ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಮಕ್ಕಳ ರಕ್ಷಣೆ ಎಲ್ಲರ ಹೊಣೆ!

Last Updated 24 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಅಂದು ಆ ತಾಯಿಯ ಗಂಟಲಲ್ಲಿ ದುಃಖ ಮಡುಗಟ್ಟಿತ್ತು. ಕಣ್ಣೀರು ಕಣ್ಣಿನಿಂದ ಜಾರಿ ಕೆನ್ನೆಗೆ ಇಳಿಯದಂತೆ ಅವುಡುಗಚ್ಚಿ ಹಿಡಿದಿದ್ದಳು. ಅದೇ ತಾನೇ ತನ್ನ ಎಂಟು ವರ್ಷದ ಮಗುವನ್ನು ಸ್ಲೋ ಲರ್ನರ್ ಎಂದು ಶಾಲೆಯೊಂದರಲ್ಲಿ ದಾಖಲಾತಿ ನಿರಾಕರಿಸಿದ್ದರು. ಏನು ಮಾಡಬೇಕು, ಎಲ್ಲಿ ಹೋಗಬೇಕು ಎಲ್ಲಾ ಗೊಂದಲದ ಗೂಡಾದ ಅವಳಿಗೆ ಅದೇ ಶಾಲೆಯ ಶಿಕ್ಷಕರೊಬ್ಬರು ಸಲಹೆ ಮಾಡಿ ಸಿಂಚನಾ ಫ಼ೌಂಡೇಷನ್’ನ ದಾರಿ ಹೇಳಿದ್ದರು. ತುಂಬಾ ಕಲಿತವಳಲ್ಲದ ಆಕೆ ಅವರಿವರನ್ನು ಕೇಳಿ ಬಂದಿದ್ದಳು.

ಇದೆಲ್ಲವೂ ಮೂರು ವರ್ಷ ಹಿಂದಿನ ಮಾತು. ಇದೀಗ ಆ ತಾಯಿಯನ್ನ ಮಾತಾಡಿಸಬೇಕು ನೀವು. ಒಂದೇ ಉಸುರಿಗೆ ತನ್ನ ಮಗುವಿನ ತುಂಟತನವನ್ನ, ಅವನು ಹೇಳುವ ಪದ್ಯಗಳನ್ನ, ಬರೆದ ಚಿತ್ರಗಳನ್ನ, ಬಿಡಿಸಿದ ಲೆಕ್ಕಗಳನ್ನ, ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದನ್ನ, ಹೀಗೇ.. ಆಕೆಯ ಮಗನ ಇಡೀ ಅಷ್ಟೂ ಪ್ರವರಗಳನ್ನ ಹೇಳಿಬಿಡುತ್ತಾರೆ. ಆಗೆಲ್ಲಾ ನಮಗೆ ಆ ಪುಟ್ಟ ಮಗುವಿನ ಕಲಿಕಾ ಪ್ರಗತಿಯ ಜೊತೆಗೆ ಆ ತಾಯಿಯ ಕಣ್ಣಲ್ಲಿನ ಭರವಸೆಯ ಬೆಳಕು ಕಾಣುತ್ತದೆ.

ನಗರದ ಮಲ್ಲೇಶ್ವರಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಂಚನಾ ಫ಼ೌಂಡೇಷನ್, Autism Spectrum Disorder, Cerebral Palsy, Learning Disability, Dyslexia, Mental Retardation, Down Syndrome, Slow learners ಮುಂತಾದ ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಎದುರಿಸುತ್ತಿರುವ ಮಕ್ಕಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಮುಖ್ಯವಾಹಿನಿಯೊಂದಿಗೆ ಸಾಗಲು ವಿಭಿನ್ನ ಹಿನ್ನಲೆಯಿಂದ ಬಂದ ಏಳು ಮಂದಿ ಹೆಣ್ಣುಮಕ್ಕಳ ನುರಿತ ತಂಡವೊಂದು ಮಕ್ಕಳ ಮನೋವಿಕಾಸ ಕ್ಷೇತ್ರವನ್ನೇ ಬದುಕಿನ ಪ್ರಧಾನ ಆದ್ಯತೆಯನ್ನಾಗಿ ಮಾಡಿಕೊಂಡು ಕೆಲಸ ಮಾಡಿಕೊಂಡು
ಹೋಗುತ್ತಿದೆ.

ವಿಶೇಷ ಮಕ್ಕಳು ನಮ್ಮ ಸಮಾಜದಲ್ಲಿ ಒಂದು ಹಂತದವರೆಗೆ ಪೋಷಕರಿಂದ ಕುಟುಂಬ ವರ್ಗದವರಿಂದ ಆರೈಕೆಯನ್ನು ಪಡೆಯುತ್ತದಾದರೂ ಅನೇಕ ಪ್ರಕರಣಗಳಲ್ಲಿ ಅವಗಣನೆಗೆ ಪಾತ್ರವಾಗುವುದೇ ಹೆಚ್ಚು.

ಮನೋವಿಕಾಸ ಕೇಂದ್ರಗಳಲ್ಲಿ ಮಗುವಿನ ತೊಂದರೆ ಏನು? ಅದಕ್ಕೆ ಕಾರಣವೇನು? ಯಾವೆಲ್ಲಾ ಚಿಕಿತ್ಸೆಗಳ ಅಗತ್ಯವಿದೆ ಎಂಬ ಅಸೆಸ್ಮೆಂಟ್ ನಡೆಸುವುದು ಅಂದಾಜು ಒಂದುವಾರದ ಪ್ರಕ್ರಿಯೆಯಾಗಬಹುದು. ಅನೇಕ ಮನೋಸಂಬಂಧಿ ಚಿಕಿತ್ಸೆಗಳಿಗೆ ನಿರಂತರ ಥೆರಪಿಗಳೇ ಪ್ರಮುಖ ಚಿಕಿತ್ಸಾ ವಿಧಾನ.

ಬೆಂಗಳೂರಿನ ಪ್ರಮುಖ ಕೇಂದ್ರಗಳಲ್ಲಿ ವಾರಕ್ಕೆ ಒಂದು, ಎರಡು ಅಥವಾ ದಿನಂಪ್ರತಿ ಕನಿಷ್ಠ 30 ನಿಮಿಷಗಳಿಂದ 45 ನಿಮಿಷಗಳವರೆಗೆ ಥೆರಪಿ ಸೆಷನ್ ಗಳನ್ನು ನಡೆಸಲಾಗುತ್ತದೆ. ಬಹುತೇಕ ಖಾಸಗೀ ಕೇಂದ್ರಗಳಲ್ಲಿ ಗಂಟೆಗೆ 300 ರಿಂದ 800 ರೂಗಳ ವರೆಗೆ ಶುಲ್ಕ ನಿಗದಿಪಡಿಸಲಾಗಿದೆ.

ಸಿಂಚನಾ ಫ಼ೌಂಡೇಷನ್ ವಿಭಿನ್ನ ಎನಿಸೋದು ಇಲ್ಲೇ. ಮಕ್ಕಳ ಜೊತೆ ಒನ್ ಟು ಒನ್ ಥೆರಪಿ ಸೆಷನ್ ನಡೆಸುತ್ತದೆ, ಅಲ್ಲದೇ ಪೋಷಕರು ಮನೆಯಲ್ಲಿ ಅನುಸರಿಸಬೇಕಾದ ಕೆಲವು ಕ್ರಮಗಳನ್ನು ಕಲಿತುಕೊಳ್ಳಲು ಹೇಳಲಾಗುತ್ತದೆ. ಆ ಮೂಲಕ ಪ್ರತಿದಿನವೂ ಮಗು ಒಂದು ಸುಭದ್ರ ಕಲಿಕಾ ಚೌಕಟ್ಟಿನಲ್ಲಿ ಬೆಳೆಯುತ್ತಾ ಹೋಗುತ್ತದೆ. ಇಲ್ಲಿ ಯೋಗ, ಸಂಗೀತ, ನೃತ್ಯ ಮತ್ತು ರಂಗ ಚಟುವಟಿಕೆಗಳನ್ನು ಥೆರಪಿಯ ವಿಧಾನವಾಗಿ ಬಳಸಲಾಗುತ್ತದೆ.

ಕಳೆದ ಎರಡು ವರ್ಷಗಳಿಂದ ಸಿಂಚನಾ ಫ಼ೌಂಡೇಷನ್, ಇತರೆ ಶಾಲೆಗಳಲ್ಲಿ ದಾಖಲಾತಿ ನಿರಾಕರಿಸಲಾದ 9 ವರ್ಷ ಮೇಲ್ಪಟ್ಟ ಮಕ್ಕಳಿಗಾಗಿ ಬೆಳಿಗ್ಗೆ 10.30 ರಿಂದ 3.30ರ ವರೆಗೆ ಪರ್ಯಾಯ ಶಾಲೆಯನ್ನು ನಡೆಸುತ್ತಿದ್ದು, ಮಾಂಟೆಸ್ಸೋರಿ ವಿಧಾನದಲ್ಲಿ ಬೋಧಿಸಲಾಗುತ್ತದೆ. ಪ್ರಸಕ್ತ ವರ್ಷದಿಂದ ಬೇರೆ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ರೆಮಿಡಿಯಲ್ ಕ್ಲಾಸಸ್ ಅಗತ್ಯವಿದ್ದರೆ ಮಧ್ಯಾಹ್ನದ ಸೆಷನ್ಸ್ ನಡೆಸಲಾಗುತ್ತದೆ.

ಅನೇಕ ಪೋಷಕರು ಮಕ್ಕಳನ್ನು ಒಂದು ದಿನ ಸ್ಪೀಚ್ ಥೆರಪಿ ಎಂದೂ, ಮತ್ತೊಂದು ದಿನ ಆಕ್ಯುಪೇಷನಲ್ ಥೆರಪಿ ಎಂದೂ, ಮಗದೊಂದು ದಿನ ಮತ್ತೊಂದು ಥೆರಪಿ ಎಂದು ಸೆಂಟರ್ ನಿಂದ ಸೆಂಟರ್’ಗೆ ಬೇರೆ ಬೇರೆ ದಿನ, ಬೇರೆ ಬೇರೆ ಸಮಯ ಹೊಂದಿಸಿಕೊಂಡು ಓಡಾಡುವ ಬವಣೆ ಇಲ್ಲಿಲ್ಲ. ಇಲ್ಲಿ ಮಗುವಿನ ಒಂದು ಗಂಟೆ ಅವಧಿಯಲ್ಲಿ ಎಲ್ಲಾ ಆಯಾಮಗಳಲ್ಲೂ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ. ಕೇವಲ ಮಗುವಿನ ಅಭಿವೃದ್ಧಿ ಮಾತ್ರವಲ್ಲದೆ, ಮಗುವಿನ ಕುಟುಂಬ ಸದಸ್ಯರು, ಮುಖ್ಯವಾಗಿ ತಾಯಂದಿರ ಮನೋಬಲವನ್ನು ವೃದ್ಧಿಸುವ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

ಮಗುವಿನ ಸಮಸ್ಯೆಯಿಂದಾಗಿ ಸದಾ ಆತಂಕ, ನಿರಾಶೆ, ನಿರಾಸಕ್ತಿ, ಚಿಂತೆಯಲ್ಲಿ ಮುಳುಗಿಹೋಗಿರುವ ಅಮ್ಮಂದಿರಿಗಾಗಿ ಅನೇಕ ಆಟ-ಒಡನಾಟದ ಅವಕಾಶಗಳಿವೆ.

ಸಂಸ್ಥೆಯು ಮಕ್ಕಳಿಂದ ಪಡೆಯುತ್ತಿರುವ ಈ ಅಲ್ಪಮೊತ್ತದ ಹೊರತಾಗಿ ಯಾವುದೇ ಆರ್ಥಿಕ ನೆರವಿಲ್ಲದೇ ನಡೆಯುತ್ತಿದೆ. ಅನೇಕ ಬಡ ಮಕ್ಕಳನ್ನು ನೊಂದಾಯಿಸಿಕೊಳ್ಳಲು ಮನಸ್ಸಿದ್ದರೂ ಆರ್ಥಿಕ ಬೆಂಬಲವಿಲ್ಲದೆ ಕೈಚೆ‌ಲ್ಲಬೇಕಾದ ಪರಿಸ್ಥಿತಿಯ ಬಗ್ಗೆ ಫ಼ೌಂಡೇಷನ್’ನ ಸ್ಥಾಪಕರಾದ ಅಖಿಲಾ, ಚರಿತಾ ಕೂಡಿಗೆ ಮತ್ತು ಜಯಾ ಅವರು ಅವಲತ್ತುಕೊಳ್ಳುತ್ತಾರೆ.

ಇಂಥ ಜನಪರ ಕಾಳಜಿಯುಳ್ಳ ಸಂಸ್ಥೆಯನ್ನು ಉಳಿಸಿಕೊಳ್ಳುವುದು ನಮ್ಮ ಸಾಮಾಜಿಕ ಜವಾಬ್ದಾರಿಯೇ ಆಗಿದೆ.

* * * *

ಸಂಪರ್ಕಕ್ಕೆ: ಸಿಂಚನಾ ಫೌಂಡೇಷನ್, ನಂ. 38, 4ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, ಮಾರುತಿ ಎಕ್ಸ್’ಟೆನ್ಷನ್, ದೇವಯ್ಯ ಪಾರ್ಕ್ ಸಮೀಪ, ಮಲ್ಲೇಶ್ವರ

ಸಂಪರ್ಕ: 95354-46621 / 9686425609

ಇ–ಮೇಲ್‌ : sinchanafoundation2014@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT