ಶುಕ್ರವಾರ, ಡಿಸೆಂಬರ್ 6, 2019
21 °C

ಕೂದಲ ಅಂದಕ್ಕೆ ಡ್ರೈ ಶ್ಯಾಂಪೂ

Published:
Updated:

ಇಂದಿನ ಧಾವಂತದ ಯುಗದಲ್ಲಿ ತಲೆಸ್ನಾನ ಮಾಡಿ ಕೂದಲು ಒಣಗಿಸಿಕೊಳ್ಳುವುದು ಶ್ರಮದಾಯಕ ಕೆಲಸವೇ. ಕೂದಲು ಒಣಗದೇ ಹಾಗೆ ಜಡೆ, ಜುಟ್ಟು ಹಾಕಿಕೊಂಡರೆ ಕೂದಲು ಉದುರುವ ಚಿಂತೆ. ಹಾಗಾಗಿ ಈ ಸಮಸ್ಯೆಗಳಿಗೆಲ್ಲಾ ಪರಿಹಾರದ ದಾರಿ ಡ್ರೈ ಶ್ಯಾಂಪೂ.

ಹೆಣ್ಣುಮಕ್ಕಳು ಸದಾ ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಅದರಲ್ಲೂ ಚರ್ಮ ಹಾಗೂ ಕೂದಲಿನ ಬಗ್ಗೆ ಅವರ ಕಾಳಜಿ ಕೊಂಚ ಹೆಚ್ಚೇ ಎನ್ನಬಹುದು. ಅದರಲ್ಲೂ ಕೂದಲು ಉದುರದಂತೆ, ಸೀಳದಂತೆ ಕಾಪಾಡಿಕೊಳ್ಳುವುದು ಈಗೀನ ಒತ್ತಡದ ಯುಗದಲ್ಲಿ ನಿಜಕ್ಕೂ ಸವಾಲು. ದಿನಕ್ಕೊಂದು ಬಗೆಯ ಶ್ಯಾಂಪೂ, ಕಂಡೀಷನರ್, ಸೀರಮ್ ಬಳಸಿ ಕೂದಲ ಬಗ್ಗೆ ನಿಗಾ ವಹಿಸುತ್ತಾರೆ ಸುಂದರಿಯರು. 

ಇಂದಿನ ಧಾವಂತದ ಯುಗದಲ್ಲಿ ತಲೆಸ್ನಾನ ಮಾಡಿ ಕೂದಲು ಒಣಗಿಸಿಕೊಳ್ಳುವುದು ಶ್ರಮದಾಯಕ ಕೆಲಸವೇ. ಕೂದಲು ಒಣಗದೇ ಹಾಗೆ ಜಡೆ, ಜುಟ್ಟು ಹಾಕಿಕೊಂಡರೆ ಕೂದಲು ಉದುರುವ ಚಿಂತೆ. ಹಾಗಾಗಿ ಈ ಸಮಸ್ಯೆಗಳಿಗೆಲ್ಲಾ ಪರಿಹಾರದ ದಾರಿ ಡ್ರೈ ಶ್ಯಾಂಪೂ. 

ಏನಿದು ಡ್ರೈ ಶ್ಯಾಂಪೂ

ಶ್ಯಾಂಪೂ ಬಳಸಿ ತಲೆ ತೊಳೆದುಕೊಳ್ಳುವುದು ಸವಾಲು ಎನ್ನಿಸುವವರಿಗೆ ಕೂದಲಿನಲ್ಲಿನ ಎಣ್ಣೆಯ ಅಂಶ ಹಾಗೂ ದೂಳನ್ನು ಸ್ವಚ್ಛಗೊಳಿಸುವುದೇ ಡ್ರೈ ಶ್ಯಾಂಪೂ. ಇದು ಸ್ಪ್ರೇ ರೂಪದಲ್ಲಿರುತ್ತದೆ. ಇದು ಸಾಮಾನ್ಯ ಶ್ಯಾಂಪೂ ಹಾಗೂ ಕಂಡೀಷನರ್‌ಗಳಂತೆ ನೀರಿನ ರೂಪದಲ್ಲಿ ಇರುವುದಿಲ್ಲ. ಇದನ್ನು ನೀರಿನ ಅವಶ್ಯಕತೆ ಇಲ್ಲದೇ ನೇರವಾಗಿ ಕೂದಲಿಗೆ ಹಚ್ಚಿಕೊಳ್ಳಬಹುದು. ಆ ಕಾರಣಕ್ಕಾಗಿ ಇದನ್ನು ಡ್ರೈ ಶ್ಯಾಂಪೂ ಎಂದು ಕರೆಯುತ್ತಾರೆ.

ಡ್ರೈ ಶ್ಯಾಂಪೂ ಬಳಸಿದ ಮೇಲೆ ಕೂದಲನ್ನು ನೀರಿನಿಂದ ತೊಳೆಯುವ ಅವಶ್ಯಕತೆ ಇಲ್ಲ. ಇದನ್ನು ನೆತ್ತಿಯ ಭಾಗ ಹಾಗೂ ಕೂದಲಿಗೆ ಸ್ಪ್ರೇ ಮಾಡಿಕೊಂಡರೆ ಸಾಕು, ಕೂದಲು ಸ್ವಚ್ಛವಾಗುತ್ತದೆ. ಅನೇಕರು ವ್ಯಾಯಾಮ ಮಾಡಿದ ನಂತರ ಹಾಗೂ ಕೂದಲಿಗೆ ಸಲೂನ್‌ನಲ್ಲಿ ಬ್ಲೋ ಅಪ್ ಮಾಡಿದ ನಂತರ ಡ್ರೈ ಶ್ಯಾಂಪೂ ಬಳಸುತ್ತಾರೆ.

ಡ್ರೈ ಶ್ಯಾಂಪೂ ಕೆಲಸ ಮಾಡುವ ರೀತಿ

ನೆತ್ತಿಯಲ್ಲಿನ ಮೇದೋಗ್ರಂಥಿಗಳ ಸ್ರಾವದಿಂದ ಕೂದಲು ಮೃದುವಾಗುತ್ತದೆ. ಜೊತೆಗೆ ಇದು ಕೂದಲ ಬುಡದ ಚರ್ಮವನ್ನು ರಕ್ಷಿಸುತ್ತದೆ. ನೀವು ಅತಿಯಾಗಿ ಬೆವರುವ ಕೆಲಸ ಮಾಡುವವರಾದರೆ, ಹೆಚ್ಚು ಹೊತ್ತು ಹೊರಗಡೆ ಸಮಯ ಕಳೆಯುವವರಾದರೆ, ಪ್ರತಿದಿನ ಹೊರಗೆ ಹೊರಗುವವರಾದರೆ ಎಣ್ಣೆ ಹಾಗೂ ಬೆವರಿನ ಅಂಶ ಕೂದಲಿನ ಬುಡದಲ್ಲಿ ಸೇರಿಕೊಳ್ಳುತ್ತದೆ. ಒಂದು ಹಂತದಲ್ಲಿ ಕೂದಲಿನ ರಕ್ಷಣೆಗೆ ಎಣ್ಣೆ ಮುಖ್ಯ. ಆದರೆ ಅತಿಯಾದ ಎಣ್ಣೆ ಅಂಶ ಕೂದಲಿನ ಬುಡದಲ್ಲಿ ಸೇರಿಕೊಂಡರೆ ಕೂದಲಿನ ಅಂದವನ್ನು ಕೆಡಿಸುತ್ತದೆ.

ಪ್ರತಿದಿನ ತಲೆ ಸ್ನಾನ ಮಾಡುವುದು, ಒಣಗಿಸಿಕೊಳ್ಳುವುದು ಹಾಗೂ ಕೂದಲನ್ನು ನಮಗೆ ಬೇಕಾದ ಹಾಗೆ ಸೆಟ್  ಮಾಡಿಕೊಳ್ಳುವುದು ಕಷ್ಟ. ಅದೂ ಅಲ್ಲದೇ ಕೂದಲಿನ ಆರೋಗ್ಯದ ದೃಷ್ಟಿಯಿಂದಲೂ ಇದು ಉತ್ತಮವಲ್ಲ. ಆ ಕಾರಣಕ್ಕೆ ಡ್ರೈ ಶ್ಯಾಂಪೂ ಬಳಸಿದರೆ ಕೂದಲಿಗೆ ಉತ್ತಮ. 

ಇದನ್ನೂ ಓದಿ: ಕೂದಲು: ಕೊಂಚ ಕಾಳಜಿ ಇರಲಿ

ಇದರಲ್ಲಿ ಆಲ್ಕೋಹಾಲ್ ಹಾಗೂ ಪಿಷ್ಠದಂತಹ ಅಂಶಗಳನ್ನು ಬಳಸಿರುವುದರಿಂದ ಇದು ಕೂದಲಿನಲ್ಲಿನ ಎಣ್ಣೆ ಹಾಗೂ ಬೆವರಿನ ಅಂಶವನ್ನು ಸ್ವಚ್ಛ ಮಾಡುತ್ತದೆ. ಇದು ಕೂದಲನ್ನು ತೊಳೆದು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಜೊತೆಗೆ ಇದು ಸುವಾಸನೆಯಿಂದ ಕೂಡಿರುವುದರಿಂದ ಕೂದಲಿಗೆ ಸುಂದರ ಪರಿಮಳವನ್ನು ನೀಡುತ್ತದೆ. ಆದರೆ ನೆನಪಿನಲ್ಲಿರಿಸಿಕೊಳ್ಳಬೇಕಾದ ಒಂದು ಅಂಶವೆಂದರೆ ಇದು ಎಂದಿಗೂ ತಲೆಸ್ನಾನದ ಸಮಕ್ಕೆ ಬರುವುದಿಲ್ಲ. ಅದಲ್ಲದೇ ಡ್ರೈ ಶ್ಯಾಂಪೂವನ್ನು ಅತಿಯಾಗಿ ಬಳಸಿದರೆ ತುರಿಕೆ ಹಾಗೂ ನೆತ್ತಿ ಒಣಗುವುದು ಮುಂತಾದ ತೊಂದರೆ ಕಾಣಿಸಿಕೊಳ್ಳಬಹುದು.

ಎಣ್ಣೆಯುಕ್ತ ಕೂದಲು

ನೈಸರ್ಗಿಕವಾಗಿ ಕೂದಲಲ್ಲಿ ಎಣ್ಣೆ ಅಂಶ ಹೊಂದಿರುವವರಿಗೆ ಇದು ತುಂಬಾ ಪರಿಣಾಮಕಾರಿಯಾಗಿದೆ. ಅಂತಹವರು ಡ್ರೈ ಶ್ಯಾಂಪೂ ಬಳಸುವುದರಿಂದ ಕೂಡಲೇ ಪರಿಣಾಮ ಕಾಣಬಹುದು. ಜೊತೆಗೆ ಕೂದಲನ್ನು ಆರ್ದ್ರವಾಗಿಸಿ ಎಣ್ಣೆಯುಕ್ತವಾಗಿ ಕಾಣುವಂತೆ ಮಾಡುತ್ತದೆ.

ಬಳಸುವ ವಿಧಾನ

* ಡ್ರೈ ಶ್ಯಾಂಪೂವನ್ನು ನಮ್ಮ ಕೂದಲಿನ ಗುಣ, ವಿನ್ಯಾಸ, ಉದ್ದ ಹಾಗೂ ಕೂದಲಿನ ಎಣ್ಣೆ ಅಂಶವನ್ನು ಆಧರಿಸಿ ಬಳಸಬೇಕು.

* ಇದನ್ನು ಒಣ ಕೂದಲಿಗೆ ಹಚ್ಚಬೇಕು. ಜೊತೆಗೆ ಹಚ್ಚಿಕೊಳ್ಳುವಾಗ ಕೂದಲಲ್ಲಿ ಯಾವುದೇ ಕ್ಲಿಪ್, ಹೇರ್‌ಬ್ಯಾಂಡ್‌ಗಳು ಇರಬಾರದು.

* ಮೊದಲು ಸ್ವಲ್ಪ ಶ್ಯಾಂಪೂವನ್ನು ಕೂದಲ ಬುಡಕ್ಕೆ ಸ್ಪ್ರೇ ಮಾಡಬೇಕು. ತಲೆಯ ಮೇಲಿನ ಎಲ್ಲಾ ಕೂದಲ ಬುಡಕ್ಕೆ ಶ್ಯಾಂಪೂ ತಾಕುವಂತೆ ನೋಡಿಕೊಳ್ಳಿ. ನಂತರ ಬೆರಳು ಸಹಾಯದಿಂದ ಮಸಾಜ್ ಮಾಡಿ. ಬೇಕೆಂದರೆ ಡ್ರೈಯರ್ ಸಹಾಯದಿಂದ ಆರಿಸಿಕೊಳ್ಳಬಹುದು.

ತೊಂದರೆಗಳು

ಡ್ರೈ ಶ್ಯಾಂಪೂ ಬಳಕೆಯಿಂದ ಯಾವುದೇ ತೊಂದರೆ ಇಲ್ಲ. ಆದರೆ ಇದನ್ನು ಪದೇ ಪದೇ ಬಳಸಬಾರದು. ವಾರದಲ್ಲಿ ಒಮ್ಮೆ ಅಥವಾ ಎರಡು ಬಾರಿ ವ್ಯಾಯಾಮ ಮುಗಿದ ಬಳಿಕ ಅಥವಾ ಬ್ಲೋಅಪ್ ಮಾಡಿಕೊಂಡ ಬಳಿಕೆ ಕೂದಲು ಫ್ರೆಶ್‌ ಆಗಿ ಕಾಣಲು ಬಳಸಬಹುದು. ಆದರೆ ಇದನ್ನು ಬಳಸಲು ಮಿತಿ ಇದೆ. ಸತತವಾಗಿ ಎರಡು ದಿನಕ್ಕಿಂತ ಹೆಚ್ಚು ಇದನ್ನು ಬಳಸಿದರೆ ನೆತ್ತಿ ಒಣಗಲು ಹಾಗೂ ನೆತ್ತಿಯ ಮೇಲೆ ಕಿರಿಕಿರಿ ಉಂಟಾಗಲು ಆರಂಭವಾಗುತ್ತದೆ. ಕೆಲವೊಮ್ಮೆ ನೆತ್ತಿಯ ಕೂದಲು ರಂಧ್ರಗಳು ಮುಚ್ಚಿ ಹೋಗಿ ಮೊಡವೆ ಹಾಗೂ ದದ್ದು ಉಂಟಾಗುವ ಸಂಭವಗಳು ಇವೆ.

ಚಳಿಗಾಲಕ್ಕೆ ಉತ್ತಮ

ಚಳಿಗಾಲದಲ್ಲಿ ಕೂದಲ ರಕ್ಷಣೆ ನಿಜಕ್ಕೂ ಕಷ್ಟ. ಚಳಿಗಾಲದಲ್ಲಿ ತಲೆಸ್ನಾನ ಮಾಡಿದರೆ ಕೂದಲು ಬೇಗ ಒಣಗುವುದಿಲ್ಲ. ಹೊರಗಡೆಯೂ ಶೀತ ವಾತಾವರಣವಿರುವುದರಿಂದ ಇದು ಕೂದಲಿಗೆ ಉತ್ತಮವಲ್ಲ. ಇದರಿಂದ ಕೂದಲು ಉದುರುವುದು, ಸೀಳುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಈ ಋತುಮಾನದಲ್ಲಿ ಡ್ರೈ ಶ್ಯಾಂಪೂವಿನ ಬಳಕೆ ಖಂಡಿತ ಕೂದಲ ರಕ್ಷಣೆಗೆ ನೆರವಾಗುತ್ತದೆ.

ಚಳಿಗಾಲದಲ್ಲಿ ಡ್ರೈ ಶ್ಯಾಂಪೂ ಬಳಸುವುದರಿಂದ ಕೂದಲು ತಾಜಾ ಆಗಿರುತ್ತದೆ. ಅಲ್ಲದೇ ಇದು ಕೂದಲ ಹೊಳಪನ್ನು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ಏರ್‌ಕಂಡಿಷನ್‌ನಲ್ಲಿ ಕೆಲಸ ಮಾಡುವವರಲ್ಲಿ ಶೀತ ವಾತಾವರಣದಿಂದ ಕೂದಲು ಕಾಂತಿ ಕಳೆದುಕೊಂಡಿರುತ್ತದೆ. ಹಾಗಾಗಿ ಡ್ರೈ ಶ್ಯಾಂಪೂ ಬಳಸುವುದರಿಂದ ಕೂದಲು ತಾಜಾ ಆಗಿ, ದಟ್ಟವಾಗಿ ಹಾಗೂ ಸ್ಟೈಲಿಶ್ ಆಗಿ ಕಾಣುತ್ತದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು