ಮಕ್ಕಳ ಅಚ್ಚುಮೆಚ್ಚಿನ ನಲಿ–ಕಲಿ ಜೋಡಿಯಿದು..!

7
ಜಿಲ್ಲಾ–ರಾಜ್ಯ ಮಟ್ಟದಲ್ಲೂ ತಮ್ಮದೇ ಛಾಪು ಮೂಡಿಸಿರುವ ಚತುರ ಶಿಕ್ಷಕರಿವರು

ಮಕ್ಕಳ ಅಚ್ಚುಮೆಚ್ಚಿನ ನಲಿ–ಕಲಿ ಜೋಡಿಯಿದು..!

Published:
Updated:
Deccan Herald

ನಿಡಗುಂದಿ: ಇವರಿಬ್ಬರೂ ದೋಸ್ತರು. ಒಮ್ಮೆಗೆ ಶಿಕ್ಷಕ ಸೇವೆಗೆ ಸೇರಿದವರು. ಶಿಕ್ಷಣದ ಭದ್ರ ಅಡಿಪಾಯ ಹಾಕುವ 1ರಿಂದ 3ನೇ ವರ್ಗದ ಮಕ್ಕಳಿಗೆ ನಲಿ–ಕಲಿ ಕಲಿಸುವವರು. ಈ ಇಬ್ಬರೂ ಕೂಡಿ ನಲಿ–ಕಲಿಯಲ್ಲಿ ಹಲವು ವೈಶಿಷ್ಟ್ಯತೆ ಅಳವಡಿಸಿಕೊಂಡು, ಮಕ್ಕಳ ಸಂತಸದ ಕಲಿಕೆಗೆ ಪೂರಕವಾಗಿ ಸ್ಪಂದಿಸಿದವರು.

ಒಬ್ಬರು ತಾಂಡಾದ ಹುಡುಗರಿಗೆ ಕಲಿಸುತ್ತಿದ್ದರೆ; ಮತ್ತೊಬ್ಬರು ಪುಟ್ಟ ಹಳ್ಳಿಯ ಮಕ್ಕಳಿಗೆ ಕಲಿಸುತ್ತಿದ್ದಾರೆ. ಹೌದು..! ಇಂತಹ ಅಪರೂಪದ ಜೋಡಿಯ ಶಿಕ್ಷಕರೆಂದರೇ ನಿಡಗುಂದಿ ತಾಂಡಾ ಶಾಲೆಯ ಮಹ್ಮದ್ ಹಾಶಿಂ ಲಷ್ಕರಿ, ಆಕಳವಾಡಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಭಾಷಾಸಾಬ್‌ ಮನಗೂಳಿ.

ಸದಾ ಹೊಸತನ ಅಳವಡಿಸಿಕೊಂಡು, ಲವಲವಿಕೆಯಿಂದ ಶಾಲಾ ಬೋಧನೆಯಲ್ಲಿ ತೊಡಗಿಸಿಕೊಂಡ ಇವರಿಬ್ಬರೂ ನಲಿ–ಕಲಿ ವಿಭಾಗದಲ್ಲಿ ತಮ್ಮ ಸೃಜನಾತ್ಮಕತೆಯಿಂದ ಜಿಲ್ಲೆಯಲ್ಲಿಯೇ ಹೆಸರು ಗಳಿಸಿದವರು. ಡಿಎಸ್‌ಇಆರ್‌ಟಿಯಿಂದ ನಲಿ–ಕಲಿ ಬಾನುಲಿ ಪಾಠಗಳ ರಚನೆ ಹಾಗೂ ನಲಿ–ಕಲಿ ಬೆಳ್ಳಿ ಚುಕ್ಕಿ ಸಾಹಿತ್ಯ ಪರಿಷ್ಕರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ರಾಜ್ಯ ಮಟ್ಟದಲ್ಲಿಯೂ ಛಾಪು ಮೂಡಿಸಿದವರು.

ನಲಿ–ಕಲಿಯಲ್ಲಿ ಐದು ತಟ್ಟೆಗಳ ಜತೆಗೆ ಅಕ್ಷರ ಬಾವಿಯನ್ನು (ಒಂದು ಇಟ್ಟಂಗಿ ಎತ್ತರದಲ್ಲಿಯೇ ಚಿಕ್ಕ ವೃತ್ತಾಕಾರದ ಗೋಳ ರಚಿಸಿ, ಅದರಲ್ಲಿ ಮರಳು ತುಂಬುವುದು) ರಚಿಸಿ, ಅದರ ಮರಳಿನಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಹಾಗೂ ಚಿತ್ರ ರಚನೆ ಕೈಗೊಳ್ಳುವುದು ಇವರು ಅನುಸರಿಸಿದ ನೂತನ ಪದ್ಧತಿ. ಈ ಕಲ್ಪನೆ ಪ್ರಶಂಸೆಗೆ ಪಾತ್ರವಾಗಿದ್ದಲ್ಲದೇ, ಮಕ್ಕಳಿಗೆ ಶಾಲೆಯಲ್ಲಿಯೇ ಮನೋರಂಜನೆ ಜತೆ ಅಕ್ಷರಾಭ್ಯಾಸಕ್ಕೆ ನೆರವಾಗಿರುವುದು ವಿಶೇಷ.

ಸ್ಥಳೀಯ ಮನೋರಂಜನಾ ಸಾಧನಗಳಾದ ಗರ್ದಿಗಮ್ಮತ್ತು, ವಿವಿಧ ಪ್ರಾಣಿಗಳ ಮುಖವಾಡವನ್ನು ಹಾಳೆಯಿಂದ ರಚಿಸಿ, ಅದರ ಮೂಲಕ ಗೀತೆಗಳನ್ನು ಮಕ್ಕಳಿಂದ ಹಾಡಿಸಿ, ಅವರಿಗೆ ಕಲಿಕೆಯ ಪ್ರೇರಣೆ ನೀಡಿದವರು.

ಈ ಇಬ್ಬರೂ ಶಿಕ್ಷಕರು ಕೆಲಸ ನಿರ್ವಹಿಸುವ ಎರಡೂ ಶಾಲೆಗಳಲ್ಲಿ ನಲಿ–ಕಲಿ ಮಕ್ಕಳು ಕನಿಷ್ಠ 200ರಿಂದ 250 ಇಂಗ್ಲಿಷ್‌ ಶಬ್ದಗಳನ್ನು ಗುರುತಿಸುತ್ತಾರೆ. 25ರಿಂದ 30ರೈಮ್ಸ್‌ಗಳನ್ನು ಹಾಡುವುದು ವಿಶೇಷ.

ನಲಿ–ಕಲಿ ಕಾರ್ಡ್‌ನೊಳಗೆ ಬರುವ ಪ್ರತಿಯೊಂದು ಕ್ರಾಫ್ಟ್‌ ಕೆಲಸ, ಲೋಗೋ ಪ್ರಕಾರ ಹಾಡು, ಕಥೆ, ಅಣಕು ನುಡಿ, ಪೊಪೆಟ್‌ ಶೋ, ಸರಳ ಪ್ರಯೋಗಗಳು, ಚಟುವಟಿಕೆ ಆಟಗಳು, ನೆನಪಿನ ಆಟ, ಪದ–ಶಬ್ದ ಆಟಗಳನ್ನು ಆಡಿಸಿ ಮಕ್ಕಳ ಬುನಾದಿ ಸಾಮರ್ಥ್ಯ ಭದ್ರಗೊಳಿಸುವ ಶಿಕ್ಷಕರಿಬ್ಬರ ಕಾರ್ಯ ಅನಕರಣೀಯ.

ಸೃಜನಾತ್ಮಕತೆಯ ಇವರಿಬ್ಬರ ನಲಿ–ಕಲಿ ಚಟುವಟಿಕೆಗಳನ್ನು ಅಕ್ಕ ಪಕ್ಕದ, ಬೇರೆ ಜಿಲ್ಲೆಯ ಶಿಕ್ಷಕರು ಈ ಶಾಲೆಗೆ ಭೇಟಿ ನೀಡಿ ತಮ್ಮಲ್ಲಿ ಅಳವಡಿಸಿಕೊಂಡಿದ್ದಾರೆ. ನಿಡಗುಂದಿ ತಾಂಡಾ ಶಾಲೆಯಲ್ಲಿ ನಲಿ–ಕಲಿ ತಟ್ಟೆಗಳನ್ನು ಟೇಬಲ್‌ನಲ್ಲಿ ಮಾಡಿಸಿ, ಐದು ತಟ್ಟೆಗಳ ಸುತ್ತಲೂ ಮಕ್ಕಳು ಕೂರಲು 30 ಕುರ್ಚಿಗಳನ್ನು ಹಾಕಿ ವಿಶೇಷತೆ ಮೆರೆಯಲಾಗಿದೆ.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !