ಗುರುವಾರ , ನವೆಂಬರ್ 21, 2019
23 °C

ಪ್ರಾಥಮಿಕ ಶಿಕ್ಷಕರ ನೇಮಕಾತಿ; ಅರ್ಹತೆ ಏನು?

Published:
Updated:
Prajavani

* ನಾನು ಬಿ.ಎಡ್‌. ಮಾಡುತ್ತಿದ್ದೇನೆ. ನನ್ನ ಪದವಿ ಮುಗಿದು ಐದು ವರ್ಷಗಳಾಗಿವೆ. ನಾನು ಎಸ್‌.ಸಿ. ಇದ್ದು, ನನಗೆ ವಿದ್ಯಾರ್ಥಿವೇತನ ಸಿಗುತ್ತದೆಯೇ ಮತ್ತು ನನ್ನ ಪದವಿ ವಿಷಯಗಳು ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಇತಿಹಾಸ ಇದ್ದು ಈ ವಿಷಯಗಳು ಸಿ.ಇ.ಟಿ.ಯಲ್ಲಿ 6ರಿಂದ 8ನೇ ತರಗತಿಗೆ ಶಿಕ್ಷಕ ವೃತ್ತಿಗೆ ಅರ್ಹತೆ ಇದೆಯೇ? ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ.

–ಸದಾಶಿವ ಕಾಂಬ್ಳೆ, ಊರು ಬೇಡ

ಸದಾಶಿವ, 2018-2019 ರ ಕರ್ನಾಟಕ ಸರ್ಕಾರದ ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8ನೇ ತರಗತಿ) ನೇಮಕಾತಿ ಅಧಿಸೂಚನೆಯಲ್ಲಿ ಪದವೀಧರ ಪ್ರಾಥಮಿಕ ಶಿಕ್ಷಕ (ಸಮಾಜ ಪಾಠಗಳು) ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಇತಿಹಾಸ/ ಅರ್ಥಶಾಸ್ತ್ರ / ಭೂಗೋಳಶಾಸ್ತ್ರ / ರಾಜ್ಯಶಾಸ್ತ್ರ ವಿಷಯಗಳ ಪೈಕಿ ಈ ಕೆಳಕಂಡಂತೆ ವಿದ್ಯಾರ್ಹತೆಯನ್ನು ನಿಗದಪಡಿಸಲಾಗಿದೆ.

1. ಪದವಿಯಲ್ಲಿ ಇತಿಹಾಸ/ ಅರ್ಥಶಾಸ್ತ್ರ / ಭೂಗೋಳಶಾಸ್ತ್ರ / ರಾಜ್ಯಶಾಸ್ತ್ರ ವಿಷಯಗಳ ಪೈಕಿ ಯಾವುದಾದರೂ ಎರಡು ವಿಷಯಗಳನ್ನು ಐಚ್ಛಿಕ ವಿಷಯಗಳಾಗಿ ಮೂರು ವರ್ಷವೂ ಅಧ್ಯಯನ ಮಾಡಿರಬೇಕು. ಸದರಿ ಎರಡು ವಿಷಯಗಳಲ್ಲಿ ಕನಿಷ್ಠ ಶೇ 50 ರಷ್ಟು ಅಂಕಗಳನ್ನು ಪಡೆದಿರಬೇಕು.

ಅಥವಾ

2. ಪದವಿಯಲ್ಲಿ ಇತಿಹಾಸ/ ಅರ್ಥಶಾಸ್ತ್ರ / ಭೂಗೋಳಶಾಸ್ತ್ರ / ರಾಜ್ಯಶಾಸ್ತ್ರ ವಿಷಯಗಳ ಪೈಕಿ ಒಂದು ವಿಷಯದಲ್ಲಿ ಮೂರು ವರ್ಷವೂ ಅಧ್ಯಯನ ಮಾಡಿರುವುದರೊಂದಿಗೆ ಕನಿಷ್ಠ ಶೇ 50 ರಷ್ಟು ಅಂಕಗಳನ್ನು ಪಡೆದಿರಬೇಕು ಮತ್ತು ಕನ್ನಡ/ ಇಂಗ್ಲಿಷ್/ ಹಿಂದಿ/ ಮರಾಠಿ/ ಉರ್ದು/ ತೆಲುಗು/ ತಮಿಳು/ ಕೊಂಕಣಿ ಭಾಷೆಗಳ ಪೈಕಿ ಒಂದು ಭಾಷೆಯನ್ನು ಐಚ್ಛಿಕವಾಗಿ ಮೂರು ವರ್ಷವೂ ಅಧ್ಯಯನ ಮಾಡಿ, ಸದರಿ ಭಾಷಾ ವಿಷಯದಲ್ಲಿ ಕನಿಷ್ಠ ಶೇ 50 ರಷ್ಟು ಅಂಕಗಳನ್ನು ಪಡೆದಿರಬೇಕು.

ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ/ ಇತರ ಹಿಂದುಳಿದ ವರ್ಗಗಳ ಪೈಕಿ ಪ್ರವರ್ಗ-1/ ವಿಕಲಚೇತನರಿಗೆ ನಿಗದಿಪಡಿಸಿರುವ ಎರಡು ವಿಷಯಗಳಲ್ಲಿ ಕನಿಷ್ಠ ಶೇ 45 ಅಂಕಗಳನ್ನು ಪಡೆದಿರಬೇಕು

3. ಶಿಕ್ಷಣದಲ್ಲಿ ಡಿಪ್ಲೋಮಾ ಅಥವಾ ಪದವಿ ಹಂತದಲ್ಲಿ ಇತಿಹಾಸ/ ಅರ್ಥಶಾಸ್ತ್ರ / ಭೂಗೋಳಶಾಸ್ತ್ರ / ರಾಜ್ಯಶಾಸ್ತ್ರ ವಿಷಯಗಳ ಪೈಕಿ ಒಂದು ವಿಷಯವನ್ನು ಬೋಧನಾ ವಿಷಯವಾಗಿ (ಮೆಥಡಾಲಜಿ) ಅಭ್ಯಾಸ ಮಾಡಿರಬೇಕು.

ಇವಿಷ್ಟು ಅರ್ಹತೆಯನ್ನು ನೀವು ಪಡೆದಿದ್ದಲ್ಲಿ ಸಿ.ಇ.ಟಿ. ಪರೀಕ್ಷೆಯನ್ನು ಎದುರಿಸಬಹುದು. ಹೆಚ್ಚಿನ ಮಾಹಿತಿಗಾಗಿ ಶಾಲಾ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿರುವ ನೇಮಕಾತಿ ಅಧಿಸೂಚನೆಯನ್ನು ಪರಿಶೀಲಿಸಿ.

ಇನ್ನು ವಿದ್ಯಾರ್ಥಿವೇತನದ ಬಗೆಗಿನ ನಿಖರವಾದ ಮಾಹಿತಿಗೆ ಭಾರತ ಸರ್ಕಾರದ ರಾ‍ಷ್ಠ್ರೀಯ ವಿದ್ಯಾರ್ಥಿ ವೇತನದ ಪೋರ್ಟಲ್ (ನ್ಯಾಷನಲ್ ಸ್ಕಾಲರ್‌ಶಿಪ್ ಪೋರ್ಟಲ್) ನಲ್ಲಿ ಪರಿಶೀಲಿಸಿ. ಈ ಪೋರ್ಟಲ್‌ನ ವೆಬ್‌ಸೈಟ್ ವಿಳಾಸ www.scholarships.gov.in ಆಗಿದ್ದು, ಇಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ಇದ್ದು, ಆ ವಿದ್ಯಾರ್ಥಿ ವೇತನಗಳಿಗೆ ಅರ್ಜಿ ಸಲ್ಲಿಸುವ ಸಮಯ, ವಿಧಾನ, ವಯೋಮಿತಿ ಹಾಗೂ ಇತರ ಎಲ್ಲಾ ವಿವರಗಳು ಲಭ್ಯವಿವೆ. ಈ ಬಗ್ಗೆ ಮಾಹಿತಿ ಪಡೆದು ಮುಂದಿನ ತಯಾರಿ ಮಾಡಿಕೊಳ್ಳಿ. ಶುಭಾಶಯ.

* ನಾನು ದ್ವಿತೀಯ ಪಿ.ಯು.ಸಿ. ಮುಕ್ತ ವಿಶ್ವವಿದ್ಯಾಲಯದಲ್ಲಿ ಮುಗಿಸಿ ನಂತರ ಬಿಸಿಎ, ಎಂ.ಎಸ್‌ಸಿ. ಕಂಪ್ಯೂಟರ್ ಸೈನ್ಸ್, ಬಿ.ಎಡ್. ಗುಲ್ಬರ್ಗ ವಿಶ್ವವಿದ್ಯಾಲಯಲ್ಲಿ ಮಾಡಿದ್ದೇನೆ. ನನಗೆ ಟೆಟ್ ಪರೀಕ್ಷೆ ಬರೆಯಲು ಅವಕಾಶ ಇದೆ. ಆದರೂ ನನಗೆ ಸರ್ಕಾರಿ ಕೆಲಸ ಸಿಗುವುದಿಲ್ಲ ಎಂದು ಎಲ್ಲರೂ ಹೇಳುತ್ತಿದ್ದಾರೆ. ಕಾರಣ ದ್ವಿತೀಯ ಪಿ.ಯು.ಸಿ. ಮುಕ್ತ ವಿಶ್ವವಿದ್ಯಾಲಯದಲ್ಲಿ ಮುಗಿಸಿದ್ದೇನೆ. ನನಗೆ ಮುಂದೆ ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಓದಿದ್ದು ವ್ಯರ್ಥವಾಗುತ್ತಿದೆ ಅನ್ನಿಸುತ್ತಿದೆ. ಏನು ಮಾಡುವುದು ತಿಳಿಸಿ.

–ಮಂಜು, ಊರು ಬೇಡ

ಮಂಜು, ಕರ್ನಾಟಕ ಸರ್ಕಾರದ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ ವಿದ್ಯಾರ್ಹತೆಯಾಗಿ ಪದವಿಯಲ್ಲಿ ಕನಿಷ್ಠ ಶೇ 50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಮತು ಬಿ.ಎಡ್. ಪದವಿ ಪಡೆದಿರಬೇಕು ಎಂದಷ್ಟೇ ಇದೆಯೇ ವಿನಃ ನಿಮ್ಮ ಶಿಕ್ಷಣ ದೂರ ಶಿಕ್ಷಣದಲ್ಲಿ ಪಡೆದಿರಬಾರದೆಂದು ಯಾವ ನಿರ್ದೇಶನವನ್ನೂ ನೀಡಿಲ್ಲ. ಹಾಗಾಗಿ ನೀವು ನಿಮ್ಮ ದ್ವೀತಿಯ ಪಿಯುಸಿಯನ್ನು ದೂರ ಶಿಕ್ಷಣದಲ್ಲಿ ಮುಗಿಸಿರುವುದು ಯಾವ ರೀತಿಯಲ್ಲೂ ಸಮಸ್ಯೆ ಆಗದು ಎಂದು ನನ್ನ ಅನಿಸಿಕೆ.

ಆದರೆ ಸಾಮಾನ್ಯವಾಗಿ ಪ್ರಾಥಮಿಕ ಮತ್ತು ಪ್ರೌಡಶಿಕ್ಷಣದ ಹಂತದಲ್ಲಿ ಶಿಕ್ಷಕರಾಗಲು ಪದವಿಯಲ್ಲಿ ವಿಜ್ಞಾನ, ಭಾಷೆ ಅಥವಾ ಸಮಾಜ ವಿಜ್ಞಾನದ ವಿಷಯಗಳನ್ನು ಓದಿರಬೇಕು. ಬಿ.ಸಿ,ಎ. ಪದವಿಯಲ್ಲಿ ಕಂಪ್ಯೂಟರ್ ಕುರಿತಾಗಿ ನಿಮ್ಮ ಶಿಕ್ಷಣ ಇರುವುದರಿಂದ ಅದರ ಆಧಾರದ ಮೇಲೆ ಸದ್ಯ ಯಾವುದೇ ಶಿಕ್ಷಕ ನೇಮಕಾತಿ ನಡೆಯುತ್ತಿಲ್ಲ. ಮುಂದೆ ಕಂಪ್ಯೂಟರ್ ಶಿಕ್ಷಕರ ನೇಮಕಾತಿ ನಡೆದರೆ ಬಿ.ಸಿ.ಎ./ ಎಂ.ಎಸ್‌ಸಿ. ಶಿಕ್ಷಣವನ್ನು ಪರಿಗಣಿಸಬಹುದು.

ಆದರೆ ನೀವು ಪಿ.ಯು.ಸಿ. ಶಿಕ್ಷಣದ ಹಂತದಲ್ಲಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಬಹುದು. 2015 ರ ಪಿ.ಯು. ಉಪನ್ಯಾಸಕರ ನೇಮಕಾತಿಯಲ್ಲಿ ಕಂಪ್ಯೂಟರ್ ಸೈನ್ಸ್ ಉಪನ್ಯಾಸಕರಾಗಲು ಎಂ.ಎಸ್‌ಸಿ. ಅಥವಾ ಬಿ.ಟೆಕ್. ಅಥವಾ ಎಂ.ಟೆಕ್, ಅಥವಾ ಎಂ.ಎಸ್‌ಸಿ. ಕಂಪ್ಯೂಟರ್ ಸೈನ್ಸ್ ಪದವಿ ಹೊಂದಿರಬೇಕೆಂದು ತಿಳಿಸಲಾಗಿದೆ. ಅಷ್ಟು ಮಾತ್ರವಲ್ಲದೆ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಲು ಇಚ್ಛಿಸಿದಲ್ಲಿ ನೆಟ್ ಪರೀಕ್ಷೆಯನ್ನು ತೇರ್ಗಡೆ ಹೊಂದುವುದು ಮುಖ್ಯವಾಗಿರುತ್ತದೆ. ಆ ಬಗ್ಗೆ ತಿಳಿದು ತಯಾರಿ ಮಾಡಿಕೊಳ್ಳಿ. ಶುಭಾಶಯ.

* ಕಳೆದ ವರ್ಷ ಬಿ.ಎಸ್‌ಸಿ. ಸೇರಿಕೊಂಡೆ. ಆದರೆ ನನಗೆ ಅದನ್ನು ಓದಲು ಸಾಧ್ಯವಾಗದೆ ಕಾಲೇಜನ್ನು ಬಿಟ್ಟುಬಿಟ್ಟೆ. ಈಗ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಗೊಂದಲದಲ್ಲಿದ್ದೇನೆ. ನನ್ನ ಭವಿಷ್ಯಕ್ಕೆ ನೆರವಾಗುವ ಯಾವ ಕೋರ್ಸ್‌ ಮಾಡಬೇಕೆಂದು ಸಲಹೆ ನೀಡಿ.

–ಮಧುಶ್ರೀ, ಊರು ಬೇಡ

ಮಧುಶ್ರೀ, ನೀವು ಈಗಾಗಲೇ ನಿಮ್ಮ ಬಹುಪಾಲು ಶಿಕ್ಷಣವನ್ನು ಮುಗಿಸಿ ಮುಂದಿನ ಹಂತಕ್ಕೆ ಹೋಗುತ್ತಿದ್ದೀರಿ. ಈ ಸಮಯದಲ್ಲಿ ನೀವು ಆದಷ್ಟು ಬೇಗ ನಿಮ್ಮ ಗೊಂದಲಗಳನ್ನು ನಿವಾರಿಸಿಕೊಂಡು ಸೂಕ್ತವಾದ ನಿರ್ಧಾರ ಕೈಗೊಳ್ಳುವುದು ಉತ್ತಮ. ಇಲ್ಲಿ ಬೇರೆಯವರು ನಿಮ್ಮ ಭವಿಷ್ಯಕ್ಕೆ ಯಾವುದು ಉತ್ತಮ ಎಂದು ಸೂಚಿಸುವುದಕ್ಕಿಂತ ನೀವೆ ಕಂಡುಕೊಳ್ಳುವುದು ಉತ್ತಮ. ಯಾವ ಕೋರ್ಸ್‌ ಉತ್ತಮ ಎಂದು ನೋಡುವುದಕ್ಕಿಂತ ನಿಮ್ಮ ಆಸಕ್ತಿ ಯಾವುದು ಎಂದು ಕಂಡುಕೊಳ್ಳಿ. ಯಾವ ಕ್ಷೇತ್ರದಲ್ಲಿ ನೀವು ಮುಂದೆ ಕೆಲಸ ಮಾಡಲು ಇಚ್ಛಿಸುತ್ತೀರಿ ಎಂದು ನಿರ್ಧರಿಸಿ ಅದರ ಪ್ರಕಾರವಾಗಿ ಯಾವ ಕೋರ್ಸ್‌ ಓದಬೇಕೆಂದು ತಿರ್ಮಾನಿಸಿ ಮುಂದುವರೆಯಬೇಕು. ನಿಮ್ಮ ಬಿ.ಎಸ್‌ಸಿ.ಯನ್ನೆ ಮುಂದುವರಿಸುವುದಾದರೆ ಅದನ್ನೆ ಪೂರ್ಣಗೊಳಿಸಿ ಆ ವಿಷಯಗಳ ಕ್ಷೇತ್ರಗಳಲ್ಲಿ ಕೆಲಸ ಮಾಡಬಹುದು ಅಥವಾ ಪದವಿಯ ಆಧಾರದ ಮೇಲೆ ಕರೆಯಲಾಗುವ ಬ್ಯಾಂಕಿಂಗ್, ಎಫ್.ಡಿ.ಎ. ಹಾಗೂ ಇತರ ಕ್ಷೇತ್ರಗಳಲ್ಲಿ ಕೆಲಸ ಮಾಡಬಹುದು. ಅದಲ್ಲದೆ ಆರೋಗ್ಯ ಕ್ಷೇತ್ರವಾದರೆ ನರ್ಸಿಂಗ್, ಲ್ಯಾಬ್ ಟೆಕ್ನಿಷಿಯನ್ ಅಥವಾ ಇತರೆ ಪ್ಯಾರಾ ಮೆಡಿಕಲ್ ಕೋರ್ಸ್ ಮಾಡಬಹುದು. ಕಂಪ್ಯೂಟರ್ ಕ್ಷೇತ್ರವಾದರೆ ಅನಿಮೇಶನ್, ವಿನ್ಯಾಸ ಹಾಗೂ ಇತರ ಕೋರ್ಸ್‌ಗಳನ್ನು ಮಾಡಬಹುದು. ಯಾವುದಕ್ಕೂ ನಿಮ್ಮ ಆಸಕ್ತಿ ತಿಳಿದು ನಿರ್ಧರಿಸಿ. ಸಾಕಷ್ಟು ಸಮಯ ವಿನಿಯೋಗಿಸಿ ನಿರ್ಧಾರಕ್ಕೆ ಬನ್ನಿ. ಒಮ್ಮೆ ನಿರ್ಧಾರಕ್ಕೆ ಬಂದ ನಂತರ ಪದೇ ಪದೇ ನಿರ್ಧಾರವನ್ನು ಬದಲಾಯಿಸದೆ ಮುಂದುವರಿಯುವುದು ಉತ್ತಮ. ಶುಭವಾಗಲಿ.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ಪ್ರತಿಕ್ರಿಯಿಸಿ (+)