ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ವಿಜ್ಞಾನದಲ್ಲಿ ಸಂಶೋಧನೆ ಪ್ರಾಯೋಗಿಕತೆಗೆ ಒತ್ತು

Last Updated 21 ಮೇ 2019, 19:30 IST
ಅಕ್ಷರ ಗಾತ್ರ

‘ಕಲಿಕೆ ಮತ್ತು ಪ್ರಾಯೋಗಿಕತೆ’ (Hands-on training) ಎನ್ನುವ ಪರಿಕಲ್ಪನೆ ಸಂಶೋಧನಾ ಕ್ಷೇತ್ರದ ಹೊಸ ವಿಧಾನ. ಸಮಾಜ ವಿಜ್ಞಾನಗಳ ಸಂಶೋಧನೆ ಕಳಪೆ ಗುಣಮಟ್ಟದ್ದು ಎನ್ನುವ ಅಕಾಡೆಮಿಕ್‌ ವಲಯದ ಟೀಕೆಗೆ ಉತ್ತರವಾಗಿ ಈ ವಿಧಾನದಲ್ಲಿ ಸಂಶೋಧನೆ ನಡೆಸುವ ಅಗತ್ಯವಿದೆ ಎಂಬುದು ತಜ್ಞರ ಪ್ರತಿಪಾದನೆ.

ಸಂಶೋಧನೆಯೊಂದು ಸತ್ಯದ ಬೆಳಕಾಗಬೇಕು, ಜ್ಞಾನದ ಕೌಶಲ ಹೆಚ್ಚಿಸಬೇಕು, ಉದ್ಯೋಗ ಪಡೆಯಲು ಮಾನದಂಡದ ಊರುಗೋಲು ಆಗಬೇಕೆಂಬ ಚಿಂತನೆಯೊಂದು ಈ ವಿಧಾನದ ಮೂಲಕ ರೂಪುಗೊಂಡಿದೆ. ತರಗತಿಯಲ್ಲಿ ಏನನ್ನು ಬೋಧಿಸಲಾಗುತ್ತದೆಯೋ ಅದನ್ನು ಪ್ರಾಯೋಗಿಕವಾಗಿ ಮಾಡಿಸುವುದೇ ‘ಕಲಿಕೆ ಮತ್ತು ಪ್ರಾಯೋಗಿಕ’ ವಿಧಾನದ ತಿರುಳು.

ವೈದ್ಯಕೀಯ ಕೋರ್ಸ್‌ಗಳಲ್ಲಿ ಈ ವಿಧಾನವನ್ನು ಹೆಚ್ಚು ಅನುಸರಿಸಲಾಗುತ್ತದೆ. ವೈದ್ಯಕೀಯ ವಿದ್ಯಾರ್ಥಿಗಳು ವೃತ್ತಿ ಅಭ್ಯಾಸ ಮಾಡುತ್ತಲೇ ರೋಗ ವಿಧಾನ, ಗುಣಲಕ್ಷಣ, ಚಿಕಿತ್ಸೆ ಬಗ್ಗೆಯೂ ಕಲಿಯುತ್ತಾರೆ. ಆದರೆ, ಸಮಾಜ ವಿಜ್ಞಾನಗಳಲ್ಲಿ ಎಷ್ಟೋ ಸಂಶೋಧನೆಗಳು ನಡೆದಿವೆ. ಆದರೆ, ಸಮಸ್ಯೆಗೆ ಪರಿಹಾರ ಸಿಕ್ಕಿರುವ ಉದಾಹರಣೆ ಬೆರಳಣಿಕೆಯಷ್ಟು. ಉದಾಹರಣೆಗೆ ‘ಜಾತಿ’ವಿಷಯವಾಗಿ ಹಲವಾರು ಸಂಶೋಧನೆಗಳು ನಡೆದಿವೆ. ಆದರೆ, ಪರಿಹಾರ ಶೂನ್ಯ. ಸಮಸ್ಯೆಗೂ, ಸಂಶೋಧನಾರ್ಥಿಗೂ ಸಂಬಂಧವೇ ಇರುವುದಿಲ್ಲ. ಈ ಅಂತರ ತಗ್ಗಿಸಲು ಕಲಿಕೆ ಮತ್ತು ಪ್ರಾಯೋಗಿಕ ವಿಧಾನ ಉಪಯುಕ್ತ ಎನ್ನಬಹುದು. ಇಂತಹ ಪ್ರತಿಪಾದನೆ ಹೊತ್ತಿನಲ್ಲೇ ಹಳೆ ಜಾಡಿನಿಂದ ಹೊರ ಬಂದಿರುವ40 ಮಂದಿ ಸಂಶೋಧನ ವಿದ್ಯಾರ್ಥಿಗಳು ಮೂಲ ವಿಜ್ಞಾನಗಳ ಹಾದಿಯಲ್ಲಿಯೇ ಸಮಾಜ ವಿಜ್ಞಾನ ಸಂಶೋಧನೆಗಳು ಕೂಡ ಪ್ರಾಯೋಗಿಕ ಮತ್ತು ವಸ್ತುನಿಷ್ಠವಾಗಿ ನಡೆಯಬೇಕೆಂಬ ಉದ್ದೇಶದಿಂದ ‘ಕಲಿಕೆ ಮತ್ತು ಪ್ರಾಯೋಗಿಕ’ ವಿಧಾನ ಮೊರೆ ಹೋಗಿದ್ದಾರೆ.

ಇದರ ಭಾಗವಾಗಿಯೇ ಸಂಶೋಧನ ವಿದ್ಯಾರ್ಥಿಗಳು ಬೆಂಗಳೂರಿನ ನಾಯಂಡಹಳ್ಳಿ ಕೊಳಚೆ ಪ್ರದೇಶ, ಭಿಕ್ಷುಕರ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿ – ಗತಿ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಬೀದಿ ಬದಿ ವ್ಯಾಪಾರಿಗಳ ಆರ್ಥಿಕತೆ, ಸಾಮಾಜಿಕ ಬದುಕಿನ ಬಗ್ಗೆ ಕ್ಷೇತ್ರ ಕಾರ್ಯ ಕೈಗೊಂಡು ಮಾಹಿತಿ ಸಂಗ್ರಹಿಸಿದ್ದಾರೆ. ಸಂಶೋಧನೆ ಪ್ರಸ್ತಾವ, ಸಾಹಿತ್ಯ ಪರಾಮರ್ಶೆ, ಸಮಗ್ರ ಕ್ರಿಯಾಯೋಜನೆ, ಪ್ರಶ್ನಾವಳಿ ತಯಾರಿಕೆ, ದತ್ತಾಂಶಗಳನ್ನು ತಂತ್ರಾಂಶಕ್ಕೆ ಅಳವಡಿಸಿ ಕೋಷ್ಠಕಗಳನ್ನು ರೂಪಿಸುವುದು, ವಿಶ್ಲೇಷಣೆ, ದತ್ತಾಂಶಗಳನ್ನು ಬಳಸಿಕೊಂಡು ಅಧ್ಯಯನ ಪೂರ್ವ ಪರಿಕಲ್ಪನೆ ಹೇಗೆ ಪರೀಕ್ಷಿಸಬೇಕು ಎಂಬುದನ್ನು ಪ್ರಾಯೋಗಿಕವಾಗಿ ನಡೆಸಿದ್ದಾರೆ.

‘ಪ್ರಾಯೋಗಿಕ ಸಂಶೋಧನೆ ಬೌದ್ಧಿಕ ಪಕ್ವತೆ ಹೆಚ್ಚಿಸುತ್ತದೆ. ಸಮಯ ನಿರ್ವಹಣೆ ಹೇಗೆ ಮಾಡಬೇಕು? ಸಂಶೋಧನೆಯಲ್ಲಿ ಹೇಗೆ ತೊಡಗಿಕೊಳ್ಳಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಲು ಈ ಪ್ರಕ್ರಿಯೆ ಸಹಾಯಕವಾಗಿದೆ’ ಎಂಬುದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಅರ್ಥಶಾಸ್ತ್ರ ವಿಭಾಗದ ಸಂಶೋಧನ ವಿದ್ಯಾರ್ಥಿನಿ ಪಾರ್ವತಿ ಕ.ಕಲಮಡಿ ಹಾಗೂ ತೇಜ್‍ಪುರ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದ ಸಂಶೋಧನ ವಿದ್ಯಾರ್ಥಿ ಸುಬ್ಜಿತ್ ಪೌಲ್ ಅಭಿಮತ.

ಸಮಾಜ ವಿಜ್ಞಾನ ವಿಷಯಗಳ ಸಂಶೋಧನೆ ವಿಧಾನ ಬಹುತೇಕ ಒಂದೇ ಮಾದರಿಯಲ್ಲಿ ಇರುವುದರಿಂದ ಸಂಶೋಧನೆ ರೂಪರೇಷೆ ಸಿದ್ಧಪಡಿಸಲು ಹಾಗೂ ಆತ್ಮವಿಶ್ವಾಸ ಮೂಡಲು ಗುಂಪು ಕಲಿಕೆ ಬಹಳ ಮುಖ್ಯ.ವಿಶ್ವವಿದ್ಯಾಲಯ ಮತ್ತು ಯುಜಿಸಿ ಕೋರ್ಸ್‌ವರ್ಕ್‌ ಮಾಡುವುದನ್ನು ಬಿಟ್ಟು ಈ ರೀತಿಯ ಪ್ರಾಯೋಗಿಕವಾದ ಮಾದರಿ ಅಳವಡಿಸಿಕೊಳ್ಳಬೇಕೆಂಬ ವಾದವೂ ಮುನ್ನೆಲೆಗೆ ಬಂದಿದೆ.

ಉಪಯುಕ್ತತೆ: ಈ ವಿಧಾನದಲ್ಲಿ ಸಂಶೋಧನೆ ನಡೆದರೆ ಸಂಶೋಧನೆಗಳು ಹೆಚ್ಚು ಸಮರ್ಪಕವಾಗುತ್ತವೆ. ಸಮಾಜ ವಿಜ್ಞಾನಗಳಲ್ಲೂ ಮೂಲ ವಿಜ್ಞಾನದಂತೆಯೇ ಸಂಶೋಧನೆ ನಡೆದು ಸಾಮಾಜಿಕ ಬದಲಾವಣೆ ಮತ್ತು ಅಭಿವೃದ್ಧಿಗೆ ಹೊಸ ದೃಷ್ಟಿಕೋನ ರೂಪಿಸಲು ಸಾಧ್ಯವಾಗುತ್ತದೆ. ವ್ಯಕ್ತಿಗತ ಬದಲಾವಣೆ, ಉದ್ಯೋಗ ಪಡೆಯಲು ಕೂಡ ನೆರವಾಗಲಿದೆ. ಅಲ್ಲದೆ, ಸಂಶೋಧನ ಕ್ಷೇತ್ರದ ವ್ಯಾಪ್ತಿ ಕೂಡ ವಿಸ್ತಾರಗೊಳ್ಳಲಿದೆ. ಎಲ್ಲ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸಂಶೋಧನೆಯಲ್ಲಿ ‘ಕಲಿಕೆ ಮತ್ತು ಪ್ರಾಯೋಗಿಕತೆ’ ವಿಧಾನಕ್ಕೆ ಒತ್ತು ನೀಡಬೇಕೆಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ವಿದ್ಯಾರ್ಥಿಗಳ ಸಂಶೋಧನೆಗೆ ಪೂರಕ

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ಭಾರತ ವಿಶ್ವವಿದ್ಯಾಲಯದ ತಳ ಸಮುದಾಯಗಳ ಅಧ್ಯಯನ ಕೇಂದ್ರವು ಸಂಶೋಧನೆಯಲ್ಲಿ ‘ಕಲಿಕೆ ಮತ್ತು ಪ್ರಾಯೋಗಿಕತೆ’ ಎನ್ನುವ ಪರಿಕಲ್ಪನೆ ಪರಿಚಯಿಸಿದೆ. ಹತ್ತು ದಿನಗಳ ಕಾರ್ಯಾಗಾರ ಹಮ್ಮಿಕೊಂಡು, ದೇಶದ ವಿಭಿನ್ನ ಸಾಮಾಜಿಕ ಹಿನ್ನೆಲೆಯ 40ಮಂದಿ ಸಂಶೋಧನಾ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ತರಬೇತಿ ನೀಡಿದೆ.

ಸಮಾಜ ವಿಜ್ಞಾನಗಳ ಸಂಶೋಧನೆಯಲ್ಲಿ ಅಧ್ಯಯನಶೀಲತೆ ಮತ್ತು ಶಿಸ್ತು ಮಾಯವಾಗಿದೆ. ಈಗಾಗಲೇ ಕೈಗೊಂಡಿರುವ ಸಂಶೋಧನಾ ಕೆಲಸಗಳನ್ನು ವಿದ್ಯಾರ್ಥಿಗಳು ಪುನರ್ ಪರಿಶೀಲಿಸಿ ಗುಣಮಟ್ಟಕ್ಕೆ ಆದ್ಯತೆ ನೀಡುವುದು ಈ ಕಾರ್ಯಾಗಾರದ ಉದ್ದೇಶವಾಗಿತ್ತು ಎಂದು ತಳ ಸಮುದಾಯಗಳ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಆರ್.ವಿ.ಚಂದ್ರಶೇಖರ್ ವಿವರಿಸಿದರು.

ದೇಶದ ವಿವಿಧ ಭಾಗಗಳಲ್ಲಿ ಸಂಶೋಧನೆ ಕೈಗೊಂಡಿರುವ ವಿದ್ಯಾರ್ಥಿಗಳು ಒಂದೆಡೆ ಸೇರುವುದರಿಂದ ಆಯ್ಕೆ ಮಾಡಿಕೊಂಡಿರುವ ಸಂಶೋಧನೆ ವಸ್ತು ವಿಷಯದ ಬಗ್ಗೆ ವಿಚಾರ ವಿನಿಮಯ ನಡೆಯುತ್ತದೆ. ಆಯ್ಕೆ ಮಾನದಂಡ, ಪ್ರಾದೇಶಿಕ ನೆಲೆಗಟ್ಟಿನ ಬಗ್ಗೆಯೂ ಚರ್ಚೆ ನಡೆದು, ವಿದ್ಯಾರ್ಥಿಗಳ ಸಂಶೋಧನೆಗೆ ಪೂರಕ ಮಾಹಿತಿ ಸಿಗುತ್ತದೆ.

ದೇಶದಲ್ಲಿ ಸಮಾಜ ವಿಜ್ಞಾನಗಳ ಸಂಶೋಧನೆ ಅಂಚಿಗ ತಳ್ಳಲ್ಪಟ್ಟಿದೆ. ಹೊಸ ಸಂಶೋಧಕರು ಸಮಾಜ ವಿಜ್ಞಾನದ ಘನತೆ ಹೆಚ್ಚಿಸುವಂತಹ ಸಂಶೋಧನೆ ಕೈಗೊಳ್ಳಬೇಕು. ಎಲ್ಲ ವಿಶ್ವವಿದ್ಯಾಲಗಳಲ್ಲಿ ಇಂತಹ ತರಬೇತಿ ನಡೆಯುವ ಅವಶ್ಯವಿದೆ ಎಂದು ತಜ್ಞರಾದ ಪ್ರೊ.ಬಾಬು ಮ್ಯಾಥ್ಯು, ಡಾ.ಪ್ರದೀಪ್‌ ರಮಾವತ್, ಡಾ.ಸಿ.ಜಿ.ಲಕ್ಷ್ಮಿಪತಿ ಅವರ ಪ್ರತಿಪಾದನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT