ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಐಚ್ಛಿಕ ಕನ್ನಡ ಕಲಿತರೆ ಪ್ರಯೋಜನವೇನು?

Published 20 ನವೆಂಬರ್ 2023, 0:15 IST
Last Updated 20 ನವೆಂಬರ್ 2023, 0:15 IST
ಅಕ್ಷರ ಗಾತ್ರ

1. ಎಂ.ಎಸ್ಸಿ (ಕೃಷಿ ವಿಸ್ತರಣೆ) ಕ್ಷೇತ್ರದಲ್ಲಿ ವೃತ್ತಿಯ ಅವಕಾಶಗಳು ಯಾವುವು?  ಸ್ವಂತ ಉದ್ಯಮ
ಪ್ರಾರಂಭಿಸಬೇಕು ಎನ್ನುವ ಆಕಾಂಕ್ಷಿಗಳಿಗೆ ಈ ಪದವಿ ಹೇಗೆ ಸಹಕಾರಿ? ದಯವಿಟ್ಟು ತಿಳಿಸಿ.

ಹೆಸರು, ಊರು ತಿಳಿಸಿಲ್ಲ.
ಕೃಷಿ ವಿಸ್ತರಣೆ ಕಾರ್ಯಕ್ರಮಗಳಿಂದ, ವೈಜ್ಞಾನಿಕ ಮತ್ತು ನೂತನ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಮತ್ತು ಗ್ರಾಮೀಣ ಸಮುದಾಯಗಳಿಗೆ, ಅಗತ್ಯ  ಮಾಹಿತಿ, ಜ್ಞಾನ ಮತ್ತು ತಂತ್ರಜ್ಞಾನ  ಪರಿಚಯಿಸಿ, ಕೃಷಿ ಉತ್ಪಾದನೆ  ಹೆಚ್ಚಿಸಬಹುದು. ಈ ರೀತಿ ರೈತರ ದೃಷ್ಟಿಕೋನವನ್ನು ಆಧುನೀಕರಿಸಿ, ಅವರನ್ನು ಹೆಚ್ಚು ಉದ್ಯಮಶೀಲರನ್ನಾಗಿ ಮಾಡಬಹುದು. ಆದ್ದರಿಂದ, ಕೃಷಿ ಅವಲಂಬಿತ ದೇಶದಲ್ಲಿ, ಕೃಷಿ ಪದವೀಧರರಿಗೆ ಮತ್ತು ತಂತ್ರಜ್ಞರಿಗೆ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಬೇಡಿಕೆಯನ್ನು ನಿರೀಕ್ಷಿಸಬಹುದು.


ಎಂ.ಎಸ್ಸಿ ಕೋರ್ಸ್ ನಂತರ ಸರ್ಕಾರದ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಹೈನುಗಾರಿಕೆ, ರೇಷ್ಮೆ, ನೀರಾವರಿ, ಪಶುಸಂಗೋಪನೆ  ಇಲಾಖೆಗಳಲ್ಲಿ ವೃತ್ತಿಯನ್ನು ಅರಸಬಹುದು. ಬೆಳೆಯುತ್ತಿರುವ ಜನಸಂಖ್ಯೆ, ಹೆಚ್ಚುತ್ತಿರುವ ನಗರೀಕರಣ, ಬದಲಾಗುತ್ತಿರುವ ಜೀವನ ಶೈಲಿ ಇತ್ಯಾದಿ ಕಾರಣಗಳಿಂದ ಕೃಷಿ ಸಂಬಂಧಿತ ಆಹಾರ ಸಂಸ್ಕರಣಾ ಕ್ಷೇತ್ರ, ಅಭಿವೃದ್ಧಿಯ ಪಥದಲ್ಲಿದೆ. ಕಚ್ಛಾ ಧಾನ್ಯಗಳು ಮತ್ತು ಇನ್ನಿತರ ಆಹಾರ ಪದಾರ್ಥಗಳ ಸಂಗ್ರಹಣೆ, ಶುದ್ಧೀಕರಣ, ಸಂಸ್ಕರಣೆ, ಸುರಕ್ಷತೆ ಮತ್ತು ಸೂಕ್ತ ಪ್ಯಾಕಿಂಗ್ ನಂತರ ಬಳಕೆಗೆ ಯೋಗ್ಯ ರೀತಿಯಲ್ಲಿ ಸಿದ್ಧ‍‍ಪಡಿಸುವ ಕ್ಷೇತ್ರಗಳಿಗೆ, ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದ್ದು ಸ್ವಂತ ಉದ್ದಿಮೆಗೆ ವಿಪುಲವಾದ ಅವಕಾಶಗಳಿವೆ. ಖಾಸಗಿ ಕ್ಷೇತ್ರದ ಕೃಷಿ ಮತ್ತು ಆಹಾರ ಸಂಬಂಧಿತ ಸಂಸ್ಥೆಗಳಲ್ಲೂ, ವೃತ್ತಿಯ ಅವಕಾಶಗಳಿವೆ ಎನ್ನುವುದು ನಿಮ್ಮ ಗಮನದಲ್ಲಿರಲಿ. ಇದಲ್ಲದೆ, ನಿಮಗೆ ಆಸಕ್ತಿಯಿದ್ದಲ್ಲಿ, ಯುಪಿಎಸ್‌ಸಿ/ಕೆಪಿಎಸ್‌ಸಿ ಮೂಲಕ ಸರ್ಕಾರದ ಉನ್ನತ ಹುದ್ದೆಗಳನ್ನು ಪಡೆದು, ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆಯನ್ನು ನೀಡಬಹುದು. ಹಾಗೂ, ನೀವು ಪಡೆಯುವ ಜ್ಞಾನ, ಅನುಭವ ಮತ್ತು ಕೌಶಲಗಳ ಸದುಪಯೋಗದಿಂದ ಸ್ವಂತ ಕೃಷಿ ಆರಂಭಿಸಿ, ಪ್ರಯೋಗಶೀಲ ರೈತರಾಗಿ, ನಾಡಿನ ಇನ್ನಿತರ ರೈತರಿಗೂ ಮಾದರಿಯಾಗಬಹುದು.


ಹಾಗಾಗಿ, ಎಂ.ಎಸ್ಸಿ (ಕೃಷಿ ವಿಸ್ತರಣೆ) ಕೋರ್ಸ್ ನಂತರ ಭವಿಷ್ಯವನ್ನು ರೂಪಿಸಿಕೊಳ್ಳಲು ಹಲವಾರು ಅವಕಾಶಗಳಿವೆ. ನಿಮ್ಮ ಆಸಕ್ತಿ, ಅಭಿರುಚಿಯಂತೆ ವೃತ್ತಿಯೋಜನೆಯನ್ನು ಮಾಡಿ, ಅದರಂತೆ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.

ವೃತ್ತಿಯೋಜನೆಯ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://youtu.be/MHnPg_sp6E0

ಪ್ರ

2. ಐಚ್ಛಿಕ ಕನ್ನಡ ಕೋರ್ಸ್‌ ಮಾಡುವುದರಿಂದ ಏನು ಪ್ರಯೋಜನವಿದೆ? ಮತ್ತು ಇಂಗ್ಲೀಷ್ ಕಲಿಯುವುದು ಹೇಗೆ?

ಹೆಸರು, ಊರು ತಿಳಿಸಿಲ್ಲ.
ಕನ್ನಡ ಭಾಷೆಯನ್ನು ಕಲಿಯುವ ಆಸಕ್ತಿಯಿದ್ದರೆ, ಉನ್ನತ ಶಿಕ್ಷಣವನ್ನು ಮುಂದುವರೆಸಬಹುದು. ಹಾಗೂ, ಶಿಕ್ಷಣದ ನಂತರದ ಬದುಕಿನ ಕನಸುಗಳೇನು ಎನ್ನುವುದರ ಬಗ್ಗೆ
ಸ್ಪಷ್ಟತೆಯಿರಬೇಕು. ಆ ಕನಸುಗಳನ್ನು ನನಸಾಗಿಸಲು ಸೂಕ್ತವಾದ ವೃತ್ತಿಯ ಬಗ್ಗೆ ಮೊದಲೇ ನಿಶ್ಚಯಿಸಬೇಕು. ಏಕೆಂದರೆ, ಯಶಸ್ಸಿನ ಹಾದಿಯಲ್ಲಿ ವೈಯಕ್ತಿಕ ಬದುಕಿನ ಕನಸುಗಳೇ ಪ್ರೇರಣೆ.
ಶಿಕ್ಷಣದ ನಂತರ, ಪ್ರಿಂಟ್, ಎಲೆಕ್ಟ್ರಾನಿಕ್‌ ಮತ್ತು ಡಿಜಿಟಲ್ ಸೇರಿದಂತೆ ಮಾಧ್ಯಮಗಳು, ವಿಷಯಾಭಿವೃದ್ಧಿ, ಪ್ರಕಾಶನ ಸಂಸ್ಥೆಗಳು, ಚಿತ್ರೋಧ್ಯಮ, ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ಇ-ಕಾಮರ್ಸ್, ಕೋಚಿಂಗ್ ತರಗತಿಗಳು, ಶಿಕ್ಷಣ ಸೇರಿದಂತೆ ಅನೇಕ ವಲಯಗಳಲ್ಲಿ ವೃತ್ತಿಯ ಅವಕಾಶಗಳಿವೆ.
ಭಾಷೆಯ ತಜ್ಞತೆಯಿದ್ದರೆ ಮನೆಯಿಂದಲೇ ಮಾಡಬಹುದಾದ ವಿಷಯಾಭಿವೃದ್ಧಿ, ಅನುವಾದ, ಸಬ್‌ಟೈಟಲ್ಸ್, ಟ್ರಾನ್ಸ್ಕ್ರಿಪ್ಷನ್‌ ಇತ್ಯಾದಿ ಅವಕಾಶಗಳವೂ ಇವೆ.
ಇಂಗ್ಲಿಷ್ ಕಲಿಯುವಿಕೆಗೆ ಸಹಾಯವಾಗಬಹುದಾದ ಈ ವಿಡಿಯೊ ವೀಕ್ಷಿಸಿ: https://youtu.be/NoFcIQAFDCA

ಪ್ರ

3. ನನ್ನ ಮಗಳು ಬಿ.ಎಸ್ಸಿ (ಮೈಕ್ರೊಬಯಾಲಜಿ) ಮುಗಿಸಿ, ಎಂ.ಎಸ್ಸಿ (ಮೈಕ್ರೊಬಯಾಲಜಿ) ಸೇರಿದ್ದಾಳೆ. ಮುಂದಿನ ಉದ್ಯೋಗಾವಕಾಶಗಳ
ಬಗ್ಗೆ ತಿಳಿಸಿ. ಓದಿರುವ ಯಾವ ವಿಷಯಗಳಲ್ಲಿ ಸ್ವಂತ ಉದ್ಯೋಗ ಮಾಡಬಹುದು. ಯಾವ ವಿಷಯದ ಬಗ್ಗೆ ಕಂಪ್ಯೂಟರ್ ಕೋರ್ಸ್ ಮಾಡಿದರೆ ಅನುಕೂಲವಾಗುತ್ತದೆ? ದಯವಿಟ್ಟು ತಿಳಿಸಿ.

ನಿಂಗರಾಜು, ಮೈಸೂರು.
ಎಂ.ಎಸ್ಸಿ ನಂತರ ಬಯೋಮೆಡಿಕಲ್ ಸೈಂಟಿಸ್ಟ್, ಫಾರ್ಮಾಕಾಲಜಿಸ್ಟ್, ರಿಸರ್ಚ್ ಅಸೋಸಿಯೇಟ್, ಮೈಕ್ರೊಬಯಾಲಜಿಸ್ಟ್, ಲ್ಯಾಬೊರೇಟರಿ ಮ್ಯಾನೇಜರ್,
ಇಕಾಲಜಿಸ್ಟ್, ಆಹಾರ ತಂತ್ರಜ್ಞ, ಆಹಾರ ಗುಣಮಟ್ಟ ನಿಯಂತ್ರಕ, ಉಪನ್ಯಾಸಕ ಮುಂತಾದ ಹುದ್ದೆಗಳನ್ನು ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಫಾರ್ಮಾ ಉದ್ದಿಮೆಗಳು, ಸಂಶೋಧನಾ ಸಂಸ್ಥೆಗಳು, ಆಹಾರ ಪದಾರ್ಥ ಮತ್ತು ಪಾನೀಯ ತಯಾರಿಕಾ ಉದ್ದಿಮೆಗಳು, ಆಹಾರ ಸಂಬಂಧಿತ ಉದ್ದಿಮೆಗಳು, ಸಾವಯವ ಉದ್ದಿಮೆಗಳು,
ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಆಹಾರ ಪರೀಕ್ಷಾ ಪ್ರಯೋಗಾಲಯಗಳು ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ವಿಪುಲವಾದ ಉದ್ಯೋಗಾವಕಾಶಗಳಿವೆ. ಈ ವೃತ್ತಿಗಳಲ್ಲಿ ಯಶಸ್ಸನ್ನು ಗಳಿಸಲು ಪರಿಣಾಮಕಾರಿಯಾಗಿ ಎಂಎಸ್ (ಆಫೀಸ್) ಬಳಸುವ ಸಾಮರ್ಥ್ಯವಿದ್ದರೆ ಸಾಕಾಗುತ್ತದೆ. ಸಂಶೋಧನೆ ಮಾಡಬೇಕಾದ ಸಂದರ್ಭಗಳಲ್ಲಿ, ಎಸ್‌ಪಿಎಸ್‌ಎಸ್ ಸಾಫ್ಟ್‌ವೇರ್‌ ಉಪಯುಕ್ತ. ಈ ವೈವಿಧ್ಯಮಯ ಕ್ಷೇತ್ರದಲ್ಲಿ ಅಭಿರುಚಿ, ಆಸಕ್ತಿ, ಕೌಶಲಗಳು ಮತ್ತು ಅನುಭವದ ಆಧಾರದ ಮೇಲೆ ಸ್ವಯಂ-ಉದ್ಯೋಗ ಅಥವಾ ಸ್ವಂತ ಉದ್ದಿಮೆಯನ್ನು ಆರಂಭಿಸಬಹುದು. ಹಾಗೂ, ಈ ನಿರ್ಧಾರ ತೆಗೆದುಕೊಳ್ಳುವ ಮುಂಚೆ, ಗ್ರಾಹಕರ ಆದ್ಯತೆಗಳು ಮತ್ತು ಮಾರುಕಟ್ಟೆಯ ಬೇಡಿಕೆ ಮತ್ತು ಪೂರೈಕೆ ಮುಂತಾದ ವಿಷಯಗಳ ಕುರಿತು ಸಂಶೋಧನೆ ಮಾಡುವುದು ಸೂಕ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT