ಗುರುವಾರ , ನವೆಂಬರ್ 14, 2019
18 °C
ಬೆಟ್ಟದ ತಪ್ಪಲಿನ ಶಾಲೆಯಲ್ಲಿ ಬಂಡೆಗಳ ಮೇಲೂ ಅಕ್ಷರ ಬಣ್ಣ l ಆಕರ್ಷಕ ಕಲಿಕಾ ವಾತಾವರಣ

ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್‌ಕ್ಲಾಸ್

Published:
Updated:
Prajavani

ಕುರುಗೋಡು: ಸ್ಮಾರ್ಟ್‌ಕ್ಲಾಸ್ ಕಲಿಕೆ, ಪಠ್ಯೇತರ ಚಟುವಟಿಕೆ, ಪರಿಸರ ಪ್ರಜ್ಞೆ– ಇವೆಲ್ಲವನ್ನೂ ಒಂದೇ ಕಡೆ ನೋಡಬೇಕೆಂದರೆ ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದ ಹರಿಕೃಪಾ ಕಾಲೊನಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬರಬೇಕು.  ಖಾಸಗಿ ಶಾಲೆಗಳ ಪ್ರಭಾವದಿಂದ ಮುಚ್ಚುವ ಭೀತಿಯಲ್ಲಿರುವ ಸರ್ಕಾರಿ ಶಾಲೆಗಳ ನಡುವೆ ಈ ಶಾಲೆಯ ಪ್ರಗತಿ ಗಮನ ಸೆಳೆಯುತ್ತಿದೆ .

2010ರಲ್ಲಿ ಕೇವಲ 5 ವಿದ್ಯಾರ್ಥಿಗಳಿಂದ ಆರಂಭವಾದ ಶಾಲೆಯಲ್ಲಿ ಈಗ 111 ವಿದ್ಯಾರ್ಥಿಗಳು ಅಕ್ಷರಜ್ಞಾನ ಪಡೆಯುತ್ತಿದ್ದಾರೆ. ಅವರೆಲ್ಲ ಅಲೆಮಾರಿ, ಬುಡಕಟ್ಟು ಜನಾಂಗಕ್ಕೆ ಸೇರಿದವರು. ಬಹುತೇಕ ಮಕ್ಕಳು ಮೊದಲು ಮನೆಗಳಿಗೆ ಅಲೆದು ಭಿಕ್ಷಾಟನೆ ಮಾಡುತ್ತಿದ್ದರು. ಶಾಲೆಗೆ ದಾಖಲಾದ ನಂತರ ಪುಸ್ತಕದ ಬ್ಯಾಗ್ ಹಿಡಿದು ಶಾಲೆಯತ್ತ ಖುಷಿಯಿಂದ ಹೆಜ್ಜೆ ಹಾಕುತ್ತಿದ್ದಾರೆ.

ವಿದ್ಯಾರ್ಥಿಗಳು ಪಠ್ಯದ ಜತೆ ಪಠ್ಯೇತರ ಚಟುವಟಿಕೆಯಲ್ಲಿಯೂ ಮುಂದಿದ್ದಾರೆ. ಕ್ರಿಯಾಶೀಲ ಶಿಕ್ಷಕ ತುಕಾರಾಂ ಗೊರವಾ ಅವರ ಮಾರ್ಗದರ್ಶನದಲ್ಲಿ ತಾಲ್ಲೂಕಿನ ಪ್ರಾಥಮಿಕ ಶಾಲಾ ಹಂತದ ಪಠ್ಯೇತರ ಚಟುವಟಿಕೆ ಸ್ಪರ್ಧೆಯಲ್ಲಿ ಭಾಗವಹಿಸಿ, ಬುಡಕಟ್ಟು ಜನಾಂಗದ ನೃತ್ಯ ಪ್ರದರ್ಶಿಸಿ ಬಹುಮಾನ ತರುತ್ತಿದ್ದಾರೆ.

ಈ ಶಾಲೆಯ 11 ವಿದ್ಯಾರ್ಥಿಗಳು ಕಳೆದ ವರ್ಷ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯ್ಕೆಯಾಗಿದ್ದಾರೆ. ಅದರಿಂದ ಖುಷಿಯಾದ ಅವರ ಪೋಷಕರು ಶಾಲೆಯ ಅಭಿವೃದ್ಧಿಗಾಗಿ ₹ 5 ಸಾವಿರ ದೇಣಿಗೆಯನ್ನೂ ನೀಡಿದ್ದಾರೆ. ಬೆಂಗಳೂರಿನ ಭಾರತೀಯ ಸಾಕ್ಷರತಾ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಪ್ರಮೋದ್ ಶ್ರೀಧರ ಮೂರ್ತಿಶಾಲೆಗೆ ಪ್ರೊಜೆಕ್ಟರ್ ಕೊಡುಗೆ ನೀಡಿದ್ದಾರೆ. ಪೋಷಕರ ದೇಣಿಗೆ ಹಣ ಮತ್ತು ಶಿಕ್ಷಕರ ಕೊಡುಗೆಯಿಂದ ಶಾಲೆಯಲ್ಲಿ ಸ್ಮಾರ್ಟ್‌ಕ್ಲಾಸ್ ನಡೆಸಲಾಗುತ್ತಿದೆ.

ಇದನ್ನೂ ಓದಿ: ಸರ್ಕಾರಿ ಶಾಲೆ ಬೆಳೆಸಲು ಪಣ: ವಾಟ್ಸ್‌ ಆ್ಯಪ್ ಗ್ರೂಪ್‌ನಿಂದ ಸ್ಮಾರ್ಟ್ ಕ್ಲಾಸ್

‘ಸ್ಮಾರ್ಟ್‌ಕ್ಲಾಸ್‌ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಮತ್ತು ಸಾಮರ್ಥ್ಯ ಹೆಚ್ಚಿಸಿದೆ. ಕನ್ನಡ ಪದಗಳನ್ನು ಸ್ಪಷ್ಟವಾಗಿ ಉಚ್ಚರಿ
ಸಲು ಬಾರದ ಮಕ್ಕಳು ಇಂಗ್ಲಿಷ್‌ ಪದಗಳನ್ನು ಸಲೀಸಾಗಿ ಬಳಸುತ್ತಿದ್ದಾರೆ’ ಎಂದು ಶಿಕ್ಷಕ ತುಕಾರಾಂ ಗೊರವಾ ಹೇಳಿದರು.  

‘ಶಾಲೆ ಆವರಣದಲ್ಲಿ ಲಭ್ಯವಿರುವ ಸ್ಥಳದಲ್ಲಿ ಗಿಡಗಳನ್ನು ಬೆಳೆಸಿ ಹಸಿರು ವಾತಾವರಣ ನಿರ್ಮಾಣ ಮಾಡಲಾಗಿದೆ. ಶಾಲೆಯ ಕಟ್ಟಡಕ್ಕೆ ಹೊಂದಿಕೊಂಡು ಬೆಟ್ಟ ಇರುವುದರಿಂದ ಅದರ ಕಲ್ಲುಗಳಿಗೆ ಬಣ್ಣ ಬಳಿದು ವರ್ಣಮಾಲೆಗಳನ್ನು ಬರೆಯಲಾಗಿದೆ. ಶಾಲೆಯ ಗೋಡೆಗಳ ಮೇಲೆ ಆಕರ್ಷಕ ಚಿತ್ರಗಳನ್ನು ಬಿಡಿಸಿ ವಿದ್ಯಾರ್ಥಿಗಳನ್ನು ಆಕರ್ಷಿಸುವ ಕಲಿಕಾ ವಾತಾವರಣ ರೂಪಿಸಲಾಗಿದೆ. ಇದಕ್ಕೆ ಮುಖ್ಯಶಿಕ್ಷಕ ಜಿ.ನಾಗರಾಜ ₹ 40 ಸಾವಿರ ದೇಣಿಗೆ ನೀಡಿದ್ದಾರೆ’ ಎಂದು ಸಹಶಿಕ್ಷಕಿ ಲಲಿತಾಕುಮಾರಿ ಮತ್ತು ದಾಕ್ಷಾಯಣಿ ತಿಳಿಸಿದರು. 

ಲಭ್ಯವಿರುವ ಚಿಕ್ಕ ಸ್ಥಳದಲ್ಲಿ ಮೂರು ಕೊಠಡಿಗಳನ್ನು ನಿರ್ಮಿಸಲಾಗಿದೆ. ಈಗಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಕೊಠಡಿ
ಗಳು ಸಾಲುತ್ತಿಲ್ಲ. ಇನ್ನು ಹೆಚ್ಚುವರಿ ಕೊಠಡಿ ನಿರ್ಮಿಸುವ ಅಗತ್ಯವಿದೆ. ಶಾಲೆಯಲ್ಲಿ ಪ್ರಸ್ತುತ ಮುಖ್ಯಶಿಕ್ಷಕ ಸೇರಿ ನಾಲ್ಕುಶಿಕ್ಷಕರಿದ್ದಾರೆ.

ಪ್ರತಿಕ್ರಿಯಿಸಿ (+)