‘ಹರಟೆ ಮಲ್ಲರ ಕಟ್ಟೆ’ಯಲ್ಲಿತಿನ್ನಿ, ಓದಿ, ವಿರಮಿಸಿ...

7
ರಸಾಸ್ವಾದ

‘ಹರಟೆ ಮಲ್ಲರ ಕಟ್ಟೆ’ಯಲ್ಲಿತಿನ್ನಿ, ಓದಿ, ವಿರಮಿಸಿ...

Published:
Updated:

ಬಿಸಿ ಬಿಸಿ ಖಾರಾಭಾತ್‌, ಇಡ್ಲಿ, ಗರಿಗರಿಯಾದ ಮಸಾಲೆ ದೋಸೆ, ಬೋಂಡಾ ಸೂಪ್‌, ಮೆಂತ್ಯಭಾತ್‌... ಹೀಗೆ ಒಬ್ಬೊಬ್ಬರೂ ತಮ್ಮಗಿಷ್ಟವಾದ ತಿಂಡಿ ತಿನ್ನುತ್ತಾ ಲೋಕಾಭಿರಾಮವಾಗಿ ಮಾತನಾಡುತ್ತಿದ್ದರು. ಧಾವಂತವಿಲ್ಲದೆ ತಿಂಡಿ ತಿನ್ನುತ್ತಾ ಪಟ್ಟಾಂಗ ಹೊಡೆಯುವ ಈ ಸ್ಥಳ ‘ಹರಟೆ ಮಲ್ಲರ ಕಟ್ಟೆ’ ಎಂದೇ ಪ್ರಸಿದ್ಧಿ.

ಇಲ್ಲಿ ಬೃಹದಾಕಾರದ ಮರದಲ್ಲಿ ಹಕ್ಕಿಗಳ ಚಿಲಿಪಿಲಿ ನಿನಾದ ಮನಸ್ಸಿಗೆ ಮುದ ನೀಡುತ್ತದೆ. ಬೆಳಂಬೆಳಿಗ್ಗೆ ಮರದ ಕಟ್ಟೆ ಮೇಲೆ ಕುಳಿತು ತಂಪಾದ ಹವೆಯಲ್ಲಿ ಬಿಸಿ ಬಿಸಿ ಕಾಫಿ, ಚಹಾ ಹೀರುತ್ತಾ ಕನ್ನಡ ಪತ್ರಿಕೆಗಳನ್ನು ಓದುತ್ತಾ, ನಗು, ಹರಟೆಯಲ್ಲಿ ತೊಡಗುವ ಗ್ರಾಹಕರು ಕೊಂಚ ಸಮಯ ರಿಲ್ಯಾಕ್ಸ್‌ ಮೂಡ್‌ಗೆ ಜಾರುತ್ತಾರೆ.‌‌

ಇಂತಹ ಸುಂದರಾನುಭೂತಿ ನೀಡುವ ಆಸ್ವಾದ ತಾಣ ಬಸವೇಶ್ವರನಗರದ ‘ಲಾಲ್‌ಬಾಗ್‌ ಕೆಫೆ’. ನೆರಳಿನ ತಂಪು, ಹೂವು ಬನದ ಕಂಪು ಈ ಹೋಟೆಲ್‌ನ ಸೊಬಗು.

ದೋಸೆ ಕ್ಯಾಂಪ್‌ಗೆ ಗಾಂಧಿ ಬಜಾರ್‌, ಮಸಾಲೆ ದೋಸೆಗೆ ಜರ್ನಾರ್ದನ್‌ ಹೋಟೆಲ್‌, ಬೋಂಡಾ ಸೂಪ್‌ಗೆ ಅಶೋಕ ಪಿಲ್ಲರ್‌ ಹತ್ತಿರದ ಸಂಗಮ್‌ ಹೋಟೆಲ್‌ ಹೆಸರಾದಂತೆ, ಮಲೆನಾಡು ಶೈಲಿಯ ಅಕ್ಕಿ ರೊಟ್ಟಿಗೆ ‘ಲಾಲ್‌ಬಾಗ್‌ ಕೆಫೆ’. ಮಧ್ಯಾಹ್ನ ಊಟದ ಮೆನು ಇಲ್ಲಿನ ವಿಶೇಷ. ಘಮಘಮಿಸುವ ಮೇಲುಕೋಟೆ ಪುಳಿಯೋಗರೆ, ಬಾಯಿಗೆ ಇಟ್ಟರೆ ಸಲೀಸಾಗಿ ಗಂಟಲಿಗೆ ಇಳಿಯುವ ಕೇಸರಿ ಭಾತ್‌, ಸಬ್ಬಕ್ಕಿ ಸೊಪ್ಪಿನ ಭಾತ್ ಇಲ್ಲಿನ ಬೆಳಿಗ್ಗೆ ತಿಂಡಿಗಳ ಪಟ್ಟಿಯಲ್ಲಿ ಕಾಯಂ ಸ್ಥಾನ ಪಡೆದಿವೆ.

ಇಲ್ಲಿನ ಆಡುಗೆ ಪದಾರ್ಥಗಳಿಗೆ ಈರುಳ್ಳಿ, ಬೆಳ್ಳುಳ್ಳಿ ಬಳಸುವುದಿಲ್ಲ. ಯಾವುದೇ ರೀತಿಯ ಟೇಸ್ಟಿಂಗ್‌ ಪುಡಿ ಬಳಕೆ ಮಾಡಲಾಗುವುದಿಲ್ಲ. ಮನೆಯಲ್ಲಿ ಕೈಯಾರೆ ಸಿದ್ಧಪ‍ಡಿಸಿದ ಮಸಾಲೆ ಕೂಟು ಬಳಸಲಾಗುತ್ತದೆ. ಗುಣಮಟ್ಟದಲ್ಲೂ ಯಾವುದೇ ರಾಜಿ ಇಲ್ಲ. ಇದು, ಈ ಹೋಟೆಲ್‌ ಸಂಸ್ಥಾಪಕಾರದ ಜ್ಞಾನೇಂದ್ರಕುಮಾರ್ ಮತ್ತು ನವೀನ್ ಕುಮಾರ್ ಅವರು ನೀಡುವ ಖಾತರಿ.

ಇಲ್ಲಿನ ತಿಂಡಿ ಹಾಗೂ ಊಟ ಮನೆ ರುಚಿಯ ಅನುಭವ ನೀಡುತ್ತದೆ. ಇದಕ್ಕೆ ಕಾರಣ ಹಾಸನ, ಸಕಲೇಶಪುರ ಕಡೆಯಿಂದ  ತರುವ ಪಾಲಿಶ್‌ ಮಾಡದ ಅಕ್ಕಿ. ಚಿಕ್ಕಮಗಳೂರಿನ ‌ಕಾಫಿ ಬೀಜ, ಕೊಡಗಿನ ಕಾಳುಮೆಣಸು ಮತ್ತು ಇತರ ಸಂಬಾರ ಪದಾರ್ಥಗಳನ್ನು ಬೆಳೆಗಾರರಿಂದಲೇ ಖರೀದಿಸುತ್ತಾರೆ. ಈ ಮೂಲಕ ರೈತರ ಹಿತ ಕಾಪಾಡುವ ಉದ್ದೇಶ ಈ ಹೋಟೆಲ್‌ನ ಮಾಲೀಕರದ್ದು. ದಿನಸಿ, ತರಕಾರಿ ತಾಜಾ ಆಗಿಯೇ ಬಳಸುವುದು ಈ ಕೆಫೆಯ ಮತ್ತೊಂದು ವಿಶೇಷತೆ.

ರಿಯಾಯಿತಿ: ಸೈನಿಕರು, ಹಿರಿಯ ನಾಗರಿಕರು, ಅಂಗವಿಕಲರಿಗೆ ಈ ಹೋಟೆಲ್‌ನಲ್ಲಿ ಶೇ 30ರಷ್ಟು ರಿಯಾಯಿತಿ ಇದೆ. ‘ಮುಂಜಾನೆ ಹಾಗೂ ಇಳಿಸಂಜೆ ಹೊತ್ತಿನಲ್ಲಿ ವಾಯು ವಿಹಾರ ಮುಗಿಸಿ ಬರುವ ಹಿರಿಯ ನಾಗರಿಕರು ಇಲ್ಲಿ ಕಾಫಿ, ಚಹಾ, ತಿಂಡಿ ಸವಿಯಲು ಬಯಸುತ್ತಾರೆ. ‘ಇದೆಲ್ಲಾ ಕನಿಕರದಿಂದ ಮಾಡಿರುವ ಕೆಲಸ ಅಲ್ಲ; ಅವರ ಗೌರವಕ್ಕೆ ಧಕ್ಕೆಯಾಗದಂತೆ ರಿಯಾಯಿತಿ ದರದಲ್ಲಿ ತಿಂಡಿ ಮತ್ತು ಊಟ ನೀಡಲಾಗುತ್ತಿದೆ’ ಎಂದು ಜ್ಞಾನೇಂದ್ರಕುಮಾರ್ ಮತ್ತು ನವೀನ್ ಕುಮಾರ್ ಹೇಳುತ್ತಾರೆ.

ಹೋಟೆಲ್‌ ಮುಂದಿನ ಮರದ ಕಟ್ಟೆ ಕನ್ನಡ ದಿನ ಪತ್ರಿಕೆ ಓದುವ ಹವ್ಯಾಸ ತಾಣವಾಗಿ ಮಾರ್ಪಾಡಾಗಿದೆ. ಕನ್ನಡ ಓದುವ ಹವ್ಯಾಸ ಬೆಳೆಸಲು ಇದೊಂದು ಸಣ್ಣ ಪ್ರಯತ್ನ. ಲಾಲ್‌ಬಾಗ್‌ಗೆ ಅನ್ವ‌ರ್ಥವಾಗುವಂತೆ ಇಲ್ಲಿನ ಹೂವು ಗಿಡಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಕೆಫೆಯ ಕಳೆ ಹೆಚ್ಚಿಸುವ ಚಿಂತನೆ ಅವರಿಗಿದೆ. ‘ಅಭಿರುಚಿಗಾಗಿ ಹೋಟೆಲ್‌’ ಎಂಬುದು ಈ ಯುವಕರ ಮಂತ್ರ.

ಗುಣಮಟ್ಟ, ಸ್ವಾದ ಉತ್ತಮವಾಗಿದ್ದರೂ ಇಲ್ಲಿನ ಆಹಾರದ ಬೆಲೆ ಎಲ್ಲಾ ವರ್ಗದ ಜನರಿಗೂ ಕೈಗೆಟುಕುವಂತಿದೆ. ಕಾಫಿ/ಚಹಾ ₹5, ತಿಂಡಿ ಬೆಲೆ ₹25, ಊಟ ₹45. ಪಾರ್ಸೆಲ್‌, ಕೇಟರಿಂಗ್ ವ್ಯವಸ್ಥೆಯೂ ಇಲ್ಲಿದೆ.

ಹೋಟೆಲ್‌: ಲಾಲ್‌ಬಾಗ್‌ ಕೆಫೆ
ವಿಸೇಷ: ಮಲೆನಾಡು ಅಕ್ಕಿ ರೊಟ್ಟಿ, ಸಬ್ಬಕ್ಕಿ ಸೊಪ್ಪಿನ ಬಾತ್‌
ಸ್ಥಳ: ‘ಲಾಲ್‌ಬಾಗ್ ಕೆಫೆ’ ನಂ 860/ಬಿ, 8ಬಿ ಮೈನ್‌, 3ನೇ ಬ್ಲಾಕ್, ಬಸವೇಶ್ವರನಗರ
ಮಾಹಿತಿಗೆ: 99646 17174

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !