ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಆವಿಷ್ಕಾರದತ್ತಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ

Last Updated 18 ಜೂನ್ 2019, 19:30 IST
ಅಕ್ಷರ ಗಾತ್ರ

ಮಾಹಿತಿ ಮತ್ತು ತಂತ್ರಜ್ಞಾನದ ಇಂದಿನ ಕಾಲಘಟ್ಟದಲ್ಲಿ ಶಿಕ್ಷಣ ಮತ್ತು ಸಂಶೋಧನೆಗೆ ಪೂರಕ ನೆರವು ನೀಡಲು ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳು ಮುಂಚೂಣಿಯಲ್ಲಿ ನಿಲ್ಲುತ್ತವೆ. ಆಧುನಿಕ ಶಿಕ್ಷಣ ಕ್ಷೇತ್ರದಲ್ಲಂತೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರವು ತನ್ನದೇ ಆದ ಛಾಪು ಮೂಡಿಸಲು ಯಶಸ್ವಿಯಾಗಿದೆ. ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರವು ಅಧಿಕ ಬೇಡಿಕೆಯುಳ್ಳ ವೃತ್ತಿ ಪರ ಕ್ಷೇತ್ರವಾಗಿ ಹೊರಹೊಮ್ಮುತ್ತಿದೆ. ಗ್ರಂಥಾಲಯ ಎಂಬುದು ಕೇವಲ ಗ್ರಂಥಗಳ ಕಪಾಟುಗಳನ್ನು ಹೊಂದಿದ ಸ್ಥಳವಾಗಿ ಉಳಿದಿಲ್ಲ, ಅದು ಮಾಹಿತಿ ವಿನಿಮಯ ಕೇಂದ್ರವಾಗಿ ಬೆಳೆಯುತ್ತಿದೆ ಎಂದು ಹೇಳಬಹುದು.

ಹಿಂದೆ ಕೇವಲ ಪುಸ್ತಕಗಳೇ ತುಂಬಿದ್ದ ಗ್ರಂಥಾಲಯಗಳು ಈಗ ಇ- ಗ್ರಂಥಾಲಯಗಳಾಗಿಯೂ ಜ್ಞಾನಾರ್ಜನೆ ನೀಡುವಲ್ಲಿ ಪ್ರಮುಖ ಪಾತ್ರವಹಿಸಿವೆ. ಹಾಗೆಯೇ ಗ್ರಂಥಪಾಲಕರ ಕಾರ್ಯನಿರ್ವಹಣೆಯಲ್ಲಿ ಕೂಡ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು. ಗ್ರಂಥಪಾಲಕರ ವೃತ್ತಿಯು ಪುಸ್ತಕಗಳನ್ನು ಎರವಲು ನೀಡುವುದು ಮತ್ತು ಹಿಂತೆಗೆದುಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿಲ್ಲ, ಶಾಲೆ– ಕಾಲೇಜು, ವಿಶ್ವವಿದ್ಯಾಲಯ ಮತ್ತು ಸಾರ್ವಜನಿಕ ಗ್ರಂಥಾಲಯಗಳು ಒಂದು ಹೆಜ್ಜೆ ದಾಟಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಪ್ರಮುಖ ಪಾತ್ರವಹಿಸುತ್ತಿವೆ.

ಮಾಹಿತಿ ವಿಜ್ಞಾನಿ !

ಮಾಹಿತಿ ಮತ್ತು ತಂತ್ರಜ್ಞಾನ ಅಭಿವೃದ್ಧಿಯ ಜೊತೆಗೆ ಗ್ರಂಥಾಲಯಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡು ಹೊಸ ಆವಿಷ್ಕಾರಗಳಿಗೆ ತಕ್ಕಂತೆ ಮಾಹಿತಿ ಪೂರೈಕೆಯಲ್ಲಿ ಬದಲಾವಣೆಗೆ ಒಳಗಾಗಿವೆ. ಹಾಗೆಯೇ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವೃತ್ತಿಗೆ ಸಾಕಷ್ಟು ಬೇಡಿಕೆಯಿದ್ದು, ಗ್ರಂಥಪಾಲಕರು ಎನ್ನುವ ಹುದ್ದೆಯ ಬದಲಾಗಿ ಮಾಹಿತಿ ವಿಜ್ಞಾನಿ ಎಂದು ಕರೆಸಿಕೊಳ್ಳುತ್ತಿದ್ದಾರೆ. ಇಂದು ಗ್ರಂಥಾಲಯ ವಿಜ್ಞಾನವನ್ನು ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ಕೇವಲ ಗ್ರಂಥಾಲಯಗಳಿಗೆ ಸೀಮಿತವಾಗಿರದೇ ಜಗತ್ತಿನಾದ್ಯಂತ ಮಾಹಿತಿ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳಲ್ಲೂ ಸೃಷ್ಟಿಯಾಗಿವೆ ಎಂದು ಹೇಳಬಹುದು.

ಶಿಕ್ಷಣ ಕ್ಷೇತ್ರದಲ್ಲಿ ಗ್ರಂಥಾಲಯಗಳು (ಅದರಲ್ಲಿಯೂ ಇಂದಿನ ಇ-ಗ್ರಂಥಾಲಯಗಳು) ಮಾನವನ ದೇಹದ ಹೃದಯ ಭಾಗವಿದ್ದಂತೆ, ಎಲ್ಲಾ ಸ್ತರದ ಶಿಕ್ಷಣ, ಸಂಶೋಧನೆ, ವಿಸ್ತರಣೆ, ಕಲಿಕೆಯ ಹಂತಗಳಲ್ಲಿ ಕಾರ್ಯನಿರ್ವಹಣೆ ಮಾಡಬಹುದು. ಉದಾಹರಣೆಗೆ ಭಾಷೆ, ಸಾಹಿತ್ಯ, ಲಲಿತ ಕಲೆಗಳ ಕ್ಷೇತ್ರ, ಸಾಮಾಜಿಕ ವಿಜ್ಞಾನ, ವ್ಯಾವಹಾರಿಕ ಅಧ್ಯಯನ ಕ್ಷೇತ್ರ, ಜೈವಿಕ ವಿಜ್ಞಾನ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ವೈದ್ಯಕೀಯ, ಕಾನೂನು, ಅರಣ್ಯ, ಜಾನಪದ... ಹೀಗೆ ಪ್ರತಿಯೊಂದು ಕ್ಷೇತ್ರಗಳಲ್ಲಿ ಗ್ರಂಥಾಲಯಗಳು ಛಾಪು ಮೂಡಿಸುತ್ತಿವೆ. ಗ್ರಂಥಾಲಯಗಳು ಸಂಸತ್ ಭವನದಿಂದ ಹಿಡಿದು ಗ್ರಾಮಮಟ್ಟದವರೆಗೂ ಹರಡಿಕೊಂಡಿವೆ. ಹೀಗಾಗಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಪದವಿಯ ಅಧ್ಯಯನ ಮತ್ತು ಸಂಶೋಧನೆ ಮಾಡಿದವರಿಗೆ ಬಹು ಬೇಡಿಕೆಯಿದೆ ಎನ್ನಬಹುದು.

ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಪದವಿ

ಯಾವುದೇ ವಿಷಯದಲ್ಲಿ ಪಿ.ಯು.ಸಿ. ಮಾಡಿಕೊಂಡವರು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಡಿಪ್ಲೋಮಾ ಕೋರ್ಸ್‌ಗೆ ಸೇರಬಹುದು. ಯಾವುದೇ ವಿಷಯದಲ್ಲಿ ಪದವಿ ಪಡೆದವರು ಒಂದು ವರ್ಷದ ಬಿ.ಲಿಬ್‌. ಕೋರ್ಸ್‌ಗೆ ಸೇರಬಹುದು. ಸದ್ಯ ರಾಜ್ಯದ ಮುಕ್ತ ವಿ.ವಿ. ಮೈಸೂರು, ಕುವೆಂಪು ವಿ.ವಿ. ದೂರ ಶಿಕ್ಷಣ ಕೇಂದ್ರ ಶಿವಮೊಗ್ಗ, ಬೆಂಗಳೂರು ವಿ.ವಿ. ದೂರ ಶಿಕ್ಷಣ ಕೇಂದ್ರದಲ್ಲಿ ಬಿ.ಲಿಬ್‌. ಕೋರ್ಸ್‌ ಇದೆ. ಬಿ.ಲಿಬ್‌. ಪಡೆದವರು ಹಾಗೂ ಯಾವುದೇ ವಿಷಯದಲ್ಲಿ ಪದವಿ ಓದಿದವರು ಎರಡು ವರ್ಷಗಳ ಸ್ನಾತಕೋತ್ತರ (ಎಂ.ಲಿಬ್‌.) ಕೋರ್ಸ್‌ ಓದಬಹುದು. ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಎರಡು ವರ್ಷಗಳ ಸ್ನಾತಕೋತ್ತರ ಪದವಿ ಕೋರ್ಸ್‌ ಇದೆ. ಅಲ್ಲದೇ ಖಾಸಗಿ ಶಿಕ್ಷಣ ಸಂಸ್ಥೆಗಳು ಈ ವಿಷಯದಲ್ಲಿ ಡಿಪ್ಲೋಮಾ ಕೋರ್ಸ್‌ಗಳನ್ನು ಸಹ ಆರಂಭಿಸಿವೆ. ಉಳಿದಂತೆ ಈ ವಿಷಯದಲ್ಲಿ ಉನ್ನತ ಅಧ್ಯಯನ ಅಂದರೆ ಎಂ.ಫಿಲ್‌. ಹಾಗೂ ಪಿಎಚ್‌.ಡಿ. ಮಾಡಬಹುದು.

ರಾಜ್ಯದ ಪ್ರಮುಖ ಕಾಲೇಜುಗಳಲ್ಲಿ ಪದವಿ ಹಂತದಲ್ಲಿ ಐಚ್ಛಿಕ ವಿಷಯವಾಗಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಭ್ಯಾಸ ಮಾಡಲು ಅವಕಾಶವಿದೆ. ಪದವಿ ಹಂತದಲ್ಲಿ ಅಧ್ಯಯನ ಮಾಡಿದರೆ ಮುಂದಿನ ಹಂತಗಳಲ್ಲಿ ಅಭ್ಯಾಸ ಮಾಡುವುದಕ್ಕೆ ಆದ್ಯತೆ ದೊರೆಯಲ್ಲಿದ್ದು ಕೆಲಸ ಮಾಡುತ್ತಲೇ ಓದುವ ಅವಕಾಶ ಸಿಗುತ್ತದೆ.

ಸಾಫ್ಟ್‌ವೇರ್‌ ಕಂಪನಿಗಳಲ್ಲೂ ಅವಕಾಶ

ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದಲ್ಲಿ ಅಧ್ಯಯನ ಮಾಡಿದವರು ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಪಾಠ ಮಾಡಬಹುದು. ಉಳಿದಂತೆ ಗ್ರಂಥಪಾಲಕ, ಮಾಹಿತಿ ವಿಜ್ಞಾನಿ, ಮಾಹಿತಿ ಅಧಿಕಾರಿ, ಪ್ರಾಚೀನ ದಾಖಲೆಗಳ ಸಂರಕ್ಷಣಾಗಾರ, ಕ್ಯಾಟಲಾಗರ್, ಕ್ಯುರೇಟರ್, ವರ್ಚುವಲ್ ಲೈಬ್ರರಿಯನ್, ಮಾಹಿತಿ ವಿನ್ಯಾಸಗಾರ, ಮಾಹಿತಿ ಮಧ್ಯವರ್ತಿ, ಸಂಶೋಧಕರು, ಮಾಹಿತಿ ವ್ಯವಸ್ಥೆ ಉದ್ಯೋಗಿ, ಮೆಟಾಡಾಟ ವಿನ್ಯಾಸಗಾರ, ಮೆಟಾಡಾಟ ಮ್ಯಾನೇಜರ್, ವಿಷಯ ಸೂಚಿಕಾರ ಹಾಗೂ ಸಂರಕ್ಷಣಾಗಾರರಾಗಿ ಉದ್ಯೋಗಗಳು ಲಭ್ಯ. ಸಾಫ್ಟವೇರ್ ಕಂಪನಿಗಳಲ್ಲಿ ಸಹ ಅವಕಾಶಗಳು ವಿಪುಲವಾಗಿವೆ.

(ಲೇಖಕರು ಮುನಿರಾಬಾದ್‌ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಸಹಾಯಕ ಗ್ರಂಥಪಾಲಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT