ಬುಧವಾರ, ನವೆಂಬರ್ 13, 2019
25 °C

ಓದುವಿಕೆ ಕ್ಷೀಣ; ಹೆಚ್ಚಿದ ಕೃತಕತೆ -ಪ್ರೊ.ಕೆ.ಜೆ.ರಾವ್ ಅಭಿಮತ

Published:
Updated:
Prajavani

ಮೈಸೂರು: ‘ಈಚೆಗಿನ ದಶಕಗಳಲ್ಲಿ ಓದುವಿಕೆ ಕ್ಷೀಣಿಸುತ್ತಿದೆ. ಕೃತಕತೆ ಎಂಬುದು ಎಲ್ಲ ಕ್ಷೇತ್ರಗಳಿಗೂ ಪಸರಿಸಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಿದೆ’ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ.ಕೆ.ಜೆ.ರಾವ್ ಹೇಳಿದರು.

ಭಾರತೀಯ ವಿಜ್ಞಾನ ಕಾಂಗ್ರೆಸ್‌ ಅಸೋಸಿಯೇಷನ್‌ ಗುರುವಾರ ನಗರದಲ್ಲಿ ಆಯೋಜಿಸಿದ್ದ ‘ವಿಜ್ಞಾನ ಮತ್ತು ತಂತ್ರಜ್ಞಾನ–ಗ್ರಾಮೀಣ ಅಭಿವೃದ್ಧಿ ಕುರಿತ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಪ್ರಸ್ತುತ ಯಂತ್ರಗಳೇ ಸಂಶೋಧನಾ ಪ್ರಬಂಧವನ್ನು ವಿಮರ್ಶಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಮುಂದಿನ 10 ವರ್ಷದಲ್ಲಾಗುವ ಬದಲಾವಣೆ, ಆವಿಷ್ಕಾರ ಊಹಿಸಲು ಅಸಾಧ್ಯ ಎಂಬಂತಹ ಸ್ಥಿತಿಯಲ್ಲಿದ್ದೇವೆ’ ಎಂದರು.

‘ವಿಜ್ಞಾನ ಜಗತ್ತಿನ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿದೆ. ತಂತ್ರಜ್ಞಾನವೂ ಇದಕ್ಕೆ ಪೂರಕವಾಗಿದೆ. ಆದರೆ ಜಗತ್ತಿನ ಜನರ ತಲಾದಾಯದಲ್ಲಿ ಭಾಳ ವ್ಯತ್ಯಾಸವಿದೆ. ಸರಿದೂಗಿಸಲು ಸಾಧ್ಯವಿಲ್ಲ ಎಂಬಂತಹ ಸ್ಥಿತಿಯಲ್ಲಿ ಕೆಲವೇ ಜನರ ಬಳಿ ಸಂಪತ್ತು ಕ್ರೋಢೀಕರಣಗೊಂಡಿದೆ’ ಎಂದು ತಿಳಿಸಿದರು.

ವಿಚಾರ ಸಂಕಿರಣ ಉದ್ಘಾಟಿಸಿದ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಸೋಸಿಯೇಷನ್‌ನ ಅಧ್ಯಕ್ಷ ಪ್ರೊ.ಕೆ.ಎಸ್.ರಂಗಪ್ಪ ಮಾತನಾಡಿ, ‘ಸಂಶೋಧನೆ ಈಚೆಗೆ ಎಲ್ಲ ಕ್ಷೇತ್ರಕ್ಕೂ ವಿಸ್ತರಿಸುತ್ತಿದೆ. ಒಂದಕ್ಕೊಂದು ಪೂರಕವಾಗಿ ಸಂಶೋಧನೆ ನಡೆದರೆ ಗುಣಮಟ್ಟವೂ ಹೆಚ್ಚಲಿದೆ. ಸದೃಢ ಫಲಿತಾಂಶವೂ ದೊರಕಲಿದೆ’ ಎಂದು ಹೇಳಿದರು.

‘ಎರಡು ದಶಕದಿಂದೀಚೆಗೆ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಶರವೇಗದ ಪ್ರಗತಿ ಗೋಚರಿಸಿದರೂ; ಇದರ ಫಲ ಇಂದಿಗೂ ಗ್ರಾಮೀಣ ಪ್ರದೇಶ ತಲುಪಿಲ್ಲ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಆಶಯದಂತೆ ನಗರ ಪ್ರದೇಶದಲ್ಲಿನ ಸಕಲ ಸೌಲಭ್ಯಗಳು ಗ್ರಾಮೀಣರಿಗೆ ಸಿಗುವಂತಾಗಬೇಕು. ಬ್ಯಾಂಕಿಂಗ್ ಯಾವ ರೀತಿ ಪ್ರತಿ ಹಳ್ಳಿ ತಲುಪಲು ಯತ್ನಿಸಿದೆ ಅದೇ ರೀತಿ, ವಿಜ್ಞಾನದ ಕೊಡುಗೆಯನ್ನು ಹಳ್ಳಿಗೆ ತಲುಪಿಸಲು ವಿಜ್ಞಾನಿಗಳು ಶ್ರಮವಹಿಸಬೇಕಿದೆ’ ಎಂದು ಕಿವಿಮಾತು ಹೇಳಿದರು.

‘ನಾಲ್ಕನೇ ಕೈಗಾರಿಕಾ ಕ್ರಾಂತಿಯ ಕಾಲಘಟ್ಟ ನಡೆದಿದೆ. ನಮ್ಮ ಬುದ್ದಿಮತ್ತೆಗೂ, ಕಂಪ್ಯೂಟರ್‌ ಜ್ಞಾನಕ್ಕೂ ಹೊಂದಾಣಿಕೆಯಾಗುತ್ತಿದೆ. ಇದು ಸುಶಿಕ್ಷಿತರಿಗೆ ಸವಾಲಾಗಿದೆ. ವೇದ ಕಾಲದಿಂದಲೂ ಸಾಧನೆಯ ಉತ್ತುಂಗದಲ್ಲಿರುವ ಭಾರತ, ಇದೀಗ ಯಾವ ರೀತಿ ಎದುರಿಸಲಿದೆ ಎಂಬುದೇ ದೊಡ್ಡ ಸವಾಲಾಗಿದೆ’ ಎಂದರು.

ಪ್ರೊ.ವಿಜಯಲಕ್ಷ್ಮೀ ಸಕ್ಸೇನಾ, ಪ್ರೊ.ಅಶೋಕ್ ಕುಮಾರ್ ಸಕ್ಸೇನಾ, ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್, ಡಾ.ಎಸ್.ಶ್ರೀಕಂಠಸ್ವಾಮಿ, ಪ್ರೊ.ಗಂಗಾಧರ್ ಮತ್ತಿತರರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)