ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಇಂಡಿಯಾ’ಗೆ ಸ್ಪಷ್ಟ ಬಹುಮತ,ಎನ್‌ಡಿಎ ಪಕ್ಷಗಳು ಬಣ ಸೇರಲು ಕ್ಯೂ ನಿಲ್ಲಲಿವೆ: ಜೈರಾಂ

Published 31 ಮೇ 2024, 11:54 IST
Last Updated 31 ಮೇ 2024, 11:54 IST
ಅಕ್ಷರ ಗಾತ್ರ

ನವದೆಹಲಿ: ಜೂನ್ 4ರಂದು ಪ್ರಕಟವಾಗಲಿರುವ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ‘ಇಂಡಿಯಾ’ ಬಣವು ಸ್ಪಷ್ಟ ಬಹುಮತ ಪಡೆಯುವ ವಿಶ್ವಾಸವನ್ನು ಕಾಂಗ್ರೆಸ್ ವ್ಯಕ್ತಪಡಿಸಿದೆ. ಆ ಬಳಿಕ ಎನ್‌ಡಿಎ ಮೈತ್ರಿಕೂಟದಲ್ಲಿರುವ ಹಲವು ಪಕ್ಷಗಳು ‘ಇಂಡಿಯಾ’ ಬಣ ಸೇರಲು ಸರತಿ ಸಾಲಿನಲ್ಲಿ ನಿಲ್ಲಲಿವೆ ಎಂದು ಅದು ಹೇಳಿದೆ.

2019ರಲ್ಲಿ ಹೀನಾಯ ಫಲಿತಾಂಶ ಬಂದಿದ್ದ ಹಲವು ರಾಜ್ಯಗಳಲ್ಲಿ ಈ ಬಾರಿ ನಮ್ಮ ಪಕ್ಷ ಉತ್ತಮ ಪ್ರದರ್ಶನ ನೀಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೊಮ್ಮೆ ಬಣ ಬದಲಿಸಲಿದ್ದಾರೆ ಎಂಬ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜೂನ್ 4ರಂದು ನಿತೀಶ್ ಕುಮಾರ್ ಏನು ಮಾಡುತ್ತಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪದೇ ಪದೇ ನಿಷ್ಠೆ ಬದಲಿಸುವ ಹಳೆ ಚಾಳಿ ಅವರಿಗಿದೆ. ಅವರಿಲ್ಲದೆಯೇ ‘ಇಂಡಿಯಾ’ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. ಆಗ ಜೆಡಿಯು ಅಗತ್ಯವೇ ಇರುವುದಿಲ್ಲ’ ಎಂದು ಕುಟುಕಿದ್ದಾರೆ.

‘ಬಿಹಾರದ ಫಲಿತಾಂಶ ಅಚ್ಚರಿಕರ ರೀತಿಯಲ್ಲಿರುವುದನ್ನು ನೀವು ನೋಡುತ್ತೀರಿ. ಆ ಬಳಿಕ, ಯಾರೂ ಬಣ ಬದಲಿಸುವ ಅಗತ್ಯವಿರುವುದಿಲ್ಲ. ಬದಲಿಸುವವರನ್ನು ನಾವು ತಡೆಯುವುದೂ ಇಲ್ಲ’ ಎಂದಿದ್ದಾರೆ.

ಸ್ಪಷ್ಟ ಬಹುಮತ ಪಡೆಯುವ ನಿಮ್ಮ ಆತ್ಮವಿಶ್ವಾಸಕ್ಕೆ ಕಾರಣವೇನು? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜಸ್ಥಾನ, ಕರ್ನಾಟಕ, ಉತ್ತರ ಪ್ರದೇಶ, ಬಿಹಾರ, ತೆಲಂಗಾಣ ರಾಜ್ಯಗಳಲ್ಲಿ 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಪ್ರದರ್ಶನ ನೀಡಿತ್ತು. ಈ ಬಾರಿ ನಮ್ಮ ಪಕ್ಷ ಬಲಿಷ್ಠ ಪ್ರದರ್ಶನ ನೀಡುವುದನ್ನು ನೋಡುತ್ತೀರಿ. ರಾಜಸ್ಥಾನದಲ್ಲಿ ಪಕ್ಷದ ಪ್ರದರ್ಶನ ಉತ್ತಮವಾಗಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ಮೈತ್ರಿಯ ಪ್ರದರ್ಶನ ಅತ್ಯುತ್ತಮವಾಗಿದೆ’ ಎಂದು ಹೇಳಿದ್ದಾರೆ.

‘ದೆಹಲಿಯಲ್ಲಿ ಕುಳಿತು ನಾನು ಈ ಮಾತನ್ನು ಹೇಳುತ್ತಿಲ್ಲ. ಈ ಎಲ್ಲ ರಾಜ್ಯಗಳಿಗೆ ನಾನು ಭೇಟಿ ನೀಡಿದ್ದೆ, ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಈ ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. 2019ಕ್ಕೆ ಹೋಲಿಸಿದರೆ ನಮ್ಮ ಪ್ರದರ್ಶನ ಉತ್ತಮವಾಗಿದೆ. ಹರಿಯಾಣ, ಪಂಜಾಬ್‌ಗಳಲ್ಲೂ ಪಕ್ಷಕ್ಕೆ ಉತ್ತಮ ವಾತಾವರಣವಿದೆ’ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನ ಆತ್ಮವಿಶ್ವಾಸಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ, ಅವರು ಪ್ರಚಾರದ ವೇಳೆ ವಿಚಲಿತಗೊಂಡಿರುವ ರೀತಿ ಎಂದಿದ್ದಾರೆ.

‘ಈ ಬಾರಿ ಜನರ ಮುಂದಿಡಲು ಮೋದಿ ಬಳಿ ಯಾವುದೇ ಸಂಕಥನ ಇರಲಿಲ್ಲ. ಪ್ರತಿ ಬಾರಿ ಬೇರೆ ಬೇರೆ ವಿಷಯ ಪ್ರಸ್ತಾಪಿಸುವ ಮೂಲಕ ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸಿದರು’ ಎಂದು ರಮೇಶ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT