ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ತೂಗುಯ್ಯಾಲೆಯಲ್ಲಿ ‘ಕೊಪ್ಪಳದ ಚುಕ್ಕಾಣಿ’

Published 29 ಏಪ್ರಿಲ್ 2024, 23:54 IST
Last Updated 29 ಏಪ್ರಿಲ್ 2024, 23:54 IST
ಅಕ್ಷರ ಗಾತ್ರ

ಕೊಪ್ಪಳ: ಬಿಸಿಲಿನ ಜೊತೆಗೆ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಕಾವು ಕೂಡ ತಾರಕಕ್ಕೇರಿದೆ. ಅಧಿಕಾರದ ಚುಕ್ಕಾಣಿಯು ರಾಜಕೀಯದಲ್ಲಿ ಪಳಗಿರುವ ಹಿಟ್ನಾಳ ಕುಟುಂಬಕ್ಕೊ ಅಥವಾ ಬಿಜೆಪಿಯ ಹೊಸ ಮುಖ ಡಾ.ಬಸವರಾಜ ಕ್ಯಾವಟರ್‌ ಅವರಿಗೊ ಎನ್ನುವ ಚರ್ಚೆ ಜೋರಾಗಿದೆ.

ಹಿಂದಿನ ಮೂರು ದಶಕಗಳಿಂದ ಜಿಲ್ಲೆಯಲ್ಲಿ ರಾಜಕೀಯ ಎದುರಾಳಿಗಳಾಗಿದ್ದ ಕರಡಿ ಮತ್ತು ಹಿಟ್ನಾಳ ಕುಟುಂಬದವರು ಈಗ ಒಂದಾಗಿದ್ದು, ಡಾ.ಬಸವರಾಜ ಅವರನ್ನು ಸೋಲಿಸಲೇಬೇಕು ಎಂದು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಹಿಂದೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದರು. ಕುರುಬ ಸಮುದಾಯದ ರಾಜಶೇಖರ 2019ರಲ್ಲಿ ಮತ್ತು ಅವರ ತಂದೆ ಕೆ. ಬಸವರಾಜ ಹಿಟ್ನಾಳ 2014ರಲ್ಲಿ ಸೋತಿದ್ದರು. ಇವರಿಬ್ಬರನ್ನೂ ಸೋಲಿಸಿದ್ದ ಬಿಜೆಪಿಯ ಸಂಗಣ್ಣ ಕರಡಿ ಈಗ ಕಾಂಗ್ರೆಸ್ ಸೇರಿದ್ದು, ಇದರಿಂದ ‘ಕೈ’ ಪಾಳಯಕ್ಕೆ ಅನುಕೂಲವಾಗಲಿದೆ. ಜೊತೆಗೆ ‘ಗ್ಯಾರಂಟಿ’ ಯೋಜನೆಗಳ ಬಲವೂ ಅಭ್ಯರ್ಥಿಗೆ ವರದಾನವಾಗಲಿದೆ.

ಸೌಮ್ಯ ಸ್ವಭಾವದ ಮತ್ತು ವೃತ್ತಿಯಲ್ಲಿ ವೈದ್ಯರಾಗಿರುವ ಬಸವರಾಜ ಅವರ ತಂದೆ ಕೆ. ಶರಣಪ್ಪ, ಕುಷ್ಟಗಿ ಕ್ಷೇತ್ರದ ಮಾಜಿ ಶಾಸಕರು. ಹೀಗಾಗಿ ಕುಟುಂಬದವರಿಗೆ ಜನರೊಂದಿಗೆ ಒಡನಾಟವಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲು ಕುಷ್ಟಗಿಯಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದರು. ಶಾಸಕ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡಿದ್ದರಿಂದ ಇದೀಗ ‘ಕಮಲ’ದ ಶಕ್ತಿ ಎರಡಕ್ಕೇರಿದೆ. ಪ್ರಚಾರದಲ್ಲಿ ಕಾಂಗ್ರೆಸ್ಸಿಗರ ವಿರುದ್ಧ ರೆಡ್ಡಿ ಆಡುತ್ತಿರುವ ಆಕ್ರೋಶಭರಿತ ಮಾತುಗಳು ಚುನಾವಣಾ ಕಣದ ರಂಗೇರಿಸಿವೆ.

ಕ್ಷೇತ್ರದಲ್ಲಿ ಮೊದಲಿನಿಂದಲೂ ಮುಂದುವರಿದವರು, ಹಿಂದುಳಿದವರು ಎಂಬ ಒಡಕಿನ ರಾಜಕಾರಣವೇ ಹೆಚ್ಚು ಚರ್ಚೆಯಲ್ಲಿದ್ದು, ಈ ಬಾರಿಯೂ ಇದು ಮುನ್ನಲೆಗೆ ಬಂದಿದೆ. ಪಂಚಮಸಾಲಿ ಸಮುದಾಯದ ಸಂಗಣ್ಣ ‘ಕೈ’ ಹಿಡಿದರೂ, ಬಿಜೆಪಿ ಅದೇ ಸಮುದಾಯದ ಡಾ.ಬಸವರಾಜ ಅವರಿಗೆ ಟಿಕೆಟ್ ನೀಡಿದ್ದರಿಂದ ಸಮಾಜದ ಮತಗಳು ವಿಭಜನೆಯಾಗುವ ಸಾಧ್ಯತೆ ಕಡಿಮೆ. ಬಿಜೆಪಿ ಅಭ್ಯರ್ಥಿ ಹೊಸಬರಾದರೂ ಪಕ್ಷದ ಬೆಂಬಲ ಮತ್ತು ನರೇಂದ್ರ ಮೋದಿ ‘ನಾಮಬಲ’ವೇ ಅವರಿಗೆ ಶ್ರೀರಕ್ಷೆಯಾಗಿದೆ. ಶ್ರೀರಾಮನ ಬಂಟ ಹನುಮ ಜನಿಸಿದ ನಾಡು ಎನ್ನುವುದೂ ಬಿಜೆಪಿಗೆ ವರದಾನ.

ಬಿಜೆಪಿಗೆ ಇದು ಸ್ವಾಭಿಮಾನದ ಪ್ರಶ್ನೆಯ ಚುನಾವಣೆಯೂ ಆಗಿದೆ. ಬಸವರಾಜ ಪ್ರಚಾರಕ್ಕೆ ಹೋದಾಗ ಅವರಿಂದ ಚಿಕಿತ್ಸೆ ಪಡೆದ ರೋಗಿಗಳು, ‘ನಿಮ್ಮಂಥವರು ಚುನಾವಣೆಗೆ ಸ್ಪರ್ಧಿಸಿದ್ದು ಒಳ್ಳೆಯದಾಯಿತು’ ಎನ್ನುವ ಮಾತುಗಳನ್ನಾಡುತ್ತಿದ್ದಾರೆ. ಲೋಕಸಭಾ ಕ್ಷೇತ್ರದ ಪ್ರಮುಖ ಊರುಗಳನ್ನು ಸುತ್ತುಹಾಕಿ ಬಂದಾಗ ಬಹುತೇಕ ಹಳ್ಳಿಗಳಲ್ಲಿ ಹೆಣ್ಣುಮಕ್ಕಳು ‘ಗ್ಯಾರಂಟಿ’ ಜಪಿಸುತ್ತಿದ್ದರೆ, ಯುವಜನತೆ ‘ದೇಶಕ್ಕೆ ನರೇಂದ್ರ ಮೋದಿಯೇ ಮತ್ತೆ ಪ್ರಧಾನಿಯಾಗಬೇಕು’ ಎನ್ನುವ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಚುನಾವಣಾ ಫಲಿತಾಂಶದ ಏರಿಳಿತಕ್ಕೆ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಗಳಿಸುವ ಮತಗಳು ಪ್ರಮುಖವಾಗಿದ್ದು, ಅಲ್ಲಿನ ಕಾಂಗ್ರೆಸ್‌ನಲ್ಲಿ ಬಣ ರಾಜಕಾರಣ ಜೋರಾಗಿದೆ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ನೀಡಿದ ಯಾವ ಭರವಸೆಯೂ ಈಡೇರಿಲ್ಲ. ಅಲ್ಲಿನ ಆಟೊ ಚಾಲಕ ಮೊಹಮ್ಮದ್‌ ರಫೀಕ್‌, ವ್ಯಾಪಾರಿ ಪವನ್ ಶೆಟ್ಟಿ, ‘ರೆಡ್ಡಿ ನಮ್ಮ ನಂಬಿಕೆ ಕೊಂದಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೀಗಾಗಿ ಮತದಾರನ ಮನದ ‘ಮತಗುಟ್ಟು’ ಕುತೂಹಲ ಮೂಡಿಸಿದೆ. ಒಂದು ವೇಳೆ ಕಾಂಗ್ರೆಸ್‌ ಗೆದ್ದರೆ ಹಿಟ್ನಾಳ ಕುಟುಂಬದ ರಾಜಕೀಯ ಶಕ್ತಿಗೆ ಬಲ ಬರುತ್ತದೆ. ಡಾ.ಬಸವರಾಜ ಜಯಿಸಿದರೆ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT