ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವೇಗೌಡರೇ ಪ್ಲ್ಯಾನ್ ಮಾಡಿ ಮೊಮ್ಮಗನನ್ನು ವಿದೇಶಕ್ಕೆ ಕಳುಹಿಸಿದ್ದಾರೆ: ಸಿಎಂ

Published 1 ಮೇ 2024, 14:26 IST
Last Updated 1 ಮೇ 2024, 14:26 IST
ಅಕ್ಷರ ಗಾತ್ರ

ಯಾದಗಿರಿ: ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ದೇವೇಗೌಡರೇ ಮೊಮ್ಮಗನನ್ನು ಪ್ಲ್ಯಾನ್ ಮಾಡಿ ವಿದೇಶಕ್ಕೆ ಕಳುಹಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಲೈಂಗಿಕ ಹಗರಣದ ಆರೋಪಿಯಾಗಿರುವ ಪ್ರಜ್ವಲ್, ಏಪ್ರಿಲ್ 26ರಂದು ಮತದಾನ ನಡೆದ ನಂತರ ವಿದೇಶಕ್ಕೆ ತೆರಳಿದ್ದಾರೆ. ಪ್ರಕರಣ ಕುರಿತ ತನಿಖೆಗೆ ಸರ್ಕಾರ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಿದೆ.

‘ವಿದೇಶಕ್ಕೆ ತೆರಳಲು ಯಾರು ಪಾಸ್‌ಪೋರ್ಟ್ ಮತ್ತು ವೀಸಾ ಕೊಡುವವರು ಯಾರು?. ಕೇಂದ್ರ ಸರ್ಕಾರದ ಗಮನಕ್ಕೆ ಬಾರದೆ ಪ್ರಜ್ವಲ್ ವಿದೇಶಕ್ಕೆ ಹೋಗಲು ಸಾಧ್ಯವೇ? ಮಾಜಿ ಪ್ರಧಾನಿ ದೇವೇಗೌಡರೇ ಪ್ಲ್ಯಾನ್ ಮಾಡಿ ವಿದೇಶಕ್ಕೆ ಕಳುಹಿಸಿದ್ದಾರೆ’ ಎಂದು ಸಿದ್ದರಾಮಯ್ಯ ವರದಿಗಾರರಿಗೆ ತಿಳಿಸಿದ್ದಾರೆ.

ಬಿಜೆಪಿ ಮಾತೃಶಕ್ತಿ ಪರವಾಗಿದ್ದರೆ, ಇಂತಹ ವ್ಯಕ್ತಿಗೆ ಟಿಕೆಟ್ ನೀಡಿದ್ದು ಏಕೆ? ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.

ಪೆನ್‌ಡ್ರೈವ್‌ನಲ್ಲಿದ್ದ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ಹಲವು ವಿಡಿಯೊಗಳು ಹರಿದಾಡಿದ ಬಳಿಕ ರಾಜ್ಯ ಸರ್ಕಾರ ತನಿಖೆಗೆ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಿದೆ. ಎಡಿಜಿಪಿ ಬಿ.ಕೆ. ಸಿಂಗ್ ಅವರು ಎಸ್‌ಐಟಿ ನೇತೃತ್ವ ವಹಿಸಿದ್ದು, ಇತರೆ ಇಬ್ಬರು ಐಪಿಎಸ್ ಅಧಿಕಾರಿಗಳು ಸಹ ತಂಡದಲ್ಲಿದ್ದಾರೆ.

ದೇವೇಗೌಡರ ಮಗ, ಮಾಜಿ ಸಚಿವ ಎಚ್‌.ಡಿ. ರೇವಣ್ಣ ಮತ್ತು ಮೊಮ್ಮಗ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ.

‘ಬಿಜೆಪಿ ಮಾತೃಶಕ್ತಿ ಪರವಾಗಿದ್ದರೆ ಪ್ರಜ್ವಲ್‌ಗೆ ಟಿಕೆಟ್ ನೀಡಿದ್ದೇಕೆ? ಲೈಂಗಿಕ ಹಗರಣದ ವಿಡಿಯೊಗಳ ಬಗ್ಗೆ ತಿಳಿದಿದ್ದರೂ ಅವರು ಟಿಕೆಟ್ ಕೊಟ್ಟಿದ್ದೇಕೆ? ಅಂತಹ ವಿಡಿಯೊಗಳಿವೆ ಎಂದು ಗೊತ್ತಿದ್ದರೂ ಮೈತ್ರಿ ಮಾಡಿಕೊಂಡಿದ್ದೇಕೆ? ಏನು ಇದರ ಅರ್ಥ? ಇದು ಏನನ್ನು ಸೂಚಿಸುತ್ತದೆ? ಎಂದು ನನಗೆ ಹೇಳಿ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಪೆನ್‌ಡ್ರೈವ್ ವಿಡಿಯೊಗಳನ್ನು ಹಂಚಿಕೆ ಮಾಡಿದ್ದರಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪಾತ್ರ ಇದೆ ಎಂಬ ಆರೋಪಗಳನ್ನು ತಳ್ಳಿ ಹಾಕಿದ ಸಿಎಂ, ಪ್ರಜ್ವಲ್ ರೇವಣ್ಣನ ಚಾಲಕನಾಗಿದ್ದ ಕಾರ್ತಿಕ್, ವಿಡಿಯೊಗಳಿದ್ದ ಪೆನ್‌ಡ್ರೈವ್ ಅನ್ನು ಬಿಜೆಪಿ ಮುಖಂಡ ಜಿ. ದೇವರಾಜೇಗೌಡರಿಗೆ ನೀಡಿರುವುದಾಗಿ ಹೇಳಿದ್ದಾರೆಯೇ ವಿನಃ ಡಿ.ಕೆ. ಶಿವಕುಮಾರ್ ಅವರಿಗೆ ನೀಡಿದ್ದೇನೆ ಎಂದು ಹೇಳಿದ್ದಾರೆಯೇ? ಹಾಗಿದ್ದಾಗ, ಡಿ.ಕೆ. ಶಿವಕುಮಾರ್ ವಿಡಿಯೊಗಳನ್ನು ರಿಲೀಸ್ ಮಾಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ಪೆನ್‌ಡ್ರೈವ್ ಪಡೆದಿರುವುದಾಗಿ ದೇವರಾಜೇಗಾಡ ಒಪ್ಪಿಕೊಂಡಿದ್ದು, ನಾನು ರಿಲೀಸ್ ಮಾಡಿಲ್ಲ ಎಂದು ಹೇಳಿರುವುದನ್ನೂ ಸಿದ್ದರಾಮಯ್ಯ ಒತ್ತಿ ಹೇಳಿದ್ದಾರೆ.

ಹಾಗಿದ್ದರೆ, ಯಾರು ವಿಡಿಯೊ ರಿಲೀಸ್ ಮಾಡಿದ್ದು? ಚಾಲಕ ಪೆನ್‌ಡ್ರೈವ್ ನೀಡಿದ್ದು ಯಾರಿಗೆ? ಡಿ.ಕೆ. ಶಿವಕುಮಾರ್‌ಗೂ ಇದಕ್ಕೂ ಯಾವುದೇ ನಂಟಿಲ್ಲ. ತನಿಖೆಯಲ್ಲಿ ಸತ್ಯ ಹೊರಬರಲಿದೆ ಎಂದು ಸಿಎಂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT