ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಎಂಬಿಎ(ಉದ್ಯಮಶೀಲತೆ)ಗೆ ಹೇಗಿದೆ ಬೇಡಿಕೆ?

Last Updated 12 ಸೆಪ್ಟೆಂಬರ್ 2022, 6:09 IST
ಅಕ್ಷರ ಗಾತ್ರ

1. ನಾನು ಬಿಎ ಪದವಿಯ ವಿದ್ಯಾರ್ಥಿ. ಪದವಿಯಲ್ಲಿ ಐಚ್ಛಿಕ ವಿಷಯಗಳಾದ ಪತ್ರಿಕೋದ್ಯಮ ಮತ್ತು ಸಮೂಹ ಸಂಹವನ ಹಾಗೂ ಅಪರಾಧ ಶಾಸ್ತ್ರ ಮತ್ತು ವಿಧಿ ವಿಜ್ಞಾನ ಓದುತ್ತಿದ್ದೇನೆ. ಇವೆರಡರಲ್ಲಿ ಎಂ.ಎ ಮಾಡಲು ಯಾವುದು ಉತ್ತಮ ವೃತ್ತಿಪರ ಕೋರ್ಸ್ ಆಗಿದೆ ಎಂದು ಸಲಹೆ ನೀಡಿ.

ಪವನಕುಮಾರ್ ಚನ್ನವರ, ಚಿಕ್ಕೋಡಿ.

ನೀವು ಓದುತ್ತಿರುವ ವಿಷಯಗಳು ಬೇಡಿಕೆಯಲ್ಲಿವೆ ಹಾಗೂ ವೃತ್ತಿಜೀವನವನ್ನು ಯಶಸ್ವಿಯಾಗಿ ರೂಪಿಸಿಕೊಳ್ಳಬಹುದಾದ ಕ್ಷೇತ್ರಗಳು. ಆದ್ದರಿಂದ, ನಿಮಗೆ ಹೆಚ್ಚಿನ ಆಸಕ್ತಿ ಮತ್ತು ಒಲವಿರುವ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಡಬಹುದು.

2. ನಾನು ಬಿಕಾಂ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿ. ಮುಂದೆ ಎಂಬಿಎ (ಎಂಟರ್‌ಪ್ರಿನರ್‌ಶಿಪ್) ಮಾಡುವ ಆಸೆ ಇದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ, ಉದ್ಯೋಗಾವಕಾಶಗಳು ಹಾಗೂ ಕಾಲೇಜಿನ ವಿವರ ತಿಳಿಸಿ.

ಊರು, ಹೆಸರು ತಿಳಿಸಿಲ್ಲ.

ಎಂಬಿಎ-ಉದ್ಯಮಶೀಲತೆ (ಎಂಟರ್‌ಪ್ರಿನರ್‌ಶಿಪ್) ಬೇಡಿಕೆಯಲ್ಲಿರುವ ಕ್ಷೇತ್ರ. ಈ ಕೋರ್ಸ್ ಮಾಡುವುದರಿಂದ ಉದ್ಯಮ ಸ್ಥಾಪಿಸಲು ಬೇಕಾಗುವ ಜ್ಞಾನ, ಕೌಶಲಗಳ ಅಭಿವೃದ್ಧಿ ಮತ್ತು ಪ್ರಕ್ರಿಯೆಯ ಅರಿವಾಗುತ್ತದೆ. ಈ ಕೋರ್ಸ್‌ ನಲ್ಲಿ ಸಣ್ಣ ವ್ಯಾಪಾರ ನಿರ್ವಹಣೆ, ಉದಯೋನ್ಮುಖ ಮಾರುಕಟ್ಟೆಗಳ ನಿರ್ವಹಣೆ, ರೀಟೇಲ್ ಮತ್ತು ಫ್ರಾಂಚೈಸಿಂಗ್ ಅವಕಾಶಗಳು, ಸಾಮಾಜಿಕ ಉದ್ಯಮಶೀಲತೆ, ಉದ್ಯಮದಲ್ಲಿ ನಾವೀನ್ಯ ಮತ್ತು ಸೃಜನಶೀಲತೆ, ಹಣಕಾಸು, ಬಂಡವಾಳ ಹೂಡಿಕೆ, ಮಾನವ ಸಂಪನ್ಮೂಲದ ನಿರ್ವಹಣೆ ಮುಂತಾದ ವಿಷಯಗಳನ್ನು ನಿಮ್ಮ ಆಸಕ್ತಿಯಂತೆ ಆರಿಸಿಕೊಳ್ಳಬಹುದು. ಈ ಕೋರ್ಸ್ ನಂತರ ನವೋದ್ಯಮ, ಸಣ್ಣ ಮತ್ತು ಮದ್ಯಮ ಗಾತ್ರದ ಉದ್ಯಮಗಳಲ್ಲಿ ಸೇವೆ ಸಲ್ಲಿಸಿ, ಅನುಭವದ ನಂತರ ಸ್ವಂತ ಉದ್ಯಮವನ್ನು ಸ್ಥಾಪಿಸಬಹುದು. ಎಂಟರ್‌ಪ್ರಿನರ್‌ಶಿಪ್ ಇನ್‌ಸ್ಟಿಟ್ಯೂಟ್ ಅಫ್ ಇಂಡಿಯ, ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಮ್ಯಾನೇಜ್‌ಮೆಂಟ್, ಮುಂತಾದ ಸಂಸ್ಥೆಗಳಲ್ಲಿ ಈ ಕೋರ್ಸ್ ಮಾಡಬಹುದು. ಎಂಬಿಎ ಕೋರ್ಸ್‌ನಲ್ಲಿ ಕಲಿಸುವ ತತ್ವಗಳು, ಸೂತ್ರಗಳು ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಯಶಸ್ವಿಯಾಗಿ ರೂಪಿಸಲು ಉಪಯುಕ್ತ.

ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/c/EducationalExpertManagementCareerConsultant

3. ನಾನು ಪ್ಯಾರಾ ಮೆಡಿಕಲ್ (ಡಿಎಮ್‌ಎಲ್‌ಟಿ) ಮಾಡುತ್ತಿದ್ದೀನಿ ಮತ್ತು ಫೊರೆನ್ಸಿಕ್ ಮಾಡುವ ಆಸೆ ಇದೆ. ನಾನು ಈ ಕೋರ್ಸ್ ಹೇಗೆ ಮಾಡಬಹುದು? ಫೊರೆನ್ಸಿಕ್ ಕೋರ್ಸ್ ಬಗ್ಗೆ ಮಾಹಿತಿ ನೀಡಿ. ಆದರೆ, ನಮ್ಮ ಮನೆಯಲ್ಲಿ ತುಂಬಾ ತೊಂದರೆಗಳಿವೆ; ನಮಗೆ ಖಾಸಗಿ ಕಾಲೇಜು ಫೀಸ್ ಕಟ್ಟಲು ಆಗುವುದಿಲ್ಲ; ಸರ್ಕಾರಿ ಕಾಲೇಜಿಗೆ ಸೇರಬಹುದಾ?

ಊರು, ಹೆಸರು ತಿಳಿಸಿಲ್ಲ.

ನೀವು ಡಿಎಂಎಲ್‌ಟಿ ಕೋರ್ಸ್ ನಂತರ ನೇರವಾಗಿ ಕೆಲಸಕ್ಕೆ ಸೇರಬಹುದು ಅಥವಾ ನಿಮ್ಮ ಇಚ್ಛೆಯಂತೆ ಬಿ.ಎಸ್ಸಿ ವಿಧಿ ವಿಜ್ಞಾನ (ಫೊರೆನ್ಸಿಕ್ ಸೈನ್ಸ್) ಕೋರ್ಸ್ ಮಾಡಬಹುದು.

ವಿಧಿ ವಿಜ್ಞಾನ ಬೇಡಿಕೆಯಲ್ಲಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ವೃತ್ತಿಯ ಯಶಸ್ಸಿಗೆ ಬೇಕಾಗುವ ಕೌಶಲಗಳೆಂದರೆ ತಾರ್ಕಿಕ ಯೋಚನಾ ಶಕ್ತಿ, ವಿಶ್ಲೇಷಣಾ ಮತ್ತು ಸಂಶೋಧನಾ ಕೌಶಲ, ವಿವರಗಳ ಕಡೆ ಗಮನ, ಒತ್ತಡದಲ್ಲಿ ಕೆಲಸ ಮಾಡುವ ಸಾಮರ್ಥ್ಯ, ಸಮಯದ ನಿರ್ವಹಣೆ ಇತ್ಯಾದಿ. ವಿದ್ಯಾಭ್ಯಾಸದ ನಂತರ ಸಂಶೋಧನಾ ಸಂಸ್ಥೆಗಳು, ಖಾಸಗಿ ಮತ್ತು ಸರ್ಕಾರಿ ಪತ್ತೇದಾರಿ ಸಂಸ್ಥೆಗಳು, ಪೊಲೀಸ್ ಇಲಾಖೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಕಾಲೇಜುಗಳಲ್ಲಿ ವೃತ್ತಿಯನ್ನು ಅರಸಬಹುದು. ಬಿ.ಎಸ್ಸಿ (ವಿಧಿವಿಜ್ಞಾನ) ಕೋರ್ಸ್ ಮಾಡಬಹುದಾದ ಕಾಲೇಜುಗಳ ವಿವರಕ್ಕಾಗಿ ಗಮನಿಸಿ: https://collegedunia.com/bsc/forensic-science/karnataka-colleges

4. ನಾನು ಮೈಸೂರು ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಬಿಎ ಪ್ರವೇಶ ಪಡೆದಿರುತ್ತೇನೆ. ವಿವಿಗಳಲ್ಲಿ ಚಿನ್ನದ ಪದಕ ಮತ್ತು ನಗದು ಬಹುಮಾನ ಪಡೆಯುವುದು ಹೇಗೆ?

ರಾಜ್, ಮೈಸೂರು.

ಅತ್ಯುತ್ತಮ ಸಾಧನೆ ಮಾಡುವ ಮೈಸೂರು ವಿಶ್ವವಿದ್ಯಾಲಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಿಯಮಾವಳಿಗಳ ಅನುಸಾರ ಚಿನ್ನದ ಪದಕವನ್ನು ನೀಡಿ ಪ್ರೋತ್ಸಾಹಿಸುವ ಮತ್ತು ಗೌರವಿಸುವ ಸಂಪ್ರದಾಯವಿದೆ. ಹೆಚ್ಚಿನ ವಿವರಗಳಿಗೆ ಗಮನಿಸಿ: https://uni-mysore.ac.in/sites/default/files/content/provisional_list_of_102nd_ug_gold_medal.pdf

5. ನನ್ನ ಮಗಳು ದ್ವಿತೀಯ ಪಿಯುಸಿ ಮಾಡುತ್ತಿದ್ದಾಳೆ. ಮುಂದೆ, ಕಂಪ್ಯೂಟರ್ ಸೈನ್ಸ್ ಮಾಡಬೇಕೆಂದಿದ್ದಾಳೆ. ಅದಕ್ಕೆ ಭವಿಷ್ಯ ಇದೆಯಾ? ಸರ್ಕಾರಿ ನೌಕರಿ ಸಿಗುತ್ತದೆಯೇ?

ವೇದ ಪಾಟೀಲ್, ಯಾದಗಿರಿ.

ಕಂಪ್ಯೂಟರ್ ಸೈನ್ಸ್ ಬೇಡಿಕೆಯಲ್ಲಿರುವ ಕ್ಷೇತ್ರ. ಪಿಯುಸಿ ನಂತರ ಬಿಇ/ಬಿಟೆಕ್ (ಕಂಪ್ಯೂಟರ್ ಸೈನ್ಸ್) ಅಥವಾ ಬಿಸಿಎ ಮಾಡಿ, ಖಾಸಗಿ ಕ್ಷೇತ್ರದಲ್ಲಿನ ಆಕರ್ಷಕ ಉದ್ಯೋಗಾವಕಾಶಗಳನ್ನು ಅರಸಬಹುದು. ಸರ್ಕಾರಿ ನೌಕರಿಯನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಪಡೆಯಬಹುದು.

6. ನಾನು ಬಿಇ (ಮೆಕ್ಯಾನಿಕಲ್ ಎಂಜಿನಿಯರಿಂಗ್) ಪದವೀಧರ. ಮುಂದೆ, ನಾವು ಟಿಇಟಿ ಪರೀಕ್ಷೆಗೆ ಅರ್ಹರೇ? ನಾವು ಯಾವ ವಿಷಯದಲ್ಲಿ ಭೋದನಾರ್ಹರು? ಈ ಬಗ್ಗೆ ಮಾಹಿತಿ ತಿಳಿಸಿ. ಧನ್ಯವಾದಗಳು.

ಊರು, ಹೆಸರು ತಿಳಿಸಿಲ್ಲ.

ನಮಗಿರುವ ಮಾಹಿತಿಯಂತೆ ಎಂಜಿನಿಯರಿಂಗ್ ಪದವೀಧರರು ಟಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶಾಲೆಗಳಲ್ಲಿ 6 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಭೋಧಿಸಬಹುದು. ಆದರೆ, ಇದೇ ವರ್ಷದ ನವೆಂಬರ್ 6ನೇ ದಿನಾಂಕ ನಡೆಯಲಿರುವ ಟಿಇಟಿ ಪರೀಕ್ಷೆಯ ಅಧಿಸೂಚನೆಯಲ್ಲಿ ಎಂಜಿನಿಯರಿಂಗ್ ಪದವೀಧರರ ಅರ್ಹತೆಯ ಬಗ್ಗೆ ಸೂಚನೆಯಿಲ್ಲ. ಹಾಗಾಗಿ, ಖಚಿತವಾದ ಮಾಹಿತಿ ಮತ್ತು ಇನ್ನಿತರ ನಿಯಮಾವಳಿಗಾಗಿ ಗಮನಿಸಿ:
https://schooleducation.kar.nic.in/indexKn.html

ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು shikshana@prajavani.co.in ಗೆ ಕಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT