ಕೊನೆ ಮೈಲಿ ಸಂಪರ್ಕಕ್ಕೆ ಇ–ಬಂಡಿ

ಬುಧವಾರ, ಏಪ್ರಿಲ್ 24, 2019
27 °C
ಇ–ರಿಕ್ಷಾಗಳ ಮಧ್ಯೆ ಸ್ಪರ್ಧೆಗೆ ಸಜ್ಜು

ಕೊನೆ ಮೈಲಿ ಸಂಪರ್ಕಕ್ಕೆ ಇ–ಬಂಡಿ

Published:
Updated:
Prajavani

ಬೆಂಗಳೂರು: ನಗರದಲ್ಲಿ ಕೊನೆಯ ಮೈಲಿ ಸಂಪರ್ಕ ವ್ಯವಸ್ಥೆಗೆ ವಿದ್ಯುತ್‌ ಚಾಲಿತ ಬಂಡಿಗಳು (ಬಗ್ಗೀಸ್‌) ಹಾಗೂ ಇ–ರಿಕ್ಷಾಗಳ ಮಧ್ಯೆ ಸ್ಪರ್ಧೆಗೆ ವೇದಿಕೆ ಸಜ್ಜಾಗಿದೆ. ಮನೆ ಬಾಗಿಲಿಗೆ ಈ ಸಂಪರ್ಕ ವ್ಯವಸ್ಥೆ ಲಭ್ಯವಾಗಲಿದೆ. ಮನೆ ಹಾಗೂ ಕಚೇರಿಯಿಂದ ಹತ್ತಿರದ ಬಸ್‌ನಿಲ್ದಾಣ ಅಥವಾ ಮೆಟ್ರೊವರೆಗೆ ಪ್ರಯಾಣ ಮಾಡಲು ಶೀಘ್ರವೇ ಈ ಇ–ಬಂಡಿಗಳು ಲಭ್ಯವಾಗುವ ಸಾಧ್ಯತೆ ಇದೆ. 

ನಗರದಲ್ಲಿ ಇ–ಬಂಡಿಗಳು ಸದ್ಯ ಕ್ಯಾಂಪಸ್‌ ಆವರಣದ ಪ್ರಯಾಣಕ್ಕೆ ಮಾತ್ರ ಬಳಕೆ ಆಗುತ್ತಿವೆ. ಅದರಲ್ಲೂ ಆರು ಆಸನಗಳ ಬಗ್ಗೀಸ್‌ಗಳದ್ದೇ ಸಿಂಹಪಾಲು. 4, 8, 11, 14 ಆಸನಗಳ ಇ–ಬಂಡಿಗಳು ಸಹ ಲಭ್ಯ.

ಆಸ್ಪತ್ರೆ, ವಿದ್ಯಾಸಂಸ್ಥೆ, ಕಾರ್ಪೊರೇಟ್‌ ಸಂಸ್ಥೆಗಳಲ್ಲಿ ಹೆಚ್ಚಾಗಿ ಈ ವಿಶೇಷ ವಾಹನಗಳನ್ನು ಬಳಸಲಾಗುತ್ತಿದೆ. ಲಾಲ್‌ಬಾಗ್‌ ಉದ್ಯಾನದಲ್ಲಿ ವೃದ್ಧರು ಹಾಗೂ ವಿಕಲಚೇತನರನ್ನು ಕರೆದೊಯ್ಯಲು ಈ ಸೌಲಭ್ಯವನ್ನು ಕಲ್ಪಿಸಲಾಗಿದೆ. ಹಸಿರುಸ್ನೇಹಿ ಮತ್ತು ಹೊಗೆಮುಕ್ತ ಪರಿಸರ ನಿರ್ಮಾಣಕ್ಕೆ ಸಹಕಾರಿ ಎನ್ನುವುದು ಈ ವಾಹನದ ಹೆಗ್ಗಳಿಕೆ.

ಬೆಂಗಳೂರು ಮೂಲದ ಮೈನಿ ಗ್ರೂಪ್‌ ಕಂಪನಿ ದೇಶದ ಪ್ರಮುಖ 19 ರೈಲ್ವೆ ನಿಲ್ದಾಣಗಳಲ್ಲಿ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್‌ ವಾಹನಗಳನ್ನು ಪರಿಚಯಿಸಿದೆ. ಅದರಲ್ಲಿ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಸಹ ಒಂದು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಈ ವಾಹನ ತನ್ನ ನೆಲೆ ಕಂಡುಕೊಂಡಿದ್ದು, ಮಿತಪ್ರಮಾಣದಲ್ಲಿ ಬಳಕೆ ಆಗುತ್ತಿದೆ. 

ಕೆಲ ರಾಜ್ಯ ಸರ್ಕಾರಗಳು ಪಟ್ಟಣ ಹಾಗೂ ನಗರಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳನ್ನು ಪರಿಚಯಿಸುವ ಬಗ್ಗೆ ಪ್ರಸ್ತಾಪಿಸಿವೆ. ಇದರಿಂದ ವಿದ್ಯುತ್‌ ಚಾಲಿತ ವಾಹನಗಳ ಬಳಕೆ ಗಣನೀಯವಾಗಿ ಏರಿಕೆಯಾಗಲಿದೆ. ಈ ಸೇವೆ ಆರಂಭವಾದರೆ ಇ–ರಿಕ್ಷಾಗಳಿಗೆ ಇವುಗಳು ಪ್ರತಿಸ್ಪರ್ಧಿಯಾಗಲಿವೆ ಎಂದು ಮೈನಿ ಸಂಸ್ಥೆಯ ಪ್ರತಿನಿಧಿಗಳು ಹೇಳುತ್ತಾರೆ.

ಬಸ್‌ ನಿಲುಗಡೆ ತಾಣದಿಂದ ಕಚೇರಿ ಅಥವಾ ಮನೆಗೆ ತಲುಪಲು ಇ–ಬಂಡಿಗಳ ಬಳಕೆ ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಶುರುವಾಗುವ
ಸಾಧ್ಯತೆ ಇದೆ ಎಂದು ಸಾರಿಗೆ ತಜ್ಞರು ಅಭಿಪ್ರಾಯಪಡುತ್ತಾರೆ.

ಸಂಜಯನಗರದಲ್ಲಿ ಎರಡು ವರ್ಷಗಳ ಹಿಂದೆಯೇ ಪ್ರಾಯೋಗಿಕವಾಗಿ ಇಂತಹ ಸೌಲಭ್ಯವನ್ನು ಕಲ್ಪಿಸಲಾಗಿದೆ. ಸಾರ್ವಜನಿಕರು ಇಂತಹ ಪರಿಸರಸ್ನೇಹಿ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸತ್ಯ ಶಂಕರನ್‌ ಆಶಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !