ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಆರ್‌ಬಿ ನೇಮಕಾತಿ ಪರೀಕ್ಷೆ: ಡೇಟಾ ಇಂಟರ್‌ಪ್ರಿಟೇಶನ್

ಆರ್‌ಆರ್‌ಬಿ ನೇಮಕಾತಿ ಪರೀಕ್ಷೆ
Last Updated 22 ಜೂನ್ 2022, 19:30 IST
ಅಕ್ಷರ ಗಾತ್ರ

ಡೇಟಾ ಇಂಟರ್‌ಪ್ರಿಟೇಷನ್ ಅಥವಾ ಮಾಹಿತಿ ವ್ಯಾಖ್ಯಾನ ಎನ್ನುವುದು ಆರ್‌ಆರ್‌ಬಿ ಪರೀಕ್ಷೆಯಲ್ಲಿ ಪ್ರಮುಖ ವಿಷಯ. ಈ ವಿಷಯದ ಮೇಲೆ ಕೇಳುವ ಪ್ರಶ್ನೆಗಳ ಸ್ವರೂಪ, ಪರೀಕ್ಷಾ ಸಿದ್ಧತೆ ಕುರಿತು ಇಲ್ಲಿ ವಿವರಿಸಲಾಗಿದೆ.

ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ(ಆರ್‌ಆರ್‌ಬಿ) ವಿವಿಧ ಹುದ್ದೆಗಳಿಗಾಗಿ ನಡೆಯುವ ಪರೀಕ್ಷೆಗಳಲ್ಲಿರುವ ಪಠ್ಯಕ್ರಮಗಳಲ್ಲಿ ಡೇಟಾ ಇಂಟರ್‌ ಪ್ರಿಟೇಷನ್‌ (Data Interpretation) ಅಥವಾ ಮಾಹಿತಿ ವ್ಯಾಖ್ಯಾನ ಪ್ರಮುಖ ವಿಷಯವಾಗಿದೆ. ಆರ್‌ಆರ್‌ಬಿಯ ಸ್ಕೇಲ್ 2 ಮತ್ತು 3 ಹುದ್ದೆಗಳಿಗಾಗಿ ನಡೆಸುವ ಎರಡೂ ಪರೀಕ್ಷೆಗಳಲ್ಲೂ ಈ ವಿಷಯವಿದೆ.

ಇದೇ ರೀತಿ ಗುಣಾತ್ಮಕ ಪರಿಮಾಣ (Quantitative Aptitude) ವಿಭಾಗದಲ್ಲೂ ಮಾಹಿತಿ ವ್ಯಾಖ್ಯಾನ ಕುರಿತ ಹಲವು ಪ್ರಶ್ನೆಗಳಿರುತ್ತವೆ. ಎರಡೂ ಪರೀಕ್ಷೆಗಳಲ್ಲಿ ಈ ವಿಷಯದ ಕುರಿತು ಕೇಳುವ ಪ್ರಶ್ನೆಗಳಿಗೆ ನಿಖರವಾಗಿ ವಿಶ್ಲೇಷಿಸು ವುದು ಬಹಳ ಮುಖ್ಯ.

ಅಭ್ಯರ್ಥಿಗಳಿಗೆ ಮಾಹಿತಿಯು ವಿವಿಧ ಅಂಶಗಳೊಂದಿಗೆ ಹೇಗೆ ತಳಕು ಹಾಕಿಕೊಂಡಿರುತ್ತದೆ ಎಂಬುದನ್ನು ವಿವಿಧ ಉಪಕ್ರಮಗಳೊಂದಿಗೆ ವಿಶ್ಲೇಷಿಸುವ ಕೌಶಲ ತಿಳಿದಿರಬೇಕು. ನಿರ್ದಿಷ್ಟ ಅಭ್ಯಾಸ ಕ್ರಮ ಹಾಗೂ ಸರಿಯಾದ ತಂತ್ರಗಳನ್ನು ತಿಳಿದರೆ ಉತ್ತಮ ಅಂಕಗಳನ್ನು ಗಳಿಸಬಹುದು.

ಏನಿದು ಡೇಟಾ ಇಂಟರ್‌ಪ್ರಿಟೇಶನ್?

ವಿವಿಧ ಮೂಲಗಳಿಂದ ಪಡೆದ ಮಾಹಿತಿಯನ್ನು ನಿಖರವಾಗಿ ವಿಶ್ಲೇಷಿಸುವದೇ ಮಾಹಿತಿ ವ್ಯಾಖ್ಯಾನ ಅಥವಾ ಡೇಟಾ ಇಂಟರ್‌ಪ್ರಿಟೇಶನ್(ಡಿಐ). ಪಠ್ಯ, ಚಿತ್ರ, ಚಾರ್ಟ್ ಅಥವಾ ಆಲೇಖಗಳಲ್ಲಿನ ಮಾಹಿತಿಯನ್ನು ಪೂರಕ ಅಂಶಗಳೊಂದಿಗೆ ನಿಖರವಾಗಿ ಅರ್ಥೈಸಿಕೊಂಡು, ಅದನ್ನು ವಿವಿಧ ಆಯಾಮಗಳಲ್ಲಿ ವಿಶ್ಲೇಷಿಸುವುದು ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಮುಖ್ಯವಾಗಿರುತ್ತದೆ.

‘ಡಿಐ’ ಪ್ರಶ್ನೆಗಳ ಗುರಿ ಅಭ್ಯರ್ಥಿಗಳ ವಿಶ್ಲೇಷಣಾ ತ್ಮಕ ಮತ್ತು ಸಂಖ್ಯೆಗಳ ಕುರಿತ ಸಾಮರ್ಥ್ಯ ಪರೀಕ್ಷಿ ಸುವುದಾಗಿರುತ್ತದೆ. ಇದು ಬ್ಯಾಂಕ್ ಉದ್ಯೋಗಿಗೆ ಅಗತ್ಯವಾದ ಗುಣಮಟ್ಟವೆಂದು ಪರಿಗಣಿಸಲಾಗಿದೆ. ಈ ವಿಭಾಗದಲ್ಲಿ ಶೇಕಡಾ ವಾರು, ಲಾಭ ಮತ್ತು ನಷ್ಟ, ಸಮಯ ಮತ್ತು ದೂರ, ಸರಳ ಬಡ್ಡಿ, ಚಕ್ರಬಡ್ಡಿ, ಮಾಪನ, ಸಂಭವನೀಯತೆಯಂತಹ ಯಾವುದೇ ವಿಷಯದಿಂದ ಪ್ರಶ್ನೆಗಳನ್ನು ಕೇಳಬಹುದು. ಅಭ್ಯರ್ಥಿಗಳು ಈ ವಿಷಯಗಳ ಮೇಲೆ ಹಿಡಿತವಿದ್ದರೆ, ಪ್ಯಾರಾಗ್ರಾಫ್, ಬಾರ್ ರೇಖಾಚಿತ್ರ, ಚಾರ್ಟ್ ಅಥವಾ ಗ್ರಾಫ್‌ನಲ್ಲಿ ನೀಡಲಾದ ಮಾಹಿತಿ ಯನ್ನು ಹೊರತೆಗೆ ಯುವುದು ಮತ್ತು ವಿಶ್ಲೇಷಣೆ ಮಾಡುವುದು ಸುಲಭವಾಗುತ್ತದೆ.

‘ಡಿಐ’ ವಿಧಗಳು

ವಿವಿಧ ರೂಪಗಳಲ್ಲಿ ಡೇಟಾ ಇಂಟರ್‌ಪ್ರಿಟೇಷನ್ ಮಾಹಿತಿ ನೀಡಲಾಗುತ್ತದೆ. ಅವುಗಳು ಹೀಗಿವೆ.

ಪ್ಯಾರಾಗ್ರಾಫ್: ಈ ವಿಭಾಗದಲ್ಲಿ ಪಠ್ಯ ರೂಪದಲ್ಲಿ ಮಾಹಿತಿಯನ್ನು ನೀಡಲಾಗಿರುತ್ತದೆ.

ಪೈ ನಕ್ಷೆ : ಪೈ ನಕ್ಷೆಯು ಮಾಹಿತಿಯ ವೃತ್ತಾಕಾರದ ಪ್ರಾತಿನಿಧ್ಯವಾಗಿದೆ. ಒಂದೇ ಪ್ರಶ್ನೆಗೆ ಒಂದು ಅಥವಾ ಹೆಚ್ಚಿನ ಪೈ ಚಾರ್ಟ್‌ಗಳನ್ನು ನೀಡಬಹುದು.

ಕೋಷ್ಟಕ: ಇಲ್ಲಿ ಮಾಹಿತಿಯನ್ನು ಕೋಷ್ಟಕ ರೂಪದಲ್ಲಿ ಪ್ರತಿನಿಧಿಸಲಾಗುತ್ತದೆ. ಇದರಲ್ಲಿ ಎರಡು ವಿಧಗಳಿರುತ್ತವೆ. ಕೆಲವು ಕೋಷ್ಟಕಗಳಲ್ಲಿ ಎಲ್ಲಾ ಮಾಹಿತಿ ನೀಡಲಾಗಿರುತ್ತದೆ. ಇನ್ನು ಕೆಲವು ಕೋಷ್ಟಕಗಳಲ್ಲಿ ಮಾಹಿತಿ ಇರುವುದಿಲ್ಲ. ಇಲ್ಲಿ ಪ್ರಶ್ನೆಗಳಿಗೆ ಪರಿಹಾರ ಕಂಡುಹಿಡಿವ ಮೊದಲು ಕೋಷ್ಟಕದಲ್ಲಿಲ್ಲದ ಮೌಲ್ಯವನ್ನು ಕಂಡುಹಿಡಿದು ನಂತರ ಉತ್ತರಿಸಬೇಕಾಗುತ್ತದೆ.

ಸ್ತಂಭ ನಕ್ಷೆ: ಸ್ತಂಭನಕ್ಷೆಗಳಲ್ಲಿ ಮಾಹಿತಿಯನ್ನು ವಿವಿಧ ಛಾಯೆ ಅಥವಾ ಬಣ್ಣಗಳಿಂದ ಸ್ತಂಭ ರೇಖಾಚಿತ್ರದ ರೂಪದಲ್ಲಿ ಒದಗಿಸಲಾಗುತ್ತದೆ.

ರೇಖಾ ನಕ್ಷೆ: ರೇಖಾನಕ್ಷೆಗಳು ಬೆಳವಣಿಗೆ ಅಥವಾ ಕುಸಿತವನ್ನು ಸೂಚಿಸುತ್ತವೆ. ಪ್ರಶ್ನೆಗಳಿಗೆ ಉತ್ತರಿಸುವಾಗ ಮಾಹಿತಿಯನ್ನು ಅರ್ಥೈಸಲು ರೇಖೆಗಳನ್ನು ಮತ್ತು ಛೇಧಕಗಳನ್ನು ಅರ್ಥೈಸಿಕೊಳ್ಳುವುದು ಮುಖ್ಯ.

ಪ್ರಶ್ನೋತ್ತರ– ತಂತ್ರಗಳು

ಗಣಿತದ ಸೂತ್ರಗಳ ಹಿಡಿತ: ಮಾಹಿತಿ ವಿಶ್ಲೇಷಣಾ ಪ್ರಶ್ನೆಗಳು ಗಣಿತದ ಲೆಕ್ಕಾಚಾರಗಳ ರೂಪಗಳಾಗಿವೆ. ಇಲ್ಲಿನ ಪ್ರಶ್ನೆಗಳಿಗೆ ನಿಖರವಾಗಿ ಉತ್ತರಿಸುವಾಗ ಗಣಿತದ ವಿವಿಧ ಸೂತ್ರಗಳನ್ನು ಬಳಸಬೇಕಾಗುತ್ತದೆ. ಅದಕ್ಕಾಗಿ ಗಣಿತದ ಎಲ್ಲಾ ಸೂತ್ರಗಳ ಮೇಲೆ ಹಿಡಿತವಿರಬೇಕು.

ವೇಗ ಮತ್ತು ನಿಖರತೆ: ಗಣಿತದಲ್ಲಿ ಲೆಕ್ಕಾಚಾರ, ವೇಗ ಮತ್ತು ನಿಖರತೆಗಳು ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಇದಕ್ಕಾಗಿ ಅಭ್ಯರ್ಥಿಗಳು ಸಂಖ್ಯೆಗಳ ವರ್ಗಸಂಖ್ಯೆ, ವರ್ಗಮೂಲ, ಘನಸಂಖ್ಯೆ ಮತ್ತು ಘನಮೂಲಗಳನ್ನು ತಿಳಿದಿರಬೇಕು. ನಾಲ್ಕಂಕಿಯಿಂದ ನಾಲ್ಕಂಕಿ, ಐದಂಕಿಯಿಂದ ಐದಂಕಿ ಸಂಖ್ಯೆಗಳನ್ನು ವೇಗವಾಗಿ ಗುಣಿಸುವ ಮತ್ತು ಭಾಗಿಸುವುದನ್ನು ತಿಳಿದಿರಬೇಕು. ಇಲ್ಲಿ ಮಾನಸಿಕ ಲೆಕ್ಕಾಚಾರವೂ ಅನಿವಾರ್ಯ. ಇವುಗಳ ಸತತ ಅಭ್ಯಾಸವು ವೇಗ ಮತ್ತು ನಿಖರತೆಯನ್ನು ಸುಧಾರಿಸುತ್ತದೆ.

ಅಂದಾಜು ಗಣನೆ: ಮಾಹಿತಿ ವಿಶ್ಲೇಷಣೆಯಲ್ಲಿ ಬಹಳಷ್ಟು ಲೆಕ್ಕಾಚಾರಗಳು ಸರಾಸರಿ, ಭಿನ್ನರಾಶಿಗಳು, ಶೇಕಡಾಕ್ರಮ, ಅನುಪಾತಗಳು ಇತ್ಯಾದಿಗಳ ರೂಪದಲ್ಲಿರುತ್ತವೆ. ಅಂದಾಜು ಮಾಡುವಿಕೆಯು ಕಡಿಮೆ ಸಮಯದಲ್ಲಿ ಪ್ರಶ್ನೆಗೆ ಅಂದಾಜು ಉತ್ತರ ಪಡೆಯಲು ಸಹಾಯ ಮಾಡುತ್ತದೆ. ಪರಸ್ಪರ ಪರಿವರ್ತನೆಯ ತಂತ್ರಗಳು ಇಲ್ಲಿ ಬಹಳ ಮುಖ್ಯ. ಅಂದರೆ ಶೇಕಡಾವಾರು, ಭಿನ್ನರಾಶಿ ಮತ್ತು ಅನುಪಾತಗಳ ಪರಸ್ಪರ ಪರಿವರ್ತನೆಗಳ ಪರಿಣಾಮಕಾರಿ ಬಳಕೆಯು ವೇಗವಾಗಿ ಲೆಕ್ಕಾಚಾರ ಮಾಡಲು ನಮಗೆ ಸಹಾಯ ಮಾಡುತ್ತದೆ.

ಪರಿಣಾಮಕಾರಿ ವಿಶ್ಲೇಷಣೆ: ಕೆಲವು ಪ್ರಶ್ನೆಗಳು ಧೀರ್ಘವಾದ ಲೆಕ್ಕಾಚಾರಗಳನ್ನು ಒಳಗೊಂಡಿರುವುದಿಲ್ಲ. ಆದರೆ ಪರಿಣಾಮಕಾರಿಯಾದ ಮಾಹಿತಿ ವಿಶ್ಲೇಷಣೆಯನ್ನು ಬಯಸುತ್ತವೆ. ಅದಕ್ಕಾಗಿ ಪ್ರಶ್ನೆಯನ್ನು ಎಚ್ಚರಿಕೆಯಿಂದ ಮತ್ತು ಸಮಗ್ರವಾಗಿ ಓದಿ. ಪ್ರಶ್ನೆಗೆ ತಕ್ಕಂತೆ ಅಚ್ಚುಕಟ್ಟಾಗಿ ಮಾಹಿತಿಯನ್ನು ವಿಶ್ಲೇಷಣೆ ಮಾಡಿ.

ನಿಖರತೆ ಮುಖ್ಯ: ಬ್ಯಾಂಕಿಂಗ್‌ ಪರೀಕ್ಷೆಗಳಲ್ಲಿ ನಿಖರತೆಗೆ ಹೆಚ್ಚು ಮಹತ್ವವಿದೆ. ನಿಮ್ಮ ಉತ್ತರವು ನಿಖರವಾಗಿದ್ದಷ್ಟು ಉತ್ತಮ ಅಂಕಗಳು ಲಭಿಸುತ್ತವೆ. ಉತ್ತರಗಳಲ್ಲಿ ಮೀಟರ್, ಕೆಜಿ, ಸೆಕೆಂಡು, ಕಿಮೀ/ಗಂಟೆ ಇಂತಹ ನಿಖರವಾದ ಏಕಮಾನಗಳಿರಲಿ. ಅಭ್ಯರ್ಥಿಗಳು ವೇಗದ ಜೊತೆಗೆ, ಬುದ್ಧಿವಂತಿಕೆಯಿಂದ ಉತ್ತರಿಸಬೇಕು.

ಸ್ಪಷ್ಟತೆ ಇರಲಿ: ಡೇಟಾ ಇಂಟರ್‌ಪ್ರಿಟೇಶನ್‌ನಲ್ಲಿ, ನೀಡಿದ ದತ್ತಾಂಶದಿಂದ ಸ್ಪಷ್ಟವಾದ ಮಾಹಿತಿ ವಿಶ್ಲೇಷಣೆಗೆ ಹೆಚ್ಚು ಆದ್ಯತೆ ಇರುತ್ತದೆ. ಚಾರ್ಟ್, ಕೋಷ್ಟಕ, ನಕ್ಷೆ ಅಥವಾ ಗ್ರಾಫ್‌ನಿಂದ ಮಾಹಿತಿ ಸಂಗ್ರಹಿಸುವಾಗ ಸ್ಪಷ್ಟತೆ ಇರಲಿ. ಸಂಖ್ಯೆಗಳನ್ನು ನಕಲು ಮಾಡುವಾಗ ಈ ತಪ್ಪುಗಳೂ ನುಸುಳದಂತೆ ಎಚ್ಚರವಹಿಸಿ. ಒಂದು ಸಣ್ಣ ತಪ್ಪು ಇಡೀ ಲೆಕ್ಕಾಚಾರವನ್ನೇ ಬುಡಮೇಲು ಮಾಡುತ್ತದೆ.

ಸಮಯದೊಂದಿಗೆ ಅಭ್ಯಾಸ : 45 ನಿಮಿಷಗಳಲ್ಲಿ 40 ಪ್ರಶ್ನೆಗಳಿಗೆ ಉತ್ತರಿಸಬೇಕಾದ್ದರಿಂದ ಸಮಯದೊಂದಿಗೆ ಉತ್ತರಿಸುವ ಕೌಶಲ ಬೆಳೆಸಿಕೊಳ್ಳುವುದು ಮುಖ್ಯ. ಇದಕ್ಕಾಗಿ ವಿವಿಧ ಪುಸ್ತಕಗಳು ಮತ್ತು ಆನ್‌ಲೈನ್ ಮೂಲಗಳಿಂದ ವಿವಿಧ ರೀತಿಯ ಪ್ರಶ್ನೆಗಳನ್ನು ಅಭ್ಯಾಸ ಮಾಡಿ.

(ಪ್ರೌಢಶಾಲಾ ಶಿಕ್ಷಕ, ಸ್ಪರ್ಧಾತ್ಮಕ ಪರೀಕ್ಷೆ ತರಬೇತುದಾರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT