ರ ಕಲಾಕ್ಷೇತ್ರದಲ್ಲಿ ಸಮಾಜ ಬಾಂಧವರು ಕಿವಿಗಡಚಿಕ್ಕುವಂತೆ ಕರತಾಡನ, ಆನಂದೋದ್ಗಾರ ಮಾಡಿದರಲ್ಲದೆ, ‘ಮುಂದಿನ ಪ್ರಧಾನಮಂತ್ರಿ ಸಿದ್ದರಾಮಯ್ಯಗೆ ಜೈ’ ಎಂದು ಹಲವು ಬಾರಿಗೆ ಘೋಷಣೆ ಕೂಗಿದರು.

ಕರ್ನಾಟಕದಲ್ಲಷ್ಟೇ ಕುರುಬರು ಜಾಗೃತರಾಗಿದ್ದಾರೆ’

‘ಬದಾಮಿಯ ಶಿವಯೋಗದಲ್ಲಿ ಹೇಗೆ ವೀರಶೈವ ವಟುಗಳಿಗೆ ದೀಕ್ಷೆ ನೀಡಿ ಧರ್ಮಗುರುಗಳನ್ನು ತಯಾರು ಮಾಡಲಾಗುತ್ತದೆಯೋ ಅದೇ ರೀತಿ ಕಾಗಿನೆಲೆಯಲ್ಲೂ ಕುರುಬರ ಧರ್ಮಗುರುಗಳನ್ನು ರೂಪಿಸುವ ಕೆಲಸವಾಗಬೇಕು’ ಎಂದು ಪೌರಾಡಳಿತ ಸಚಿವ ಸಿ.ಎಸ್‌.ಶಿವಳ್ಳಿ ಅಭಿಪ್ರಾಯಪಟ್ಟರು.

‘ದಕ್ಷಿಣ ಭಾರತದ ಯಾವ ರಾಜ್ಯದಲ್ಲೂ ಕುರುಬರು ಜಾಗೃತರಾಗಿಲ್ಲ. ಕೇವಲ ಕರ್ನಾಟಕದಲ್ಲಿ ಮಾತ್ರವೇ ಜಾಗೃತರಾಗಿದ್ದಾರೆ. ಇದಕ್ಕೆ ಕಾರಣ ಹಾಲುಮತ, ಶೈವ ಪರಂಪರೆ ಹೊಂದಿದ ಕುರುಬರನ್ನು ಸಿದ್ದರಾಮಯ್ಯ ನಿದ್ದೆಯಿಂದ ಎಬ್ಬಿಸಿರುವುದು’ ಎಂದ ಅವರು ‘ಸಿದ್ದರಾಮಯ್ಯ ರಾಜ್ಯದಲ್ಲಿ ತಳ ಸಮುದಾಯಗಳ ಏಳಿಗೆಗೆ’ ಕಾರಣವಾಗಿದ್ದಾರೆ’ ಎಂದು ಶ್ಲಾಘಿಸಿದರು.

ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಮಾತನಾಡಿ, ‘ಕುರುಬರು ತಮ್ಮ ಕುರಿ ಕಾಯುವ ಕಸುಬು ಮರೆಯಬಾರದು. ಅದರಲ್ಲಿ ಲಕ್ಷ್ಮಿ ಇದ್ದಾಳೆ. ಕುರಿ ಸಾಕಣೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡಬೇಕು’ ಎಂದರು.

ಸಿದ್ದರಾಮಯ್ಯನವರಿಗೆ ಇನ್ನೂ ಉನ್ನತ ಹುದ್ದೆ ಸಿಗಲಿದೆ’

ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ‘ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಉಪ್ಪಾರ ಸಮಾಜದಿಂದ ಯಾರೊಬ್ಬರೂ ಮಂತ್ರಿಯಾಗಿರಲಿಲ್ಲ. ಆದರೆ, ಈಗ ಈ ಸಮಾಜದಿಂದ ಪುಟ್ಟರಂಗಶೆಟ್ಟಿ ಮಂತ್ರಿಯಾಗಿದ್ದಾರೆ. ನಿರ್ಲಕ್ಷಿತ ಸಮುದಾಯಗಳನ್ನು ತಮ್ಮೊಟ್ಟಿಗೆ ಕರೆದುಕೊಂಡು ಹೋಗುತ್ತಿರುವ ಸಿದ್ದರಾಮಯ್ಯನವರ ಶ್ರಮವೇ ಇದಕ್ಕೆ ಕಾರಣ’ ಎಂದರು.

‘ಸಿದ್ದರಾಮಯ್ಯನವರಿಗೆ ಜಾತಿಯ ವ್ಯಾಮೋಹ ಇದೆ ಎನ್ನುವವರು ಮೊದಲು ಅವರು ಎಲ್ಲ ಸಮುದಾಯಗಳಿಗೆ ವಿಶಾಲ ಹೃದಯದಿಂದ ಅನ್ನ, ನೀರು, ವಸತಿ ನೀಡಿರುವ ಬಗೆಯನ್ನು ಗಮನಿಸಬೇಕು. ಅವರು ಭವಿಷ್ಯದಲ್ಲಿ ಇನ್ನೂ ಉನ್ನತ ಹುದ್ದೆ ಹೊಂದಲಿದ್ದಾರೆ’ ಎಂದು ಶ್ರೀಗಳು ಭವಿಷ್ಯ ನುಡಿದರು.

ಬಿಡುಗಡೆಯಾದ 13 ಪುಸ್ತಕಗಳು

l ಪುರಾಣ - ಎಸ್.ಜಿ.ಸಿದ್ದರಾಮಯ್ಯ

l ಇತಿಹಾಸ (ಭಾಗ I II) -ಲಿಂಗದಹಳ್ಳಿ ಹಾಲಪ್ಪ

l ಧರ್ಮ (ಭಾಗ I II II) - ಲಿಂಗದಹಳ್ಳಿ ಹಾಲಪ್ಪ

l ಸಾಹಿತ್ಯ - ಬಿದರಿ ಚಂದ್ರಕಲಾ

l ಕಲೆ ಮತ್ತು ಕ್ರೀಡೆ -ಚಂದ್ರಕಾಂತ ಬಿಜ್ಜರಗಿ ಮತ್ತು ಚಿಕ್ಕಣ್ಣ ಎಣ್ಣೆಕಟ್ಟೆ

l ಮಹಿಳೆ - ಆರ್.ಸುನಂದಮ್ಮ

l ಸಮಾಜೋ ಆರ್ಥಿಕ -ಒಡೆಯರ್ ಡಿ ಹೆಗ್ಗಡೆ

l ಆಧುನಿಕತೆ - ಬಿ.ಕೆ.ರವಿ

l ಚಿತ್ರಕೋಶ - ಕಾ.ತ.ಚಿಕ್ಕಣ್ಣ

l ಸಾಂಸ್ಕೃತಿಕ ಪದಕೋಶ - ಲಿಂಗದಹಳ್ಳಿ ಹಾಲಪ್ಪ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !