ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ ಕ್ಷೇತ್ರ | ಎಂಟೂ ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದ್ದ ಬಿಜೆಪಿ

2019ರ ಲೋಕಸಭಾ ಚುನಾವಣೆಯ ಹಿನ್ನೋಟ; ಯಲಹಂಕದಲ್ಲಿ ಕಮಲದ ಅಭ್ಯರ್ಥಿಗೆ ದಾಖಲೆಯ ಮತ
ಡಿ.ಎಂ.ಕುರ್ಕೆ ಪ್ರಶಾಂತ್
Published 30 ಮಾರ್ಚ್ 2024, 8:43 IST
Last Updated 30 ಮಾರ್ಚ್ 2024, 8:43 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ 2019ರ ಚುನಾವಣೆ ಹಲವು ಪ್ರಥಮಗಳಿಗೆ ಕಾರಣವಾಯಿತು. ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದರು. 45 ವರ್ಷಗಳ ಲೋಕಸಭಾ ಇತಿಹಾಸದಲ್ಲಿಯೇ ಬಿ.ಎನ್.ಬಚ್ಚೇಗೌಡ ಗರಿಷ್ಠ ಮತಪಡೆದ ಅಭ್ಯರ್ಥಿ ಎನ್ನುವ ಹಿರಿಮೆಗೆ ಪಾತ್ರರಾದರು. ಕ್ಷೇತ್ರದ ಇತಿಹಾಸದಲ್ಲಿ ಎರಡನೇ ಬಾರಿಗೆ ಒಕ್ಕಲಿಗ ಸಮುದಾಯದ ಅಭ್ಯರ್ಥಿ ಗೆಲುವು ಕಂಡರು. ಕಾಂಗ್ರೆಸ್‌ನ ಪ್ರಭಾವಿ ನಾಯಕ ವೀರಪ್ಪ ಮೊಯಿಲಿ ಹ್ಯಾಟ್ರಿಕ್ ಗೆಲುವು ತಪ್ಪಿತು. 

ಹೀಗೆ ನಾನಾ ಕಾರಣಕ್ಕೆ 2019ರ ಲೋಕಸಭಾ ಚುನಾವಣೆ ದಾಖಲೆಯಾಗಿ ಉಳಿದಿದೆ. ‌ಕಾಂಗ್ರೆಸ್ ಮತ್ತು ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿದ್ದ ಎಂ.ವೀರಪ್ಪ ಮೊಯಿಲಿ ವಿರುದ್ಧ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಗೆಲುವು ಸಾಧಿಸಿದರು. 

2023ರ ಲೋಕಸಭಾ ಚುನಾವಣೆಯ ಈ ಹೊತ್ತಿನಲ್ಲಿ 2019ರ ‌ಚುನಾವಣೆಯನ್ನು ಗಮನಿಸಿದರೆ ನಾನಾ ಪಲ್ಲಟಗಳು ಕ್ಷೇತ್ರದಲ್ಲಿ ಆಗಿವೆ. ಬಿಜೆಪಿಗೆ ಗೆಲುವು ತಂದುಕೊಟ್ಟ ಬಚ್ಚೇಗೌಡ ಅವರು ಕಮಲ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಕುಟುಂಬದ ಇಬ್ಬರು ಈ ಲೋಕಸಭಾ ಕ್ಷೇತ್ರದಲ್ಲಿ ಶಾಸಕರಾಗಿದ್ದಾರೆ. 2019ರ ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ ಶಾಸಕರಾಗಿದ್ದ ಡಾ.ಕೆ.ಸುಧಾಕರ್, ಈಗ ಬಿಜೆಪಿ ಅಭ್ಯರ್ಥಿ. 

2019ರ ಚುನಾವಣೆ ಸಮಯದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಯಲಹಂಕದಲ್ಲಿ ಮಾತ್ರ ಬಿಜೆಪಿ ಶಾಸಕರು ಇದ್ದರು. ಉಳಿದಂತೆ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಹೊಸಕೋಟೆ, ಬಾಗೇಪಲ್ಲಿ, ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಹಾಗೂ ದೇವನಹಳ್ಳಿ ಮತ್ತು ನೆಲಮಂಗಲದಲ್ಲಿ ಜೆಡಿಎಸ್ ಶಾಸಕರು ಆಯ್ಕೆಯಾಗಿದ್ದರು. ಯಲಹಂಕ ಶಾಸಕ ಎಸ್‌.ಆರ್.ವಿಶ್ವನಾಥ್ ಬಿಜೆಪಿ ಉಸ್ತುವಾರಿವಹಿಸಿಕೊಂಡಿದ್ದರು.  

ಆ ಚುನಾವಣೆಯಲ್ಲಿ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್–ಜೆಡಿಎಸ್ ಅಭ್ಯರ್ಥಿಗಿಂತ ಬಿಜೆಪಿಯು ಮುನ್ನಡೆ ಪಡೆದಿತ್ತು. ಬಿಜೆಪಿ ಅಭ್ಯರ್ಥಿಯಾಗಿ ಬಿ.ಎನ್.ಬಚ್ಚೇಗೌಡ ಅವರ ಸ್ವಕ್ಷೇತ್ರ ಹೊಸಕೋಟೆಯಲ್ಲಿಯೇ ಪ್ರತಿಸ್ಪರ್ಧಿ ಅಭ್ಯರ್ಥಿಗಿಂತ ಅವರು 10,150 ಮತಗಳನ್ನು ಅವರು ಹೆಚ್ಚು ಪಡೆದಿದ್ದರು. ಉಳಿದ ವಿಧಾನಸಭಾ ಕ್ಷೇತ್ರಗಳೇ ಸ್ವಕ್ಷೇತ್ರಕ್ಕಿಂತ ಹೆಚ್ಚು ಲೀಡ್ ನೀಡಿದ್ದವು.

ಗೌರಿಬಿದನೂರಿನಲ್ಲಿ ಕಡಿಮೆ ಲೀಡ್: ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಬಿಜೆಪಿಯು ಅತಿ ಕಡಿಮೆ ಪ್ರಮಾಣದ ಮತಗಳ ಮುನ್ನಡೆ ಪಡೆದಿತ್ತು. ಈ ಕ್ಷೇತ್ರದಲ್ಲಿ ಎಂ.ವೀರಪ್ಪ ಮೊಯಿಲಿ ಮತ್ತು ಬಿ.ಎನ್.ಬಚ್ಚೇಗೌಡ ಅವರ ನಡುವೆ ನೇರ ಹಣಾಹಣಿ ನಡೆದಿದೆ. ಇಲ್ಲಿ ಬಿಜೆಪಿಗೆ ಕೇವಲ 4,162 ಮತಗಳ ಮುನ್ನಡೆ ಮಾತ್ರ ದೊರೆತಿದೆ. ಬಾಗೇಪಲ್ಲಿ ಕ್ಷೇತ್ರದಲ್ಲಿ 5,831 ಮತಗಳನ್ನು ಬಿಜೆಪಿ ಹೆಚ್ಚು ಪಡೆದಿದೆ.   

ಬೆಂಗಳೂರು ನಗರ ಜಿಲ್ಲೆಯ ಯಲಹಂಕ ವಿಧಾನಸಭಾ ಕ್ಷೇತ್ರವು ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ದಾಖಲೆಯ ಮತಗಳನ್ನು ನೀಡಿದೆ. ಈ ಕ್ಷೇತ್ರದಲ್ಲಿ ಬಿಜೆಪಿ 1,50,906 ಮತ್ತು ಕಾಂಗ್ರೆಸ್ 75,631 ಮತಗಳನ್ನು ಪಡೆದಿತ್ತು. ಬಿಜೆಪಿಯು 75,275 ಮತಗಳ ಅಂತರವನ್ನು ಈ ಕ್ಷೇತ್ರದಲ್ಲಿ ಹೊಂದಿತ್ತು. ಹೀಗೆ ಇಡೀ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ದೊಡ್ಡ ಪ್ರಮಾಣದಲ್ಲಿ ಮತಗಳನ್ನು ನೀಡಿದ ಕ್ಷೇತ್ರ ಯಲಹಂಕವಾಗಿತ್ತು.

2023ರ ಲೋಕಸಭಾ ಚುನಾವಣೆಯ ಈ ಹೊತ್ತಿನಲ್ಲಿ ಕಳೆದ ಚುನಾವಣೆಯಲ್ಲಿ ವಿಧಾನಸಭಾ ಕ್ಷೇತ್ರವಾರು ಅಭ್ಯರ್ಥಿಗಳು ಪಡೆದ ಮತಗಳ ಪ್ರಮಾಣವು ಈಗ ವಿಶ್ಲೇಷಣೆ ಮತ್ತು ಚರ್ಚೆಗೆ ಕಾರಣವಾಗಿದೆ. ಯಾವ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಯಾವ ಅಭ್ಯರ್ಥಿ ಎಷ್ಟು ಮತಗಳನ್ನು ಪಡೆಯಬಹುದು, ಅದಕ್ಕೆ ಕಾರಣಗಳೇನು ಎನ್ನುವ ವಿಶ್ಲೇಷಣೆ ಸಹ ಜೋರಾಗಿದೆ.

2019ರ ಲೋಕಸಭಾ ಚುನಾವಭೆಯಲ್ಲಿ ವಿಧಾನಸಭೆ ಕ್ಷೇತ್ರವಾರು ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿಗಳು ಪಡೆದ ಮತಗಳ ವಿವರ

ಕ್ಷೇತ್ರ;ಒಟ್ಟು ಮತ; ಚಲಾಯಿಸಿದವರು;ಬಚ್ಚೇಗೌಡ;ವೀರಪ್ಪ ಮೊಯಿಲಿ;ಅಂತರ

ಯಲಹಂಕ;3,87,300;2,35,862;1,50,906;75,631;75,275
ಚಿಕ್ಕಬಳ್ಳಾಪುರ;2,00,630;1,64,984;94,962;59,995;34,967
ದೊಡ್ಡಬಳ್ಳಾಪುರ;2,01,693;1,63,716;87,967;67,403;20,126
ನೆಲಮಂಗಲ;2,03,603;1,55,987;83,529;63,983;19,546
ದೇವನಹಳ್ಳಿ;1,99,556;1,67,960;83,966;73,382;10,584
ಹೊಸಕೋಟೆ;2,12,784;1,86,816;95,702;85,552;10,150
ಬಾಗೇಪಲ್ಲಿ;1,98,852;1,49,680;69,387;63,556;5,831
ಗೌರಿಬಿದನೂರು;2,04,009;1,60,382;78,056;73,894;4,162

2019ರ ಲೋಕಸಭೆ ಚುನಾವಣೆಯ ವೇಳೆ ಬಿಜೆಪಿಯಲ್ಲಿ ಒಬ್ಬ ಶಾಸಕ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿದ್ದ ಕ್ಷೇತ್ರಗಳಲ್ಲಿಯೂ ಬಿಜೆಪಿಗೆ ಮುನ್ನಡೆ ಬಿಜೆಪಿಗೆ ಗೌರಿಬಿದನೂರು ಕ್ಷೇತ್ರದಲ್ಲಿ ಕಡಿಮೆ ಪ್ರಮಾಣದ ಲೀಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT