ಸೋಮವಾರ, ಆಗಸ್ಟ್ 19, 2019
22 °C

ಬರಲಿದೆ ‘ಬಧಾಯಿ ಹೋ 2’

Published:
Updated:
Prajavani

ತಮಾಷೆ ಮೂಲಕವೇ ಸಾಮಾಜಿಕ ಕಾಳಜಿಯನ್ನು ಸರಳವಾಗಿ ಹೇಳುವಂತಹ ಸಿನಿಮಾ ಮಾಡುವುದರಲ್ಲಿ ‘ಪ್ರೊಡಕ್ಷನ್‌ ಕಂಪನಿ’ಯ ಪಾತ್ರ ಬಾಲಿವುಡ್‌ನಲ್ಲಿ ದೊಡ್ಡದು.

2018ರಲ್ಲಿ ‘ಬಧಾಯಿ ಹೋ’ ಚಿತ್ರ ಪ್ರೇಕ್ಷಕರನ್ನು ನಕ್ಕು ನಗಿಸುವ ಜೊತೆಗೆ ಒಂದು ಸ್ಪಷ್ಟ ಸಂದೇಶವನ್ನೂ ರವಾನಿಸಿತ್ತು. ಭಾರತದಂತಹ ರಾಷ್ಟ್ರದಲ್ಲಿ ಲೈಂಗಿಕ ಸಂಬಂಧ ಹಾಗೂ ಕುಟುಂಬ ಯೋಜನೆಯನ್ನು ಮುಕ್ತವಾಗಿ ಮಾತನಾಡಲು ಮುಜುಗರ ಪಡುವಂತಹ ವಾತಾವರಣ ಇದೆ. ಇಂಥದ್ದೇ ಸಂದಿಗ್ಧ ಸಮಸ್ಯೆಯಲ್ಲಿ ಸಿಲುಕುವ ಕುಟುಂಬವೊಂದರ ಕಥೆಯನ್ನು ಈ ಸಿನಿಮಾದಲ್ಲಿ ಮನೋಜ್ಞವಾಗಿ ಕಟ್ಟಲಾಗಿತ್ತು.

ಆಯುಷ್ಮಾನ್‌ ಖುರಾನಾ, ಸನ್ಯಾ ಮಲ್ಹೋತ್ರ, ನೀನಾ ಗುಪ್ತಾ, ಗಜರಾಜ್‌ ರಾವ್‌, ಸುರೇಖಾ ಸಿಕ್ರಿ ನಟಿಸಿದ್ದರು. ಈ ಸಿನಿಮಾಕ್ಕೆ ರಾಷ್ಟ್ರೀಯ ಪುರಸ್ಕಾರ (ಬೆಸ್ಟ್‌ ಸರ್ಪೋರ್ಟಿಂಗ್ ರೋಲ್‌) ಕೂಡ ಸಿಕಿತ್ತು.

ಈಗ  ಈ ಸಿನಿಮಾದ ಎರಡನೇ ಭಾಗ ಮಾಡಲು ಪ್ರೊಡಕ್ಷನ್‌ ಕಂಪನಿ ಸಿದ್ಧತೆ ನಡೆಸಿದೆ. ಸ್ಕ್ರಿಪ್ಟ್‌ ಕೂಡ ರೆಡಿಯಾಗಿದೆ. ಆದರೆ ಅದೇ ನಟ, ನಟಿಯರು ಮುಂದುವರಿಯಲಿದ್ದಾರಾ? ಎಂಬ ಪ್ರಶ್ನೆಗೆ ನಿರ್ಮಾಪಕ ವಿನೀತ್ ಜೈನ್‌ ಉತ್ತರ ನೀಡಿಲ್ಲ. ‘ಬದಾಯಿ ಹೋ 2’ ಕೆಲಸ ನಡೆಯುತ್ತಿದೆ. ಈಗಲೇ ಏನನ್ನೂ ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

‘ಬಧಾಯಿ ಹೋ’ ಸಿನಿಮಾದಲ್ಲಿ ಆಯುಷ್ಮಾನ್‌ ಅವರು ‘ನಕುಲ್‌’ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಹೊಸ ಕೆಲಸಕ್ಕೆ ಸೇರಿದ ಖುಷಿಯಲ್ಲಿ ನಕುಲ್‌, ಗೆಳತಿಯೊಂದಿಗೆ ಮದುವೆಯಾಗುವ ಕನಸು ಕಾಣುತ್ತಿರುತ್ತಾನೆ. ಅದೇ ವೇಳೆ ಅವರ 50 ವರ್ಷದ ತಾಯಿ ಗರ್ಭಿಣಿಯಾಗಿರುವ ವಿಷಯ ಸಿಡಿಲಿನಂತೆ ಬಂದು ಬಡಿಯುತ್ತದೆ. ಮುಂದೆ ನಾಯಕನ ಬದುಕಿನಲ್ಲಿ ಸಾಕಷ್ಟು ತಮಾಷೆ, ಗಂಭೀರ ಸಂಗತಿಗಳು ನಡೆದು ಬದುಕೇ ಬದಲಾದಂತೆ ಕಾಣುತ್ತದೆ. ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲೂ ರಿಮೇಕ್‌ ಆಗುತ್ತಿದೆಯಂತೆ.

‘ಬಧಾಯಿ ಹೋ 2’ ಸಿನಿಮಾ ಕೂಡ ಕೌಟುಂಬಿಕ ಚಿತ್ರವಾಗೇ ಮುಂದುವರಿಯಲಿದೆ ಎಂದು ಪ್ರೊಡಕ್ಷನ್‌ ಕಂಪನಿ ಹೇಳಿಕೊಂಡಿದೆ.

Post Comments (+)