ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ: ಕಾಂಗ್ರೆಸ್‌ ಭದ್ರಕೋಟೆ ಕೆಡವಿದ್ದ ಮೇಟಿ

44 ವರ್ಷಗಳ ನಂತರ ಮೊದಲ ಬಾರಿಗೆ ಕಾಂಗ್ರೆಸ್‌ಗೆ ಸೋಲು
Published 15 ಏಪ್ರಿಲ್ 2024, 4:01 IST
Last Updated 15 ಏಪ್ರಿಲ್ 2024, 4:01 IST
ಅಕ್ಷರ ಗಾತ್ರ

ಬಾಗಲಕೋಟೆ: ಬಾಗಲಕೋಟೆ ಹಾಗೂ ರಾಜ್ಯಕ್ಕೆ ಹೊಸ ದಾಖಲೆ ಬರೆದು ಇತಿಹಾಸ ಸೃಷ್ಟಿ 1996ರಲ್ಲಿ ನಡೆದ ಲೋಕಸಭೆಗೆ ನಡೆದ ಹನ್ನೊಂದನೇ ಚುನಾವಣೆ ಸಾಕ್ಷಿಯಾಯಿತು.

1952ರಿಂದ 1996ರವರೆಗೆ ನಡೆದ 10 ಚುನಾವಣೆಗಳಲ್ಲಿ, 44 ವರ್ಷಗಳ ಕಾಲ ಬಾಗಲಕೋಟೆ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಮೊದಲ ಬಾರಿಗೆ ಈ ಕೋಟೆಯನ್ನು ಜನತಾ ದಳದಿಂದ ಸ್ಪರ್ಧಿಸಿದ್ದ ಎಚ್‌.ವೈ. ಮೇಟಿ ಛಿದ್ರಗೊಳಿಸಿದರು.

ಈ ಚುನಾವಣೆಯಲ್ಲಿ ರಾಜ್ಯದಿಂದ 16 ಕ್ಷೇತ್ರಗಳಲ್ಲಿ ಜನತಾ ದಳದವರು ಗೆಲುವು ಸಾಧಿಸಿ ಲೋಕಸಭೆ ಪ್ರವೇಶಿಸಿದ್ದು ದಾಖಲೆಯಾಗಿತ್ತು. ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ದೇವೇಗೌಡರು ಪ್ರಧಾನಿಯಾಗುವ ಮೂಲಕ ರಾಜ್ಯದಿಂದ ಪ್ರಧಾನಿ ಹುದ್ದೆಗೆ ಏರಿದ ವ್ಯಕ್ತಿ ಎಂಬ ಹಿರಿಮೆ ಅವರದಾಯಿತು.

ಕಾಂಗ್ರೆಸ್‌ನಿಂದ ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸಿದ್ದ ಸಿದ್ದು ನ್ಯಾಮಗೌಡ ಎರಡನೇ ಬಾರಿಗೆ ಆಯ್ಕೆ ಬಯಿಸಿ ಕಣಕ್ಕಿಳಿದಿದ್ದರು. ರಾಮಕೃಷ್ಣ ಹೆಗಡೆ ಅವರು ಕಣಕ್ಕಿಳಿಯದ್ದರಿಂದ ಯಾರನ್ನೂ ಕಣಕ್ಕಿಳಿಸಬೇಕು ಎಂಬ ಲೆಕ್ಕಾಚಾರ ನಡೆದಿತ್ತು.

ಆಗ ಅಸ್ತಿತ್ವದಲ್ಲಿದ್ದ ಗುಳೇದಗುಡ್ಡ ವಿಧಾನಸಭಾ ಕ್ಷೇತ್ರದಿಂದ ಜನತಾ ದಳದ ಶಾಸಕರಾಗಿ, ಅರಣ್ಯ ಇಲಾಖೆ ಸಚಿವರಾಗಿದ್ದ ಎಚ್.ವೈ. ಮೇಟಿ ಅವರನ್ನು ಕಣಕ್ಕಿಳಿಸಿತು. ಸಚಿವರಾಗಿದ್ದ ಮೇಟಿ ಅವರಿಗೆ ಲೋಕಸಭೆಗೆ ಹೋಗಲು ಅಷ್ಟೊಂದು ಆಸಕ್ತಿ ಇರಲಿಲ್ಲ. ರಾಜ್ಯ ರಾಜಕಾರಣದಲ್ಲಿಯೇ ಇರಲು ಬಯಸಿದ್ದರು. ನಾಯಕರ ಆಣತಿಯಂತೆ ಒಲ್ಲದ ಮನಸ್ಸಿನಿಂದಲೇ ಕಣಕ್ಕಿಳಿದಿದ್ದರು.

ಎಚ್‌.ಡಿ. ದೇವೇಗೌಡ, ರಾಮಕೃಷ್ಣ ಹೆಗಡೆ, ಎಸ್‌.ಆರ್‌. ಬೊಮ್ಮಾಯಿ, ಸಿದ್ದರಾಮಯ್ಯ, ಮೇಟಿ ಅವರ ಪರವಾಗಿ ಪ್ರಚಾರ ನಡೆಸಿದರು. ಹಿಂದಿನ ಚುನಾವಣೆಯಲ್ಲಿ ಸೋಲನುಭವಿಸಿದ್ದ ರಾಮಕೃಷ್ಣ ಹೆಗಡೆ ಹೆಚ್ಚಿನ ಆಸಕ್ತಿ ವಹಿಸಿ ಪ್ರಚಾರ ಮಾಡಿದರು. ಪರಿಣಾಮ ಮೇಟಿ ಅವರು ಗೆಲುವು ಸಾಧಿಸಿದರು.

ಸತತ 10 ಲೋಕಸಭಾ ಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತಾ ಬಂದಿದ್ದ ಮೊದಲ ಬಾರಿಗೆ ಸೋಲು ಎದುರಿಸಬೇಕಾಯಿತು. ಸತತ ಗೆಲುವಿನಿಂದಾಗಿ ಮೈಮರೆತದ್ದು, ರಾಷ್ಟ್ರಮಟ್ಟದಲ್ಲಿ ಉಂಟಾಗಿದ್ದ ಬಿರುಕಿನ ಪರಿಣಾಮ, ಬಿಜೆಪಿ ಮೊದಲ ಬಾರಿಗೆ ಒಂದೂವರೆ ಲಕ್ಷಕ್ಕೂ ಹೆಚ್ಚು ಮತ ಪಡೆದದ್ದು ಸೋಲಿಗೆ ಕಾರಣವಾಯಿತು.

‘ನನಗೆ ಟಿಕೆಟ್ ಕೊಟ್ಟರೆ ಗೆಲ್ಲುತ್ತೇನೆ ಎಂಬ ದೇವೇಗೌಡರ ಲೆಕ್ಕಾಚಾರ ಅನಿವಾರ್ಯವಾಗಿ ಕಣಕ್ಕಿಳಿಯಬೇಕಾಯಿತು. ಹೆಗಡೆ ಅವರಂತೂ ಮನೆ ಮನೆಗೆ ಹೋಗಿ ನನ್ನ ಪರ ಮತ ಕೇಳಿದ್ದರು. ಗೌಡರ ಎಣಿಕೆ ಸುಳ್ಳಾಗಲಿಲ್ಲ. ಎಲ್ಲರ ಪ್ರಯತ್ನದ ಫಲವಾಗಿ ಗೆಲುವು ಸಾಧಿಸಿದೆ’ ಎಂದು ಎಚ್‌.ವೈ. ಮೇಟಿ ನೆನೆಸಿಕೊಳ್ಳುತ್ತಾರೆ.

‘ಹಿಂದಿ ಭಾಷೆ ತಿಳಿಯುತ್ತಿರಲಿಲ್ಲ. ದೆಹಲಿಗೆ ಹೋಗುವ ಮುನ್ನ ಮಾಡಿದ ಮೊದಲ ಕೆಲಸವೆಂದರೆ ಸ್ವಲ್ಪ ಪ್ರಮಾಣದಲ್ಲಿ ಹಿಂದಿ ಕಲಿತೆ. ಜತೆಗೆ ಸ್ನೇಹಿತರು ನೆರವಿಗೆ ಬಂದರು’ ಎಂದು ಹೇಳಿದರು.

6,75,719 (ಶೇ64.09) ಮತಗಳು ಚಲಾವಣೆಯಾಗಿದ್ದವು. ಎಚ್‌.ವೈ. ಮೇಟಿ ಅವರು 2,50,683 ಮತಗಳನ್ನು ಪಡೆದರೆ, ಸಿದ್ದು ನ್ಯಾಮಗೌಡ 2,29,351 ಮತಗಳನ್ನು ಪಡೆದರು. 21,332 ಮತಗಳಿಂದ ಮೇಟಿ ಗೆಲುವು ಸಾಧಿಸಿದರು.

ಸಿದ್ದು ನ್ಯಾಮಗೌಡ
ಸಿದ್ದು ನ್ಯಾಮಗೌಡ

ಬಿಜೆಪಿಗೆ ನೆಲೆ ಒದಗಿಸಿದ ಚುನಾವಣೆ

1996ರ ಲೋಕಸಭೆ ಚುನಾವಣೆಯಲ್ಲಿ ಜನತಾ ದಳ ಮೊದಲ ಬಾರಿಗೆ ಖಾತೆ ತೆರೆದರೆ ಬಿಜೆಪಿಗೆ ಈ ಕ್ಷೇತ್ರದಲ್ಲಿ ನೆಲೆಯೂರಲೂ ಕಾರಣವಾಯಿತು. ಈ ಚುನಾವಣೆಯಲ್ಲಿ ಬಿಜೆಪಿಯಿಂದ ಬಿ.ವಿ.ವಿ. ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಅವರನ್ನು ಕಣಕ್ಕಿಳಿಸಲಾಯಿತು. ಅವರು 154161 ಮತಗಳನ್ನು ಗಳಿಸಿದರು. ಪ್ರತಿ ವಿಧಾನಸಭೆಯಲ್ಲಿಯೂ ಮತ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT