6
ಬ್ರೈಲ್‌ ಪತ್ರಿಕೆ

ಅಂಧರ ಬಾಳಿಗೆ ‘ಬೆಳಕು’ ಪತ್ರಿಕೆ

Published:
Updated:
ಧಾರವಾಡ ಸಹನಾ ಅಂಗವಿಕಲರ ಸೇವಾ ಪ್ರತಿಷ್ಠಾನದಲ್ಲಿ ಮುದ್ರಣ ಕಾರ್ಯದಲ್ಲಿ ತೊಡಗಿರುವ ಅಂಧ ಯುವ ಶಿವಕುಮಾರ.

ಧಾರವಾಡ: ಜಗತ್ತಿನ ಆಗುಹೋಗುಗಳನ್ನು ಅಂಧರಿಗೂ ತಲುಪಿಸುವ ಉದ್ದೇಶದಿಂದ ಇಲ್ಲಿನ ಸಹನಾ ಅಂಗವಿಕಲರ ಸೇವಾ ಪ್ರತಿಷ್ಠಾನವು ದ್ವೈಮಾಸಿಕ ಬ್ರೈಲ್‌ ಪತ್ರಿಕೆಯನ್ನು ಹೊರ ತರಲು ಸಿದ್ದತೆ ನಡೆಸಿದೆ.

ಸಹನಾ ಅಂಗವಿಕಲರ ಪ್ರತಿಷ್ಠಾನವು ಎರಡು ದಶಕಗಳಿಂದ ಅಂಗವಿಕಲರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಸತತವಾಗಿ ಹಮ್ಮಿಕೊಂಡು ಅವರ ಸರ್ವತೋಮುಖ ಬೆಳವಣಿಗಾಗಿ ಪ್ರಯತ್ನಿಸುತ್ತಿದೆ. ಇದೇ ನಿಟ್ಟಿನಲ್ಲಿ ಇದೀಗ ‘ಬೆಳಕು’ ಎಂಬ ದ್ವೈಮಾಸಿಕ ಪತ್ರಿಕೆ ಹೊರ ತರಲು ಸಿದ್ದವಾಗಿದೆ ಎಂದು ಸಂಸ್ಥೆ ಸಂಚಾಲಕ ರಾಮಚಂದ್ರ ದೋಂಗಡೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಹಿಂದೆ ನಮ್ಮ ಸಂಸ್ಥೆ ವತಿಯಿಂದ ಅಂಧರಿಗಾಗಿ ವಿಶೇಷ ಬ್ರೈಲ್‌ ಗ್ರಂಥಾಲಯವನ್ನು ಪ್ರಾರಂಭಿಸಲಾಗಿದೆ. ಗ್ರಂಥಾಲಯದ ಬಗ್ಗೆ ಸಾಕಷ್ಟು ಪ್ರಸಾರ ಹಾಗೂ ಪ್ರಚಾರ ಕಾರ್ಯ ಮಾಡಿದೆ. ಆದರೂ ಅಂಧ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಲು ಹಿಂದೆಟು ಹಾಕುತ್ತಿದ್ದಾರೆ. ಹೀಗಾಗಿ ಅಂಧ ಮಕ್ಕಳಲ್ಲಿ ಓದಿನ ಅಭಿರುಚಿ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿರುವ 50 ಅಂಧ ಮಕ್ಕಳ ಶಾಲೆಗಳಿಗೆ ತಲುಪಿಸಲು ಯೋಜನೆ ರೂಪಿಸಲಾಗಿದೆ. ವಾರ್ಷಿಕ ₹150 ವಾರ್ಷಿಕ ಚಂದಾ ಪಡೆದು ಪತ್ರಿಕೆಗಳನ್ನು ಸರಬರಾಜು ಮಾಡಲಾಗುವುದು’ ಎಂದರು.

ಪತ್ರಿಕೆಗೆ 90ರ ಇಳಿವಯಸ್ಸಿನ ರಾಮಚಂದ್ರ ಧೋಂಗಡೆ ಅವರೇ ಸ್ವತಃ ಸಂಪಾದಕರಾಗಿದ್ದಾರೆ. ಸಂಪಾದಕ ಮಂಡಳಿಯಲ್ಲಿ ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ.ಆನಂದ ಪಾಟೀಲ್‌, ಸಾಹಿತಿ ಡಾ.ಮಲ್ಲಿಕಾರ್ಜುನ ಹಿರೇಮಠ, ಸಾಹಿತಿ ಡಾ.ಬಾಳಣ್ಣ ಶೀಗಿಹಳ್ಳಿ, ಅಂಧ ಕವಿ ಬಾಪೂ ಖಾಡೆ ಕಾರ್ಯನಿರ್ವಹಿಸಲಿದ್ದಾರೆ.

‘100 ಪುಟಗಳನ್ನು ಒಳಗೊಂಡಿರುವ ಈ ಪತ್ರಿಕೆಯಲ್ಲಿ ಸಾಮಾನ್ಯ ಜ್ಞಾನ, ಶ್ರೇಷ್ಠ ಸಾಹಿತಿಗಳ ಕಿರುಪರಿಚಯ, ಪ್ರಾಚೀನ ಸಾಹಿತ್ಯದಲ್ಲಿರುವ ಕಥೆ, ಕವನ, ಚರಿತ್ರೆ, ಅಂಧ ಸಾಧಕರ ಅಂಕಣ, ಪ್ರಚಲಿತ ವಿದ್ಯಮಾನಗಳು, ಆಧುನಿಕ ಸಾಹಿತ್ಯ, ಕಾನೂನು ಪರಿಚಯ, ವ್ಯಕ್ತತ್ವ ವಿಕಸನ ಪ್ರವಾಸ ಕಥನ ಸೇರಿದಂತೆ ಮುಂತಾದ ವಿಷಯಗಳನ್ನು ಒಳಗೊಳ್ಳಲಿದೆ’ ಎಂದು ಧೋಂಗಡೆ ತಿಳಿಸಿದರು.

‘ಬ್ರೈಲ್‌ ಲಿಪ್ಯಂತರ ತಂತ್ರಾಂಶದ ನೆರವು ಪಡೆದು, ಪತ್ರಿಕೆಯಲ್ಲಿ ಮುದ್ರಣವಾಗುವ ಅಂಶಗಳನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಲಾಗುವುದು. ಅಲ್ಲಿಂದ ಬ್ರೈಲ್ ಮುದ್ರಣ ಯಂತ್ರದಲ್ಲಿ ಇದನ್ನು ಮುದ್ರಿಸಲಾಗುವುದು. ಪತ್ರಿಕೆಯನ್ನು ಓದುಗರು ಸಕಾರಾತ್ಮಕವಾಗಿ ಸ್ವೀಕರಿಸಿದಲ್ಲಿ ಮಾಸಿಕ ಪತ್ರಿಕೆಯನ್ನಾಗಿ ಪರಿವರ್ತಿಸುವ ಉದ್ದೇಶವಿದೆ’ ಎಂದೆನ್ನುತ್ತಾರೆ ಅವರು.

‘ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣಕ್ಕಾಗಿ ಬ್ರೈಲ್‌ ಪಠ್ಯ ಪುಸ್ತಕಗಳು ಸಿಗುತ್ತವೆ. ಆದರೆ, ಪದವಿಪೂರ್ವ ಶಿಕ್ಷಣದಿಂದ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುವವರಿಗೆ ಬ್ರೈಲ್‌ ಪಠ್ಯ ಪುಸ್ತಕಗಳು ಲಭ್ಯವಾಗುತ್ತಿಲ್ಲ. ಈ ವಿಷಯವನ್ನು ನಮ್ಮ ಸಂಸ್ಥೆ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಆದರೆ ಅದು ಕಾರ್ಯರೂಪಕ್ಕೆ ಈವರೆಗೂ ಬರದಿರುವ ಕಾರಣದಿಂದ ಪತ್ರಿಕೆ ಹೊರ ತರಲು ಮುಂದಾಗಿದ್ದೇವೆ’ ಎನ್ನುತ್ತಾರೆ ರಾಮಚಂದ್ರ ಅವರು.

**

ಅಂಧರಿಗೂ ಸಮಾಜದಲ್ಲಿನ ಆಗು–ಹೋಗುಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಸಹನಾ ಅಂಗವಿಕಲರ ಸೇವಾ ಪ್ರತಿಷ್ಠಾನ ಮುಂದಾಗುತ್ತಿದ್ದು, ಅಂಧ ಮಕ್ಕಳಿಗೆ ಸಹಾಯಕವಾಗುವ ನಿಟ್ಟಿನಲ್ಲಿ ಬೆಳಕು ಪತ್ರಿಕೆ ಹೊರ ತರಲು ಮುಂದಾಗಿದೆ.

– ರಾಮಚಂದ್ರ ಧೋಂಗಡೆ, ಸಹನಾ ಅಂಗವಿಕಲರ ಸೇವಾ ಪ್ರತಿಷ್ಠಾನದ ಸಂಚಾಲಕ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !