ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನಿಗೆ ಟಿಕೆಟ್‌ ಕೊಡುವಂತೆ ನಾನಾಗಿಯೇ ಕೇಳಿಲ್ಲ: ಮಹದೇವಪ್ಪ

Published 20 ಮಾರ್ಚ್ 2024, 15:17 IST
Last Updated 20 ಮಾರ್ಚ್ 2024, 15:17 IST
ಅಕ್ಷರ ಗಾತ್ರ

ಬೆಂಗಳೂರು: ‘ಚಾಮರಾಜನಗರ ಕ್ಷೇತ್ರದ ಟಿಕೆಟ್‌ ಅನ್ನು ಪುತ್ರ ಸುನಿಲ್‌ ಬೋಸ್‌ಗೆ ಕೊಡುವಂತೆ ನಾನು ವ್ಯಕ್ತಿಗತವಾಗಿ ಕೇಳಿಲ್ಲ’ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪಕ್ಷದ ವೀಕ್ಷಕರು ಜಿಲ್ಲೆಯ ಎಲ್ಲ ಶಾಸಕರ ಅಭಿಪ್ರಾಯ ಆಲಿಸಿದ್ದಾರೆ. ಅಭ್ಯರ್ಥಿ ಯಾರಾಗಬೇಕೆಂದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ (ಸಿಇಸಿ) ಅಂತಿಮಗೊಳಿಸುತ್ತಾರೆ. ಎಲ್ಲವನ್ನೂ ಅಳೆದು ತೂಗಿ ಹೈಕಮಾಂಡ್ ನಿರ್ಧರಿಸಲಿದೆ’ ಎಂದರು.

‘ಮಂಗಳವಾರ ರಾತ್ರಿ ನಡೆದ ಸಿಇ‌ಸಿ ಸಭೆ ಪೂರ್ಣವಾಗಿಲ್ಲ. ಹೀಗಾಗಿ, ಅಭ್ಯರ್ಥಿಯ ಹೆಸರು ಅಂತಿಮವಾಗಿಲ್ಲ. ಯಾರೇ ಅಭ್ಯರ್ಥಿಯಾದರೂ, ಪಕ್ಷದ ಪರವಾಗಿ ಕೆಲಸ ಮಾಡಬೇಕಾದ್ದು ನಮ್ಮ ಜವಾಬ್ದಾರಿ’ ಎಂದರು.

ಬಿಜೆಪಿಯ ಅಸಮಾಧಾನಿತರನ್ನು ಕಾಂಗ್ರೆಸ್ ನಾಯಕರು ಸಂಪರ್ಕಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಮಹದೇವಪ್ಪ, ‘ಕಾಂಗ್ರೆಸ್ ದೊಡ್ಡ ಆಲದ ಮರ ಇದ್ದಂತೆ. ಯಾರು ಬೇಕಾದರೂ ಆಶ್ರಯ ಪಡೆದುಕೊಳ್ಳಬಹುದು‌. ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಪಕ್ಷದ ತತ್ವ, ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತವಿದೆ’ ಎಂದರು.

‘ಬಿಜೆಪಿಯ ಬಹಳಷ್ಟು ನಾಯಕರು ಅಸಮಾಧಾನ ಹೊಂದಿದ್ದಾರೆ. ತಮ್ಮ ಪಕ್ಷದ ಸಿದ್ಧಾಂತ, ನಿಲುವುಗಳಿಂದ ಬೇಸತ್ತಿದ್ದಾರೆ. ಒಬ್ಬೊಬ್ಬರಾಗಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಶಿಸ್ತಿನ ಪಕ್ಷ ಎಂದು ಹೇಳುತ್ತಾರೆ. ಆದರೆ, ಅಶಿಸ್ತು ಹೆಚ್ಚಾಗಿದೆ’ ಎಂದರು.

‘ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ’ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ. ಲೋಕಸಭಾ ಚುನಾವಣೆ ರಾಜ್ಯ ಸರ್ಕಾರದ ಭವಿಷ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರಾಷ್ಟ್ರೀಯ ವಿಷಯಗಳ ಮೇಲೆ ಈ ಚುನಾವಣೆ ನಡೆಯುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರದ ವೈಫಲ್ಯಗಳ ಮೇಲೆ ನಡೆಯುವ ಚುನಾವಣೆಯಿದು. ಮೋದಿ ತಮ್ಮ ಸಾಧನೆಗಿಂತ ಹೆಚ್ಚಾಗಿ ಭಾವನಾತ್ಮಕ ವಿಚಾರಗಳನ್ನು ಮಾತನಾಡುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT