ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls 2024: ಸೇನೆಗೆ ಸೇರುವವರ ನಾಡಲ್ಲಿ ‘ಅಗ್ನಿಪಥ’ದ ಕಿಚ್ಚು

ಹರಿಯಾಣ, ಪಂಜಾಬ್‌, ಹಿಮಾಚಲ ಪ್ರದೇಶದ ಚುನಾವಣಾ ಅಖಾಡದಲ್ಲಿ ಸದ್ದು
Published 16 ಮೇ 2024, 18:47 IST
Last Updated 16 ಮೇ 2024, 18:47 IST
ಅಕ್ಷರ ಗಾತ್ರ

ನವದೆಹಲಿ: ‘ಸೇನೆಗೆ ಸೇರಬೇಕು ಎಂಬುದು ನನ್ನ ಬಹುದಿನಗಳ ಕನಸಾಗಿತ್ತು. ಅದಕ್ಕಾಗಿ ಎಲ್ಲ ಸಿದ್ಧತೆಯನ್ನೂ ಮಾಡಿಕೊಂಡಿದ್ದೆ. 2022ರ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಬಹುತೇಕ ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿದ್ದೆ. ವೈದ್ಯಕೀಯ ಪರೀಕ್ಷೆಯೊಂದೇ ಬಾಕಿ ಇತ್ತು. ಅಗ್ನಿಪಥ ಯೋಜನೆಯ ಕಾರಣಕ್ಕೆ ಈ ನೇಮಕಾತಿ ಪ್ರಕ್ರಿಯೆಯನ್ನು ಏಕಾಏಕಿ ಸ್ಥಗಿತಗೊಳಿಸಲಾಗಿತ್ತು. ನನಗಾದ ಘೋರ ಅನ್ಯಾಯವನ್ನು ನೆನೆಸಿಕೊಂಡಾಗ ಕಣ್ಣೀರು ಬರುತ್ತದೆ’ ಎಂದು 30ರ ಹರೆಯದ ವಿನಯ್‌ ಶ್ರೀವಾಸ್ತವ ಹೇಳಿಕೊಂಡರು. 

ರಾಷ್ಟ್ರ ರಾಜಧಾನಿಯಿಂದ 30 ಕಿ.ಮೀ. ದೂರದಲ್ಲಿರುವ ಹರಿಯಾಣದ ಗುರುಗ್ರಾಮದ ಸಂಚಯ್‌ ಕೋಚಿಂಗ್‌ ಸೆಂಟರ್‌ ಸಮೀಪದಲ್ಲಿ ಸಿಕ್ಕ ಅವರು ತಮ್ಮ ಉದ್ಯೋಗ ಹುಡುಕಾಟದ ನೋವಿನ ಕಥೆಯನ್ನು ಬಿಚ್ಚಿಟ್ಟರು. ‘ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ ನಮ್ಮ ಕನಸು ನಾಶವಾಗಿದೆ. ಅಗ್ನಿಪಥ ಯೋಜನೆ ವಿರೋಧಿಸಿ ಯುವಜನರು ನಡೆಸಿದ ಹೋರಾಟಕ್ಕೂ ಕೇಂದ್ರ ಸರ್ಕಾರ ಕಿವಿಗೊಡಲಿಲ್ಲ. ಪ್ರತಿಭಟನಾಕಾರರನ್ನು ಅಪರಾಧಿಗಳಂತೆ ಬಿಂಬಿಸಲಾಯಿತು. ಮತ ಕೊಟ್ಟು ಗೆಲ್ಲಿಸಿದ ಯುವಜನರಿಗೆ ಬಿಜೆಪಿ ಅನ್ಯಾಯ ಮಾಡಿದೆ’ ಎಂದು ಕೋಪ ವ್ಯಕ್ತಪಡಿಸಿದರು. ‘ನಾಲ್ಕು ವರ್ಷಗಳ ಬಳಿಕ ಅಗ್ನಿವೀರರು ಎಲ್ಲಿಗೆ ಹೋಗಬೇಕು. ಮತ್ತೆ ಅವರು ನಗರಗಳಲ್ಲಿ ಕಾವಲುಗಾರರಾಗಿ ಕೆಲಸ ಮಾಡಬೇಕೇ’ ಎಂದು ಪ್ರಶ್ನಿಸಿದರು. 

ಅವರು ಗುರುಗ್ರಾಮ ಸಮೀಪದ ಊರಿನ ನಿವಾಸಿ. ‘ಈಗ ಸಣ್ಣಪುಟ್ಟ ಕೆಲಸ ಮಾಡಿಕೊಂಡು ರಾಜ್ಯ ಸರ್ಕಾರ ನಡೆಸುವ ಪರೀಕ್ಷೆಗಳಿಗಾಗಿ ಸಿದ್ಧತೆ ನಡೆಸುತ್ತಿದ್ದೇನೆ. ಅದಕ್ಕೆ ಇಲ್ಲಿ ತರಬೇತಿ ಪಡೆಯುತ್ತಿದ್ದೇನೆ’ ಎಂದರು. ‘ಯುವಕರ ಭವಿಷ್ಯದ ಹಿತದೃಷ್ಟಿಯಿಂದ ಈ ಯೋಜನೆಯನ್ನು ರದ್ದುಪಡಿಸಲೇಬೇಕು’ ಎಂಬುದು ಅವರ ನುಡಿ. 

‘ಅಗ್ನಿಪಥ ಯೋಜನೆಯನ್ನು ರದ್ದುಪಡಿಸುವುದಾಗಿ ವಿರೋಧ ಪಕ್ಷಗಳ ನಾಯಕರು ಘೋಷಿಸಿದ್ದಾರೆ. ಇದು ಆಗಬೇಕಾದ ಕೆಲಸ. ಜತೆಗೆ, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಗಂಭೀರ ಉಪಕ್ರಮಗಳನ್ನು ಕೈಗೊಳ್ಳಬೇಕು. ಯುವಕರ ಭವಿಷ್ಯದ ಜತೆಗೆ ಚೆಲ್ಲಾಟವಾಡಿದ ಪಕ್ಷಕ್ಕೆ ಈ ಸಲ ಮತ ಇಲ್ಲ’ ಎಂದು ಅವರು ಸ್ಪಷ್ಟವಾಗಿ ಹೇಳಿದರು.

‘ಗಡಿ ಪ್ರದೇಶ ಹಾಗೂ ಗುಡ್ಡಗಾಡು ಪ್ರದೇಶದ ಜನರು ದೈಹಿಕ ಸಾಮರ್ಥ್ಯಕ್ಕೆ ಹೆಸರುವಾಸಿ. ಸೇನೆಗೆ ಸೇರಬೇಕು ಎಂಬುದು ಇಲ್ಲಿನ ಹೆಚ್ಚಿನ ಯುವಜನರ ಕನಸು. ಬಿಜೆಪಿಯ ಚುನಾವಣಾ ಕಾರ್ಯಸೂಚಿಯಲ್ಲಿ ಈ ವಿಷಯದ ಪ್ರಸ್ತಾಪವೇ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜತೆಗಿದ್ದ ಯುವಕ ಸುಭಾಷ್‌ ಅವರು ಮಿತ್ರನ ಮಾತನ್ನು ಒಪ್ಪಲಿಲ್ಲ. ‘ರಾಷ್ಟ್ರೀಯತೆ ಪರ ಇರುವವರಿಗೆ ಈ ಸಲವೂ ನನ್ನ ಮತ ಹಾಕುತ್ತೇನೆ. ಆದರೆ, ಯುವಜನರ ಉದ್ಯೋಗ ಹಕ್ಕುಗಳನ್ನು ಕಸಿದುಕೊಂಡಿದ್ದು ತಪ್ಪು. ಮುಂದಿನ ದಿನಗಳಲ್ಲಿ ಬಿಜೆಪಿ ಇಂತಹ ಲೋಪಗಳನ್ನು ಎಸಗುವುದಿಲ್ಲ ಎಂಬ ವಿಶ್ವಾಸ ಇದೆ’ ಎಂದು ಹೇಳಿಕೊಂಡರು.

ಸೇನಾ ನೇಮಕಾತಿ ರ್‍ಯಾಲಿಗಳಲ್ಲಿ ಹರಿಯಾಣ, ಪಂಜಾಬ್‌ ಹಾಗೂ ಹಿಮಾಚಲ ಪ್ರದೇಶದ ಜನರು ಹೆಚ್ಚು ನೇಮಕವಾಗುತ್ತಾರೆ. 2019–20ರಲ್ಲಿ ಕೊನೆಯ ಬಾರಿಗೆ ಸೇನಾ ನೇಮಕಾತಿ ಪ್ರಕ್ರಿಯೆ ನಡೆದಿತ್ತು. ಆ ವರ್ಷ 78,692 ಮಂದಿ ನೇಮಕಗೊಂಡಿದ್ದರು. ಈ ಮೂರು ರಾಜ್ಯಗಳಿಂದ 18,792 ಮಂದಿ ಸೇನೆಗೆ ಸೇರಿದ್ದರು. ಅಂದರೆ, ಶೇ 25ರಷ್ಟು ಜನರು ಈ ರಾಜ್ಯಗಳಿಂದಲೇ ನೇಮಕವಾಗಿದ್ದರು. ಅಗ್ನಿಪಥ ಯೋಜನೆಯಡಿ ಅಗ್ನಿವೀರರ ನೇಮಕಾತಿ ಪ್ರಕ್ರಿಯೆ ವಿರೋಧಿಸಿ 2022ರಲ್ಲಿ ಭಾರಿ ಪ್ರತಿಭಟನೆಗಳು ನಡೆದಿದ್ದವು. ಬಿಹಾರ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್‌, ಹಿಮಾಚಲ ಪ್ರದೇಶ ಮತ್ತಿತರ ರಾಜ್ಯಗಳಲ್ಲಿ ಪ್ರತಿಭಟನೆಯ ಕಿಚ್ಚು ದೊಡ್ಡ ಪ್ರಮಾಣದಲ್ಲಿ ಹಬ್ಬಿತ್ತು. ಹರಿಯಾಣ, ಪಂಜಾಬ್‌ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಇದು ಪ್ರಮುಖ ಚುನಾವಣಾ ವಿಷಯವಾಗಿದೆ. ಅಗ್ನಿಪಥ ಯೋಜನೆಯನ್ನು ಕಿತ್ತೆಸೆದು ಹಳೆಯ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಕಾಂಗ್ರೆಸ್‌ ನಾಯಕರು ಚುನಾವಣಾ ಪ್ರಚಾರ ಸಭೆಗಳಲ್ಲಿ ಪ್ರಮುಖವಾಗಿ ಭರವಸೆ ನೀಡುತ್ತಿದ್ದಾರೆ. ಈ ವಿಷಯವು ಬಿಜೆಪಿ ಹಾಗೂ ವಿರೋಧ ಪಕ್ಷಗಳ ನಾಯಕರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. 

ಕೋಚಿಂಗ್‌ ಅಕಾಡೆಮಿಯ ಉದ್ಯೋಗಿ ಸುಧೀರ್ ಸಿಂಗ್‌, ‘ಬಡ ಕುಟುಂಬಗಳ ಯುವಜನರಿಗೆ ಸೇನೆಯೇ ದೊಡ್ಡ ಆಶಾಕಿರಣವಾಗಿತ್ತು. ಸೇನೆಗೆ ಸೇರಲು ಸಿದ್ಧತೆ ಮಾಡಿಕೊಳ್ಳಲು ದೊಡ್ಡಮಟ್ಟದ ಖರ್ಚೂ ಆಗುತ್ತಿರಲಿಲ್ಲ. ಅವರು ಈಗ ಬೇರೆ ಸರ್ಕಾರಿ ಉದ್ಯೋಗಗಳತ್ತ ಗಮನ ಹರಿಸುತ್ತಿದ್ದಾರೆ. ನಮ್ಮಲ್ಲಿ ಕೋಚಿಂಗ್ ಪಡೆಯುವವರ ಸಂಖ್ಯೆ ಹೆಚ್ಚಾರುವುದೇ ಇದಕ್ಕೆ ಸಾಕ್ಷಿ’ ಎಂದು ಹೇಳಿದರು.

ಮನೆ ಮನೆಗೆ ಯುವ ಕಾಂಗ್ರೆಸ್ ಅಭಿಯಾನ 

ಅಗ್ನಿಪಥ ಯೋಜನೆ ರದ್ದುಪಡಿಸುವುದು ಸೇರಿದಂತೆ ಕಾಂಗ್ರೆಸ್‌ನ 25 ಗ್ಯಾರಂಟಿಗಳ ಬಗ್ಗೆ ಮಾಹಿತಿ ನೀಡಲು ರಾಷ್ಟ್ರೀಯ ಯುವ ಕಾಂಗ್ರೆಸ್‌ ಘಟಕವು ಸಹಾಯವಾಣಿ ಆರಂಭಿಸಿತ್ತು. ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತ್ತು. ಜತೆಗೆ ಈ ವಿಷಯವನ್ನು ಚುನಾವಣಾ ಆಯೋಗದ ಗಮನಕ್ಕೆ ತಂದಿತ್ತು. ಸಹಾಯವಾಣಿಯನ್ನು ನಿಲ್ಲಿಸುವಂತೆ ಯುವ ಕಾಂಗ್ರೆಸ್‌ಗೆ ಆಯೋಗ ಸೂಚಿಸಿದೆ. ಇದೀಗ ಮೂರು ರಾಜ್ಯಗಳಲ್ಲಿ ಯುವ ಕಾಂಗ್ರೆಸ್‌ ಪದಾಧಿಕಾರಿಗಳು ಮನೆ ಮನೆ ಅಭಿಯಾನ ನಡೆಸುತ್ತಿದ್ದಾರೆ.  ‘ಸೇನಾ ನೇಮಕಾತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ನೇಮಕಾತಿ ಪತ್ರಕ್ಕಾಗಿ ಕಾಯುತ್ತಿರುವ 1.5 ಲಕ್ಷ ಯುವಜನರಿಗಾಗಿ ರಾಹುಲ್ ಗಾಂಧಿ ಅವರು ಜೈ ಜವಾನ್‌ ಅಭಿಯಾನ ಆರಂಭಿಸಿದ್ದಾರೆ. ಇದರ ಭಾಗವಾಗಿ ‘ಯುವ ನ್ಯಾಯ’ದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ನಾವು ಮನೆ ಮನೆ ಅಭಿಯಾನ ನಡೆಸುತ್ತಿದ್ದೇವೆ’ ಎಂದು ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT