ನೀರಿನ ಮಹತ್ವಕ್ಕಾಗಿ ಒಂದು ಅರ್ಘ್ಯ

7

ನೀರಿನ ಮಹತ್ವಕ್ಕಾಗಿ ಒಂದು ಅರ್ಘ್ಯ

Published:
Updated:
Prajavani

ಬೇಸಿಗೆ ಬಂದಾಗ ನೀರಿಗೆ ಹಾಹಾಕಾರ ಏಳುವುದು, ನೀರಿನ ರಕ್ಷಣೆ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸಾಮಾನ್ಯ. ಆದರೆ, ನೀರಿನ ರಕ್ಷಣೆಯ ಮಹತ್ವ ಸಾರುವ ಸಿನಿಮಾವನ್ನು ಮಾಡಲು ಚಳಿಗಾಲದ ಅವಧಿಯಲ್ಲಿ ಮುಂದಾಗಿದ್ದಾರೆ ವೈ. ಶ್ರೀನಿವಾಸ್.

ಅವರು ಈ ಚಿತ್ರಕ್ಕೆ ‘ಅರ್ಘ್ಯಂ’ ಎಂದು ಹೆಸರಿಟ್ಟಿದ್ದಾರೆ. ಚಿತ್ರದ ಮುಹೂರ್ತ ಸಮಾರಂಭವನ್ನು ಶ್ರೀನಿವಾಸ್ ಅವರು ಕಂಠೀರವ ಸ್ಟುಡಿಯೋದಲ್ಲಿ ಆಯೋಜಿಸಿದ್ದರು. ಚುಮುಚುಮು ಚಳಿ ಇನ್ನೂ ತಗ್ಗಿರಲಿಲ್ಲ. ಸುದ್ದಿಗೋಷ್ಠಿಗೆ ಚಿತ್ರತಂಡ ಅಣಿಯಾಗಿ ಕುಳಿತಿತ್ತು.

‘ಅರ್ಘ್ಯಂ - ನೊ ಆಲ್ಟರ್ನೇಟ್ ಫಾರ್ ವಾಟರ್’ ಎಂಬ ಶೀರ್ಷಿಕೆಯನ್ನು ನೋಡುತ್ತಿದ್ದ ಸುದ್ದಿಗಾರರ ತಂಡದ ಎದುರು ಬಂದ ಚಿತ್ರತಂಡ, ‘ಅರ್ಘ್ಯಂ ಅಂದರೆ ಒಳ್ಳೆಯ ಕಾರ್ಯಕ್ರಮದಲ್ಲಿ ಸಮಯದಲ್ಲಿ ಮಾಡುವ ಅರ್ಪಣೆ ಎಂಬ ಅರ್ಥವಿದೆ’ ಎನ್ನುತ್ತ ಮಾತು ಆರಂಭಿಸಿತು.

‘ದೇವರು ನಮಗೆ ಒಳ್ಳೆಯ ಪ್ರಕೃತಿ ಕೊಟ್ಟಿದ್ದಾನೆ.‌ ಪ್ರಕೃತಿಯಲ್ಲಿ ಇರುವ ಸಂಪತ್ತು ಭೂಮಿಯ ಮೇಲಿನ ಎಲ್ಲ ಜೀವಿಗಳಿಗಾಗಿ ಸೃಷ್ಟಿಯಾಗಿದೆ. ಆದರೆ, ಮನುಷ್ಯ ಮಾತ್ರ ಆ ಸಂಪತ್ತನ್ನು ದುರ್ಬಳಕೆ‌ ಮಾಡಿಕೊಳ್ಳುತ್ತಿದ್ದಾನೆ. ನೀರಿಗೆ ಪರ್ಯಾಯ ಇಲ್ಲ. ನೀರಿಲ್ಲದೆ ನಾವಿಲ್ಲ ಎಂಬ ಸಂದೇಶ ಈ ಚಿತ್ರದಲ್ಲಿ ಇದೆ’ ಎಂದರು ನಿರ್ದೇಶಕ ಶ್ರೀನಿವಾಸ್.

‘ಬೆಂಗಳೂರಿನಲ್ಲಿ ಹದಿನೈದು ದಿನ, ಹೊರಗಡೆ ಹದಿನೈದು ದಿನ ಚಿತ್ರೀಕರಣ ನಡೆಸುವ ಆಲೋಚನೆ ನಮ್ಮದು. ಹೊರಾಂಗಣ ಚಿತ್ರೀಕರಣ ಎಲ್ಲಿ ನಡೆಸಬೇಕು ಎಂಬುದರ ಆಲೋಚನೆ ನಡೆಸಿದೆ. ಹೊರಾಂಗಣ ಚಿತ್ರೀಕರಣ ಶುಷ್ಕ ಪ್ರದೇಶವೊಂದರಲ್ಲಿ ನಡೆಯಬೇಕಿದೆ’ ಎಂದು ಅವರು ತಿಳಿಸಿದರು.

ಮನರಂಜನೆ‌ಯ ಜೊತೆಯಲ್ಲೇ ಸಾಮಾಜಿಕ ಸಂದೇಶವೊಂದನ್ನು ಕೊಡುವ ಸಿನಿಮಾ ಇದು ಎಂದು ಚಿತ್ರತಂಡ ಹೇಳಿದೆ.

ಚಿತ್ರದ ನಾಯಕಿಯಾಗಿ ಅಶ್ವಿನಿ ಗೌಡ ಅಭಿನಯಿಸುತ್ತಿದ್ದಾರೆ. ‘ಶೀರ್ಷಿಕೆಯೇ ವಿಭಿನ್ನವಾಗಿದೆ. ಸಿನಿಮಾ ವಿಷಯ ನನ್ನ ಮುಂದೆ ಬಂದಾಗ ನಟಿಸಲು ಒಲ್ಲೆ ಎನ್ನಬಾರದು ಎಂದು ತೀರ್ಮಾನಿಸಿದೆ. ಇದರಲ್ಲಿ ಬಹಳ ಮುಖ್ಯವಾದ ಪಾತ್ರ ನನ್ನದು. ನಾನು ಇಲ್ಲಿ ಸ್ವಯಂಸೇವಾ ಸಂಘಟನೆಯೊಂದರ ಕಾರ್ಯಕರ್ತೆ. ಈ ಪಾತ್ರ ಕೆರೆಯೊಂದರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತದೆ’ ಎಂದರು ಅಶ್ವಿನಿ.

ಒಂದು ಕುಟುಂಬದ ಸಮಸ್ಯೆ ಹಾಗೂ ನೀರಿನ ಸಮಸ್ಯೆಯನ್ನು ಅಕ್ಕಪಕ್ಕದಲ್ಲಿ ಇಟ್ಟು ನೋಡುವ ಪ್ರಯತ್ನ ಕೂಡ ಈ ಚಿತ್ರದಲ್ಲಿ ಇರಲಿದೆಯಂತೆ.

ಚಿತ್ರದ ನಾಯಕ ನಟ ರಾಜೇಶ್ ರಾವ್. ‘ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸ‌ ಮಾಡುವ ಮನುಷ್ಯನ ತಲೆಯಲ್ಲಿ ಯಾರೋ ಹುಳ ಬಿಡುತ್ತಾರೆ.‌ ಅವನು ಊರಿಗೆ ಹೋಗಿ ಕೆರೆ ಅಭಿವೃದ್ಧಿಯ ಕೆಲಸ ಮಾಡುತ್ತಾನೆ. ಆ ಪಾತ್ರ ನನ್ನದು’ ಎಂದರು ರಾಜೇಶ್. ಸ್ಪರ್ಶ ಶೆಣೈ ಅವರೂ ಇದರಲ್ಲಿ ಒಂದು ಪಾತ್ರಕ್ಕೆ ಜೀವ ತುಂಬಲಿದ್ದಾರೆ.

ಸಿನಿಮಾ‌ದ ಕ್ಲೈಮ್ಯಾಕ್ಸ್ ತುಸು ಕ್ಲಿಷ್ಟವಾಗಿರುವ ಕಾರಣ, ಕ್ಲೈಮ್ಯಾಕ್ಸ್‌ ಹಂತ ಬರುವವರೆಗೂ ಚಿತ್ರದ ಬಜೆಟ್ ಎಷ್ಟು ಎಂಬುದು ತೀರ್ಮಾನ ಆಗುವುದಿಲ್ಲ ಎಂಬುದು ಚಿತ್ರತಂಡದ ಹೇಳಿಕೆ.

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !