ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಪ್ರದೇಶದಲ್ಲಿ 2014ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ: ಅಮಿತ್ ಶಾ

Published 20 ಮಾರ್ಚ್ 2024, 11:27 IST
Last Updated 20 ಮಾರ್ಚ್ 2024, 11:27 IST
ಅಕ್ಷರ ಗಾತ್ರ

ನವದೆಹಲಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ 2014ಕ್ಕಿಂತ ಹೆಚ್ಚಿನ ಸೀಟುಗಳನ್ನು ಬಿಜೆಪಿ ಪಡೆಯಲಿದ್ದು, ಎಲ್ಲ ಕುಟುಂಬ ಪಕ್ಷಗಳಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.

2014ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ 80 ಸೀಟುಗಳ ಪೈಕಿ ಬಿಜೆಪಿ 71ರಲ್ಲಿ ಗೆದ್ದಿತ್ತು. 2019ರಲ್ಲಿ ಬಿಜೆಪಿ 62ರಲ್ಲಿ ಗೆಲುವು ದಾಖಲಿಸಿತ್ತು. ಬಿಜೆಪಿ ಮೈತ್ರಿ ಪಕ್ಷ ಅಪ್ನಾ ದಳ 2014 ಹಾಗೂ 2019ರಲ್ಲಿ ತಲಾ ಎರಡು ಸ್ಥಾನಗಳನ್ನು ಗೆದ್ದಿತ್ತು.

ಏಕರೂಪ ನಾಗರಿಕ ಸಂಹಿತೆಯು(ಯುಸಿಸಿ) ಪಕ್ಷದ ಅಜೆಂಡಾದಲ್ಲಿದ್ದು, ಏಕೆಂದರೆ ಜಾತ್ಯತೀತ ದೇಶದಲ್ಲಿ ಎಲ್ಲ ನಾಗರಿಕರಿಗೂ ಒಂದೇ ಕಾನೂನು ಇರಬೇಕು ಎಂಬುದರಲ್ಲಿ ನಂಬಿಕೆ ಇರಿಸಿದೆ ಎಂದು ಹೇಳಿದ್ದಾರೆ.

1950ರಿಂದಲೇ ಯುಸಿಸಿ ಸಮಸ್ಯೆ ಇದೆ. ಇದಕ್ಕಾಗಿ ನಮ್ಮ ಪಕ್ಷ ಅಂದೋಲನ ನಡೆಸಿದೆ. ಇದರಿಂದ ಹಿಂಜರಿಯಲು ಸಾಧ್ಯವಿಲ್ಲ. ಜಾತ್ಯತೀತ ರಾಷ್ಟ್ರದಲ್ಲಿ ಎಲ್ಲರಿಗೂ ಒಂದೇ ಕಾನೂನು ಇರಬೇಕು ಎಂದು ನಾವು ನಂಬಿದ್ದೇವೆ. ಯುಸಿಸಿ ದೇಶದ ಜನತೆಗೆ ಬಿಜೆಪಿ ನೀಡಿದ ಭರವಸೆಯಾಗಿದೆ ಎಂದು ಅವರು ಹೇಳಿದ್ದಾರೆ.

'ನ್ಯೂಸ್18 ರೈಸಿಂಗ್ ಭಾರತ್ ಸಮ್ಮಿತ್'‌ನಲ್ಲಿ ಮಾತನಾಡಿದ ಅಮಿತ್ ಶಾ, ಒಡಿಶಾದಲ್ಲಿ ಬಿಜೆಡಿ ಪಕ್ಷದೊಂದಿಗೆ ಮೈತ್ರಿ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಒಡಿಶಾದಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಯಲಿದೆ.

ಪಶ್ಚಿಮ ಬಂಗಾಳದಲ್ಲಿ 42 ಸ್ಥಾನಗಳ ಪೈಕಿ 25ಕ್ಕೂ ಹೆಚ್ಚು ಸೀಟುಗಳನ್ನು ಬಿಜೆಪಿ ಪಡೆಯಲಿದೆ ಎಂದು ಅಮಿತ್ ಶಾ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಿರುವುದನ್ನು ಸಮರ್ಥಿಸಿಕೊಂಡಿರುವ ಅಮಿತ್ ಶಾ, ವಿಪಕ್ಷಗಳು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿವೆ. ಸಿಎಎ ಬಗ್ಗೆ ತಪ್ಪು ಮಾಹಿತಿ ನೀಡುತ್ತಿವೆ. ಸಿಎಎ ದೇಶದ ಯಾವುದೇ ನಾಗರಿಕನ ಪೌರತ್ವವನ್ನು ಕಿತ್ತುಕೊಳ್ಳುವುದಿಲ್ಲ. ಮುಸ್ಲಿಮರು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿ ಅತಿ ಹೆಚ್ಚು ದೇಣಿಗೆ ಪಡೆದಿದೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಶಾ, ಇದು ಸಂಪೂರ್ಣ ಸುಳ್ಳು. ನಮಗೆ ₹6,200 ಕೋಟಿ ಸಿಕ್ಕಿದೆ. ಆದರೆ ರಾಹುಲ್ ಗಾಂಧಿ ನೇತೃತ್ವದ ಇಂಡಿಯಾ ಮೈತ್ರಿಕೂಟ ₹6,200 ಕೋಟಿಗೂ ಅಧಿಕ ದೇಣಿಗೆ ಪಡೆದಿದೆ. ಲೋಕಸಭೆಯಲ್ಲಿ ನಮಗೆ 303 ಸೀಟುಗಳಿದ್ದು, 17 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದೇವೆ. ಇಂಡಿಯಾ ಮೈತ್ರಿಕೂಟಕ್ಕೆ ಎಷ್ಟು ಸ್ಥಾನಗಳಿವೆ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT