ಪರಿಸರ ವಿಜ್ಞಾನದಲ್ಲಿ ಭರ್ಜರಿ ಅವಕಾಶ

ಸೋಮವಾರ, ಮಾರ್ಚ್ 25, 2019
21 °C

ಪರಿಸರ ವಿಜ್ಞಾನದಲ್ಲಿ ಭರ್ಜರಿ ಅವಕಾಶ

Published:
Updated:
Prajavani

ಪರಿಸರ ವಿಜ್ಞಾನ ಓದಿದರೆ ಯಾವ ರೀತಿಯ ಉದ್ಯೋಗಗಳಲ್ಲಿ ಅವಕಾಶವಿದೆ ಹಾಗೂ ಅರಣ್ಯ ವಿಭಾಗದ ವಿದ್ಯಾರ್ಥಿಗೆ ಅದು ಹೇಗೆ ಸಂಬಂಧಿಸುತ್ತದೆ?
→ಹೆಸರು, ಊರು ಬೇಡ

ಉತ್ತರ: ಪರಿಸರವನ್ನು ಪ್ರಾಮಾಣಿಕವಾಗಿ ಮತ್ತು ಸೂಕ್ತ ಸಾಧನೆಗಳಿಂದ ಸಂರಕ್ಷಣೆ ಮಾಡುವುದೇ ಪರಿಸರ ವಿಜ್ಞಾನ. ಹಾಗಾಗಿ ಎನ್ವಿರಾನ್ಮೆಂಟಲ್ ಎಂಜಿನಿಯರ್ಸ್, ಜರ್ನಲಿಸ್ಟ್, ಬಯೊಲೊಜಿಸ್ಟ್‌,  ವಿಜ್ಞಾನಿಗಳೆಲ್ಲರಿಗೂ ಅನೇಕ ಉದ್ಯೋಗಾವಕಾಶಗಳು ದೊರಕುತ್ತವೆ. ಮೈನಿಂಗ್ ಕಂಪನಿಗಳು, ಗೊಬ್ಬರ ಮತ್ತು ರಾಸಾಯನಿಕ ಕಾರ್ಖಾನೆಗಳು, ಟೆಕ್ಸ್‌ಟೈಲ್‌ ಮತ್ತು ಡೈಯಿಂಗ್ ಉದ್ಯಮಗಳಲ್ಲೂ ಪರಿಸರ ವಿಜ್ಞಾನಿಗಳಿಗೆ ಉತ್ತಮ ಉದ್ಯೋಗ ಅವಕಾಶಗಳಿವೆ. ಪರಿಸರ ರಕ್ಷಣೆಯಲ್ಲಿ ಅಧ್ಯಯನ ಮಾಡುವ ವಿಭಾಗದಲ್ಲಿ ಕೂಡ ಒಳ್ಳೆಯ ಉದ್ಯೋಗ ಅವಕಾಶಗಳಿರುತ್ತವೆ. ಪರಿಸರ ರಕ್ಷಣೆ ಮಾಡುವ ಎನ್.ಜಿ.ಓ ಸಂಸ್ಥೆಗಳು ಪಬ್ಲಿಕ್ ಸೆಕ್ಟರ್ ಆಂಡರ್‌ ಟೇಕಿಂಗ್ ಮತ್ತು ಸರಕಾರಿ ಸಂಸ್ಥೆಗಳಲ್ಲಿ ಕೂಡ ಉದ್ಯೋಗಾವಕಾಶಗಳಿರುತ್ತವೆ. 

ನಿಮ್ಮ ಡಿಗ್ರಿ ಮುಗಿದ ಮೇಲೆ ನಿಮಗೆ ಅಧ್ಯಾಪಕರಾಗಿ ಕೆಲಸ ಮಾಡುವ ಅವಕಾಶವೂ ಇರುತ್ತದೆ.

ಪರಿಸರ ವಿಜ್ಞಾನ ಮತ್ತು ಅರಣ್ಯಗಳಿಗೆ ಸಂಬಂಧಪಟ್ಟ ವಿಜ್ಞಾನಕ್ಕೂ ಮೂಲತಃ ಈ ಕೆಳಕಂಡ ವ್ಯತ್ಯಾಸಗಳಿರುತ್ತವೆ. ಫಾರೆಸ್ಟ್ರಿ ಬಿ.ಎಸ್‌.ಸಿ ಅಥವಾ  ಎಂ.ಎಸ್‌.ಸಿ ಮಾಡಿದರೆ ಅವುಗಳು ಅರಣ್ಯ ಸಂಪತ್ತು ಅಥವಾ ಪ್ಲಾಂಟೇಷನ್ನಿಗೆ ಸಂಬಂಧಪಟ್ಟಿರುತ್ತದೆ. ಹಾಗಾಗಿ ನಿಮಗೆ ಝೂವಾಲೋಜಿಕಲ್ ಪಾರ್ಕ್, ವನ್ಯಜೀವಿಗಳ ಧಾಮ, ಕಾರ್ಪೊರೇಟ್ ಪ್ಲಾಂಟೇಷನ್ಸ್, ವೈಲ್ಡ್ ಲೈಫ್ ಸಂಶೋಧನಾ ಸಂಸ್ಥೆಗಳಲ್ಲಿ ಕೂಡ ಉದ್ಯೋಗ ಅವಕಾಶಗಳು ಸಿಗುವುದಲ್ಲದೆ ಸರ್ಕಾರಿ ಸಂಸ್ಥೆಗಳಾದ ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ  ವೈಲ್ಡ್ ಲೈಫ್ ಡಿಪಾರ್ಟ್‌ರ್ಮೆಂಟ್, ಅರಣ್ಯ ಇಲಾಖೆಯಲ್ಲಿ ಅವಕಾಶಗಳಿರುತ್ತವೆ. ಮತ್ತೊಂದು ಸುವರ್ಣಾವಕಾಶವೆಂದರೆ ನೀವು ಯುಪಿಎಸ್‌ಸಿ ಪರೀಕ್ಷೆಗಳ ಮೂಲಕ ಇಂಡಿಯನ್ ಫಾರೆಸ್ಟ್ರಿ ಸಂಶೋಧನೆ ಮತ್ತು ಶಿಕ್ಷಣ (ICFRE) ಸರ್ವಿಸ್‌ಗೆ ಸೇರಬಹುದು. 

ಎಂ.ಎಸ್.ಸಿ  ಪದವಿಯನ್ನು ಪರಿಸರ ವಿಜ್ಞಾನದಲ್ಲಿ ಪಡೆದರೆ ನೀವು ಪರಿಸರದ ಹಾನಿ ಮತ್ತು ಅವುಗಳ ಸಮಸ್ಯೆಗಳನ್ನು ನಿವಾರಿಸುವ ಮತ್ತು ಸುಧಾರಿಸುವ ವಿಧಾನಗಳನ್ನು ಅಧ್ಯಯನ ಮಾಡುತ್ತೀರಿ. 

* ಐಟಿಐ ಡ್ರಾಫ್ಟ್‌ಮನ್‌ ಮೆಕ್ಯಾನಿಕಲ್‌ ಹಾಗೂ ಮೆಕ್ಯಾನಿಕಲ್‌ ಡಿಪ್ಲೊಮ ಮಾಡಿದ್ದೇನೆ. ನಾನು ವಿನ್ಯಾಸ ಕೂಡ ಮಾಡುತ್ತೇನೆ. ಮುಂದೆ ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ಉದ್ಯೋಗ ಅಥವಾ ಬ್ಯುಸಿನೆಸ್‌ ಮಾಡಬಹುದೇ?
–ವಿಜಯ್‌ಕುಮಾರ್‌, ಊರು ಬೇಡ

ಉತ್ತರ: ಒಂದು ವ್ಯಾಪಾರ, ವ್ಯವಹಾರವನ್ನು ಸ್ಥಾಪಿಸಬೇಕಾದರೆ ಹಲವಾರು ವರ್ಷಗಳ ಅನುಭವ ಬಹಳ ಮುಖ್ಯ. ಕೆಲವು ವರ್ಷಗಳು ಕೆಲಸ ಮಾಡಿ ಅನುಭವ ಮತ್ತು ಜ್ಞಾನಗಳೆರಡನ್ನು ಪಡೆದುಕೊಂಡು ನಂತರ ಸ್ವಂತ ವ್ಯಾಪಾರ ವ್ಯವಹಾರಕ್ಕೆ ಮುಂದಾಗುವುದು ಒಳ್ಳೆಯದು. ನೀವು ಡಿಸೈನಿಂಗ್ ವಿಭಾಗದಲ್ಲಿಯೇ ಸಿಎಡಿ (ಕ್ಯಾಡ್‌) ಕೋರ್ಸ್ ಮಾಡಿದರೆ ಒಳ್ಳೆಯ ಉದ್ಯೋಗ ಅವಕಾಶಗಳು ಸಿಗುತ್ತವೆ ಹಾಗೂ ನಿಮ್ಮ ಸ್ವಂತ ಉದ್ಯಮಕ್ಕೆ ಅನುಭವವು ದೊರಕುತ್ತದೆ. ನಿಮಗೆ ಇನ್ನೊಂದು ಸಲಹೆ ಏನೆಂದರೆ ಯಾವುದಾದರು ಚಿಕ್ಕ ಪ್ರಮಾಣದ ಸಂಸ್ಥೆಯಲ್ಲಿ ತರಬೇತಿಯನ್ನು ಪಡೆಯುವುದಕ್ಕಾಗಿ ಕೆಲಸ ಸೇರಿ ಹೆಚ್ಚಿನ ಮಾಹಿತಿ ಮತ್ತು ವಿವರಗಳನ್ನು ಕಲಿತುಕೊಂಡಲ್ಲಿ ನಿಮ್ಮ ಮುಂದಿನ ಸ್ವಂತ ಉದ್ಯಮಕ್ಕೆ ಸಹಾಯವಾಗುವುದು.

*
ನಾನು ಪಿ.ಯು.ಸಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಬಿ.ಎ ಮಾಡಿದೆ. ಆದರೆ ಅನಿವಾರ್ಯ ಕಾರಣದಿಂದ ಓದು ‌ಅರ್ಧಕ್ಕೆ ನಿಂತಿತು. ಈಗ ಮತ್ತೆ ಓದಬೇಕು ಅಂತ ನಿರ್ಧಾರ ಮಾಡಿದ್ದೇನೆ. ನನ್ನ ಪ್ರಶ್ನೆ ಏನೆಂದರೆ ಪಿ.ಯು ಮುಗಿದು ಮೂರು ವರ್ಷಗಳಾಗಿವೆ. ನನಗೆ ಸಾಹಿತ್ಯ ಆಸಕ್ತಿಯಿದ್ದು ಪಿ.ಯು ಮೂಲಕ ನೇರವಾಗಿ ಜರ್ನಲಿಸಂ ಮಾಡಬೇಕೆಂದಿರುವೆ. ನನ್ನ ನಿರ್ಧಾರ ಸರಿಯಾಗಿಯೇ ಮತ್ತು ಯಾವ ಕಾಂಬಿನೇಷನ್ ತೆಗೆದುಕೊಳ್ಳಬಹುದು ದಯವಿಟ್ಟು ತಿಳಿಸಿ.
→ಮಹೇಶ್ ಕುಮಾರ್, ಸಿದ್ದಾಪುರ (ಉ.ಕ)

ಉತ್ತರ: ನಿಮಗೆ ಸಾಹಿತ್ಯ ಮತ್ತು ಜರ್ನಲಿಸಂನಲ್ಲಿ ಆಸಕ್ತಿ ಇರುವುದರಿಂದ ಒಂದು ವರ್ಷದ ಡಿಪ್ಲೊಮೊ ಜರ್ನಲಿಸಂ ಮತ್ತು ಮಾಸ್ ಕಮ್ಯುನಿಕೇಷನ್ ವಿಭಾಗದಲ್ಲಿ ಉತ್ತೀರ್ಣರಾಗಬಹುದು. ಈ ಡಿಪ್ಲೊಮೊವನ್ನು ಪಿಯುಸಿ ಆದ ನಂತರ ಪಡೆಯಬೇಕು. ಬಿಎ ಅಥವಾ ಬೇರೆ ಪದವೀಧರರಾದ ಮೇಲೆ ಜರ್ನಲಿಸಂ ಮತ್ತು ಮಾಸ್ ಕಮ್ಯುನಿಕೇಷನ್ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಕೂಡ ಪಡೆಯಬಹುದು. ನೀವು ಬಿಎ ಪದವಿಯನ್ನು ಪಡೆಯುವುದರಿಂದ ನಿಮಗೆ ಮೀಡಿಯಾ ಅಥವಾ ಕೆರಿಯರ್ ಕ್ರಿಯೇಷನ್ ಕಂಪನಿಗಳಲ್ಲಿ ಉನ್ನತ ಹುದ್ದೆಯನ್ನು ಪಡೆಯುವ ಅರ್ಹತೆಯನ್ನು ಹೊಂದುವಿರಿ.

*
ನಾನು ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ ಎರಡನೇ ವರ್ಷ ಓದುತ್ತಿದ್ದೇನೆ. ಎಂಜಿನಿಯರಿಂಗ್‌ ಮುಗಿದ ನಂತರ ಯುಪಿಎಸ್‌ಸಿ ಪರೀಕ್ಷೆಗೆ ಕೂರಲು ನಿರ್ಧರಿಸಿದ್ದೇನೆ. ನನ್ನ ಎತ್ತರ 149 ಸೆಂ.ಮೀ. ಐಪಿಎಸ್‌ ಆಗಲು ಎಷ್ಟು ಎತ್ತರವಿರಬೇಕು?
–ಹೆಸರು, ಊರು ಬೇಡ

ಉತ್ತರ: ಪುರುಷರಿಗೆ 165 ಸೆಂ ಮತ್ತು ಮಹಿಳೆಯರಿಗೆ 150 ಸೆಂ.ಮೀ ಕನಿಷ್ಠ ಎತ್ತರ ಇರಲೇಬೇಕು. ಪರಿಶಿಷ್ಟ ಜಾತಿಯವರಿಗೆ ಮತ್ತು ಕೆಲವು ವರ್ಗದವರಿಗೆ ಉದಾಹರಣೆಗೆ ಗೋರ್ಖಾ, ಅಸ್ಸಾಮೀಸ್, ಘರ್ವಾಲಿ, ಕುಮೌನಿ, ನಾಗ ಬುಡಕಟ್ಟು ಜನಾಂಗದವರಿಗೆ ಎತ್ತರದ ಮಿತಿಯನ್ನು ಹೆಂಗಸರಿಗೆ ಮತ್ತು ಗಂಡಸರಿಗೆ ಕ್ರಮವಾಗಿ 160 ಮತ್ತು 145 ಸೆಂ.ಮೀ.  ಸೂಚಿಸಲಾಗುತ್ತದೆ.‌‌

*
ನಾನು 10ನೇ ತರಗತಿ ಮಾತ್ರ ಓದಿದ್ದೇನೆ. ಅದರ ಮೇಲೆ ಕೆಇಬಿಯಲ್ಲಿ ಕೆಲಸ ಮಾಡುತ್ತಿದ್ದೇನೆ.ಆದರೆ ನನಗೆ ಈವಾಗ ಕಲಿಯಬೇಕು, ಓದಬೇಕು ಅನಿಸುತ್ತಿದೆ. ಏನು ಮಾಡಬೇಕು ಗೊತ್ತಾಗ್ತಿಲ್ಲ. ನಾನು ಈಗ ಕಲಿಯಲು ಸಾಧ್ಯ ಇದೆಯಾ ಅಂತ ಸ್ವಲ್ಪ ತಿಳಿಸಿಕೊಡಿ. ಇದರಿಂದ ನನಗೆ ಬಹಳ ಗೊಂದಲ ಆಗಿದೆ. ನನ್ನ ವಯಸ್ಸು 26 ವರ್ಷ. ಶಾಲೆ ಬಿಟ್ಟು ಸುಮಾರು 7 ವರ್ಷ ಆಯಿತು. 
–ಬಾಗಲಕೋಟೆ ಜಿಲ್ಲಾ, ಕೆರೂರ

ಉತ್ತರ: ನೀವು ವಿದ್ಯಾಭ್ಯಾಸವನ್ನು ಮುಂದುವರೆಸುವುದರಲ್ಲಿ ಆಸಕ್ತಿ ಹೊಂದಿರುವುದು ಬಹಳ ಹೆಮ್ಮೆಯ ಸಂಗತಿ. ವಿದ್ಯಾಭ್ಯಾಸಕ್ಕೆ ಅಥವಾ ಉನ್ನತ ಪದವಿಗಳನ್ನು ಪಡೆಯುವುದಕ್ಕೆ ಯಾವ ವಯಸ್ಸಿನ ಪರಿಮಿತಿಯೂ ಇರುವುದಿಲ್ಲ. ಮೊದಲು ನೀವು ಯಾವ ವೃತ್ತಿಯಲ್ಲಿ ಮುಂದುವರೆಯಲು ಆಸಕ್ತಿ ಹೊಂದಿದ್ದೀರಿ ಎನ್ನುವ ವಿಚಾರಗಳಿಂದ ನಿಮ್ಮ ನಡೆ ನಿರ್ಧಾರವಾಗುತ್ತದೆ. ಇವೆಲ್ಲವುಗಳ ವಿಮರ್ಶೆಗಾಗಿ ನೀವು ಉತ್ತಮ ವೃತ್ತಿಪರ ಮಾರ್ಗದರ್ಶನ ಸಲಹೆಗಾರರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ.

ನೀವು ಪಿಯುಸಿ ಪರೀಕ್ಷೆಯನ್ನು ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್‌ಐಓಸ್) ಸ್ಕೀಮ್‌ನಲ್ಲಿ ಮನೆಯಲ್ಲಿಯೇ ಅಭ್ಯಾಸ ಮಾಡಿ ಸ್ಕೂಲ್, ಕಾಲೇಜುಗಳಿಗೆ ಹೋಗದೆ ಪರೀಕ್ಷೆ ಬರೆದು ತೇರ್ಗಡೆಯಾಗಬಹುದು.

ನೀವು ಪಿಯುಸಿ ಪಾಸಾದ ಮೇಲೆ ಮುಂದೆ ಡಿಪ್ಲೊಮೊ ಅಥವಾ ಪದವೀಧರರಾಗುವ ಬಗ್ಗೆ ನಿರ್ಧಾರ ಮಾಡಬಹುದು. ನಿಮಗೆ ವೃತ್ತಿಪರ ಹಾಗೂ ಕುಶಲತಾ ಪದವೀಧರರಾದರೂ ಉತ್ತಮ ಉದ್ಯೋಗಾವಕಾಶಗಳಿರುತ್ತವೆ.

*
ನಾನು 2018ರಲ್ಲಿ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಶನ್ಸ್‌ನಲ್ಲಿ ಎಂಜಿನಿಯರಿಂಗ್‌ ಮುಗಿಸಿದ್ದೇನೆ. ನನಗೆ ಮುಂದೆ ಯಾವ ಕೋರ್ಸ್‌ ಮಾಡುವುದು ಅಂತ ಗೊತ್ತಾಗ್ತಾ ಇಲ್ಲ. ಯಾವ ಕೋರ್ಸ್‌ ಮಾಡಿದರೆ ಉದ್ಯೋಗಾವಕಾಶ ಜಾಸ್ತಿ ಇದೆ?
-ಹೆಸರು, ಊರು ಬೇಡ

ಉತ್ತರ: ನೀವು ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಎಂಜಿನಿಯರಿಂಗ್ ಮುಗಿಸಿರುವುದರಿಂದ ನಿಮಗೆ ಸಾಫ್ಟ್‌ವೇರ್, ಎಲೆಕ್ಟ್ರಾನಿಕ್ಸ್ ಹಾರ್ಡ್‌ವೇರ್ ತಯಾರು ಮಾಡುವ ಕಾರ್ಖಾನೆಗಳಲ್ಲಿ, ಮೆಡಿಕಲ್ ಎಲೆಕ್ಟ್ರಾನಿಕ್ಸ್, ಆಟೊಮೊಬೈಲ್, ಟೆಲಿಕಮ್ಯುನಿಕೇಷನ್ಸ್, ಪವರ್ ಸೆಕ್ಟರ್ ಮುಂತಾದ ಕಂಪನಿಗಳಲ್ಲಿ  ಉದ್ಯೋಗಾವಕಾಶಗಳಿರುತ್ತವೆ. 

ನಿಮ್ಮ ಈಗಿರುವ ವಿದ್ಯಾರ್ಹತೆ ಜೊತೆಗೆ ಕಂಪ್ಯೂಟರ್ ಪ್ರೋಗ್ರಾಮಿಂಗ್ ಮಾಡಿದರೆ ಒಳ್ಳೆಯದು. ಅದರಲ್ಲೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮಷಿನ್ ಲರ್ನಿಂಗ್ ಅಂತಹ ನೂತನ ವಿಷಯಗಳನ್ನು ಓದಿದರೆ ಒಳ್ಳೆಯದು.

ಚಿಪ್ ಡಿಸೈನಿಂಗ್, ವಿ.ಎಲ್.ಎಸ್.ಐ, ಪವರ್ ಎಲೆಕ್ಟ್ರಾನಿಕ್ಸ್, ಎಂಬೆಡೆಡ್ ಸಿಸ್ಟಮ್ಸ್ ನ್ಯಾನೊ ಎಲೆಕ್ಟ್ರಾನಿಕ್ಸ್ ಸಂಬಂಧಪಟ್ಟ ಕೋರ್ಸ್‌ಗಳನ್ನು ಮಾಡಬಹುದು. ಮೊದಲಿಗೆ ಈ ಮೇಲ್ಕಂಡ ಎಲ್ಲ ವಿಷಯಗಳ ಬಗ್ಗೆ ನಿಮಗೆ ಆಸಕ್ತಿ ಯಾವುದರಲ್ಲಿ ಜಾಸ್ತಿ ಇದೆ ಎನ್ನುವುದನ್ನು ಆಯಾಯ ಕೋರ್ಸ್ ಸಿಲಬಸ್‌ಗಳಲ್ಲಿ  ಓದಿ ಮತ್ತು ಹಿರಿಯ ವಿದ್ಯಾರ್ಥಿಗಳ ಅಥವಾ ಪ್ರೊಫೆಸರ್‌ಗಳ ಮಾಗದರ್ಶನ ಪಡೆದು ತಿಳಿಯಿರಿ. ಇದರ ಜೊತೆಗೆ ಒಳ್ಳೆಯ ಜಾಬ್ ಪ್ಲೇಸ್‌ಮೆಂಟ್‌  ಅವಕಾಶ ನೀಡುವ ಇನ್ಸ್‌ಟಿಟ್ಯೂಟ್‌ನಲ್ಲಿ ನೀವು ನಿಮ್ಮ ಮುಂದಿನ  ಓದನ್ನು ಮಾಡಿದರೂ ಒಳಿತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !