ಫೋಟೋಗ್ರಾಫಿಯಲ್ಲೊಬ್ಬ ‘ಏಕಲವ್ಯ..!’

7
ವಿಶ್ವ ಛಾಯಾಗ್ರಾಹಕರ ದಿನಾಚರಣೆ ಇಂದು

ಫೋಟೋಗ್ರಾಫಿಯಲ್ಲೊಬ್ಬ ‘ಏಕಲವ್ಯ..!’

Published:
Updated:
Deccan Herald

‘ಆಗ ತಾನೇ ಎಸ್‌ಎಸ್‌ಎಲ್‌ಸಿ ಮುಗಿದಿತ್ತು. ಮನೆಯ ಮುಂದಿದ್ದ ಛಾಯಾಚಿತ್ರಗ್ರಾಹಕರೊಬ್ಬರು ಹುಡುಗನೊಬ್ಬ ಕೈಕೊಟ್ಟಿದ್ದಕ್ಕೆ ನನ್ನನ್ನು ಕರೆದೊಯ್ದು ಕ್ಯಾಮೆರಾ ಕೈಗಿತ್ತರು. ಅಲ್ಲಿಗೆ ಹೋದಾಗಲೇ ನನ್ನ ಅರಿವಿಗೆ ಬಂದಿದ್ದು ಅದೊಂದು ರಾಜಕೀಯ ಸಮಾರಂಭ ಎಂದು. ನಾನು ಇಲ್ಲಿ ವಿಡಿಯೊ ಕ್ಯಾಮೆರಾ ಹೊತ್ತು ನಿಲ್ಲಬೇಕೆಂದು.

ಕೆಪಿಸಿಸಿ ಅಧ್ಯಕ್ಷರಾಗಿದ್ದ ಎಸ್‌.ಎಂ.ಕೃಷ್ಣ ಚುನಾವಣಾ ಪ್ರಚಾರಕ್ಕಾಗಿ ವಿಜಯಪುರ, ತಿಕೋಟಾಕ್ಕೆ 18 ವರ್ಷಗಳ ಹಿಂದೆ ಭೇಟಿ ನೀಡಿದ್ದರು. ಈ ಸಮಾರಂಭದ ಫೋಟೋಗ್ರಾಫಿ, ವಿಡಿಯೊ ಮನೋಹರ ವಾಲಗದ ಅವರಿಗೆ ನೀಡಿದ್ದರು. ವಿಡಿಯೊ ಕ್ಯಾಮೆರಾ ಹಿಡಿಯುವ ಹುಡುಗ ಕೈಕೊಟ್ಟಿದ್ದರಿಂದ ನನ್ನ ಹೆಗಲಿಗೆ ವಾಲಗದ ಕ್ಯಾಮೆರಾ ಏರಿಸಿದ್ದರು.

ನನಗೆ ಏನೊಂದು ಗೊತ್ತಿರಲಿಲ್ಲ. ಅವರು ಹೇಳಿದಷ್ಟೇ ಮಾಡಿದೆ. ಕ್ಯಾಮೆರಾ ಆನ್‌ ಮಾಡಿ, ಆಫ್‌ ಮಾಡಿದವರು ಅವರೇ ಆಗಿದ್ದರು. ಅಂದು ಕ್ಯಾಮೆರಾ ಮೇಲೆ ಹುಟ್ಟಿದ ಪ್ರೀತಿ ಇಂದು ಹಲವು ಪ್ರಶಸ್ತಿಗಳವರೆಗೆ ನನ್ನನ್ನು ಕೈ ಹಿಡಿದು ಕರೆದೊಯ್ದಿದೆ...’ ಎಂದು ಫೋಟೋಗ್ರಾಫರ್‌ ವೃತ್ತಿಯಲ್ಲಿ ತಲ್ಲೀನರಾಗಿರುವ ವಿಜಯಪುರದ ಸತೀಶ ಪ.ಕಲಾಲ ‘ಪ್ರಜಾವಾಣಿ’ ಜತೆ ವಿಶ್ವ ಛಾಯಾಗ್ರಾಹಕ ದಿನಾಚರಣೆ (ಆ 19) ನೆಪದಲ್ಲಿ ತಮ್ಮ ವೃತ್ತಿ ಜೀವನದ ಬದುಕಿನ ಪುಟಗಳನ್ನು ತೆರೆದಿಟ್ಟರು.

ರಂಗನತಿಟ್ಟುವಿನಲ್ಲಿ ಪೆಲಿಕಾನ್‌ ಕಲರವ

‘ವೃತ್ತಿ, ಪ್ರವೃತ್ತಿ ಎರಡೂ ಛಾಯಾಗ್ರಾಹಣವೇ ಆಗಿದೆ. ಮದುವೆ ಸಮಾರಂಭಗಳ ಅವಧಿಯಲ್ಲಿ ವಾಣಿಜ್ಯ ಉದ್ದೇಶದ ಫೋಟೋಗ್ರಾಫಿ ಮಾಡುವೆ. ಇದು ಬದುಕಿನ ಬಂಡಿ ಎಳೆಯಲು ನೆರವಾದರೆ, ಉಳಿದ ಅವಧಿಯಲ್ಲಿ ಹವ್ಯಾಸಿ ಛಾಯಾಗ್ರಾಹಣಕ್ಕಿಳಿಯುವೆ.

ಹಕ್ಕಿಗಳ ಬದುಕು, ಲ್ಯಾಂಡ್‌ ಸ್ಕೇಪ್‌, ನಿಸರ್ಗ, ಪ್ರಾಣಿ ಪಪಂಚ, ಗ್ರಾಮೀಣ ಜನಜೀವನ ಸೇರಿದಂತೆ ಇನ್ನಿತರೆ ವಿಷಯಗಳಾಧಾರಿತ ಛಾಯಾಚಿತ್ರ ತೆಗೆಯುವೆ. ಇದು ಮನಸ್ಸಿಗೆ ಹುಮ್ಮಸ್ಸು, ದೇಹಕ್ಕೆ ಚೈತನ್ಯ ತುಂಬುವ ಜತೆ ಹೊಸ ಪ್ರಪಂಚವನ್ನು ಪರಿಚಯಿಸಿದೆ’ ಎಂದು ಕಲಾಲ ಹೇಳಿದರು.

ಹಂಪಿಯ ತುಂಗಭದ್ರಾ ನದಿ ನೀರಿನಲ್ಲಿ ಮೀನುಗಾರ ದಂಪತಿ ಬಲೆ ಬೀಸಿದ ಚಿತ್ರಣ

‘ಆರಂಭದಲ್ಲಿ ನನಗೆ ಗುರುಗಳೇ ಇಲ್ಲಾ. ನೋಡಿ ಕಲಿತದ್ದೇ ಹೆಚ್ಚು. ಅನುಭವ ಮತ್ತಷ್ಟು ಪಕ್ವಗೊಳಿಸಿದೆ. ಫೋಟೋಗ್ರಾಫಿ ಸಂದರ್ಭ ಏನಾದರೂ ಅನುಮಾನ ಬಂದರೇ ಮಂಗಳೂರಿನ ಗುರುದತ್ತ್‌ ಕಾಮತ್‌, ಬೆಂಗಳೂರಿನ ಕೆ.ಪಿ.ಮಾರ್ಟಿನ್‌ ಅವರನ್ನು ಮೊಬೈಲ್‌ನಲ್ಲೇ ಸಂಪರ್ಕಿಸಿ ಸಲಹೆ ಪಡೆಯುವೆ’ ಎಂದು ತಿಳಿಸಿದರು.

ಪ್ರಶಸ್ತಿಗಳು

‘2014ರಲ್ಲಿ ಬಾಗಲಕೋಟೆಯಲ್ಲಿ ಆಯೋಜಿಸಿದ್ದ ‘ಚಾಲುಕ್ಯ ಉತ್ಸವ’ ರಾಜ್ಯಮಟ್ಟದ ಸ್ಪರ್ಧೆಯೇ ಮೊದಲ ಬಾರಿಗೆ ಪಾಲ್ಗೊಂಡಿದ್ದು. ಇಲ್ಲಿ ಮೂರನೇ ಸ್ಥಾನ ಗಳಿಸಿದ್ದು ನನ್ನ ಹಿರಿಮೆ.

ಇದೇ ವರ್ಷ ಕಲಬುರ್ಗಿಯಲ್ಲಿ ಚೈತನ್ಯಮಯ ಆರ್ಟ್‌ ಗ್ಯಾಲರಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ‘ಮೆರಿಟ್‌ ಆಫ್‌ ಸರ್ಟಿಫಿಕೇಟ್‌’ ಬಹುಮಾನ, ಗದಗ ಜಿಲ್ಲೆಯ ಮುಂಡರಗಿಯ ಫಿಶಾಯ್‌ ಕ್ಲಬ್‌ 2015ರಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ‘ಪಿಕ್ಟೋರಿಯಲ್‌ ವಿಭಾಗದಲ್ಲಿ’ ತೃತೀಯ ಬಹುಮಾನ ಗಳಿಸಿದೆ.

ಬೆಂಗಳೂರಿನ ಜಾಗಟೆ ಪ್ರತಿಷ್ಠಾನದ ‘ಕರ್ನಾಟಕ ಗತವೈಭವ’ ಸ್ಪರ್ಧೆಯಲ್ಲಿ ಪ್ರಥಮ, ಹೈದರಾಬಾದ್‌ನಲ್ಲಿ ನಡೆದ 11ನೇ ಫೋಟೋ ಲವರ್ಸ್‌ ಸರ್ಕಿಟ್‌ ಅಂತರರಾಷ್ಟ್ರೀಯ ಸ್ಪರ್ಧೆಗೆ ಚಿತ್ರಗಳ ಆಯ್ಕೆ, ಸಾಗರದಲ್ಲಿನ ರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಗೆ ಫೋಟೋಗಳ ಆಯ್ಕೆ, 2016ರಲ್ಲಿ ಪಶ್ಚಿಮಬಂಗಾಳದ ಶ್ರೀರಾಮ ಪುರೆ ಫೋಟೋ ಫೋಕಸ್‌ ಸ್ಪರ್ಧೆಗೂ ನನ್ನ ಫೋಟೋಗಳು ಆಯ್ಕೆಯಾಗಿವೆ’ ಎಂದು ಸತೀಶ ಹೆಮ್ಮೆಯಿಂದ ತಿಳಿಸಿದರು.

2017ರಲ್ಲಿ ವಿಜಯಪುರದ ಸೊಬಗಿನ ಸಂಕ್ರಾಂತಿ ಸ್ಪರ್ಧೆಯಲ್ಲಿ ಪ್ರಥಮ, ಬೆಂಗಳೂರಿನ ಡ್ರೀಮ್‌ ಟೀಂ ಆಯೋಜಿಸಿದ್ದ ಸ್ಪರ್ಧೆಯಲ್ಲಿ ದ್ವಿತೀಯ, ಆಂಧ್ರಪ್ರದೇಶದಲ್ಲಿ ನಡೆದ ಸ್ಪರ್ಧೆಗೆ ಛಾಯಾಚಿತ್ರಗಳು ಆಯ್ಕೆಯಾಗಿದ್ದು, ಕೆಪಿಎ ಸತೀಶ ಸಾಧನೆ ಗುರುತಿಸಿ ಛಾಯಾ ಸಾಧಕ ಪ್ರಶಸ್ತಿ ನೀಡಿರುವುದು ವಿಶೇಷ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !