ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಸು ಗುಸು: ‘ಕುಟುಂಬ’ದ ವಿರುದ್ಧ ‘ಸಂಘಟಿತ’ ಹೋರಾಟ

Published 18 ಮಾರ್ಚ್ 2024, 22:43 IST
Last Updated 18 ಮಾರ್ಚ್ 2024, 22:43 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಬಂಡೆದ್ದಿರುವ ಪಕ್ಷದ ಹಲವು ಹಿರಿಯ ನಾಯಕರು ‘ಬಿಎಸ್‌ವೈ ಕುಟುಂಬ’ದ ಹಿಡಿತ ವಿರೋಧಿಸಿ ‘ಸಂಘಟಿತ’ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಇದರಿಂದ ಲೋಕಸಭಾ ಚುನಾವಣೆಯಲ್ಲಿ ಕಮಲ ಪಡೆಯ ಅಭ್ಯರ್ಥಿಗಳಿಗೆ ‘ಒಳ ಏಟು’ ಬೀಳುವ ಭೀತಿ ಎದುರಾಗಿದೆ.

ಕೆ.ಎಸ್‌.ಈಶ್ವರಪ್ಪ ಈಗಾಗಲೇ ಬಂಡಾಯ ಅಭ್ಯರ್ಥಿಯಾಗಿ ಶಿವಮೊಗ್ಗದಲ್ಲಿ ಕಣಕ್ಕೆ ಇಳಿಯುವುದಾಗಿ ಘೋಷಿಸಿ, ಪ್ರಚಾರದಲ್ಲೂ ತೊಡಗಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದಿಂದ ಟಿಕೆಟ್‌ ಸಿಗದೇ ಮುನಿಸಿಕೊಂಡಿರುವ ಡಿ.ವಿ.ಸದಾನಂದಗೌಡ ಅವರೂ ಈಶ್ವರಪ್ಪ ಅವರಂತೆ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಟೀಕಾ ಪ್ರಹಾರ ಆರಂಭಿಸಿದ್ದಾರೆ. ಸದಾನಂದಗೌಡರಿಗೆ ಕಾಂಗ್ರೆಸ್‌ನತ್ತ ವಾಲುವ ಲಕ್ಷಣ ಗೋಚರಿಸಿದೆ.

ಕೆಲವು ಸಮಯದಿಂದ ಸುಮ್ಮನೇ ಇದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರೂ ಯಡಿಯೂರಪ್ಪ ಕುಟುಂಬದ ಮೇಲೆ ಹರಿಹಾಯಲು ಪ್ರಾರಂಭಿಸಿದ್ದಾರೆ. ದಾವಣಗೆರೆಯಲ್ಲಿ ಸಿದ್ದೇಶ್ವರ ಕುಟುಂಬಕ್ಕೆ ಮತ್ತೆ ಟಿಕೆಟ್‌ ನೀಡಿರುವುದಕ್ಕೆ ಅಲ್ಲಿನ ಮಾಜಿ ಶಾಸಕರು ಯಡಿಯೂರಪ್ಪ ಮೇಲೆ ಮುನಿಸಿಕೊಂಡಿದ್ದಾರೆ. ಸೋಮವಾರ ಶಿವಮೊಗ್ಗದಲ್ಲಿ ನಡೆದ ಪ್ರಧಾನಿ ಮೋದಿ ಅವರ ಕಾರ್ಯಕ್ರಮಕ್ಕೂ ದಾವಣಗೆರೆ ಜಿಲ್ಲಾ ಬಿಜೆಪಿ ನಾಯಕರು ಗೈರಾಗಿದ್ದಾರೆ. ಬೀದರ್‌ನಲ್ಲಿ ಭಗವಂತ ಖೂಬಾ ಅವರಿಗೆ ಟಿಕೆಟ್‌ ನೀಡಿರುವುದಕ್ಕೆ ಜಿಲ್ಲೆಯ ಹಾಲಿ ಮತ್ತು ಮಾಜಿ ಶಾಸಕರು ಸಿಟ್ಟಿಗೆದ್ದಿದ್ದು, ತಾವು ಅಭ್ಯರ್ಥಿ ಪರ ಕೆಲಸ ಮಾಡುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

ಈ ಮಧ್ಯೆ ಕೆಲವು ನಾಯಕರು ದೆಹಲಿಗೆ ದೂರು ಒಯ್ಯುವ ಬಗ್ಗೆಯೂ ಮಾತುಕತೆ ನಡೆಸಿದ್ದು, ವರಿಷ್ಠರು ಚುನಾವಣೆ ಸಿದ್ಧತೆಯಲ್ಲಿ ತೊಡಗಿರುವುದರಿಂದ ಈ ಹಂತದಲ್ಲಿ ದೂರುಗಳಿಗೆ ಮನ್ನಣೆ ನೀಡುವ ಸಾಧ್ಯತೆ ಇಲ್ಲ ಎಂಬ ಸೂಚನೆ ಸಿಕ್ಕ ಬಳಿಕ ಪ್ರಸ್ತಾವವನ್ನು ಕೈಬಿಟ್ಟಿದ್ದಾರೆ. ಆದರೆ, ಪಕ್ಷವನ್ನು ಒಂದು ಕುಟುಂಬದ ಹಿಡಿತದಿಂದ ಮುಕ್ತಗೊಳಿಸುವ ಸಂಬಂಧ ಸಂಘಟಿತ ಪ್ರಯತ್ನ ಮುಂದುವರಿಯಬೇಕು ಎಂಬ ಮಾತುಕತೆಯೂ ನಡೆದಿದೆ. ಇದಕ್ಕೆ ಹಲವು ನಾಯಕರು ‘ನೈತಿಕ’ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.

‘ಈ ಹಿಂದಿನ ಎಲ್ಲ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ಪಕ್ಷದಲ್ಲಿ ಒಗ್ಗಟ್ಟಿನ ಹೋರಾಟ ನಡೆಯುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಪಕ್ಷ ಒಡೆದ ಮನೆಯಾಗಿದೆ. ಕಳೆದ ವಿಧಾನಸಭೆಯಲ್ಲೂ ಇಂತಹದ್ದೇ ಗಂಭೀರ ಸಮಸ್ಯೆಯಿಂದ ಪಕ್ಷ ಹೀನಾಯ ಸೋಲು ಅನುಭವಿಸಿತ್ತು. ಪರಸ್ಪರ ಒಳ ಏಟುಗಳಿಂದ ಸಾಕಷ್ಟು ಅಭ್ಯರ್ಥಿಗಳು ಸೋತು ಹೋದರು. ಒಂದು ವೇಳೆ ಈ ಚುನಾವಣೆಯಲ್ಲಿ ಒಳ ಏಟುಗಳು ಬಿದ್ದರೆ ಪಕ್ಷಕ್ಕೆ ಸಾಕಷ್ಟು ನಷ್ಟ ಆಗುವ ಸಾಧ್ಯತೆ ಇದೆ’ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದರು.

‘ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಗೆಲ್ಲದೇ ಇರಬಹುದು ಆದರೆ, ಕುರುಬ ಸಮುದಾಯಕ್ಕೆ ಅನ್ಯಾಯವಾಗಿದೆ ಎಂಬುದಾಗಿ ಆಡಿರುವ ಮಾತು ನಿಶ್ಚಿತವಾಗಿ ಪರಿಣಾಮ ಬೀರುತ್ತದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಗದೀಶ ಶೆಟ್ಟರ್ ಅವರು ಪಕ್ಷ ತೊರೆದು ಲಿಂಗಾಯತರಿಗೆ ಅನ್ಯಾಯ ಆಗಿದೆ ಎಂದು ಹೇಳಿದ್ದು, ಕೆಲವು ಕ್ಷೇತ್ರಗಳಲ್ಲಿ ಬಿಜೆಪಿಯು ಹಿನ್ನಡೆ ಅನುಭವಿಸಬೇಕಾಯಿತು. ಈಶ್ವರಪ್ಪ ಅವರ ಆಕ್ರೋಶ ಕುರುಬ ಸಮುದಾಯದಲ್ಲಿ ಬೇರೆಯ ಸಂದೇಶ ರವಾನೆ ಮಾಡಬಹುದು ಎಂಬ ಆತಂಕವಿದೆ’ ಎಂದೂ ಅವರು ತಿಳಿಸಿದರು.

 ಕೊಪ್ಪಳದಲ್ಲಿ ಕರಡಿ ಸಂಗಣ್ಣ ಪಕ್ಷದ ನಾಯಕರ ವಿರುದ್ಧ ಗರಂ ಆಗಿ ಟೀಕಾ ಪ್ರಹಾರ ನಡೆಸಿದ್ದಾರೆ. ಸಂಗಣ್ಣ ಅವರನ್ನು ಸೆಳೆಯಲು ಕಾಂಗ್ರೆಸ್‌ ಮುಂದಾಗಿದ್ದು, ಜಗದೀಶ ಶೆಟ್ಟರ್ ರಾಜೀನಾಮೆಯಿಂದ ತೆರವಾಗಿರುವ ವಿಧಾನಪರಿಷತ್ತಿನ ಸ್ಥಾನದ ಆಮಿಷವನ್ನೂ ಒಡ್ಡಿದೆ. ಏತನ್ಮಧ್ಯೆ, ಸಂಗಣ್ಣ ಅವರು ಮಂಗಳವಾರ ಸುದ್ದಿಗೋಷ್ಠಿ ನಡೆಸಿ, ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಡಿವಿಎಸ್‌ ಮುಂದಿನ ನಡೆ ಇಂದು ಪ್ರಕಟ

ಬೆಂಗಳೂರು: ಲೋಕಸಭೆ ಟಿಕೆಟ್‌ ಕೈತಪ್ಪಿದ್ದರಿಂದ ಮುನಿಸಿಕೊಂಡಿರುವ ಬೆಂಗಳೂರು ಉತ್ತರದ ಸಂಸದ ಡಿ.ವಿ.ಸದಾನಂದಗೌಡ ಅವರನ್ನು ಕಾಂಗ್ರೆಸ್‌ ನಾಯಕರು ಸಂಪರ್ಕಿಸಿದ್ದು, ತಮ್ಮ ಮುಂದಿನ ರಾಜಕೀಯ ನಡೆಯನ್ನು ಮಂಗಳವಾರ ಪ್ರಕಟಿಸುವುದಾಗಿ ಗೌಡರು ಹೇಳಿದರು.

ತಮ್ಮ ಹುಟ್ಟು ಹಬ್ಬದ ಆಚರಣೆ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಬಿ.ಎಸ್‌.ಯಡಿಯೂರಪ್ಪ ಅವರ ವಿರುದ್ಧವೂ ಅಸಮಾಧಾನ ಹೊರ ಹಾಕಿದರು. 

‘ಕುಟುಂಬದ ಸದಸ್ಯರ ಜತೆ ಚರ್ಚೆ ಮಾಡಿ ಮುಂದಿನ ತೀರ್ಮಾನವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸುತ್ತೇನೆ. ಕೆಲವು ಪಕ್ಷಗಳ ನಾಯಕರು ನನ್ನನ್ನು ಸಂಪರ್ಕ ಮಾಡಿರುವುದು ನಿಜ. ಬೇರೆ ಬೇರೆ ವಿದ್ಯಮಾನಗಳು ನಡೆಯುತ್ತಿವೆ’ ಎಂದರು. 

‘ಭಾನುವಾರ ನಮ್ಮ ಪಕ್ಷದ ನಾಯಕರೊಬ್ಬರು ಬಂದು ಸಾಂತ್ವನ ಹೇಳಿದರು. ನನಗೆ ಟಿಕೆಟ್‌ ನೀಡುವುದಾಗಿ ಹೇಳಿದವರು ಕೊನೆಯ ಕ್ಷಣದಲ್ಲಿ ನನ್ನ ರಕ್ಷಣೆಗೆ ಬರಲಿಲ್ಲ. ಮನದಾಳದ ಒಂದಷ್ಟು ವಿಚಾರವನ್ನು ಹಂಚಿಕೊಳ್ಳಬೇಕಾಗಿದೆ. ಇವತ್ತು ನನ್ನ ಜನ್ಮದಿನವಾದ ಕಾರಣ ಕುಟುಂಬದ ಜತೆ ಕಳೆಯುತ್ತೇನೆ. ಅವರೆಲ್ಲರ ಜತೆ ಚರ್ಚಿಸುತ್ತೇನೆ. ಮಂಗಳವಾರ ನಿಮ್ಮೊಂದಿಗೆ ಮಾತನಾಡುತ್ತೇನೆ’ ಎಂದರು. 

‘ರಾಜಕೀಯದಲ್ಲಿ ಏರುಪೇರು, ಮುಜುಗರ ಸಹಜ. ಆದರೆ, ತಿಳಿದು ತಿಳಿದು ಹೀಗೆ ಮಾಡಿರುವುದು ಬೇಜಾರು ಮೂಡಿಸಿದೆ. ಬಿ.ವೈ.ರಾಘವೇಂದ್ರ ವಿರುದ್ಧ ಈಶ್ವರಪ್ಪ ಅವರು ಕಣಕ್ಕೆ ಇಳಿದಿದ್ದಾರೆ. ಈಶ್ವರಪ್ಪ ಜತೆ ಮಾತನಾಡಿದ್ದೇನೆ. ಪಕ್ಷದಲ್ಲಿ ಯಾರ ಮನಸ್ಸಿಗೆ ನೋವಾಗಿದೆಯೋ, ಎಲ್ಲರೂ ಒಟ್ಟಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಲು ತೀರ್ಮಾನಿಸೋಣ ಎಂದಿದ್ದೆ. ಈಶ್ವರಪ್ಪ ಅವರದ್ದೇ ಆದ ತೀರ್ಮಾನ ತೆಗೆದುಕೊಂಡಿದ್ದಾರೆ’ ಎಂದು ಸದಾನಂದಗೌಡ ಹೇಳಿದರು.  ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಸದಾನಂದ ಗೌಡರನ್ನು ಭೇಟಿ ಮಾಡಿ ಹುಟ್ಟು ಹಬ್ಬದ ಶುಭಾಶಯ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT