ಬತ್ತಿದ ನಾಲತವಾಡ ಕೆರೆ; ಅಂತರ್ಜಲ ಕ್ಷೀಣ..! ನೀರಿಗೆ ಹಾಹಾಕಾರ

ಭಾನುವಾರ, ಮೇ 26, 2019
32 °C
ಕೃಷ್ಣೆಯ ನೀರಿನಿಂದ ಕೆರೆ ತುಂಬಲು ಹೆಚ್ಚಿದ ಒತ್ತಡ

ಬತ್ತಿದ ನಾಲತವಾಡ ಕೆರೆ; ಅಂತರ್ಜಲ ಕ್ಷೀಣ..! ನೀರಿಗೆ ಹಾಹಾಕಾರ

Published:
Updated:
Prajavani

ನಾಲತವಾಡ: ಪಟ್ಟಣವೂ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗದ ಕೆರೆ–ಕಟ್ಟೆಗಳ ಒಡಲು ಬರಿದಾಗಿದೆ. ಇದರ ಪರಿಣಾಮ ಕೊಳವೆಬಾವಿಗಳ ಅಂತರ್ಜಲವೂ ಕ್ಷೀಣಿಸುತ್ತಿದ್ದು, ಎಲ್ಲೆಡೆ ನೀರಿಗಾಗಿ ಹಾಹಾಕಾರ ಶುರುವಾಗಿದೆ.

ಹಳ್ಳಿ–ಹಳ್ಳಿಯಲ್ಲೂ ನೀರಿನ ತ್ರಾಸು ಹೆಚ್ಚಿದೆ. ಜನ–ಜಾನುವಾರುಗಳ ಕುಡಿಯುವ ನೀರಿನ ಪರದಾಟ ದಿನದಿಂದ ದಿನಕ್ಕೆ ಉಲ್ಭಣಿಸುತ್ತಿದ್ದು, ಸಮಸ್ಯೆ ಬಿಗಡಾಯಿಸಿದೆ.

ಪಟ್ಟಣದ ಬಹು ಭಾಗದ ಜನರ ಬಳಕೆಗೆ, ದನ–ಕರುಗಳಿಗೆ ಕುಡಿಯಲು, ಬಟ್ಟೆ ತೊಳೆಯಲು ನೀರು ಪೂರೈಸುವ ಪ್ರಮುಖ ಜಲಮೂಲವಾಗಿದ್ದ ನಾಲತವಾಡದ ಕೆರೆ ಇದೀಗ ಸಂಪೂರ್ಣ ಬತ್ತಿದೆ. ನೀರಿಲ್ಲದೆ ಬಣಗುಡುತ್ತಿರುವ ಈ ಕೆರೆ ಅಂಗಳದಲ್ಲಿ ಮೀನು ಸೇರಿದಂತೆ, ಇನ್ನಿತರೆ ಜಲಚರಗಳು ಸತ್ತು ಬಿದ್ದಿದ್ದು, ದುರ್ವಾಸನೆ ಹೆಚ್ಚಿದೆ.

‘ಪಟ್ಟಣದ ಜಲಮೂಲವೇ ಬತ್ತಿರುವುದರಿಂದ ಜಾನುವಾರು ಸಾಕಿರುವ ರೈತ ಸಮೂಹ ಕಂಗಾಲಾಗಿದೆ. ನಿತ್ಯವೂ ದನ–ಕರುಗಳಿಗೆ ಕುಡಿಯುವ ನೀರನ್ನು ಹೊಂದಿಸಲು ಹರಸಾಹಸ ನಡೆಸಿದೆ. ನೀರಿಗಾಗಿ ಅಲೆದಾಟ ಹೆಚ್ಚಿದೆ. ಬಿಸಿಲ ಬೇಗೆ, ಝಳ ಹೆಚ್ಚಿದಂತೆ ಜನರ ಕುಡಿಯುವ ನೀರಿನ ಸಮಸ್ಯೆಯೂ ಬಿಗಡಾಯಿಸಿದ್ದು, ಪರಿಸ್ಥಿತಿ ಮತ್ತಷ್ಟು ಗಂಭೀರತೆಗೆ ತಿರುಗುತ್ತಿದೆ’ ಎಂದು ಬಸವರಾಜ ತಳವಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಪಟ್ಟಣದಲ್ಲಿ ಈ ಹಿಂದೆ ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿತ್ತು. ನೀರಿನ ಅಭಾವ ಹೆಚ್ಚಿದಂತೆ ಪ್ರಸ್ತುತ ಇದು ಐದು, ಆರು ದಿನಗಳಿಗೆ ವಿಸ್ತರಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದಿನಕ್ಕೆ ಅಂತರ ಹೆಚ್ಚುವ ಆತಂಕವಿದ್ದು, ಕೆರೆಗೆ ಕೃಷ್ಣೆಯ ನೀರನ್ನು ತುಂಬುವಂತೆ ಬೇಡಿಕೆ, ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಕೆರೆಯ ಒಡಲಿಗೆ ಕೃಷ್ಣೆಯ ನೀರನ್ನು ತುಂಬಿದರೆ, ಜಲಚರ, ಪ್ರಾಣಿ–ಪಕ್ಷಿಗಳಿಗೆ ನೀರಿನಾಸರೆ ಸಿಗಲಿದೆ. ನೀರಿಲ್ಲದೆ ಪಕ್ಷಿಗಳು ಪರದಾಟ ನಡೆಸುವುದು ತಪ್ಪಲಿದೆ. ನೀರು ಭೂಮಿಗೆ ಹಿಂಗಿ ಕೊಳವೆಬಾವಿಗಳ ಅಂತರ್ಜಲ ಕೊಂಚವಾದರೂ ಹೆಚ್ಚಲಿದೆ. ಇದರಿಂದ ನಮಗೂ ಸಕಾಲಕ್ಕೆ ನೀರು ಸಿಗಲಿದೆ ಎಂಬ ಆಶಾಭಾವ ಪಟ್ಟಣಿಗರದ್ದಾಗಿದೆ.

‘ಕೆರೆಯನ್ನು ಈ ಹಿಂದೆ ಸಮರ್ಪಕವಾಗಿ ಅಭಿವೃದ್ಧಿಗೊಳಿಸದಿರುವುದಕ್ಕೆ ಪಟ್ಟಣಿಗರಲ್ಲಿ ತೀವ್ರ ಅಸಮಾಧಾನ ಹೆಚ್ಚಿದೆ. ಮಳೆಗಾಲ ಆರಂಭಕ್ಕೂ ಮುನ್ನವೇ ನಮ್ಮೂರ ಕೆರೆಯಲ್ಲಿನ ಜಾಲಿ ಗಿಡಗಳನ್ನು ತೆಗೆಯಬೇಕಿತ್ತು. ಇದರ ಜತೆಗೆ ಹೂಳನ್ನು ತೆಗೆದರೆ ಇನ್ನೂ ಚಲೋ. ಈ ನಿಟ್ಟಿನಲ್ಲಿ ಪಟ್ಟಣ ಪಂಚಾಯ್ತಿ ಆಡಳಿತ ಸಂಬಂಧಿಸಿದವರೊಂದಿಗೆ ಸಂಪರ್ಕ ಸಾಧಿಸಿ, ಈ ಕೆಲಸ ನಡೆಸಬೇಕಿದೆ’ ಎನ್ನುತ್ತಾರೆ ಸ್ಥಳೀಯರಾದ ಪ್ರಕಾಶ ಚಳಗೇರಿ.

‘ಒಂದೆಡೆ ನೀರಿನ ಹಾಹಾಕಾರವಿದ್ದರೆ, ಇನ್ನೊಂದೆಡೆ ಗುಡಿ ಓಣಿ, ಕಾಳಮ್ಮನ ಗುಡಿ ಓಣಿ ಸೇರಿದಂತೆ ವಿವಿಧೆಡೆ ನೀರು ಪೂರೈಕೆ ಮಾಡುವ ಕೊಳವೆ ಬಾವಿಯ ಪೈಪ್‌ಗಳು ಒಡೆದು ನೀರು ವ್ಯರ್ಥವಾಗುತ್ತಿದೆ. ಇಂಥಹ ಸಂದಿಗ್ಧ ಸಮಯದಲ್ಲಾದರೂ; ಇದನ್ನು ತಪ್ಪಿಸಲು ಪಟ್ಟಣ ಪಂಚಾಯ್ತಿ ಆಡಳಿತ ಮುಂದಾಗಬೇಕಿದೆ’ ಎಂಬ ಆಗ್ರಹ ಪಾಪಣ್ಣ ಗಾದಿ ಅವರದ್ದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !