ತರಗತಿಯ ಒಳಗೂ ಏಕಾಗ್ರತೆ ಕಾಯ್ದುಕೊಳ್ಳುವುದು ಹೇಗೆಂದರೆ...

7

ತರಗತಿಯ ಒಳಗೂ ಏಕಾಗ್ರತೆ ಕಾಯ್ದುಕೊಳ್ಳುವುದು ಹೇಗೆಂದರೆ...

Published:
Updated:

ವಿದ್ಯಾರ್ಥಿ ಮಿತ್ರರೇ, ಈ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಮೂರು ತಿಂಗಳುಗಳು ಕಳೆಯುತ್ತ ಬಂದಿದೆ. ಎಲ್ಲ ವಿಷಯಗಳಲ್ಲಿ ಸಾಕಷ್ಟು ಪಾಠಗಳು ಮುಗಿದಿದೆ. ಒಂದೆರಡು ಕಿರು ಪರೀಕ್ಷೆಗಳೂ ಮುಗಿದಿರಬಹುದು. ಈ ಹಂತದಲ್ಲಿ, ನಿಮ್ಮಲ್ಲಿ ಬಹುಮಂದಿಗೆ ನಿಮ್ಮ ಶಾಲೆ ಅಥವಾ ಕಾಲೇಜಿನಲ್ಲಿ ಯಾವುದೇ ವಿಷಯವನ್ನು ತರಗತಿಯಲ್ಲಿ ಏಕಾಗ್ರತೆಯಿಂದ ಕಲಿಯಲು ಸಾಧ್ಯವಾಗುತ್ತಿಲ್ಲ ಎನಿಸಿರಬಹುದು ಅಲ್ಲವೇ? ಏಕೆ ಹೀಗಾಗುತ್ತಿದೆ ಎಂದು ಯೋಚಿಸಿದ್ದೀರಾ? ಕಲಿಕೆ ಎನ್ನುವುದು ತರಗತಿಯ ನಾಲ್ಕು ಗೋಡೆಗಳ ಒಳಗೇ ಸೀಮಿತಗೊಂಡು ನಡೆಯುವ ಪ್ರಕ್ರಿಯೆ ಅಲ್ಲವಾದರೂ, ತರಗತಿಯ ಕೋಣೆಯ ಒಳಗಿರುವಾಗ ವಿದ್ಯಾರ್ಥಿಯು ಪಾಠ–ಪ್ರವಚನಗಳಿಗೆ ಸ್ಪಂದಿಸುವ ರೀತಿಯನ್ನು ಬಹುವಾಗಿ ಅವಲಂಬಿಸಿದೆ. ಸಾಮಾನ್ಯವಾಗಿ, ತರಗತಿಯ ಕೋಣೆಯಲ್ಲಿ ವಿದ್ಯಾರ್ಥಿಗಳ ಏಕಾಗ್ರತೆಯ ಅವಧಿ ಅವರ ವಯೋಮಾನಕ್ಕೆ ಅನುಗುಣವಾಗಿ ವಿಭಿನ್ನವಾಗಿರುತ್ತದೆ ಎಂಬ ಒಂದು ನಂಬಿಕೆ ಇದೆ. ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಲ್ಲಿ ಇದು ಸುಮಾರು 40 ನಿಮಿಷಗಳಷ್ಟಿದ್ದರೆ, ಕಾಲೇಜಿನ ಹಂತದ ವಿದ್ಯಾರ್ಥಿಗಳಲ್ಲಿ ಇದು ಸುಮಾರು 60 ನಿಮಿಷಗಳಷ್ಟಿರುತ್ತದೆ ಎಂದು ಹೇಳಲಾಗಿದೆ. ಈ ಕಾರಣಕ್ಕಾಗಿಯೇ ಪ್ರತಿ ಪೀರಿಯಡ್‍ನ ಅವಧಿ ಪ್ರೌಢಶಾಲಾ ಹಂತದಲ್ಲಿ 45 ನಿಮಿಷಗಳಿದ್ದರೆ, ಕಾಲೇಜಿನ ಹಂತದಲ್ಲಿ 60 ನಿಮಿಷಗಳಿರುತ್ತದೆ. ಹಾಗೆಯೇ ಪೀರಿಯಡ್‍ನಿಂದ ಪೀರಿಯಡ್‍ಗೆ ವಿಷಯ ಬದಲಾಗುತ್ತದೆ. ಪ್ರತಿಯೊಂದೂ ಪೀರಿಯಡ್‍ನ ಪೂರ್ತಿ ಅವಧಿಯಲ್ಲಿ ನಿಮ್ಮ ಏಕಾಗ್ರತೆಯನ್ನು ಉಳಿಸಿಕೊಂಡು ಸಕ್ರಿಯವಾಗಿ ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವೇ? ಈ ಪ್ರಶ್ನೆ ನಿಮ್ಮಲ್ಲಿ ಏಳಬಹುದು. ಈ ನಿಟ್ಟಿನಲ್ಲಿ ನೀವು ಪಾಲಿಸಬಹುದಾದ ಕೆಲವು ಸಲಹೆಗಳನ್ನು ನೀಡುವುದೇ ಈ ಲೇಖನದ ಉದ್ದೇಶ.

ಸಾಧ್ಯವಾದಷ್ಟೂ ಮುಂದಿನ ಸಾಲುಗಳಲ್ಲೇ ಕುಳಿತುಕೊಳ್ಳಿ 
ತರಗತಿಯ ಕೊಠಡಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾದಷ್ಟೂ ಮುಂದಿನ ಸಾಲುಗಳನ್ನೇ ಆಯ್ಕೆ ಮಾಡಿಕೊಳ್ಳಿ. ಇದರಿಂದ ನಿಮ್ಮ ಸಂಪೂರ್ಣ ಗಮನವನ್ನು ಪಾಠದ ಕಡೆ ಕೇಂದ್ರೀಕರಿಸಲು ಸುಲಭವಾಗುತ್ತದೆ. ನಿಮ್ಮ ಶಿಕ್ಷಕರ ಜೊತೆಗೆ ‘ಕಣ್ಣಲ್ಲಿ ಕಣ್ಣಿಟ್ಟು ನೋಡು’ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಶಿಕ್ಷಕರು ಹೇಳಿದ್ದನ್ನು ಕೇಳಿಸಿಕೊಳ್ಳಲು, ಬೋರ್ಡ್ ಮೇಲೆ ಅವರು ಬರೆದದ್ದನ್ನು ನೀವು ಬರೆದುಕೊಳ್ಳಲು ಇದರಿಂದ ಅನುಕೂಲವಾಗುತ್ತದೆ. ಯಾವುದೇ ಅಡಚಣೆಯಿಲ್ಲದೆ ಅವಶ್ಯಕ ಮಾಹಿತಿಯನ್ನು ಪೂರ್ತಿಯಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ತರಗತಿಯ ಕೊಠಡಿಯಲ್ಲಿ ಕಿಟಕಿಯ ಪಕ್ಕದ ಆಸನಗಳಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸಿ. ಇದರಿಂದ, ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಕ್ರಿಯೆಗಳಿಂದ ನೀವು ದೂರವಾಗಬಹುದು. ನಿಮ್ಮ ಅಕ್ಕಪಕ್ಕದಲ್ಲಿ ಸಮಾನಮನಸ್ಕ ಸ್ನೇಹಿತರು ಕುಳಿತುಕೊಳ್ಳುವಂತೆ ನೋಡಿಕೊಳ್ಳಿ. ನಿಮ್ಮ ಕಲಿಯುವ ಪ್ರಕ್ರಿಯೆಗೆ ತೊಂದರೆ ಉಂಟುಮಾಡುವಂಥ ಸಹಪಾಠಿಗಳಿಂದ ಹಾಗೂ ಮೊಬೈಲ್ ಮುಂತಾದ ಎಲೆಕ್ಟ್ರಾನಿಕ್ ಉಪಕರಣಗಳಿಂದ ಸಂಪೂರ್ಣವಾಗಿ ದೂರವಿರಿ. ಇಂಥ ವಿಷಯಗಳಲ್ಲಿ ನಿಮ್ಮ ನಿರ್ಧಾರ ದೃಢವಾಗಿರಲಿ. ಆಗಾಗ್ಗೆ, ಕುಳಿತಲ್ಲೇ ನಿಮ್ಮ ಭಂಗಿಯಲ್ಲಿ ಸಣ್ಣ ಪುಟ್ಟ ಬದಲಾವಣೆಯನ್ನು ಮಾಡಿಕೊಳ್ಳಿ. ಇದು ತರಗತಿಯಲ್ಲಿನ ಏಕತಾನತೆಯನ್ನು ದೂರಮಾಡುವುದಕ್ಕೆ ಅತ್ಯಂತ ಉಪಯುಕ್ತವಾಗುತ್ತದೆ.

ವಿವರವಾಗಿ ನೋಟ್ಸ್ ಬರೆದುಕೊಳ್ಳಿ 
ಪ್ರತಿ ವಿಷಯದ ಪ್ರತಿ ಪೀರಿಯಡ್‍ನಲ್ಲಿ ಮಾಡಲಾಗುವ ಪಾಠದ ವಿವರವಾದ ನೋಟ್ಸ್ ಬರೆದುಕೊಳ್ಳಿ. ಚಿತ್ರಗಳಿದ್ದಲ್ಲಿ ಅವುಗಳನ್ನೂ ಬರೆದುಕೊಳ್ಳಿ. ನಿಮ್ಮ ಬಳಿ ವಿಷಯಕ್ಕೆ ಸಂಬಂಧಿಸಿದ ಪಠ್ಯಪುಸ್ತಕ ಹಾಗೂ ಶಿಕ್ಷಕರು ಕೊಟ್ಟಿರುವ ನೋಟ್ಸ್ ಅಥವಾ ಇನ್ನಾವುದೇ ರೀತಿಯ ಅಧ್ಯಯನ ಸಾಮಗ್ರಿ ಇರಬಹುದು. ಆದರೂ, ತರಗತಿಯಲ್ಲಿ ಕೇಳಿದ್ದನ್ನು ಹಾಗೂ ನೋಡಿದ್ದನ್ನು ಬರೆದುಕೊಳ್ಳುವುದು ಒಂದು ಒಳ್ಳೆಯ ಅಭ್ಯಾಸ. ಈ ಒಂದು ಪ್ರಕ್ರಿಯೆಯಲ್ಲಿ ನಿಮ್ಮ ಕಣ್ಣುಗಳ ಹಾಗು ಕಿವಿಗಳ ಜೊತೆಗೆ ನಿಮ್ಮ ಕೈ ಕೂಡ ಸಕ್ರಿಯವಾಗಿ ಭಾಗವಹಿಸುವುದರಿಂದ ನೀವು ತರಗತಿಯಲ್ಲಿ ಚುರುಕಾಗಿರಲು ಸಾಧ್ಯ. ಇದರಿಂದ ನಿಮ್ಮ ಆಲಸ್ಯ ದೂರವಾಗುತ್ತದೆ. ಏಕಾಗ್ರತೆ ಹೆಚ್ಚುತ್ತದೆ. ಹೀಗೆ ನೀವು ಮಾಡಿಕೊಂಡ ನೋಟ್ಸ್ ನಿಮ್ಮ ಅಧ್ಯಯನದ ಸಮಯದಲ್ಲಿ ಪಾಠಗಳ ಪುನರ್ಮನನ ಮಾಡಿಕೊಳ್ಳುವುದಕ್ಕೆ ನಿಮಗೆ ನೆರವಾಗುತ್ತದೆ.

ಯೋಚಿಸಿ ಮತ್ತು ಪ್ರಶ್ನೆಗಳನ್ನು ಕೇಳಿ 
ತರಗತಿಯಲ್ಲಿ ನೀವು ಕ್ರಿಯಾಶೀಲರಾಗಿರಬೇಕಾದರೆ, ಮಾಡಲಾಗುತ್ತಿರುವ ಪಾಠದ ಬಗ್ಗೆ ಪೂರ್ತಿ ಗಮನ ಹರಿಸಬೇಕು. ಅದರ ಬಗ್ಗೆ ಯೋಚಿಸಬೇಕು. ನಿಮ್ಮ ಮನಸ್ಸಿನಲ್ಲಿ ಏಳುವ ಸಂದೇಹಗಳಿಗೆ ಶಿಕ್ಷಕರಿಂದ ಸಮಾಧಾನಕರ ಉತ್ತರಗಳನ್ನು ಪಡೆದುಕೊಳ್ಳಬೇಕು. ವಿಷಯದ ಬಗ್ಗೆ ಯಾಕೆ? ಏನು? ಎಲ್ಲಿ? ಯಾವಾಗ? ಮತ್ತು ಹೇಗೆ? – ಈ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. ಅಂಥ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ತರಗತಿಯಲ್ಲಿಯೇ ಪಡೆದುಕೊಳ್ಳುವ ಪ್ರಯತ್ನ ಮಾಡಬೇಕು. ಈ ವಿಷಯದಲ್ಲಿ ನಿಮಗೆ ಯಾವ ರೀತಿಯ ಹಿಂಜರಿಕೆಯೂ ಇರಬಾರದು. ತರಗತಿಯಲ್ಲಿ ನಿಮ್ಮ ಸಹಪಾಠಿಗಳು ಪ್ರಶ್ನೆ ಕೇಳುತ್ತಿರುವಾಗ ಅಥವಾ ಉತ್ತರಿಸುವ ಪ್ರಯತ್ನ ಮಾಡುತ್ತಿರುವಾಗ, ಅದರ ಕಡೆ ಹೆಚ್ಚು ಗಮನ ಹರಿಸಿ. ಒಂದು ವೇಳೆ ನಿಮ್ಮ ಅಭಿಪ್ರಾಯವನ್ನು ಮಂಡಿಸಬೇಕೆನಿಸಿದಲ್ಲಿ ಹಿಂಜರಿಯಬೇಡಿ. ಪ್ರಯೋಗಗಳಾಗಿದ್ದರೆ, ಮಾಡುವ ವಿಧಾನವನ್ನು ಹಾಗೂ ಪ್ರಯೋಗದ ಹಿಂದಿರುವ ಮೂಲತತ್ತ್ವವನ್ನು ವಿವರವಾಗಿ ಗಮನಿಸಿ. ಪ್ರಯೋಗಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಿ. ಸಂದೇಹಗಳನ್ನು ಬಗೆಹರಿಸಿಕೊಳ್ಳಿ. ಶಿಕ್ಷಕರು ವಿಷಯಕ್ಕೆ ಸಂಬಂಧಿಸಿದಂತೆ ನೀಡುವ ಪ್ರಾಜೆಕ್ಟ್ ಅಥವಾ ಮಾದರಿಗಳ ತಯಾರಿಕೆಯಲ್ಲಿ ಆಸಕ್ತಿಯಿಂದ ಭಾಗವಹಿಸಿ. ಇಂಥ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ನಿಮ್ಮ ಕ್ರಿಯಾಶೀಲತೆ ಹೆಚ್ಚುತ್ತದೆ. ತರಗತಿಯಲ್ಲಿ ನೀವು ನಿಷ್ಕ್ರಿಯರಾಗಿದ್ದಲ್ಲಿ ಅದು ಆಲಸ್ಯಕ್ಕೆ ಎಡೆ ಮಾಡಿಕೊಟ್ಟಂತೆ. ಆಲಸ್ಯವು ಏಕಾಗ್ರತೆಗೆ ಭಂಗ ತರುತ್ತದೆ.

ಹಿಂದಿನ ದಿನವೇ ಪಾಠ ಓದಿಕೊಂಡು ಬನ್ನಿ 
ಶಾಲೆಯ ವೇಳಾಪಟ್ಟಿಯ ಪ್ರಕಾರ ವಿವಿಧ ವಿಷಯಗಳಲ್ಲಿ ಮಾಡಲಾಗುವ ಪಾಠಗಳನ್ನು ಹಿಂದಿನ ದಿನವೇ ಓದಿಕೊಂಡರೆ ವಿಷಯದಲ್ಲಿರುವ ಕ್ಲಿಷ್ಟ ಅಂಶಗಳನ್ನು ಗುರುತು ಹಾಕಿಕೊಳ್ಳಬಹುದು. ಮಾರನೆಯ ದಿನ ತರಗತಿಯಲ್ಲಿ ಈ ಕ್ಲಿಷ್ಟ ಅಂಶಗಳ ಕಡೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿ ಅನುಮಾನಗಳನ್ನು ಬಗೆಹರಿಸಿಕೊಳ್ಳುವ ಪ್ರಯತ್ನವನ್ನೂ ಮಾಡಬಹುದು. ಇದರಿಂದ, ಯಾವುದೇ ವಿಷಯವನ್ನು ಅರ್ಥ ಮಾಡಿಕೊಳ್ಳುವುದು ಸುಲಭವಾಗುತ್ತದೆ. ಕಠಿಣ ಹಾಗೂ ಕ್ಲಿಷ್ಟ ಎನಿಸುವ ಪಾಠದ ಅಂಶಗಳನ್ನು ತರಗತಿಯಲ್ಲಿ ಶಿಕ್ಷಕರ ಹಾಗೂ ಸಹಪಾಠಿಗಳ ನೆರವಿನಿಂದ ಅರ್ಥ ಮಾಡಿಕೊಳ್ಳುವುದು ಉತ್ತಮವಾದ ಅಭ್ಯಾಸ.

ವಿರಾಮದ ಅವಧಿಯಲ್ಲಿ ಚೆನ್ನಾಗಿ ಓಡಾಡಿ 
ಪೀರಿಯಡ್‍ಗಳ ನಡುವೆ ದೊರೆಯುವ ವಿರಾಮದ ಅವಧಿಯಲ್ಲಿ ತರಗತಿಯ ಕೊಠಡಿಯಿಂದ ಆಚೆ ಬಂದು ಕೊಂಚ ಓಡಾಡಿ. ಮೆಟ್ಟಿಲುಗಳಿದ್ದರೆ ಹತ್ತಿ ಇಳಿಯಿರಿ. ಇಲ್ಲವೇ ಸಣ್ಣ ಪುಟ್ಟ ವ್ಯಾಯಾಮ ಮಾಡಿ. ಈ ರೀತಿಯ ಭೌತಿಕ ಚಟುವಟಿಕೆಗಳಿಂದ ನಿಮ್ಮ ಮಾಂಸಖಂಡಗಳು ಸಡಿಲವಾಗುತ್ತವೆ. ಇದರಿಂದ ಆಲಸ್ಯ ದೂರವಾಗುತ್ತದೆ. ತರಗತಿಯ ಏಕತಾನತೆಯಿಂದ ಹೊರಬರಲು ನಿಮಗೆ ಸುಲಭವಾಗುತ್ತದೆ. ದಿನವಿಡೀ ತರಗತಿಯಲ್ಲಿ ಉಲ್ಲಾಸವಾಗಿರಲು ಸಾಧ್ಯವಾಗುತ್ತದೆ.

ಈ ರೀತಿಯ ಕೆಲವು ಅಂಶಗಳ ಕಡೆಗೆ ಗಮನ ಹರಿಸಿದಲ್ಲಿ ನೀವು ಜಡತ್ವ ಹಾಗೂ ಆಲಸ್ಯವನ್ನು ದೂರಮಾಡಿ, ತರಗತಿಯಲ್ಲಿ ಏಕಾಗ್ರತೆಯಿಂದ ಹಾಗೂ ಆಸಕ್ತಿಯಿಂದ ಕಲಿಕೆಯ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ತರಗತಿಯ ಕೊಠಡಿಯಲ್ಲಿ ನೀವು ಸಕ್ರಿಯವಾಗಿದ್ದಲ್ಲಿ ನಿಮ್ಮ ಕಲಿಕೆ ಸುಲಭವಾಗುವುದಲ್ಲದೆ, ಮುಂದಿನ ಎಲ್ಲ ಪರೀಕ್ಷೆಗಳಿಗೆ ಸಿದ್ಧತೆಯೂ ಸುಸೂತ್ರವಾಗಿ ಸಾಗುತ್ತದೆ.

***
ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಿ

ನಿಮ್ಮ ಮಾನಸಿಕ ಸ್ಥಿತಿಯು ತರಗತಿಯಲ್ಲಿನ ನಿಮ್ಮ ಕಲಿಕೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ನಿಮ್ಮ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ. ಆತಂಕ, ಉದ್ವೇಗಗಳಿಗೆ ಎಡೆ ಮಾಡಿಕೊಡಬೇಡಿ. ವೈಯುಕ್ತಿಕ ಸಮಸ್ಯೆಗಳನ್ನು ತರಗತಿಯ ಕೋಣೆಯ ಒಳಗೆ ಕೊಂಡೊಯ್ಯಬೇಡಿ. ಹಾಗೆಯೇ ನಿಮ್ಮ ದೈಹಿಕ ಆರೋಗ್ಯ ಕೂಡ ನಿಮ್ಮ ಕಲಿಕಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುತ್ತದೆ. ಆರೋಗ್ಯಕರವಾದ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ಶಾಲೆಗೆ ಬರುವ ಮುನ್ನ ಪೋಷಕಾಂಶಯುಕ್ತ ಆಹಾರ ಪದಾರ್ಥಗಳನ್ನು ಸೇವಿಸಿ. ಸಾಕಷ್ಟು ಪ್ರಮಾಣದ ನೀರನ್ನು ಸೇವಿಸಿ. ಹಿಂದಿನ ದಿನ ಅವಶ್ಯವಿರುವಷ್ಟು ವಿಶ್ರಾಂತಿ ಪಡೆದುಕೊಳ್ಳಿ. ಇಂಥ ಯಾವುದೇ ಅಂಶಗಳ ಬಗ್ಗೆ ಉದಾಸೀನ ಮಾಡಬೇಡಿ.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !