ಮನೋರಥದಲ್ಲಿ ಅಂಜಲಿ ಪಯಣ

7

ಮನೋರಥದಲ್ಲಿ ಅಂಜಲಿ ಪಯಣ

Published:
Updated:
Deccan Herald

‘ನನಗೆ ಮಾಮೂಲಿ ಜಾಡಿಗಿಂತ ಕೊಂಚ ಬೇರೆ ದಾರಿಯಲ್ಲಿ ಸಾಗುವ ಪಾತ್ರಗಳಲ್ಲಿ ನಟಿಸಬೇಕು ಎಂಬ ಆಸೆ. ಈಗ ನಾಯಕಿಯಾಗಿ ನಟಿಸುತ್ತಿರುವ ‘ಮನೋರಥ’ ಚಿತ್ರದಲ್ಲಿ ಅಂಥದ್ದೇ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಇದಕ್ಕಿಂತ ಖುಷಿ  ಇನ್ನೇನಿದೆ?’ ಎಂದು ಉತ್ಸಾಹದಿಂದಲೇ ಮಾತಿಗೆ ತೊಡಗಿದರು ಅಂಜಲಿ ಕೆ.ಆರ್.

ಅಂಜಲಿ ಓದಿರುವುದು ಎಂಜಿನಿಯರಿಂಗ್. ಸಾಫ್ಟ್‌ವೇರ್‌ ಕಂಪೆನಿಯೊಂದರಲ್ಲಿ ಕೆಲಸವೂ ಸಿಕ್ಕಿತ್ತು. ಆದರೆ ನಟನೆ ಎನ್ನುವುದು ಅವರ ಮನಸಿಗಂಟಿಕೊಂಡಿದ್ದ ವ್ಯಾಮೋಹ. ಕಂಪ್ಯೂಟರ್ ಕೀಲಿಮಣೆಯ ಮೇಲೆ ಆಡುತ್ತಿದ್ದ ಬೆರಳುಗಳು ಕಲೆಯ ಸ್ಪರ್ಶಕ್ಕಾಗಿ ಸದಾ ಹಾತೊರೆಯುತ್ತಿದ್ದವು. ಈ ಕನಸಿನ ಬೆನ್ನು ಹತ್ತಿಯೇ ಅವರು ತಮ್ಮ ವೃತ್ತಿಗೆ ಟಾಟಾ ಹೇಳಿ ನಿರೂಪಕಿಯಾಗಿ ಕೆಲಸ ಆರಂಭಿಸಿದರು. ಮಾತು ಅವರಿಗೆ ಸಹಜವಾಗಿ ಒಲಿದ ಕಲೆಯಾಗಿತ್ತು. ಹಾಗಾಗಿ ನಿರೂಪಕಿಯಾಗಿ ಕೆಲಸ ಗಿಟ್ಟಿಸಿಕೊಳ್ಳುವುದು ಅವರಿಗೆ ಕಷ್ಟವೇನೂ ಆಗಲಿಲ್ಲ. ಜತೆಗೆ ಅಂಜಲಿಗೆ ನೃತ್ಯವೂ ಗೊತ್ತು. ಭರತನಾಟ್ಯ ಮತ್ತು ಸಮಕಾಲೀನ ನೃತ್ಯವನ್ನು ಅಭ್ಯಸಿಸಿದ್ದಾರೆ.

ಅಂಜಲಿ ನಟಿಸಿದ ಮೊದಲ ಚಿತ್ರ ‘ರನ್ ಆ್ಯಂಟನಿ’. ಈ ಚಿತ್ರದಲ್ಲಿ ಫೋಷಕ ಪಾತ್ರದಲ್ಲಿ ಅವರು ನಟಿಸಿದ್ದರು. ‘ಕಿರುಗೂರಿನ ಗಯ್ಯಾಳಿಗಳು’, ಮತ್ತು ‘ನಂಗಿಷ್ಟ’ ಚಿತ್ರಗಳಲ್ಲಿಯೂ ಅವರು ನಟಿಸಿದ್ದಾರೆ. ಎಂ. ಪ್ರಸನ್ನ ಕುಮಾರ್ ಅವರ ನಿರ್ದೇಶಿಸಿ ನಿರ್ಮಿಸುತ್ತಿರುವ ‘ಮನೋರಥ’ ನಾಯಕಿಯಾಗಿ ನಟಿಸುತ್ತಿರುವ ಮೊದಲ ಚಿತ್ರ.

‘‘ಮನೋರಥ’ ಸೈಕಾಲಾಜಿಕಲ್ ಥ್ರಿಲ್ಲರ್ ಚಿತ್ರ. ಇಲ್ಲಿ ನನ್ನ ಪಾತ್ರಕ್ಕೆ ಎರಡು ಛಾಯೆಗಳಿವೆ. ಮನೋವೈದ್ಯೆಯಾಗಿ ನಟಿಸುತ್ತಿದ್ದೇನೆ. ಹಾಗೆಯೇ ಆ ಪಾತ್ರಕ್ಕೆ ಇನ್ನೊಂದು ನೆಗೆಟೀವ್ ಛಾಯೆಯೂ ಇದೆ. ತುಂಬ ಭಿನ್ನವಾಗಿರುವ ವಿಷಯ ಇಟ್ಟುಕೊಂಡಿರುವ ಚಿತ್ರವಿದು’’ ಎಂದು ತಮ್ಮ ಚಿತ್ರದ ಕುರಿತು ವಿವರಿಸುತ್ತಾರೆ ಅಂಜಲಿ. ಮನೋರಥ ಈ ವಾರ (ಸೆ.07) ಬಿಡುಗಡೆಯಾಗುತ್ತಿದೆ.

‘ನಟನೆಗೆ ಪ್ರಾಶಸ್ತ್ಯ ಇರುವ ಪಾತ್ರಗಳಲ್ಲಿ ನಟಿಸಬೇಕು ಎಂಬುದು ನನ್ನ ಯಾವತ್ತಿನ ಹಂಬಲ. ಈ ಚಿತ್ರದಲ್ಲಿ ಅಂಥ ಪಾತ್ರ ಸಿಕ್ಕಿದೆ. ಮನುಷ್ಯನ ಮನಃಸ್ಥಿತಿಯನ್ನು ಇಟ್ಟುಕೊಂಡು ಕಟ್ಟಿದ ಸಿನಿಮಾ. ಹಾಗಾಗಿ ನಾಯಕಿಯಾಗಿ ನಟಿಸಲು ಇದೇ ಸರಿಯಾದ ಚಿತ್ರ ಎಂದು ನನಗೆ ಅನಿಸಿತು. ಪ್ರತಿಭಾವಂತರ ತಂಡದ ಜತೆ ಕೆಲಸ ಮಾಡಿದ ತೃಪ್ತಿ ನನಗಿದೆ’ ಎಂದು ಅವರು ಹೇಳಿಕೊಳ್ಳುತ್ತಾರೆ. ಈ ಚಿತ್ರದಲ್ಲಿ ಅವರು ರಾಜ್ ಚರಣ್ ಜತೆ ತೆರೆಯನ್ನು ಹಂಚಿಕೊಳ್ಳುತ್ತಿದ್ದಾರೆ.

‘ಚಿತ್ರದ ಎಲ್ಲ ಭಾಗವನ್ನೂ ಬೆಂಗಳೂರಿನಲ್ಲಿಯೇ ಚಿತ್ರೀಕರಿಸಲಾಗಿದೆ. ಒಂದು ದಿನಕ್ಕೆ ಸಾಕಷ್ಟು ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದೆವು. ಆದ್ದರಿಂದ ಪಾತ್ರದ ಜತೆಗೆ ಒಂದು ತನ್ಮಯತೆ ಗಳಿಸಿಕೊಳ್ಳಲು ಸಾಧ್ಯವಾಗುತ್ತಿತ್ತು. ನಟನೆ ಮುಗಿದ ಮೇಲೆಯೂ ಆ ಪಾತ್ರದ ಗುಂಗಿನಿಂದ ಹೊರಗೆ ಬರುವುದು ನನಗೆ ಕಷ್ಟವಾಗುತ್ತಿತ್ತು’ ಎಂದು ಅವರು ಚಿತ್ರೀಕರಣದ ಅನುಭವವನ್ನು ಹಂಚಿಕೊಳ್ಳುತ್ತಾರೆ.

‘ಮನೋರಥ’ ಬಿಡುಗಡೆಯಾಗುವ ಮೊದಲೇ ಅಂಜಲಿ ಅವರನ್ನು ಹಲವು ಅವಕಾಶಗಳು ಅರಸಿಕೊಂಡು ಬರುತ್ತಿವೆ. ‘ಸ್ವಚ್ಛ ಕರ್ನಾಟಕ’ ಎಂಬ ಚಿತ್ರದಲ್ಲಿಯೂ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಹಾಗೆಯೇ ‘ಪಂಚರ್’ ಎಂಬ ಇನ್ನೊಂದು ಚಿತ್ರವೊಂದಕ್ಕೂ ಸಹಿ ಹಾಕಿದ್ದಾರೆ. ಇದರ ಜತೆಗೆ ಇನ್ನೆರಡು ಸಿನಿಮಾಗಳು ಚರ್ಚೆಯ ಹಂತದಲ್ಲಿವೆಯಂತೆ.

‘ನಟನೆಯನ್ನೇ ನೆಚ್ಚಿ ಸಾಪ್ಟ್‌ವೇರ್ ಕೆಲಸ ಬಿಟ್ಟು ಬಂದೆ. ಕಳೆದ ಎರಡು ವರ್ಷಗಳ ಪರಿಶ್ರಮದಿಂದ ಒಳ್ಳೆಯ ಅವಕಾಶಗಳು ಈಗ ಸಿಗುತ್ತಿವೆ. ಆ ಅವಕಾಶಗಳನ್ನು ಬಳಸಿಕೊಂಡು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆನಿಲ್ಲುತ್ತೇನೆ’ ಎನ್ನುವ ಅಂಜಲಿ ಸದ್ಯಕ್ಕೆ ‘ಮನೋರಥ’ಕ್ಕೆ ಜನರಿಂದ ಸಿಗುವ ಪ್ರತಿಕ್ರಿಯೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !