ಭಾನುವಾರ, ಆಗಸ್ಟ್ 18, 2019
22 °C

ಆಟ, ಲೆಕ್ಕದ ಬದುಕಿನಾಟ

Published:
Updated:
Prajavani

‘ಈ ಸಿನಿಮಾ ಆಟಕ್ಕೂ ಉಂಟು; ಲೆಕ್ಕಕ್ಕೂ ಉಂಟು’ ಎಂದು ಮೊದಲಿಗೆ ಸ್ಪಷ್ಟಪಡಿಸಿದರು ನಟ ಸಂಚಾರಿ ವಿಜಯ್‌. ಇದಕ್ಕೆ ಕಾರಣವೂ ಇತ್ತು. ಅವರು ನಾಯಕನಾಗಿರುವ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಚಿತ್ರದ ಶೀರ್ಷಿಕೆಯೇ ಸ್ಪಷ್ಟನೆಗೆ ಕಾರಣವಾಗಿತ್ತು. 

‘ಸಿನಿಮಾ ಶೀರ್ಷಿಕೆ ಭಿನ್ನವಾಗಿ ಕಾಣುತ್ತದೆ. ಆದರೆ, ಚಿತ್ರದ ನಾಯಕನಲ್ಲಿ ಇರುವ ಗುಣಗಳು ಪ್ರತಿಯೊಬ್ಬರಲ್ಲೂ ಅಂತರ್ಗತವಾಗಿರುತ್ತವೆ. ಅವು ಮುನ್ನೆಲೆ ಬಂದಾಗ ಬದುಕಿನಲ್ಲಿ ಏನೆಲ್ಲಾ ಅವಘಡಗಳು ಸಂಭವಿಸುತ್ತವೆ ಎನ್ನುವುದೇ ಚಿತ್ರದ ಹೂರಣ’ ಎಂದರು ಸಂಚಾರಿ ವಿಜಯ್.

ನಿರ್ದೇಶಕ ರಾಮ್‌ ಜೆ. ಚಂದ್ರ ಈ ಚಿತ್ರದ ಮೂಲಕ ನಿರ್ದೇಶಕನಾಗಿ ಬೆಳ್ಳಿತೆರೆಗೆ ಅಡಿ ಇಡುತ್ತಿದ್ದಾರೆ. ಡೈರೆಕ್ಟರ್‌ ಟ್ಯಾಗ್‌ ಮತ್ತು ದುಡ್ಡಿನ ಟ್ಯಾಗ್‌ ಅವರೇ ಆಗಿದ್ದಾರೆ.

‘ನನ್ನ ಹಲವು ವರ್ಷದ ನಿರ್ದೇಶಕನಾಗುವ ಕನಸು ಈ ಚಿತ್ರದ ಮೂಲಕ ಈಡೇರಿದೆ’ ಎಂದು ಹೇಳಿಕೊಂಡರು. ಚಿತ್ರದ ಶೀರ್ಷಿಕೆ ಬದಲಾಯಿಸುವಂತೆ ಹಲವು ಮಂದಿ ಸಲಹೆ ನೀಡಿದರಂತೆ. ‘ನಾನು ಯಾರ ಸಲಹೆಯನ್ನೂ ಸ್ವೀಕರಿಸಲಿಲ್ಲ. ಕಥೆಗೆ ಸೂಕ್ತವಾಗಿದ್ದರಿಂದ ಈ ಶೀರ್ಷಿಕೆ ಇಟ್ಟಿದ್ದೇನೆ’ ಎಂದು ವಿವರಿಸಿದರು.

ಸಿನಿ ಬದುಕಿನಲ್ಲಿ ಮೊದಲ ಬಾರಿಗೆ ಗೃಹಿಣಿಯ ಪಾತ್ರಕ್ಕೆ ಜೀವ ತುಂಬಿದ ಖುಷಿಯಲ್ಲಿದ್ದರು ನಟಿ ಮಯೂರಿ. ‘ನನ್ನ ವೃತ್ತಿಬದುಕಿನಲ್ಲಿ ಭಿನ್ನವಾದ ಪಾತ್ರದಲ್ಲಿ ನಟಿಸಿದ ಖುಷಿಯಿದೆ’ ಎಂದರು.

ನಟಿ ‘ದುನಿಯಾ’ ರಶ್ಮಿ, ‘ನನಗೆ ಒಂದೇ ತರಹದ ಪಾತ್ರಗಳಲ್ಲಿ ನಟಿಸಿ ಬೇಸರವಾಗಿತ್ತು. ಈ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ’ ಎಂದರು.

ನಟ ವಸಿಷ್ಠ ಸಿಂಹ, ‘ಚಿತ್ರರಂಗಕ್ಕೆ ಬರುವಾಗ ಎಲ್ಲರೂ ಹೊಸಬರು. ಕಲಿತ ಮೇಲೆ ಅನುಭವಸ್ಥರಾಗುತ್ತಾರೆ’ ಎಂದರು.

ಚಿತ್ರದ ಎರಡು ಹಾಡುಗಳಿಗೆ ನೊಬಿನ್‌ ಪಾಲ್‌ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಪರಮೇಶ್ವರ್‌ ಅವರದು. ಇದೇ ವೇಳೆ ಸಿನಿಮಾದ ಟ್ರೇಲರ್‌ ಅನ್ನು ಬಿಡುಗಡೆಗೊಳಿಸಲಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌ ಡಿ.ಆರ್‌. ಮತ್ತು ಗೌರವ ಕಾರ್ಯದರ್ಶಿ ಸುರೇಶ್‌ ಎನ್‌.ಎಂ. ಚಿತ್ರತಂಡಕ್ಕೆ ಶುಭ ಕೋರಿದರು.

Post Comments (+)