ಬುಧವಾರ, ಏಪ್ರಿಲ್ 1, 2020
19 °C

ಕೋಟೆಗೆ ಕಾಲಿಟ್ಟ ಹೆಬ್ಬುಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಹಿತಿ ಬಿ.ಎಲ್‌. ವೇಣು ಅವರ ಕಾದಂಬರಿ ಆಧರಿತ ಚಿತ್ರ ‘ಬಿಚ್ಚುಗತ್ತಿ ಚಾಪ್ಟರ್‌ 1’ ಇದೇ ವಾರ (ಫೆ.28) ರಾಜ್ಯದಾದ್ಯಂತ ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ರಾಜವರ್ಧನ್‌ಗೆ ಈ ಚಿತ್ರದ ಮೇಲೆ ಅಪಾರ ನಿರೀಕ್ಷೆ ಇದೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಒಬ್ಬ ಭರವಸೆಯ ನಾಯಕನಟನಾಗಿ ಭವಿಷ್ಯ ಕಂಡುಕೊಳ್ಳುವ ಕನಸು ಅವರದ್ದು.

ಹಾಸ್ಯನಟ ಡಿಂಗ್ರಿನಾಗರಾಜ್‌ ಅವರ ಪುತ್ರ ರಾಜವರ್ಧನ್‌ಗೆ ಇದು ಚೊಚ್ಚಲ ಸಿನಿಮಾ. ಈ ಸಿನಿಮಾಕ್ಕಾಗಿ ಅವರು ಎರಡು ವರ್ಷಗಳಿಂದ ಸಾಕಷ್ಟು ಪರಿಶ್ರಮ ಹಾಕಿದ್ದಾರಂತೆ. ಚಿತ್ರದ ಪೋಸ್ಟರ್‌, ಟೀಸರ್‌, ಟ್ರೇಲರ್‌ ಕೂಡ ಅವರ ಮಾತಿಗೆ ಪುಷ್ಠಿ ನೀಡುತ್ತದೆ. ಅವರು ಪಾತ್ರಕ್ಕಾಗಿ ದೇಹ ಹುರಿಗೊಳಿಸಿರುವುದು, ಕುದುರೆ ಸವಾರಿ ನಡೆಸಿರುವುದು, ಕಳರಿಪಯಟ್ಟು ಕಲಿತಿರುವುದು ವಿಶೇಷ.

ಚಿತ್ರತಂಡ ಈಗಷ್ಟೇ ಬಿಡುಗಡೆ ಮಾಡಿರುವ ಹುಲಿಜೊತೆಗಿನ ಕಾದಾಟದ ಕಂಪ್ಯೂಟರ್‌ ಗ್ರಾಫಿಕ್‌ನ ಟೀಸರ್‌ ಕೂಡ ಗಮನ ಸೆಳೆಯುವಂತಿದೆ. ಫೈಟ್‌ ಮಾಸ್ಟರ್‌ ರವಿವರ್ಮ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕೆ ಇದೆ. ಟೈಗರ್‌ ಫೈಟ್‌ ಟೀಸರ್‌ಗೆ ಟೈಗರ್‌ ಪ್ರಭಾಕರ್‌ ಸ್ಫೂರ್ತಿ ಎಂದು ಚಿತ್ರತಂಡ ಹೇಳಿಕೊಂಡಿದೆ.

‘ಬಿಡುಗಡೆಗೂ ಮುನ್ನವೇ ಬಿಚ್ಚುಗತ್ತಿಗೆ ಅಭೂತಪೂರ್ವ ಪ್ರತಿಕ್ರಿಯೆ ಬರುತ್ತಿರುವುದು ಪೂರ್ವಜನ್ಮದ ಪುಣ್ಯ’ ಎಂದು ಮಾತಿಗಿಳಿದರು ನಾಯಕ ನಟ ರಾಜವರ್ಧನ್‌.

‘ಹೊಸಬರ ಚಿತ್ರಕ್ಕೆ ಇಷ್ಟೊಂದು ದೊಡ್ಡಮಟ್ಟದ ಪ್ರತಿಕ್ರಿಯೆ ಸಿಕ್ಕುವುದು ಅಪರೂಪ. ಬಹಳ ಖುಷಿ ತಂದಿದೆ. ವಿಶ್ವದಾದ್ಯಂತ ಹಲವು ಮಂದಿ ಸಿನಿಮಾ ವಿತರಣೆಯ ಹಕ್ಕನ್ನು ಕೇಳುತ್ತಿದ್ದಾರೆ. ಚಿತ್ರವನ್ನು ತುಂಬಾ ಖುಷಿಯಿಂದ ಒಪ್ಪಿಕೊಂಡಿದ್ದೆ. ಏಕೆಂದರೆ ಇದು ಇದು ನಮ್ಮ ನೆಲದ ಕಥೆಯ ಚಿತ್ರ. ನನ್ನ ಪರಿಶ್ರಮಕ್ಕೆ ಫಲಿತಾಂಶ ಸಿಗುವ ಕಾಲ ಈಗ ಕೂಡಿಬಂದಿದೆ. ದರ್ಶನ್‌, ಶರಣ್‌, ಪ್ರೇಮ್‌, ಅರ್ಜುನ್‌ಸರ್ಜಾ ಸರ್‌ ಸೇರಿ ಹಲವು ನಾಯಕ ನಟರು ಪ್ರಶಂಸಿಸಿದ್ದಾರೆ. ದರ್ಶನ್‌ ಸರ್‌ಗೆ ಚಿತ್ರದ ಪ್ರತಿ ಹಂತದ ಪ್ರಗತಿಯನ್ನು ತೋರಿಸಿ, ಅವರ ಸಲಹೆ ಪಡೆದುಕೊಂಡಿದ್ದೇನೆ’ ಎಂದರು.

‘ಚಿತ್ರ ಶುರುವಾಗಿ ಎರಡೂವರೆ ವರ್ಷ ನಾನು ಹೊರಗೆ ಬಂದಿರಲಿಲ್ಲ. ಒಂದೂವರೆ ವರ್ಷದ ಹಿಂದೆ ಟೀಸರ್‌ ಬಿಟ್ಟಾಗ ಬಿಚ್ಚುಗತ್ತಿ ಸದ್ದು ಮಾಡಲು ಶುರು ಮಾಡಿತು. ಈಗ ಬೇರೆ ಭಾಷೆಗಳಲ್ಲೂ ಚಿತ್ರದ ಡಬ್ಬಿಂಗ್‌ ಮಾಡಲು ಬೇಡಿಕೆ ಬರುತ್ತಿದೆ. ರಾಜ್ಯದಲ್ಲಿ ಚಿತ್ರ ಬಿಡುಗಡೆ ಮಾಡಿದ ನಂತರ ಅದರ ಪ್ರತಿಕ್ರಿಯೆ ನೋಡಿಕೊಂಡು ವಿಶ್ವದ ನಾನಾ ಕಡೆಯೂ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದ್ದೇವೆ’ ಎಂದರು ರಾಜವರ್ಧನ್‌.

ಕನ್ನಡ ಚಿತ್ರರಂಗ ನಲವತ್ತೈದು ವರ್ಷಗಳಿಂದ ನನ್ನನ್ನು ಪೋಷಿಸಿ ಬೆಳೆಸಿದೆ. ಹಾಗೆಯೇ ನನ್ನ ಮಗನನ್ನು ಕನ್ನಡದ ಜನತೆ ಸ್ವೀಕರಿಸಬೇಕು ಎಂದು ಹಿರಿಯ ನಟ ಡಿಂಗ್ರಿ ನಾಗರಾಜ್‌ ವಿನಮ್ರ ಕೋರಿಕೆ ಇಟ್ಟರು.

ಚಿತ್ರದುರ್ಗದ ಅಪ್ರತಿಮ ವೀರ ಭರಮಣ್ಣ ನಾಯಕನ ಕಥೆ ಆಧರಿಸಿದ ಐತಿಹಾಸಿಕ ಚಿತ್ರಕ್ಕೆ ಬಿ.ಎಲ್‌.ವೇಣು ಅವರೇ ಚಿತ್ರಕಥೆಯನ್ನೂ ಬರೆದಿದ್ದಾರೆ. ಹದಿನಾರನೇ ಶತಮಾನದ ಅಂತ್ಯವು ಕಲ್ಲಿನಕೋಟೆ ಚಿತ್ರದುರ್ಗದ ಪಾಲಿಗೆ ಕರಾಳ ದಿನಗಳಾಗಿದ್ದವು. ಆಗ ಅಧಿಕಾರಕ್ಕಾಗಿ ನಡೆದ ದಳವಾಯಿ ದಂಗೆ, ಕೋಟೆಯಲ್ಲಿ ಹರಿದ ನೆತ್ತರಿನ ಕಥೆಯನ್ನು ಈ ಚಿತ್ರ ತೆರೆದಿಡಲಿದೆ.

 ‘ಅಲೆಮಾರಿ’, ‘ವಿಕ್ಟರಿ 2’ ಮತ್ತು ‘ಕಾಲೇಜ್‌ಕುಮಾರ್‌’ ಚಿತ್ರಗಳನ್ನು ನಿರ್ದೇಶಿಸಿದ್ದ ಹರಿ ಸಂತೋಷ್‌ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ‘ಬಿಚ್ಚುಗತ್ತಿ ಚಾಪ್ಟರ್‌ 2’ ಕೂಡ ಬರಲಿದೆ ಎನ್ನುವ ಸುಳಿವು ನೀಡಿದರು.

ನಟಿ ಹರಿಪ್ರಿಯಾ ಅವರದು ರಾಣಿ ಸಿದ್ಧಾಂಬೆಯ ಪಾತ್ರದಲ್ಲಿ ನಟಿಸಿದ್ದಾರೆ. ಎಸ್‌.‍ಪಿ. ಗಣೇಶ್‌ ಮತ್ತು ತೇಜಸ್ವಿ ಬಂಡವಾಳ ಹೂಡಿದ್ದಾರೆ. ಹಂಸಲೇಖ, ನಕುಲ್‌ ಅಭ್ಯಂಕರ್‌ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಗುರುಪ್ರಶಾಂತ್‌ ರಾಜ್‌, ಭರತ್‌ರಾಜ್‌ ಸಂಕಲನ, ಸಾಹಿತ್ಯ ವಿ.ನಾಗೇಂದ್ರಪ್ರಸಾದ್ ಅವರದ್ದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು