ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಗಜಿಣಗಿ ಪಾಲಿನ ಅದೃಷ್ಟದ ಕಚೇರಿ..!

ವಿಜಯಪುರದ ಬಾಗಲಕೋಟಕರ ಬಿಲ್ಡಿಂಗ್‌ನಲ್ಲಿ ಬಿಜೆಪಿ ಚುನಾವಣಾ ಕಚೇರಿ 27ರಿಂದ ಆರಂಭ
Last Updated 30 ಏಪ್ರಿಲ್ 2019, 16:11 IST
ಅಕ್ಷರ ಗಾತ್ರ

ವಿಜಯಪುರ:ವಿಜಯಪುರ ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರದಿಂದ ಸತತ ಎರಡು ಬಾರಿ ಗೆಲುವು ದಾಖಲಿಸಿರುವ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ, ಹ್ಯಾಟ್ರಿಕ್‌ ಗೆಲುವಿಗಾಗಿ ಮತ್ತೊಮ್ಮೆ ಹಳೆ ಕಚೇರಿಗೆ ಮೊರೆ ಹೊಕ್ಕಿದ್ದಾರೆ.

2009, 2014ರ ಲೋಕಸಭಾ ಚುನಾವಣೆ ಸಂದರ್ಭ ರಮೇಶ ಜಿಗಜಿಣಗಿ, ವಿಜಯಪುರದ ಮಹಾತ್ಮಗಾಂಧಿ ರಸ್ತೆಯಲ್ಲಿರುವ ಕೊಲ್ಹಾಪುರ ಮಹಾಲಕ್ಷ್ಮೀ ದೇಗುಲದ ಎದುರು ಭಾಗದ ಬಾಗಲಕೋಟಕರ ಬಿಲ್ಡಿಂಗ್‌ನಲ್ಲಿ ತಮ್ಮ ಚುನಾವಣಾ ಕಚೇರಿ ತೆರೆದಿದ್ದರು.

ಈ ಎರಡೂ ಬಾರಿಯೂ ಜಿಗಜಿಣಗಿ ಜಯಭೇರಿ ಬಾರಿಸಿದ್ದು, ಇದೀಗ ಹ್ಯಾಟ್ರಿಕ್ ಗೆಲುವಿನ ಕನಸಿನೊಂದಿಗೆ ಮತ್ತದೇ ಬಾಗಲಕೋಟಕರ ಬಿಲ್ಡಿಂಗ್‌ನಲ್ಲಿ ತಿಂಗಳ ಅವಧಿ ಚುನಾವಣಾ ಕಚೇರಿ ಆರಂಭಿಸುತ್ತಿರುವುದು ವಿಶೇಷ.

ಮಾರ್ಚ್‌ 28ರ ಗುರುವಾರ ಕಚೇರಿ ಉದ್ಘಾಟನೆಯಾಗಲಿದ್ದು, ಈಗಾಗಲೇ ಜಿಲ್ಲೆಯ ಮೂವರು ಶಾಸಕರು ಸೇರಿದಂತೆ ಚುನಾಯಿತ ಜನಪ್ರತಿನಿಧಿಗಳು, ಎಂಟು ಮಂಡಲ ಅಧ್ಯಕ್ಷರು, ಪದಾಧಿಕಾರಿಗಳಿಗೆ ಆಹ್ವಾನ ರವಾನೆಯಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

‘ಬಾಗಲಕೋಟಕರ ಬಿಲ್ಡಿಂಗ್ ದಶಕದಿಂದಲೂ ಜಿಲ್ಲೆಯ ಜನರ ಬಾಯಲ್ಲಿ ಜಿಗಜಿಣಗಿ ಚುನಾವಣಾ ಕಚೇರಿ ಎಂದೇ ಇಂದಿಗೂ ಪ್ರಚಲಿತದಲ್ಲಿದೆ. ಈ ಹಿಂದಿನ ಎರಡೂ ಚುನಾವಣೆ ಸಂದರ್ಭದಲ್ಲೂ ಒಂದೊಂದು ತಿಂಗಳ ಅವಧಿಯಷ್ಟೇ ಇಲ್ಲಿ ಚುನಾವಣಾ ಕಚೇರಿ ಕಾರ್ಯ ನಿರ್ವಹಿಸಿದ್ದರೂ; ಎಲ್ಲರ ಬಾಯಲ್ಲಿ ಬಿಜೆಪಿ ಕಚೇರಿ ಎಂದೇ ಕರೆಯಲ್ಪಡುತ್ತಿದೆ.’

‘ಈ ಬಿಲ್ಡಿಂಗ್‌ನ ಯಾವೊಂದು ಮಳಿಗೆಯೂ ಎಂದೆಂದೂ ಖಾಲಿಯಿರಲ್ಲ. ಆದರೆ ಲೋಕಸಭಾ ಚುನಾವಣೆ ಸಂದರ್ಭ ತನ್ನಿಂದ ತಾನೇ ಖಾಲಿಯಾಗುತ್ತವೆ. ಐದು ವರ್ಷದ ಹಿಂದೆಯೂ ಹೀಗೆ ಆಗಿತ್ತು. ಈಗಲೂ ಅದೇ ಕಚೇರಿ ಖಾಲಿಯಾಗಿದೆ. ಸಹಜವಾಗಿಯೇ ತನ್ನ ಅದೃಷ್ಟದ ಕಚೇರಿ ಎಂದೇ ಜಿಗಜಿಣಗಿ ನಂಬಿದ್ದು, ಈ ಬಾರಿಯೂ ಇಲ್ಲಿಯೇ ಚುನಾವಣಾ ಕಚೇರಿ ಆರಂಭಿಸುತ್ತಿದ್ದಾರೆ’ ಎಂದು ಬಿಜೆಪಿ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಮುಖ್ಯ ರಸ್ತೆಗೆ ಸಮೀಪವಿದೆ. ವಾಹನ ನಿಲುಗಡೆಗೂ ಸಾಕಷ್ಟು ಸ್ಥಳಾವಕಾಶವಿದೆ. ದೂರದ ಊರಿನಿಂದ ಬರುವವರಿಗೆ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರದಲ್ಲಿ ಕಚೇರಿ ಮಾಡಲಾಗಿದೆ’ ಎಂದು ಬಿಜೆಪಿ ಪದಾಧಿಕಾರಿಯೊಬ್ಬರು ತಿಳಿಸಿದರು.

ಏ.2ಕ್ಕೆ ನಾಮಪತ್ರ ಸಲ್ಲಿಕೆಯ ಮುಹೂರ್ತ..!

ಮಾರ್ಚ್‌ 28ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ. ಏ.4ರವರೆಗೂ ಕಾಲಾವಕಾಶವಿದೆ. ಏ.2ರ ಮಂಗಳವಾರ ಚಲೋ ಮುಹೂರ್ತವಿದ್ದು, ಬಿಜೆಪಿ ಅಭ್ಯರ್ಥಿಯಾಗಿ ರಮೇಶ ಜಿಗಜಿಣಗಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಬಿಜೆಪಿ ಮುಖಂಡರೊಬ್ಬರು ಖಚಿತ ಪಡಿಸಿದರು.

‘ರಮೇಶ ಜಿಗಜಿಣಗಿ ಈಗಾಗಲೇ ತಮ್ಮ ಅತ್ಯಾಪ್ತ ಜ್ಯೋತಿಷಿಯಿಂದ ಮುಹೂರ್ತ ನಿಗದಿ ಪಡಿಸಿಕೊಂಡಿದ್ದಾರೆ. ಚಲೋ ಮುಹೂರ್ತ ಏ.2ರ ಮಂಗಳವಾರವಿದ್ದು, ಅಂದೇ ನಾಮಪತ್ರ ಸಲ್ಲಿಸಲು ಸಕಲ ತಯಾರಿ ನಡೆಸಿಕೊಂಡಿದ್ದಾರೆ’ ಎಂದು ಅವರು ಹೇಳಿದರು.

‘ನಾಮಪತ್ರ ಸಲ್ಲಿಕೆ ಕುರಿತಂತೆ ಚರ್ಚಿಸಲು ಮಂಗಳವಾರ ಮುಸ್ಸಂಜೆ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಅವರ ಸಂಪರ್ಕ ಕಚೇರಿಯಲ್ಲಿ 20ಕ್ಕೂ ಹೆಚ್ಚು ಬಿಜೆಪಿ ಮುಖಂಡರ ಸಭೆ ನಡೆದಿದೆ. ಈ ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT