5 ಮುದ್ದೆ, 10 ರೊಟ್ಟಿ ತಿಂದ ಭೂಪ!

7

5 ಮುದ್ದೆ, 10 ರೊಟ್ಟಿ ತಿಂದ ಭೂಪ!

Published:
Updated:

ಒಂದು ಕ್ಯಾಂಟೀನ್‌ನ ವಾರ್ಷಿಕೋತ್ಸವವನ್ನು ಹೇಗೆಲ್ಲ ಆಚರಿಸಬಹುದು? ಅಪ್ಪಾಜಿ ಕ್ಯಾಂಟೀನ್‌ ಊಟದ ಸ್ಪರ್ಧೆ ಆಯೋಜಿಸಿ, ತನ್ನ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತು. ಹತ್ತು ನಿಮಿಷಗಳಲ್ಲಿ ಯಾರು ಹೆಚ್ಚು ಆಹಾರ ಸೇವಿಸುತ್ತಾರೆ ಎನ್ನುವುದೇ ಸವಾಲು. ಈ ಊಟದಲ್ಲಿ ಉತ್ತರ ಕರ್ನಾಟಕದ ರೊಟ್ಟಿಗಳನ್ನೂ, ದಕ್ಷಿಣ ಕರ್ನಾಟಕದ ಮುಖ್ಯ ಆಹಾರವಾಗಿರುವ ಮುದ್ದೆಯನ್ನು ಮೆಲ್ಲಲೇಬೇಕಿತ್ತು.

ಒಂದು ಅಗಿದು ಜಗಿದು ತಿನ್ನುವ ರೊಟ್ಟಿ, ಇನ್ನೊಂದು ಗುಳುಂಗುಳಂ ಎಂದು ನುಂಗುವ ಮುದ್ದೆ. ಎರಡನ್ನೂ ಸೈ ಎಂದವರಿಗೆ ಅನ್ನಪೂರ್ಣೆಯೊಂದಿಗೆ ವಿಜಯಲಕ್ಷ್ಮಿಯೂ ಒಲಿದಳು.

ಬರೋಬ್ಬರಿ ಐದು ಮುದ್ದೆ, 10 ರೊಟ್ಟಿ ತಿಂದ ಮಾಗಡಿ ತಾಲ್ಲೂಕಿನ ಶಾಂತಪ್ಪ ಊಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ, ಸಂತೃಪ್ತಿಯಿಂದ ಹೊಟ್ಟೆಮೇಲೆ ಕೈಯಾಡಿಸಿಕೊಂಡರು.

 ಸ್ಪರ್ಧೆ ಮುಗಿಯಲು ಇನ್ನೂ ಒಂದು ನಿಮಿಷ ಬಾಕಿ ಇರುವಾಗಲೇ ತಮ್ಮ ಊಟಕ್ಕೆ ಒಂದು ಪೂರ್ಣವಿರಾಮವಿತ್ತರು. ಶಾಂತಪ್ಪರತ್ತ ಎಲ್ಲರೂ ಮೆಚ್ಚುಗೆಯ ಕಣ್ನೋಟ ನೆಟ್ಟರು. ಉಳಿದವರೆಡೆಗೆ ದೃಷ್ಟಿ ಹರಿಸಿದರು. ಯಾರೂ ಶಾಂತಪ್ಪ ಅವರನ್ನು ಸರಿಗಟ್ಟಲಾಗಲಿಲ್ಲ.

 ಒಂದು ತಿಂಗಳು ಉಚಿತ ಊಟದ ಕೂಪನ್‌ ಬಹುಮಾನ ರೂಪದಲ್ಲಿ ನಗದು 5 ಸಾವಿರ ರೂಪಾಯಿ ಜೊತೆಗೆ ಶಾಂತಪ್ಪ ಅವರಿಗೆ ದೊರೆಯಿತು. ಆದರೆ ಅವರು ಮಾಗಡಿಯ ಸೋಲೂರಿನವ ರಾಗಿರುವುದರಿಂದ ಉಚಿತ, ತಿಂಡಿ ಹಾಗೂ ಊಟದ ಕೂಪನ್‌ಗಳನ್ನು ತಮ್ಮ ಬೆಂಗಳೂರು ವಾಸಿ ಸ್ನೇಹಿತನಿಗೆ ಅಲ್ಲಿಯೇ ಹಸ್ತಾಂತರ ಮಾಡಿದರು. 

ಎನ್‌.ಆರ್‌. ಕಾಲೋನಿಯ ನಿವಾಸಿ ಶರತ್‌ಗೆ ಎರಡನೇ ಸ್ಥಾನ ಸಿಕ್ಕಿದೆ. ಅವರು ಮೂರು ಸಾವಿರ ನಗದು ಹಾಗೂ 20 ದಿನಗಳವರೆಗೆ ಉಚಿತ ತಿಂಡಿ ಹಾಗೂ ಊಟದ ಕೂಪನ್‌ ಪಡೆದುಕೊಂಡರು. ನಗರದ ನಿವಾಸಿ ಶ್ರೀನಿವಾಸ್‌ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು. ಎರಡು ಸಾವಿರ ನಗದು ಹಾಗೂ 10 ದಿನಗಳವರೆಗೆ ಉಚಿತ ಊಟದ ಕೂಪನ್‌ ಪಡೆದರು.

‘ನಾನು ಕಟ್ಟುನಿಟ್ಟಿನ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದೇನೆ. ಸ್ಪರ್ಧೆಗಾಗಿ ಒಂದು ವಾರ ಮಾಡುವ ಊಟವನ್ನು ಒಟ್ಟಿಗೇ ಮಾಡಿದ್ದೇನೆ’ ಎಂದು ಶಾಂತಪ್ಪ ಹೇಳಿದರು.

ಅಪ್ಪಾಜಿ ಕ್ಯಾಂಟೀನ್‌ನ ಸ್ಥಾಪಕ ಟಿ.ಎ. ಶರವಣ ವಿಜೇತರೆಲ್ಲರಿಗೂ ಅಭಿನಂದನೆ ಸಲ್ಲಿಸಿದರು. ‘ರಾಜ್ಯದ ಯಾವ ಭಾಗದವರಾದರೂ ಸ್ಪರ್ಧೆಗೆ ತೊಂದರೆಯಾಗಬಾರದು ಎಂದೇ ಜೋಳದ ರೊಟ್ಟಿ ಹಾಗೂ ಮುದ್ದೆ ಎರಡನ್ನೂ ಸ್ಪರ್ಧೆಗೆ ಪೂರೈಸಿದ್ದೆವು. ನಮ್ಮ ಮೂಲ ಆಹಾರದ ಬಗ್ಗೆ ಪ್ರೀತಿ ಮೂಡಿಸುವುದೂ ಈ ಸ್ಪರ್ಧೆಯ ಉದ್ದೇಶವಾಗಿತ್ತು’ ಎಂದರು.

ಬರಹ ಇಷ್ಟವಾಯಿತೆ?

 • 18

  Happy
 • 4

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !