ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ–2 | ‘ಅತ್ಯುತ್ತಮ ನಟಿ’ ವಿಭಾಗದ ನಾಮನಿರ್ದೇಶಿತರು

Published 30 ಮೇ 2024, 23:54 IST
Last Updated 30 ಮೇ 2024, 23:54 IST
ಅಕ್ಷರ ಗಾತ್ರ

‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಎರಡನೇ ಆವೃತ್ತಿ ಸಮಾರಂಭ ಶೀಘ್ರದಲ್ಲೇ ನಡೆಯಲಿದ್ದು, 19 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರು ಮತ್ತು ಸಿನಿಮಾಗಳ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಇದೀಗ ‘ಅತ್ಯುತ್ತಮ ನಟಿ’ ವಿಭಾಗದಲ್ಲಿ ನಾಮನಿರ್ದೇಶಿತಗೊಂಡವರ ಪರಿಚಯಿಸುವ ಸಮಯ. ಇನ್ನಷ್ಟು ಮಾಹಿತಿಗಳಿಗಾಗಿ ವೆಬ್‌ಸೈಟ್‌ ನೋಡಿ. https://www.prajavani.net/cinesamman/season2

ಅತ್ಯುತ್ತಮ ನಟಿ 

ಸಿರಿ ರವಿಕುಮಾರ್‌

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದಲ್ಲಿನ ನಟನೆಗಾಗಿ ಸಿರಿ ರವಿಕುಮಾರ್‌ ನಾಮನಿರ್ದೇಶನಗೊಂಡಿದ್ದಾರೆ. ‘ಸಕುಟುಂಬ ಸಮೇತ’ ಚಿತ್ರದ ಮೂಲಕ ಚಂದನವನದಲ್ಲಿ ಗುರುತಿಸಿಕೊಂಡ ಸಿರಿ, ಆರ್‌ಜೆ, ರೂಪದರ್ಶಿ, ನಿರೂಪಕಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದವರು. ರಂಗಭೂಮಿಯಲ್ಲೂ ಸಕ್ರಿಯವಾಗಿರುವ ಸಿರಿ, ರಾಜ್‌ ಬಿ.ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದಲ್ಲಿ ‘ಪ್ರೇರಣಾ’ ಎಂಬ ಪಾತ್ರ ನಿರ್ವಹಿಸಿದ್ದರು. ಈ ಪಾತ್ರದಲ್ಲಿ ಜೀವಿಸಿ ವಿಮರ್ಶಕರ, ಜನರ ಮೆಚ್ಚುಗೆ ಪಡೆದಿದ್ದರು. ನಟನೆಯಲ್ಲಿ ಪೂರ್ಣ ಅಂಕ ಪಡೆದ ಸಿರಿ ತಮ್ಮ ನಟನೆಯ ಸಾಮರ್ಥ್ಯವನ್ನು ಪ್ರದರ್ಶಿಸಿದರು. ‘ಬ್ಯಾಚುಲರ್‌ ಪಾರ್ಟಿ’, ‘O2’ ಸಿನಿಮಾಗಳ ಬಳಿಕ, ‘ಆಬ್ರಕಡಾಬ್ರ’, ‘ಬಿಸಿಬಿಸಿ Ice-Cream’ ಚಿತ್ರಗಳ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

ರುಕ್ಮಿಣಿ ವಸಂತ್‌

‘ಸಪ್ತ ಸಾಗರದಾಚೆ ಎಲ್ಲೋ–Side A’ ಚಿತ್ರದಲ್ಲಿನ ನಟನೆಗಾಗಿ ರುಕ್ಮಿಣಿ ವಸಂತ್‌ ನಾಮನಿರ್ದೇಶನಗೊಂಡಿದ್ದಾರೆ. ಲಂಡನ್‌ನ ‘ರಾಯಲ್‌ ಅಕಾಡೆಮಿ ಆಫ್‌ ಡ್ರಾಮಾಟಿಕ್‌ ಆರ್ಟ್ಸ್‌’ನಲ್ಲಿ ತರಬೇತಿ ಪಡೆದು ಸಿನಿಮಾ ಕ್ಷೇತ್ರಕ್ಕೆ ಧುಮುಕಿದ್ದ ರುಕ್ಮಿಣಿ ‘ಬೀರ್‌ಬಲ್‌’ ಬೆಡಗಿಯಾಗಿ ಚಂದನವನ ಪ್ರವೇಶಿಸಿದರು. ರುಕ್ಮಿಣಿ ವಸಂತ್ ಸಿನಿ ಜರ್ನಿಗೆ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ದೊಡ್ಡ ತಿರುವು ನೀಡಿದೆ. ತಮ್ಮ ಸಹಜ ನಟನೆಯಿಂದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ‘ಪ್ರಿಯಾ’ ಎಂಬ ಪಾತ್ರಕ್ಕೆ ರುಕ್ಮಿಣಿ ಜೀವತುಂಬಿದ್ದರು. ‘ಬಾನದಾರಿಯಲ್ಲಿ’ ಹಾರಿದ ರುಕ್ಮಿಣಿ, ಇದೀಗ ಶ್ರೀಮುರಳಿಯ ‘ಬಘೀರ’, ಶಿವರಾಜ್‌ಕುಮಾರ್‌ ಅವರ ‘ಭೈರತಿ ರಣಗಲ್‌’ ಸಿನಿಮಾದಲ್ಲಿ ನಟಿಸಿದ್ದಾರೆ. ಕಾಲಿವುಡ್‌ಗೂ ಹೆಜ್ಜೆ ಇಟ್ಟಿರುವ ರುಕ್ಮಿಣಿ, ಬಹುಭಾಷಾ ನಟ ವಿಜಯ್‌ ಸೇತುಪತಿ ಅವರೊಂದಿಗೆ ತೆರೆಹಂಚಿಕೊಳ್ಳಲು ಸಜ್ಜಾಗಿದ್ದಾರೆ. 

ಅಕ್ಷತಾ ಪಾಂಡವಪುರ

ನಟಿ ಅಕ್ಷತಾ ಪಾಂಡವಪುರ ‘ಪಿಂಕಿ ಎಲ್ಲಿ?’ ಚಿತ್ರದ ನಟನೆಗಾಗಿ ನಾಮನಿರ್ದೇಶನಗೊಂಡಿದ್ದಾರೆ. ಸಿನಿಮಾ ಜೊತೆಗೆ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಇವರು ಮಂಡ್ಯ ಜಿಲ್ಲೆಯ ಪಾಂಡವಪುರದವರು. ಕಾಲೇಜು ವಿದ್ಯಾಭ್ಯಾಸದ ನಂತರ ನೀನಾಸಂನಲ್ಲಿ ರಂಗ ತರಬೇತಿ ಪಡೆದು, ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್‌ಎಸ್‌ಡಿ)ಯಲ್ಲಿ ಮೂರು ವರ್ಷ ರಂಗಭೂಮಿಯಲ್ಲಿ ಹೆಚ್ಚುವರಿ ತರಬೇತಿ ಪಡೆದರು. ಏಕಾಂಕ ನಾಟಕ ‘ಒಬ್ಬಳು’ ಮೂಲಕ ರಂಗಭೂಮಿಯಲ್ಲಿ ಜನಪ್ರಿಯರಾದ ಇವರು, ‘ದಿ ಚಾನಲ್ ಥೇಟರ್ಸ್’ ಎನ್ನುವ ರಂಗ ತಂಡವನ್ನು ಕಟ್ಟಿದ್ದಾರೆ. ‘ಪಲ್ಲಟ’ ಚಿತ್ರದಲ್ಲಿನ ನಟನೆಗೆ ‘ರಾಜ್ಯ ಪ್ರಶಸ್ತಿ’ ಲಭಿಸಿದೆ. ‘ಆ ಒಂದು ನೋಟು’, ‘ಪಿಂಕಿ ಏಲ್ಲಿ?’, ‘ಕೋಳಿ ಎಸ್ರು’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದು, ನಟನೆಗಾಗಿ  ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಸದ್ಯ ‘ಕೌಮದಿ’ ಚಿತ್ರದ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಸಿಂಧು ಶ್ರೀನಿವಾಸಮೂರ್ತಿ

ನಟಿ, ನಿರ್ದೇಶಕಿ ಸಿಂಧು ಶ್ರೀನಿವಾಸಮೂರ್ತಿ ‘ಆಚಾರ್‌ ಆ್ಯಂಡ್‌ ಕೋ.’ ಚಿತ್ರದಲ್ಲಿನ ನಟನೆಗಾಗಿ ನಾಮನಿರ್ದೇಶನಗೊಂಡಿದ್ದಾರೆ. ತಮ್ಮ 16ನೇ ವಯಸ್ಸಿನಿಂದ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಇವರು, ‘ಫ್ರೆಂಚ್‌ ಬಿರಿಯಾನಿ’, ತೆಲುಗಿನ ‘ಸಿನಿಮಾ ಬಂಡಿ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ವೆಬ್‌ಸೀರೀಸ್‌, ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಆನಂತರ ಚಿತ್ರಕಥೆ ಬರವಣಿಗೆ ಕಲಿಯಲು ಮುಂಬೈಗೆ ತೆರಳುತ್ತಾರೆ. 2017ರಲ್ಲಿ ‘ಆಚಾರ್‌ ಆ್ಯಂಡ್‌ ಕೋ.’ ಚಿತ್ರದ ಬರವಣಿಗೆ ಪ್ರಾರಂಭಿಸುತ್ತಾರೆ. ಹಳೇ ಬೆಂಗಳೂರನ್ನು ಕಟ್ಟಿಕೊಟ್ಟ ಈ ಸಿನಿಮಾ ತನ್ನ ಕಥಾವಸ್ತುವಿನ ಕಾರಣದಿಂದ ಜನರಿಗೆ ಇಷ್ಟವಾಯಿತು. ಸದ್ಯ ಆಕರ್ಷ್‌ ಎಚ್‌.ಪಿ. ನಿರ್ದೇಶನದ ‘ಫ್ಯಾಮಿಲಿ ಡ್ರಾಮಾ’ ಚಿತ್ರದಲ್ಲಿ ಸಿಂಧು ನಟಿಸುತ್ತಿದ್ದಾರೆ.  

ಮಿಲನ ನಾಗರಾಜ್‌

‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರದಲ್ಲಿನ ನಟನೆಗಾಗಿ ಮಿಲನ ನಾಗರಾಜ್‌ ನಾಮನಿರ್ದೇಶನಗೊಂಡಿದ್ದಾರೆ. ‘ನಮ್‌ ದುನಿಯಾ ನಮ್‌ ಸ್ಟೈಲ್‌’ ಚಿತ್ರದ ಮುಖಾಂತರ ನಾಯಕಿಯಾಗಿ ತಮ್ಮ ಸಿನಿಪಯಣ ಆರಂಭಿಸಿದ ಮಿಲನ, ಸದ್ಯ ಕನ್ನಡದ ಪ್ರೇಕ್ಷಕರಿಗೆ ‘ನಿಧಿಮಾ’ಳಾಗಿ ಪರಿಚಯ. ಮಿಲನ ಸಿನಿಜರ್ನಿಗೆ ತಿರುವು ನೀಡಿದ ಸಿನಿಮಾ ‘ಲವ್‌ ಮಾಕ್ಟೇಲ್‌’. ನಟಿಯಾಗಿ, ನಿರ್ಮಾಪಕಿಯಾಗಿ ಗುರುತಿಸಿಕೊಂಡಿರುವ ಮಿಲನ ತಮಿಳು ಚಿತ್ರರಂಗಕ್ಕೂ ಪರಿಚಿತ. ‘ಲವ್‌ ಮಾಕ್ಟೇಲ್‌–2’, ‘ಕೌಸಲ್ಯಾ ಸುಪ್ರಜಾ ರಾಮ’, ‘ಲವ್‌ ಬರ್ಡ್ಸ್‌’, ‘ಫಾರ್‌ ರಿಜಿಸ್ಟ್ರೇಷನ್‌’ ಸಿನಿಮಾಗಳಲ್ಲಿ ತಮ್ಮ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಿರುವ ಅವರು ಸದ್ಯ, ‘ಆರಾಮ್‌ ಅರವಿಂದ ಸ್ವಾಮಿ’ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT